ಜಾಗತಿಕವಾಗಿ ವಿಮಾನಯಾನ ಸಂಸ್ಥೆಯಾಗಿ (Airlines) ಗುರುತಿಸಿಕೊಂಡಿರುವ ಏರ್‌ಬಸ್ ಕಂಪನಿ ಇದೀಗ ಮಹತ್ವದ ಹೆಜ್ಜೆಯೊಂದನ್ನು ಇಟ್ಟಿದೆ. ಏರ್‌ಬಸ್ ತೆಗೆದುಕೊಂಡ ಆ ಒಂದು ನಿರ್ಧಾರ ಸದ್ಯ ಇಡೀ ದೇಶದಲ್ಲೇ ಸಂಚಲನ ಸೃಷ್ಟಿಸಿದೆ. ಹೌದು, ಇದೀಗ ಏರ್‌ಬಸ್ (Airbus), ತನ್ನ ಎಂಜಿನ್ ನಿಯಂತ್ರಣ ವ್ಯವಸ್ಥೆಯಲ್ಲಿನ ಕೆಲವು ದೋಷಗಳನ್ನು ಕಂಡುಕೊಂಡ ನಂತರ, ತನ್ನ A320 ವಿಮಾನಗಳ ಸಾಫ್ಟ್‌ವೇರ್ ಮತ್ತು ಹಾರ್ಡ್‌ವೇರ್ ಅಪ್‌ಡೇಟ್ ಮಾಡಲು ಮುಂದಾಗಿದೆ. ಏರ್‌ಬಸ್‌ನ ಈ ನಿರ್ಧಾರವು ಸುಮಾರು 3,000 A320 ವಿಮಾನಗಳ ಹಾರಾಟದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದ್ದು, ವಿಮಾನಯಾನ ಸಂಸ್ಥೆಳಿಗೂ ತಕ್ಕ ಮಟ್ಟಿಗೆ ತೊಂದರೆ ಉಂಟಾಗಲಿದೆ ಎಂದು ಅಂದಾಜಿಸಲಾಗಿದೆ. ಈ ಮೂಲಕ ಏರ್‌ಬಸ್ ಜಾಗತಿಕವಾಗಿ 6,000 ಕ್ಕೂ ಹೆಚ್ಚು A320 ವರ್ಗದ ವಿಮಾನಗಳನ್ನು ತಪಾಸಣೆಗೆ ಒಳಪಡಿಸುವಂತೆ ಸೂಚಿಸಿದೆ.

ಈ ಸೂಚನೆಯು ಭಾರತ ಸೇರಿದಂತೆ ಜಾಗತಿಕವಾಗಿ ವಿಮಾನಯಾನದ ಮೇಲೆ ದೊಡ್ಡ ಹೊಡೆತ ಬೀಳಲಿದೆ. ಭಾರತದಲ್ಲೂ ಏರ್ ಇಂಡಿಯಾ ಮತ್ತು ಇಂಡಿಗೋ ಕಾರ್ಯಾಚರಣೆ ಮಾಡುತ್ತಿರುವ ವಿಮಾನಗಳಲ್ಲಿ ಬಹುತೇಕ A320 ವರ್ಗಕ್ಕೆ ಸೇರಿದ್ದು, ಮುಂಬರುವ ದಿನಗಳಲ್ಲಿ ಎಲ್ಲಾ ವಿಮಾನಗಳಲ್ಲೂ ಅಪ್ಡೇಟ್ ಮಾಡಲಾಗುತ್ತದೆ ಎನ್ನಲಾಗಿದೆ.
ದಿಢೀರ್ ನಿರ್ಧಾಕ್ಕೆ ಕಾರಣವೇನು?
ಇತ್ತೀಚೆಗೆ, ಒಂದು A320 ವಿಮಾನದಲ್ಲಿ ಅನಿರೀಕ್ಷಿತವಾಗಿ ಫ್ಲೈಟ್-ಕಂಟ್ರೋಲ್ ಕಂಪ್ಯೂಟರ್‌ನಿಂದಾಗಿ ಸಮಸ್ಯೆಯುಂಟಾಯಿತು. ಈ ಘಟನೆ ಬೆನ್ನಲ್ಲೇ, ಏರ್‌ಬಸ್ ಕೂಡಲೇ ಎಚ್ಚೆತ್ತುಕೊಂಡಿದ್ದು, ಜಾಗತಿಕವಾಗಿ ತನ್ನ ವಿಮಾನಗಳಲ್ಲಿ ಸಾಫ್ಟ್‌ವೇರ್ ಮತ್ತು ಹಾರ್ಡ್‌ವೇರ್ ಅಪ್‌ಡೇಟ್‌ಗಳನ್ನು ಕೈಗೊಳ್ಳಲು ಆದೇಶ ಹೊರಡಿಸಿದೆ.
