ಹೈದರಬಾದ್, ಜುಲೈ 10: ದೇಶದಲ್ಲಿ ಇದೀಗ ಹೊಸದಾಗಿ ಮತ್ತೊಂದು ನಾಗರಿಕ ವಿಮಾನಯಾನ ಸೇವೆ ಆರಂಭವಾಗುತ್ತಿದೆ. ವಿಶೇಷವೆಂದರೆ ಬಹಳ ಅಗ್ಗದ ದರದಲ್ಲಿ ಜನರು ವಿಮಾನದಲ್ಲಿ ಪ್ರಯಾಣಿಸುವ ಅವಕಾಶವನ್ನು ಕಲ್ಪಿಸುವ ಉದ್ದೇಶದಿಂದ ಏರ್ ಕೇರಳ ಎಂಬ ಹೆಸರಿನಲ್ಲಿ ಈ ವಿಮಾನ ಸೇವೆಯ ಪರಿಚಯವಾಗುತ್ತಿದೆ.
ದುಬೈ ಮೂಲದ ಉದ್ಯಮಿಗಳಾದ ಅಫಿ ಅಹಮದ್ ಹಾಗೂ ಆಯುಬ್ ಕಲ್ಲಡ ಎಂಬ ಇಬ್ಬರು ಸ್ಥಾಪಿಸಿರುವ ಈ ಏರ್ ಕೇರಳ ವಿಮಾನಗಳ ಹಾರಾಟಕ್ಕೆ ನಾಗರಿಕ ಸಚಿವಾಲಯವು ನಿರಪೇಕ್ಷಣಾ ಪತ್ರ(ಎನ್‌ಒಸಿ)ಯನ್ನು ಮಂಜೂರು ಮಾಡಿದೆ. ಝೆಟ್‌ಫ್ಲೈ ಏವಿಯೇಷನ್ ಹೆಸರಿನಲ್ಲಿ ನೋಂದಣಿಯಾಗಿರುವ ಈ ಏರ್‌ಲೈನ್ಸ್‌ಗೆ ಮುಂದಿನ ಮೂರು ವರ್ಷಗಳ ಕಾಲ ವಿಮಾನಗಳ ಸೇವೆ ಒದಗಿಸುವುದಕ್ಕೆ ಅನುಮತಿ ನೀಡಲಾಗಿದೆ ಎಂದು ಖಲೀಜ್ ಟೈಮ್ಸ್ ವರದಿ ಮಾಡಿದೆ.

ಈ ಹೊಸ ವಿಮಾನಸೇವೆ ಆರಂಭಗೊಂಡರೆ, ಕೇರಳದಿಂದ ಆರಂಭವಾಗುತ್ತಿರುವ ಮೊತ್ತ ಮೊದಲ ಏರ್‌ಲೈನ್ಸ್ ಎನ್ನುವ ಹೆಗ್ಗಳಿಕೆಗೆ ಏರ್ ಕೇರಳ ಪಾತ್ರವಾಗಲಿದೆ. ಈ ಏರ್‌ಲೈನ್ಸ್ 2025ರ ವೇಳೆಗೆ ತನ್ನ ಸೇವೆಗಳನ್ನು ಆರಂಭಿಸುವುದಕ್ಕೆ ಚಿಂತನೆ ನಡೆಸಿದೆ. ಆ ಮೂಲಕ ತಮ್ಮ ಮೊದಲ ಅಂತಾರಾಷ್ಟ್ರೀಯ ವಿಮಾನದ ಹಾರಾಟ ದುಬೈಗೆ ಆಗಿರಲಿದೆ. ಏರ್ ಆಪರೇಷನಲ್ ಸರ್ಟಿಫಿಕೇಟ್‌ಗೆ ಸಂಬಂಧಿಸಿದಂತೆ ವಿಮಾನಗಳ ಖರೀದಿ ಸೇರಿದಂತೆ ಎಲ್ಲ ರೀತಿಯ ಹಾರಾಟ ಮಾನದಂಡಗಳನ್ನು ಪೂರೈಸುವುದಕ್ಕೆ ಏರ್ ಕೇರಳ ಬದ್ಧವಾಗಿದೆ ಎಂದು ಆಯುಬ್ ಕಲ್ಲಡ ತಿಳಿಸಿದ್ದಾರೆ. ವಿಮಾನಗಳ ಕಾರ್ಯಾಚರಣೆಗೆ ಸಂಬಂಧಿಸಿದಂತೆ ವಿಮಾನಯಾನ ನಿರ್ದೇಶನಾಲಯದ ಎಲ್ಲ ಸುರಕ್ಷಾ ಮಾನದಂಡಗಳನ್ನು ಪೂರ್ಣಗೊಳಿಸುವುದು ಅತ್ಯಂತ ಮಹತ್ವದ ಘಟ್ಟವಾಗಿದೆ ಎಂದು ಹೇಳಿದ್ದಾರೆ.
