ನವದೆಹಲಿ, ಮಾರ್ಚ್ 23: ಭಾರತದ ವಿಮಾನಯಾನ ಕ್ಷೇತ್ರ ಕಳೆದ ಕೆಲ ವರ್ಷಗಳಲ್ಲಿ ದೊಡ್ಡ ಮಟ್ಟದ ಬೆಳವಣಿಗೆಯನ್ನು ಕಾಣುತ್ತಿದೆ. ಕೇಂದ್ರ ಸರ್ಕಾರ ಕೂಡ ವಿಮಾನ ನಿಲ್ದಾಣಗಳ ಅಭಿವೃದ್ಧಿ ಹಾಗೂ ವಿಮಾನ ಕ್ಷೇತ್ರದ ಅಭಿವೃದ್ಧಿಗೆ ಹಲವು ನಿಯಮ ಜಾರಿಗೆ ತಂದಿದೆ. ಇದರ ಜೊತೆಗೆ ವಿಮಾನಯಾನ ಸಂಸ್ಥೆಗಳು ನಿಯಮವನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕು ಎಂಬ ಸೂಚನೆಯು ಇದೆ. ಆದರೂ ನಿಯಮ ಉಲ್ಲಂಘನೆ ಮಾಡುವ ಸಂಸ್ಥೆಗಳಿಗೆ ದೊಡ್ಡ ಪ್ರಮಾಣದ ದಂಡ ಬೀಳುತ್ತಿದೆ.
ಏರ್ ಇಂಡಿಯಾ ಸಂಸ್ಥೆ ಆಗಾಗ ಸುದ್ದಿಯಲ್ಲಿ ಇರುತ್ತದೆ. ಈಗಲೂ ಸುದ್ದಿಯಲ್ಲಿ ಇದೆ, ಆದರೆ ಈ ಬಾರಿ ದೊಡ್ಡ ಪ್ರಮಾಣದ ದಂಡ ಕಟ್ಟುವ ಮೂಲಕ 'ಏರ್ ಇಂಡಿಯಾ' ಸುದ್ದಿಯಲ್ಲಿದೆ. ವಿಮಾನ ಕಾರ್ಯಾಚರಣೆ ಸಮಯದ ಅವಧಿ ಹಾಗೂ ವಿಮಾನ ಸಿಬ್ಬಂದಿಯ ದಣಿವು ನಿರ್ವಹಣೆ ವ್ಯವಸ್ಥೆ ಸಂಬಂಧ ನಿಯಮ ಉಲ್ಲಂಘಿಸಿದ ಕಾರಣ ನಾಗರಿಕ ವಿಮಾನಯಾನ ನಿರ್ದೇಶನಾಲಯ ಅಂದರೆ ಡಿಜಿಸಿಎ ಈಗ ಏರ್ ಇಂಡಿಯಾಗೆ ₹80 ಲಕ್ಷ ರೂಪಾಯಿ ದಂಡ ವಿಧಿಸಿ ಆದೇಶವನ್ನು ಹೊರಡಿಸಿದೆ. ಹಾಗಾದರೆ ದಿಢೀರ್ ಈ ನಿರ್ಣಯ ಕೈಗೊಳ್ಳಲು ಕಾರಣ ಏನು?

₹80 ಲಕ್ಷ ದಂಡ ಯಾಕೆ?
ಇದೇ ಜನವರಿ ತಿಂಗಳಲ್ಲಿ ಏರ್ ಇಂಡಿಯಾ ಸ್ಪಾಟ್ ಆಡಿಟ್ ನಡೆಸಿದ್ದ ಡಿಜಿಸಿಎ, ಸಾಕ್ಷ್ಯ ಹಾಗೂ ವರದಿ ಪರಿಶೀಲನೆ ನಡೆಸಿತ್ತು ಎನ್ನಲಾಗಿದೆ. ಈ ಪರಿಶೀಲನೆ ನಂತರ ಕಠಿಣವಾದ ನಿರ್ಧಾರ ತೆಗೆದುಕೊಂಡಿದೆ. 60 ವರ್ಷಕ್ಕೂ ಮೇಲ್ಪಟ್ಟ ಇಬ್ಬರು ಪೈಲಟ್‌ಗಳು, ಏಕಕಾಲದಲ್ಲಿ ವಿಮಾನ ಹಾರಿಸಿರುವ ಘಟನೆಗಳು ಪರಿಶೀಲನೆ ಸಮಯದಲ್ಲಿ ಗೊತ್ತಾಗಿದೆ ಎನ್ನಲಾಗಿದೆ. ಇದರ ಜೊತೆ ವಿಮಾನಯಾನ ಸಿಬ್ಬಂದಿಗೆ ಅಗತ್ಯ ಇರುವ ವಿಶ್ರಾಂತಿ, ದೂರದ ಪ್ರಯಾಣದ ಮುನ್ನ ಹಾಗೂ ಬಳಿಕ ನಿಡಬೇಕಿದ್ದ ವಿಶ್ರಾಂತಿ ಸಮಯದಲ್ಲಿ ಕೊರತೆ ಕಂಡು ಬಂದಿದೆ. ಈ ಎಲ್ಲಾ ನಿಯಮದ ಉಲ್ಲಂಘನೆ ಕಾರಣಕ್ಕೆ ಈಗ ದಂಡ ವಿಧಿಸಿ ಕ್ರಮ ಕೈಗೊಂಡಿದೆ ಎನ್ನಲಾಗಿದೆ.