ವಿಮಾನಯಾನ ಸಂಸ್ಥೆಗಳಿಗೆ ಗಡುವು!
ಯುರೋಪಿಯನ್ ಯೂನಿಯನ್ ಏವಿಯೇಷನ್ ಸೇಫ್ಟಿ ಏಜೆನ್ಸಿ (EASA) ನೀಡಿದ ಗಡುವಿನ ಪ್ರಕಾರ, ಭಾನುವಾರ ಬೆಳಿಗ್ಗೆ 5:30 ರೊಳಗೆ (ಭಾರತೀಯ ಕಾಲಮಾನ) ಭಾರತೀಯ ವಿಮಾನಯಾನ ಸಂಸ್ಥೆಗಳು ಈ ಅಪ್ಡೇಟ್ ಮಾಡುವಂತೆ ಸೂಚನೆ ನೀಡಲಾಗಿದೆ. ಒಂದು ವೇಲೆ ಈ ಸಾಫ್ಟ್‌ವೇರ್ ಅಪ್ಡೇಟ್ ಮಾಡದ ವಿಮಾನಗಳು ಹಾರಾಟ ಮಾಡಲು ಅವಕಾಶವಿಲ್ಲ ಎಂದು ವರದಿಯಾಗಿದೆ.
ಜಾಗತಿಕವಾಗಿ ಈ ನಿರ್ಧಾರಕ್ಕೆ ಕಾರಣವೇನು?
ಇತ್ತೀಚೆಗೆ ಏರ್‌ಬಸ್ ನಿರ್ಮಿತ, A320 ವರ್ಗದ ವಿಮಾನವೊಂದು ಹಾರಾಟದ ಸಂದರ್ಭದಲ್ಲಿ, ಅನಿರೀಕ್ಷಿತವಾಗಿ ಕೆಳಮುಖವಾದ ಚಲನೆ (pitch-down movement) ಉಂಟಾದ ಘಟನೆ ಬೆಳಕಿಗೆ ಬಂದಿತ್ತು. ಅದೇ ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ಈ ನಿರ್ಧಾರಕ್ಕೆ ಏರ್‌ಬಸ್ ಮುಂದಾಗಿದೆ. ಈ ಘಟನೆಯನ್ನು EASA ವರದಿ ಮಾಡಿದ್ದು, ಆಟೋಪೈಲಟ್ ಸಕ್ರಿಯವಾಗಿದ್ದರೂ, ವಿಮಾನವು ಸ್ವಲ್ಪ ತಾಂತ್ರಿಕ ಅಡಚಣೆಯನ್ನು ಎದುರಿಸಿದೆ. ಆದರೆ ಅದೃಷ್ಟವಶಾತ್ ವಿಮಾನವು ಮತ್ತೆ ಕಾರ್ಯಾರಂಭ ಮಾಡಿತು ಮತ್ತು ತನ್ನ ಹಾರಾಟವನ್ನು ಮುಂದುವರೆಸಿತು. ಇದೇ ಸಮಸ್ಯೆ ಹಲವು ಗೊಂದಲಗಳ ಜೊತೆಗೆ, ತನಿಖೆಯೂ ಆರಂಭವಾಯಿತು.
ತಾಂತ್ರಿಕ ವಿಶ್ಲೇಷಣೆ ನಡೆಸಿದ ಏರ್‌ಬಸ್, ಸಮಸ್ಯೆಯ ಮೂಲ ವಿಮಾನದ ಎಲಿವೇಟರ್ ಮತ್ತು ಐಲರಾನ್ ಕಂಪ್ಯೂಟರ್ (ELAC) ನಲ್ಲಿದೆ ಎಂದು ಗುರುತಿಸಿದೆ. ಪೈಲಟ್‌ನ ಸೈಡ್-ಸ್ಟಿಕ್ ಇನ್‌ಪುಟ್‌ಗಳನ್ನು ಪಡೆದು, ವಿಮಾನದ ಪಿಚ್ ಅನ್ನು ನಿಯಂತ್ರಿಸುವ ಕಂಪ್ಯೂಟರ್ ಇದಾಗಿದೆ. ವಿಮಾನ ಮೇಲಕ್ಕೆ ಅಥವಾ ಕೆಳಕ್ಕೆ ಚಲಿಸುವುದನ್ನು ಇದು ನಿರ್ಧರಿಸುತ್ತದೆ. ಆದರೆ ಅಲ್ಲದೇ ಸಮಸ್ಯೆ ಎದುರಾಗಿದೆ.
