ಇತ್ತೀಚೆಗೆ ನಡೆದ ಏರ್ ಇಂಡಿಯಾ ವಿಮಾನ ದುರಂತ ಕಣ್ಣಿಗೆ ಕಟ್ಟಿದಂತಿದೆ. ಈ ಘಟನೆ ನಡೆದ ದಿನದಿಂದಲೂ ಏರ್ ಇಂಡಿಯಾ ಒಂದಲ್ಲಾ ಒಂದು ರೀತಿಯಲ್ಲಿ ಸುದ್ದಿಯಲ್ಲಿದೆ. ಹಾಗೆಯೇ ಇದೀಗ ಮತ್ತೊಂದು ಆಘಾತದ ಸುದ್ದಿ ತಿಳಿದು ಬಂದಿದೆ. ಅದೇನೆಂದರೆ ಬೆಂಗಳೂರಿನಿಂದ ದೆಹಲಿಗೆ ತೆರಳಲು ಸಜ್ಜಾಗಿದ್ದ ಏರ್ ಇಂಡಿಯಾ ವಿಮಾನದ ಪೈಲಟ್, ನಿನ್ನೆ (ಜುಲೈ 4) ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಕುಸಿದು ಬಿದ್ದಿದ್ದಾರೆ.

ಹೌದು, ಇದೊಂದು ತೀವ್ರ ಆತಂಕದ ಪರಿಸ್ಥಿತಿ ಎಂದರೂ ತಪ್ಪಾಗಲ್ಲ. ವಿಮಾನ ಹಾರಾಟಕ್ಕೂ ಮೊದಲೇ ಪೈಲಟ್ ಕುಸಿದು ಬಿದ್ದಿದ್ದಾರೆ. ತಕ್ಷಣವೇ ಅವರಿಗೆ ವೈದ್ಯಕೀಯ ನೆರವು ನೀಡಲಾಯ್ತು. ಮತ್ತು ವಿಮಾನ ಹಾರಿಸಲು ಮತ್ತೋರ್ವ ಪೈಲಟ್‌ನ ನೇಮಕ ಮಾಡಬೇಕಾಯಿತು. ಒಂದು ವೇಳೆ ವಿಮಾನ ಹಾರಾಟದ ಸಂದರ್ಭದಲ್ಲಿ ಹೀಗಾಗಿದ್ದರೆ ಕಥೆ ಏನು ಅನ್ನೋದೇ ಪ್ರಶ್ನೆಯಾಗಿದೆ.
ಕಾಕ್‌ಪಿಟ್‌ನಲ್ಲಿಯೇ ಕುಸಿದ ಪೈಲಟ್:
ಅಂದಹಾಗೆ AI2414 ಹೆಸರಿನ ಈ ವಿಮಾನ ಬೆಂಗಳೂರು-ದೆಹಲಿ ಮಾರ್ಗದಲ್ಲಿದ್ದುದಾಗಿದ್ದು, ಪೈಲಟ್ ಕಾಕ್‌ಪಿಟ್‌ನಲ್ಲಿ ಅಗತ್ಯ ತಾಂತ್ರಿಕ ದಾಖಲೆಗಳಿಗೆ ಸಹಿ ಹಾಕುವ ಪ್ರಕ್ರಿಯೆಯಲ್ಲಿದ್ದಾಗಲೇ ಕುಸಿದು ಬಿದ್ದರು. ಈ ಅಪ್ರತ್ಯಾಶಿತ ಪರಿಸ್ಥಿತಿಯಲ್ಲಿ, ವಿಮಾನ ಸೇವೆ ತಾತ್ಕಾಲಿಕವಾಗಿ ನಿಲ್ಲಿಸಲಾಯಿತು ಮತ್ತು ಪೈಲಟ್‌ರನ್ನು ತಕ್ಷಣವೇ ಸ್ಥಳೀಯ ಆಸ್ಪತ್ರೆಗೆ ಸಾಗಿಸಲಾಯಿತು.
ಚಿಂತಾಜನಕ ಸ್ಥಿತಿ :
ಏರ್ ಇಂಡಿಯಾ ತನ್ನ ಅಧಿಕೃತ ಹೇಳಿಕೆಯಲ್ಲಿ ಈ ಘಟನೆಗೆ ಸ್ಪಂದಿಸಿದ್ದು, "ಜುಲೈ 4ರ ಮುಂಜಾನೆ ನಮ್ಮ ಪೈಲಟ್‌ಗಳಲ್ಲಿ ಒಬ್ಬರಿಗೆ ತುರ್ತು ವೈದ್ಯಕೀಯ ಸಮಸ್ಯೆ ಉಂಟಾಯಿತು. ಅವರು ವಿಮಾನ ನಿರ್ವಹಣೆಗೆ ಸಾಧ್ಯವಾಗದೆ, ತಕ್ಷಣ ಆಸ್ಪತ್ರೆಗೆ ದಾಖಲಾಗಿದ್ದಾರೆ. ಪ್ರಸ್ತುತ ಅವರು ಸ್ಥಿರ ಸ್ಥಿತಿಯಲ್ಲಿದ್ದು, ವೈದ್ಯರ ತೀವ್ರ ಮೇಲ್ವಿಚಾರಣೆಯಲ್ಲಿದ್ದಾರೆ" ಎಂದು ತಿಳಿಸಿದೆ.