ಆದರೆ, ವಿಮಾನಯಾನ ಸೇವೆ ಆರಂಭಿಸುವುದಕ್ಕೆ ಇಲ್ಲಿವರೆಗೆ ನಡೆದಿರುವ ಸಿದ್ಧತೆಗಳು ತೃಪ್ತಿಕರವಾಗಿದೆ ಎಂದು ಅಫಿ ಅಹಮದ್ ಅವರು ಹೇಳಿದ್ದಾರೆ. ಈ ಹಂತ ತಲುಪುವುದಕ್ಕೆ ಸಾಕಷ್ಟು ಸವಾಲುಗಳು ಕೂಡ ಎದುರಾಗಿವೆ. ಇದು ನಮ್ಮ ಹಲವು ವರ್ಷಗಳ ಪರಿಶ್ರಮದ ಫಲವಾಗಿದೆ. ಈಗ ನಾಗರಿ ವಿಮಾನಯಾನ ಸಚಿವಾಲಯದಿಂದ ಅನುಮತಿ ಪಡೆಯಬೇಕಾದರೆ ನಾನು ಮತ್ತು ನನ್ನ ಪಾಲುದಾರರು ಸಾಕಷ್ಟು ಶ್ರಮ ವಹಿಸಿದ್ದೇವೆ. ಅನೇಕರು ಈ ಸಂಬಂಧ ನಮ್ಮನ್ನು ಪ್ರಶ್ನಿಸಿದ್ದು, ಈ ಪ್ರಯತ್ನವನ್ನು ನಿಜವಾಗಿಸುವುದು ಸಾಧ್ಯವಿಲ್ಲ ಎಂದಿದ್ದರು. ಆದರೆ, ಇನ್ನು ಕೂಡ ಇದನ್ನು ಸಹಕಾರಗೊಳಿಸುವುದಕ್ಕೆ ಸಾಕಷ್ಟು ದೂರು ಸಾಗಬೇಕಿದೆ. ಆದರೆ ಈ ನಿಟ್ಟಿನಲ್ಲಿ ಈಗ ಎನ್‌ಒಸಿ ಲಭ್ಯವಾಗಿರುವುದು ಅತ್ಯಂತ ಮಹತ್ವಪೂರ್ಣ ಘಟ್ಟ ಎಂದು ವಿವರಿಸಿದರು.
ಏರ್ ಕೇರಳ ಏರ್‌ಲೈನ್ಸ್ ಆರಂಭದಲ್ಲಿ ತ್ರಿ ಎಟಿಆರ್ 72-600 ಏರ್‌ಕ್ರಾಫ್ಟ್‌ನ್ನು ಪರಿಚಯಿಸಲಾಗುತ್ತದೆ. ನೇರ ಖರೀದಿ ಹಾಗೂ ಲೀಸ್‌ಗೆ ಪಡೆಯುವ ಅವಕಾಶಗಳತ್ತ ಗಮನಹರಿಸಲಾಗುವುದು. ಏರ್ ಕೇರಳವು ಆರಂಭದಲ್ಲಿ ಎರಡನೇಯ ಹಾಗೂ 3ನೇ ಹಂತದ ನಗರಗಳಲ್ಲಿ ವಿಮಾನಯಾನ ಸೇವೆ ಆರಂಭಿಸಲಾಗುವುದು. ವಿಮಾನಗಳ ಸಂಖ್ಯೆಯು 20ಕ್ಕೆ ಏರಿಕೆಯಾದ ಬಳಿಕ ಅಂತಾರಾಷ್ಟ್ರೀಯ ಮಾರ್ಗಗಳಲ್ಲಿ ಸೇವೆ ಆರಂಭಿಸಲಾಗುವುದು ಎಂದು ಅಹಮದ್ ತಿಳಿಸಿದರು.
ದೇಶದ ಸಣ್ಣ ನಗರಗಳಲ್ಲಿ ಅಗ್ಗದ ವಿಮಾನ ಸೇವೆಯನ್ನು ಒದಗಿಸುವುದು ಏರ್ ಕೇರಳದ ಆಶಯ ಮತ್ತು ಉದ್ದೇಶವಾಗಿದೆ. ಕಳೆದ ವರ್ಷ ಸ್ಮಾರ್ಟ್ ಟ್ರಾವೆಲ್ಸ್ ಏಜೆನ್ಸಿಯ ಸಂಸ್ಥಾಪಕರಾದ ಅಫಿ ಅಹಮದ್ ಅವರು ಅವರು airkerala.com ಡೊಮೈನ್ ಅನ್ನು ಒಂದು ಮಿಲಿನ್ ದಿರಾಂಗೆ ಖರೀದಿಸಿದ್ದರು.


Click it and Unblock the Notifications