ಈ ತನಿಖೆಯ ಆಧಾರದ ಮೇಲೆ, EASA ಈ ಸೂಚನೆ ಹೊರಡಿಸಿತು. ಅಲ್ಲದೇ ಸಾಫ್ಟ್‌ವೇರ್ ಅಥವಾ ಹಾರ್ಡ್‌ವೇರ್ ರಕ್ಷಣಾ ಕ್ರಮಗಳನ್ನು ತಕ್ಷಣವೇ ಕೈಗೊಳ್ಳುವಂತೆ ವಿಮಾನಯಾನ ಸಂಸ್ಥೆಗಳಿಗೆ ಸೂಚಿನೆ ನೀಡಿತು.
EASA ನವೆಂಬರ್ 28, 2025 ರಂದು ಈ ನಿರ್ಧಾರ ಪ್ರಕಟಿಸಿ, ಇದು ಹಾರಾಟದ ವೇಳಾಪಟ್ಟಿಯಲ್ಲಿ ಅಡಚಣೆ ಮತ್ತು ಪ್ರಯಾಣಿಕರಿಗೆ ಅನಾನುಕೂಲತೆಯನ್ನು ಉಂಟುಮಾಡಬಹುದು ಎಂದು ಒಪ್ಪಿಕೊಂಡಿತು. ಆದರೆ, ವಿಮಾನಯಾನದಲ್ಲಿ ಸುರಕ್ಷತೆಗೆ ಮೊದಲ ಆದ್ಯತೆ ನೀಡುವುದು ಮುಖ್ಯ ಎಂದು ಸ್ಪಷ್ಟಪಡಿಸಿದೆ. ಏರ್‌ಬಸ್ ಕೂಡ ಈ ಅಪ್ಡೇಟ್‌ನಿಂದಾಗಿ ಕಾರ್ಯಾಚರಣೆಯಲ್ಲಿ ವಿಳಂಬವಾಗಲಿದೆ ಎಂದು ಒಪ್ಪಿಕೊಂಡಿದ್ದು, ಆದರೆ "ವಿಮಾನವು ಹಾರಾಟಕ್ಕೆ ಸುರಕ್ಷಿತವಾಗಿದೆ ಎಂದು ಖಚಿತಪಡಿಸಿಕೊಳ್ಳಲು" ಈ ಅಪ್ಡೇಟ್ ಅನಿವಾರ್ಯ ಎಂದು ಹೇಳಿದೆ.
ಭಾರತೀಯ ವಿಮಾನಯಾನ ಸಂಸ್ಥೆಗಳ ಮೇಲೆ ಹೇಗೆ ಪರಿಣಾಮ ಬೀರುತ್ತದೆ?
ಫೈನಾನ್ಷಿಯಲ್ ಎಕ್ಸ್‌ಪ್ರೆಸ್ ಪ್ರಕಾರ, ಇಂಡಿಗೋ ಸುಮಾರು 370, A320 ವರ್ಗದ ಜೆಟ್‌ಗಳನ್ನು ಹೊಂದಿದೆ, ಏರ್ ಇಂಡಿಯಾ 127 ಮತ್ತು ಏರ್ ಇಂಡಿಯಾ ಎಕ್ಸ್‌ಪ್ರೆಸ್ ಸುಮಾರು 40 ಜೆಟ್‌ಗಳನ್ನು ನಿರ್ವಹಿಸುತ್ತದೆ. ಈ ಮೂರೂ ವಿಮಾನಯಾನ ಸಂಸ್ಥೆಗಳು ಕಡ್ಡಾಯವಾಗಿ ಅಪ್ಡೇಟ್ ಮಾಡಲೇಬೇಕು. ಮುಂದಿನ ಕೆಲವು ದಿನಗಳಲ್ಲಿ ತನ್ನ ಹಾರಾಟದ ಸಮಯವೂ ಬದಲಾಗಲಿದೆ ಎಂದು ಸೂಚನೆ ನೀಡಿದೆ.


Click it and Unblock the Notifications