ಭಾರತದಲ್ಲಿ ಜಿಯೋ ಅಬ್ಬರ ಆರಂಭವಾಗುವ ವರೆಗೂ ಅಂದರೆ 2014ರ ವರೆಗೂ ಅಬ್ಬರ ಮೆರೆದಿದ್ದ ಭಾರ್ತಿ ಏರ್‌ಟೆಲ್ ಇದೀಗ ಮತ್ತೊಮ್ಮೆ ದೇಶದ ಟೆಲಿಕಾಂ ಉದ್ಯಮದಲ್ಲಿ ತನ್ನ ಪ್ರಭಾವ ಬೀರಲು ಎಲ್ಲಾ ಸಿದ್ದತೆ ನಡೆಸಿದೆ. ಈ ಹಿನ್ನೆಲೆಯಲ್ಲಿ ಏರ್‌ಟೆಲ್ ಈಗಾಗಲೇ ಹಲವು ಕ್ರಮಗಳನ್ನು ತೆಗೆದುಕೊಂಡಿದ್ದು, ಮೆಗಾ ಯೋಜನೆಗಳನ್ನು ಒಂದೊಂದಾಗಿ ನಡೆಸುತ್ತಿದೆ. ಹಾಗಾಗಿ ಇದರ ಮುಂದುವರೆದ ಭಾಗವೆಂಬಂತೆ ಇದೀಗ ಭಾರ್ತಿ ಏರ್‌ಟೆಲ್ ಭಾರತದಲ್ಲಿ 4G ಮತ್ತು 5G ಉಪಕರಣಗಳನ್ನು ಅಳವಡಿಸುವ ಸಲುವಾಗಿ ಫಿನ್ಲೆಂಡ್‌ನ ಟೆಲಿಕಾಂ, ಐಟಿ ಮತ್ತು ಎಲೆಕ್ಟ್ರಾನಿಕ್ಸ್ ದೈತ್ಯ ನೋಕಿಯಾದೊಂದಿಗೆ ಬಹುವಾರ್ಷಿಯ ಹಾಗೂ ಬಹುಶತಕೋಟಿ ಮೊತ್ತದ ವಿಸ್ತರಣಾ ಒಪ್ಪಂದವನ್ನು ಮಾಡಿಕೊಂಡಿದೆ. ಇದರನ್ವಯ ನೋಕಿಯಾವು ಭಾರತದ ಪ್ರಮುಖ ನಗರಗಳು ಹಾಗೂ ರಾಜ್ಯಗಳಲ್ಲಿ 4G ಮತ್ತು 5G ಗೆ ಸಂಬಂಧಿಸಿದ ಉಪಕರಣಗಳನ್ನು ಅಳವಡಿಸಲಿದೆ. ಭಾರ್ತಿ ಏರ್‌ಟೆಲ್ ಲಿಮಿಟೆಡ್ ಫಿನ್ಲೆಂಡ್‌ನ ಟೆಲಿಕಾಂ, ಐಟಿ ಮತ್ತು ಎಲೆಕ್ಟ್ರಾನಿಕ್ಸ್ ದೈತ್ಯ ನೋಕಿಯಾ ಕಾರ್ಪೊರೇಶನ್‌ನಿಂದ 4 ಜಿ ಮತ್ತು 5 ಜಿ ಉಪಕರಣಗಳನ್ನು ಪಡೆಯಲಿದೆ ಎಂದು ಎರಡೂ ಕಂಪನಿಗಳು ನವೆಂಬರ್ 20ರಂದು ಬಿಡುಗಡೆ ಮಾಡಲಾದ ಜಂಟಿ ಹೇಳಿಕೆಯಲ್ಲಿ ಘೋಷಿಸಿವೆ. ಆದರೆ ಬಹುತೇಕ ಎಲ್ಲಾ ಒಪ್ಪಂದಗಳಂತೆ ಈ ಎರಡೂ ಕಂಪೆನಿಗಳು ಕೂಡ ತಮ್ಮ ಒಪ್ಪಂದದ ಮೊತ್ತವನ್ನು ಬಿಡುಗಡೆ ಮಾಡಿಲ್ಲ. ಕೇವಲ ಬಹು-ಶತಕೋಟಿ' ವಿಸ್ತರಣಾ ಒಪ್ಪಂದ ಎಂದು ಮಾತ್ರ ತಮ್ಮ ಜಂಟಿ ಹೇಳಿಕೆಯಲ್ಲಿ ತಿಳಿಸಿದೆ.
ಒಪ್ಪಂದದಲ್ಲಿ ಏನಿದೆ?
