ಎಐ..ಒಂದು ಹೊಸ ಯುಗ ಸೃಷ್ಟಿಸುತ್ತಿರುವ ತಂತ್ರಜ್ಞಾನ. ಎಲ್ಲಾ ಕ್ಷೇತ್ರದಲ್ಲೂ ತನ್ನ ವರ್ಚಸ್ಸು ತೋರಿಸಿದೆ. ಇವತ್ತು ಇಡೀ ಜಗತ್ತು ಎಐ ಮಯವಾಗಿದೆ ಎಂದರೆ ತಪ್ಪಾಗಲ್ಲ. ಅದರ ಕೆಲಸಗಳೂ ಅಷ್ಟೇ. ಈ ಎಐ ಅನ್ನೋ ಮಾಂತ್ರಿಕ ಕೇವಲ ತಂತ್ರಜ್ಞಾನ ಕ್ಷೇತ್ರದಲ್ಲಷ್ಟೇ ಅಲ್ಲ. ಪೊಲೀಸ್ ವಲಯದಲ್ಲೂ ಕಳ್ಳಕಾಕರನ್ನ ಹಿಡಿಯಲು ಸಹಾಯ ಮಾಡಿದೆ. ಅದು ಕೂಡ ನಮ್ಮ ಬೆಂಗಳೂರಿನಲ್ಲಿ.

ಹೌದು, ಇತ್ತೀಚೆಗೆ ಪೊಲೀಸ್ ವ್ಯವಸ್ಥೆ ಕೂಡ ಕೃತಕ ಬುದ್ಧಿಮತ್ತೆಯನ್ನು ಪರಿಚಯಿಸಿತ್ತು. ಇದಾದ ನಂತರ ಬೆಂಗಳೂರಿನಲ್ಲಿ ಜಾದೂ ಆಗೋಗಿದೆ. ಅಂದರೆ ಕಳ್ಳಕಾಕರನ್ನು ಹಿಡಿಯುವಲ್ಲಿ ಬೆಂಗಳೂರು ನಗರ ಪೊಲೀಸರು ಯಶಸ್ಸು ಗಳಿಸಿದ್ದಾರೆ. ಅಂದರೆ ಮನೆಗಳ್ಳತನ, ಸರಗಳ್ಳತನ, ವಾಹನಗಳ ಕಳ್ಳತನ, ದರೋಡೆ ಹಾಗೂ ಕಿರುಕುಳದಂತಹ ಅಪರಾಧಗಳು ಕಳೆದ ವರ್ಷದಿಂದ ಕಡಿಮೆ ಆಗಿವೆ ಎಂಬ ಮಾಹಿತಿ ಹೊರಬಿದ್ದಿದೆ.
ಇನ್ನು 2023, 2024 ಹಾಗೂ 2025ನೇ ವರ್ಷಗಳ ನಡುವಿನ ಹೋಲಿಕೆಯಲ್ಲಿ ದರೋಡೆ ಎಷ್ಟು ಕಡಿಮೆಯಾಗಿದೆ ಎಂದು ತಿಳಿಯಿರಿ.
- ದರೋಡೆ- 47% ರಷ್ಟು ಇಳಿಕೆ
- ಮನೆಗಳ್ಳತನ- 20% ರಷ್ಟು ಇಳಿಕೆ
- ಸರಗಳ್ಳತನ- 53% ರಷ್ಟು ಇಳಿಕೆ
- ವಾಹನ ಕಳ್ಳತನ- 19% ರಷ್ಟು ಇಳಿಕೆ
- ಕಿರುಕುಳ- 20% ರಷ್ಟು ಇಳಿಕೆ
- ಅತ್ಯಾಚಾರ ಪ್ರಕರಣ- 30% ರಷ್ಟು ಇಳಿಕೆ
ನೋಡಿದ್ರಲ್ಲ ಬೆಂಗಳೂರು ಪೊಲೀಸರು ಎಐ ಅಳವಡಿಸಿದ್ದರಿಂಗ ಅಪರಾಧ ಪ್ರಕರಣಗಳು ಯಾವ ಪರಿ ಇಳಿದಿದೆ ಎಂದು..