ಇಷ್ಟೇ ಅಲ್ಲದೆ ವಿಮಾನಯಾನ ಸಿಬ್ಬಂದಿ ಕೆಲಸದ ಅವಧಿ ಮೀರಿ ಕಾರ್ಯನಿರ್ವಹಿಸಿದ ಹಲವು ಘಟನೆ ಬೆಳಕಿಗೆ ಬಂದಿವೆ. ಇವುಗಳನ್ನು ತರಬೇತಿ ಅವಧಿ ಎಂದು ನಮೂದು ಮಾಡಲಾಗಿದ್ದು, ಈ ಎಲ್ಲಾ ವಿಚಾರಗಳು ಕೂಡ ಪರಿಶೀಲನೆ ವೇಳೆ ಗೊತ್ತಾಗಿದೆ. ಹೀಗಾಗಿ ಡಿಜಿಸಿಎ ಇಂತಹ ಕ್ರಮ ಕೈಗೊಂಡಿದೆ ಎನ್ನಲಾಗಿದೆ. ಈ ಬಗ್ಗೆ ಕಾರಣ ಕೇಳಿ ಮಾರ್ಚ್ 1ರಂದು ಏರ್ ಇಂಡಿಯಾಗೆ ನೋಟಿಸ್ ನೀಡಲಾಗಿತ್ತು. ಆದರೆ ಡಿಜಿಸಿಎ ಪ್ರಶ್ನೆಗೆ ಸೂಕ್ತ ಉತ್ತರ ನೀಡದ ಕಾರಣಕ್ಕೆ ಈಗ, ಏರ್ ಇಂಡಿಯಾಗೆ ₹80 ಲಕ್ಷ ದಂಡ ವಿಧಿಸಿದೆ. ಈ ಹಿಂದೆ ಕೂಡ ಇಂತಹ ಘಟನೆ ನಡೆದಿವೆ. ಈ ಬಾರಿ ದೊಡ್ಡ ಮೊತ್ತದ ದಂಡ ವಿಧಿಸಲಾಗಿದೆ.
ವಿಮಾನಯಾನ ಕ್ಷೇತ್ರದಲ್ಲಿ ಸಂಚಲನ
ಈ ಘಟನೆ ಭಾರತದ ವಿಮಾನಯಾನ ಕ್ಷೇತ್ರದಲ್ಲಿ ದೊಡ್ಡ ಸಂಚಲನ ಸೃಷ್ಟಿ ಮಾಡಿದೆ. ಈ ಕಾರಣಕ್ಕೆ ಏರ್ ಇಂಡಿಯಾಗೆ ₹80 ಲಕ್ಷ ದಂಡ ವಿಧಿಸಿದ ಬಗ್ಗೆ ಚರ್ಚೆ ಜೋರಾಗಿದೆ. ಹಾಗೂ ಮುಂದೆ ಯಾವುದೇ ಸಂಸ್ಥೆಗಳು ನಿಯಮ ಉಲ್ಲಂಘನೆ ಮಾಡದಂತೆ ಈ ಕ್ರಮವು ಎಚ್ಚರಿಕೆ, ಸಂದೇಶವನ್ನು ಈಗ ರವಾನೆ ಮಾಡಿದಂತೆ ಆಗಿದೆ. ಡಿಜಿಸಿಎ ವಿಧಿಸಿರುವ ದಂಡವನ್ನು ಈಗ ಏರ್ ಇಂಡಿಯಾ ಕಟ್ಟುತ್ತದಾ? ಅಥವಾ ಕಾನೂನು ಹೋರಾಟಕ್ಕೆ ಮುಂದಾಗುತ್ತಾ? ಎಂಬ ಚರ್ಚೆ ಕೂಡ ನಡೆಯುತ್ತಿದೆ.


Click it and Unblock the Notifications