ಒಪ್ಪಂದದ ಪ್ರಕಾರ, Nokia ತನ್ನ 5G ಏರ್‌ಸ್ಕೇಲ್ ಉಪಕರಣಗಳನ್ನು ಬೇಸ್ ಸ್ಟೇಷನ್‌ಗಳು, ಬೇಸ್‌ಬ್ಯಾಂಡ್ ಘಟಕಗಳು ಮತ್ತು ಇತ್ತೀಚಿನ ಪೀಳಿಗೆಯ ಬೃಹತ್ MIMO ರೇಡಿಯೊಗಳನ್ನು ಭಾರತದ ವಿವಿಧ ನಗರಗಳು ಸೇರಿದಂತೆ ಹಲವು ರಾಜ್ಯಗಳಲ್ಲಿ ನಿಯೋಜಿಸಲಿದೆ. ಈ ಎಲ್ಲಾ ಉಪಕರಣಗಳು ನೋಕಿಯಾದ ಕಡಿಮೆ ಶಕ್ತಿ ವ್ಯಯಿಸುವ ರೀಫ್‌ಶಾರ್ಕ್ ಸಿಸ್ಟಮ್-ಆನ್-ಚಿಪ್ ತಂತ್ರಜ್ಞಾನದಿಂದ ಚಾಲಿತವಾಗಲಿದೆ. ಇದು ದೇಶದಲ್ಲಿ ಏರ್‌ಟೆಲ್‌ನ 5G ನೆಟ್‌ವರ್ಕ್ ಸೇವೆಗಳ ಮೂಲ ಚೌಕಟ್ಟಾಗಲಿದೆ. ಇದಲ್ಲದೆ ಮಲ್ಟಿಬ್ಯಾಂಡ್ ರೇಡಿಯೋಗಳು ಮತ್ತು ಬೇಸ್‌ಬ್ಯಾಂಡ್ ಉಪಕರಣಗಳು ಅದರ ಅಸ್ತಿತ್ವದಲ್ಲಿರುವ 4G ನೆಟ್‌ವರ್ಕ್ ಅನ್ನು ಆಧುನೀಕರಿಸುತ್ತವೆ ಎಂದು ಭಾರ್ತಿ ಏರ್‌ಟೆಲ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಇನ್ನು 5G ಯೋಜನೆಯು ಹಸಿರು ಯೋಜನೆಯ ಭಾಗ ಕೂಡ ಆಗಿರುವುದು ಪರಿಸರಕ್ಕೆ ಉತ್ತಮ ಅಂಶವೆನ್ನಬಹುದು. ಏರ್‌ಟೆಲ್‌ನ ನೆಟ್‌ವರ್ಕ್‌ನ ಶಕ್ತಿಯ ದಕ್ಷತೆಯನ್ನು ಸುಧಾರಿಸಲು ಮತ್ತು ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆ ಮಾಡಲು, ಕಂಪನಿಯ ಹೊರಸೂಸುವಿಕೆ ಕಡಿತ ಗುರಿಗಳಿಗೆ ಅನುಗುಣವಾಗಿ ಈ ಯೋಜನೆ ಸಾಗಲಿದೆ.

ಎರಡೂ ಕಂಪೆನಿಗಳ ಮುಖ್ಯಸ್ಥರ ಮಾತೇನು?
ಇನ್ನು ಒಪ್ಪಂದದ ಬಗ್ಗೆ ಪ್ರತಿಕ್ರಿಯೆ ನೀಡಿರುವ Nokia ಅಧ್ಯಕ್ಷ ಮತ್ತು CEO ಪೆಕ್ಕಾ ಲುಂಡ್‌ಮಾರ್ಕ್ ಅವರು, ನಮ್ಮ ಉದ್ಯಮ-ಪ್ರಮುಖ ಏರ್‌ಸ್ಕೇಲ್ ಪೋರ್ಟ್‌ಫೋಲಿಯೊ ಮತ್ತು AI-ಆಧಾರಿತ ಸೇವೆಗಳು ಏರ್‌ಟೆಲ್‌ನ ನೆಟ್‌ವರ್ಕ್‌ನ ಶಕ್ತಿಯ ದಕ್ಷತೆಯನ್ನು ಹೆಚ್ಚಿಸುತ್ತದೆ. ಪ್ರೀಮಿಯಂ 5G ಸಾಮರ್ಥ್ಯ ಮತ್ತು ಚಂದಾದಾರರಿಗೆ ಅತ್ಯುನ್ನತ ಗುಣಮಟ್ಟದ ಸೇವೆಯೊಂದಿಗೆ ಸಂಪರ್ಕವನ್ನು ಸಕ್ರಿಯಗೊಳಿಸುತ್ತದೆ ಎಂದು ತಿಳಿಸಿದ್ದಾರೆ. ಇದಲ್ಲದೆ, ಡಿಜಿಟಲ್ ನಿಯೋಜನೆ, ಆಪ್ಟಿಮೈಸೇಶನ್ ಮತ್ತು ತಾಂತ್ರಿಕ ಬೆಂಬಲದಂತಹ ಕಾರ್ಯಗಳಿಗಾಗಿ AI- ಆಧಾರಿತ ಸಾಧನಗಳೊಂದಿಗೆ ನೆಟ್‌ವರ್ಕ್ ಮೇಲ್ವಿಚಾರಣೆ ಮತ್ತು ನಿರ್ವಹಣೆಗಾಗಿ ಏರ್‌ಟೆಲ್ Nokia ನ MantaRay ನೆಟ್‌ವರ್ಕ್ ಮ್ಯಾನೇಜ್‌ಮೆಂಟ್ ಅನ್ನು ಸಹ ಬಳಸಲಿದೆ. ಇನ್ನು ಬಹುತೇಕರಿಗೆ ತಿಳಿದಿರುವಂತೆ Nokia ಎರಡು ದಶಕಗಳಿಂದ ಭಾರ್ತಿ ಏರ್‌ಟೆಲ್‌ನೊಂದಿಗೆ 2G, 3G, 4G, ಮತ್ತು 5G ನೆಟ್‌ವರ್ಕ್ ಉಪಕರಣಗಳನ್ನು ಒದಗಿಸುತ್ತಿದೆ. ಇನ್ನು ಒಪ್ಪಂದದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಭಾರ್ತಿ ಏರ್‌ಟೆಲ್‌ನ ಉಪಾಧ್ಯಕ್ಷ ಮತ್ತು MD ಗೋಪಾಲ್ ವಿಟ್ಟಲ್ ಅವರು, Nokia ನೊಂದಿಗಿನ ಈ ಕಾರ್ಯತಂತ್ರದ ಪಾಲುದಾರಿಕೆಯು ಭವಿಷ್ಯದಲ್ಲಿ ನಮ್ಮ ನೆಟ್‌ವರ್ಕ್ ಮೂಲಸೌಕರ್ಯವನ್ನು ಸಾಬೀತುಪಡಿಸಲಿದೆ. ಪರಿಸರದ ಮೇಲಿನ ವ್ಯತಿರಿಕ್ತ ಪರಿಣಾಮವನ್ನು ಕಡಿಮೆ ಮಾಡಲು ಪರಿಸರ ಸ್ನೇಹಿಯಾಗಿರುವ ನೆಟ್‌ವರ್ಕ್‌ನೊಂದಿಗೆ ಸರಿಸಾಟಿಯಿಲ್ಲದ ಬಳಕೆದಾರ ಅನುಭವವನ್ನು ಗ್ರಾಹಕರಿಗೆ ಒದಗಿಸಲಿದೆ ಎಂದು ಅವರು ತಿಳಿಸಿದ್ದಾರೆ.
ಕಠಿಣ ಸ್ಪರ್ಧೆ
ಇನ್ನು ಭಾರತದಲ್ಲಿ 4G, ಮತ್ತು 5G ನೆಟ್‌ವರ್ಕ್ ವಿಸ್ತರಿಸುವ ಯೋಜನೆಯಲ್ಲಿ ಕೇವಲ ಭಾರ್ತಿ ಏರ್‌ಟೆಲ್ ಮಾತ್ರವಲ್ಲದೆ ರಿಲಾಯನ್ಸ್‌ನ ಜಿಯೋ ಕೂಡ ಶಕ್ತಿ ಮೀರಿ ಶ್ರಮಿಸುತ್ತಿದ್ದು, ಭಾರತದಲ್ಲಿ ಎರಡು ಪ್ರಖ್ಯಾತ ಕಂಪೆನಿಗಳ ನಡುವೆ ನೇರ ಸ್ಪರ್ಧೆ ನಡೆಯುವುದಂತೂ ನಿಜ ಎನ್ನಲಾಗಿದೆ. ಅತ್ತ ಜಿಯೋ ಕೂಡ 4G, ಮತ್ತು 5G ನೆಟ್‌ವರ್ಕ್ ವಿಸ್ತರಣೆ ಯೋಜನೆಯಲ್ಲಿ ಭಾರೀ ಹಣ ಹೂಡಿಕೆ ಮಾಡುತ್ತಿದ್ದು, ಒಟ್ಟಿನಲ್ಲಿ ಗ್ರಾಹಕರಿಗೆ ಶುಭ ಸುದ್ದಿ ಎನ್ನಬಹುದು. ಆದರೆ ಗ್ರಾಹಕರ ಜೊತೆಗೆ ಪರಿಸರದ ಮೇಲಾಗುತ್ತಿರುವ ಪರಿಣಾಮಗಳನ್ನು ನಿವಾರಿಸಿ ಮುಂದುವರೆದರೆ ಎಲ್ಲರಿಗೂ ಒಳಿತು.


Click it and Unblock the Notifications