ಅಪರಾಧ ತಡೆಗಟ್ಟುವಲ್ಲಿ ಎಐ ಸಹಾಯ ಹೇಗೆ ಮಾಡ್ತು?
ಅಂದಹಾಗೆ ಪೊಲೀಸರ ಕೆಲಸದಲ್ಲಿ ಎಐ ಏನು ಸಹಾಯ ಮಾಡಿತು ಎಂದು ಕೇಳಬಹುದು. ಮೊದಲೆಲ್ಲ ಪೊಲೀಸ್ ನಿಯಂತ್ರಣ ಕೊಠಡಿ 112 ನಂಬರ್ಗೆ ಕರೆ ಬರುವಾಗ, ಅದನ್ನ ಸಿಬ್ಬಂದಿಗಳಿಂದ ನಿರ್ವಹಿಸಲಾಗ್ತಿತ್ತು. ಅಂದರೆ ಅದಕ್ಕಾಗಿಯೇ ಕಮಾಂಡ್ ಸೆಂಟರ್‍ನಲ್ಲಿ ಅಧಿಕಾರಿ ಇರುತ್ತಿದ್ದರು. ಅವರೇ ಕರೆಯಲ್ಲಿ ಮಾತನಾಡುತ್ತಿದ್ರು. ಸಮಸ್ಯೆ ಕೇಳಿದ ನಂತರ ಅವರು ಸಂಬಂಧಪಟ್ಟ ವ್ಯಾಪ್ತಿ ಪೊಲೀಸ್ ಠಾಣೆ ಮತ್ತು ಅದಕ್ಕೆ ನಿಗದಿಯಾಗಿ ಹೊಯ್ಸಳ ಪೊಲೀಸರನ್ನು ನಿಯೋಜಿಸುತ್ತಿದ್ದರು. ಆದ್ರೆ ಈಗ ಅದು ಆಟೋಮೇಟೆಡ್ ಆಗಿದೆ.
ಅಂದರೆ ಯಾರಾದರೂ ಸಮಸ್ಯೆ ಹೇಳಲು ಕರೆ ಮಾಡಿದರೆ, ಅವರ ವಿಳಾಸವನ್ನು ಸ್ವಯಂಚಾಲಿತವಾಗಿ ಪತ್ತೆ ಮಾಡಲಾಗುತ್ತೆ. ನಂತರ ಎಐ ಕರೆ ಮಾಡಿದವರ ಸ್ಥಳದಲ್ಲಿ ಯಾವ ಹೊಯ್ಸಳ ಪೊಲೀಸರು ಇರುತ್ತಾರೋ ಅವರನ್ನು ಹುಡುಕಿ, ಅವರ ಟ್ಯಾಬ್‌ನಲ್ಲಿ ಸಂದೇಶ ಕಳಿಸುತ್ತೆ. ಈ ಮೂಲಕ ಅವರ ಕೆಲಸವನ್ನು ಎಐ ನಿಯೋಜಿಸುತ್ತಿದೆ.
ಎಐ ಕೆಲಸದಿಂದ ಪ್ರತಿ ಬಾರಿಯೂ ಕನಿಷ್ಠವೆಂದರೂ 2 ನಿಮಿಷ ಉಳಿಯುತ್ತದೆ. ಇದು ಹೊಯ್ಸಳ ಸಿಬ್ಬಂದಿಯ ಸಮಯ ವ್ಯರ್ಥವನ್ನು ತಡೆಯುತ್ತದೆ. ಹಾಗೂ ಸಮಸ್ಯೆಗೆ ತ್ವರಿತವಾಗಿ ಪರಿಹಾರ ನೀಡಲು ಸಹಾಯವಾಗುತ್ತಿದೆ. ಇನ್ನು ಹೊಯ್ಸಳ ಪೊಲೀಸರು ಸಕಾಲಿಕ ಸಮಸ್ಯೆಗಳಿಗಷ್ಟೇ ಅಲ್ಲದೇ, ಗಲಭೆ, ಗುಂಪು ಘರ್ಷಣೆಗಳನ್ನ ಕೂಡ ತಡೆಯಲು ಇದು ಸಹಾಯಕವಾಗಿದೆ.


Click it and Unblock the Notifications