ಈ ತುರ್ತು ಸಂದರ್ಭದಿಂದಾಗಿ ವಿಮಾನ ಸೇವೆಗೆ ವ್ಯತ್ಯಯ ಉಂಟಾದರೂ, ಏರ್ ಇಂಡಿಯಾ ಕೂಡಲೇ ಬದಲಿ ಪೈಲಟ್‌ರನ್ನು ನಿಯೋಜಿಸಿ, ಪ್ರಯಾಣಿಕರ ಸುರಕ್ಷತೆ ಹಾಗೂ ಗಮ್ಯಸ್ಥಾನ ತಲುಪುವಿಕೆ ಖಚಿತಪಡಿಸಿತು. ಸಂಸ್ಥೆಯ ಕ್ರಿಯಾ ಶೀಲತೆ ಮತ್ತು ತುರ್ತು ನಿರ್ವಹಣಾ ಕ್ರಮಗಳು ಪ್ರಮುಖವಾಗಿದೆಯೆಂದು ವಿಮಾನಯಾನ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಈ ನಡುವೆ, ಭಾರತ ಸರ್ಕಾರದ ನಾಗರಿಕ ವಿಮಾನಯಾನ ನಿರ್ದೇಶನಾಲಯ (DGCA) ಸಂಸ್ಥೆಯೊಳಗಿನ ಶಿಸ್ತಿನ ಕೊರತೆ ಮತ್ತು ಸಿಬ್ಬಂದಿ ನಿಯಮ ಉಲ್ಲಂಘನೆ ಕುರಿತು ಏರ್ ಇಂಡಿಯಾಗೆ ತೀವ್ರ ಎಚ್ಚರಿಕೆ ನೀಡಿದೆ. ಪೈಲಟ್‌ಗಳ ಕಾರ್ಯದೇಶ, ವಿಶ್ರಾಂತಿ ಸಮಯ ಮತ್ತು ಲೈಸೆನ್ಸ್ ನಿಯಮಗಳಲ್ಲಿನ ಮಿತಿಗಳನ್ನು ಗಮನಿಸದೆ ಕಾರ್ಯ ನಿರ್ವಹಣೆ ನಡೆದಿದೆ ಎಂಬ ಕಾರಣಕ್ಕೆ ಸಿಬ್ಬಂದಿ ವೇಳಾಪಟ್ಟಿಗೆ ಹೊಣೆವಿರುವ ಮೂವರು ಹಿರಿಯ ಅಧಿಕಾರಿಗಳನ್ನು ತಮ್ಮ ಸ್ಥಾನಗಳಿಂದ ತೆಗೆದುಹಾಕಲು ಸೂಚನೆ ನೀಡಲಾಗಿದೆ.
ವಿಮಾನಯಾನ ಸೇವೆ ಸುರಕ್ಷಿತವಾಗಿರಬೇಕಾದಾಗ, ಸಿಬ್ಬಂದಿ ತಯಾರಿ ಮತ್ತು ವಿಶ್ರಾಂತಿ ಅವಧಿಗಳನ್ನು ಲೆಕ್ಕದಲ್ಲಿಟ್ಟುಕೊಳ್ಳದೆ ಕಾರ್ಯದೇಶ ನೀಡಿರುವುದನ್ನು ಗಂಭೀರವಾಗಿ ಪರಿಗಣಿಸಿರುವ DGCA, ಟಾಟಾ ಗ್ರೂಪ್‌ನ ಒಡೆತನದ ಈ ಸಂಸ್ಥೆಗೆ ತಕ್ಷಣ ಶಿಸ್ತಿನ ಕ್ರಮ ಕೈಗೊಳ್ಳುವ ಸೂಚನೆ ನೀಡಿದೆ. ಮುಖ್ಯ ವ್ಯವಸ್ಥಾಪಕಿ ಪಿಂಕಿ ಮಿತ್ತಲ್, ಸಿಬ್ಬಂದಿ ಶೆಡ್ಯೂಲ್ ಯೋಜನೆ ಪಾಯಲ್ ಅರೋರಾ ಮತ್ತು ವಿಭಾಗೀಯ ಉಪಾಧ್ಯಕ್ಷೆ ಚೂರ ಸಿಂಗ್ ಸೇರಿದಂತೆ ಮೂರು ಅಧಿಕಾರಿಗಳನ್ನು ಕ್ರಮಕ್ಕೆ ಒಳಪಡಿಸಲಾಗಿದೆ.
ಈ ಘಟನೆಯು ಏರ್ ಇಂಡಿಯಾ ಮಾತ್ರವಲ್ಲ, ಇಡೀ ಭಾರತೀಯ ವಿಮಾನಯಾನ ಕ್ಷೇತ್ರಕ್ಕೆ ಎಚ್ಚರಿಕೆಯ ಗಂಟೆಯಾಗಿದೆ. ಸಿಬ್ಬಂದಿ ಸುರಕ್ಷತಾ ನಿಯಮಗಳ ಪ್ರಾಮುಖ್ಯತೆ, ಕಾರ್ಯದಯ ಮತ್ತು ವಿಶ್ರಾಂತಿ ನಡುವಿನ ಸಮತೋಲನ, ಹಾಗೂ ತುರ್ತು ಸಂದರ್ಭಗಳಿಗೆ ತಕ್ಷಣ ಸ್ಪಂದನೆ ನೀಡುವ ವ್ಯವಸ್ಥೆಯ ಅಗತ್ಯತೆಯನ್ನು ಈ ಘಟನೆಯು ಪುನಃಸ್ಮರಣೆ ಮಾಡಿಸಿದೆ.


Click it and Unblock the Notifications