ಭಾರತೀಯ ಕ್ರಿಕೆಟ್ ಜಗತ್ತಿನಲ್ಲಿ ಹೆಸರು ಮಾಡಿದ್ದ, ಆಟಗಾರ ಇದೀಗ ಇತಿಹಾಸದ ಪುಟಗಳಲ್ಲಿ ತನ್ನದೇ ಆದ ಅಧ್ಯಾಯವನ್ನು ಬರೆಯ ಹೊರಟಿದ್ದಾರೆ. ಹೌದು, ಭಾರತೀಯ ಕ್ರಿಕೆಟ್ ತಂಡದ ಮಾಜಿ ಆಟಗಾರ ಅಜಯ್ ಜಡೇಜಾ ಅವರು ತಮ್ಮ, ಇದೀಗ ಒಂದು ಶತಮಾನಗಳಷ್ಟು ಹಳೆಯ ಇತಿಹಾಸ ಹೊಂದಿರುವ ರಾಜಮನೆತನದ ಉತ್ತರಾಧಿಕಾರಿಯಾಗಿದ್ದಾರೆ.
ಟೀಂ ಇಂಡಿಯಾ ಪರ ಸುಮಾರು 200ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯವಾಡಿದ್ದ ಆಟಗಾರ ಇದೀಗ ಐತಿಹಾಸಿಕ ರಾಜಮನೆತನ ನವನಗರ (ಜಾಮ್ ನಗರ)ದ ಮುಂದಿನ ಸಿಂಹಾಸನದ ಉತ್ತರಾಧಿಕಾರಿಯಾಗಿದ್ದಾರೆ.

ಗುಜರಾತ್‌ನ ರಾಜಪ್ರಭುತ್ವದ ರಾಜ್ಯವಾದ ಜಾಮ್‌ನಗರ ಎಂದೂ ಕರೆಯಲ್ಪಡುವ ನವನಗರದ ಮುಂದಿನ ಜಾಮ್ ಸಾಹೇಬ್ ಎಂದು ಅಜಯ್ ಅವರನ್ನು ಘೋಷಿಸಲಾಗಿದ್ದು ನವನಗರದ ಮಹಾರಾಜ ಜಾಮ್ ಸಾಹೇಬ್ ಅವರು ಹೇಳಿಕೆಯಲ್ಲಿ ಖಚಿತಪಡಿಸಿದ್ದಾರೆ.
ಶತ್ರುಸಲ್ಯಸಿಂಹಜಿ ದಿಗ್ವಿಜಯಸಿಂಹಜಿ ಜಡೇಜಾ ಅವರು ನೀಡಿದ ಹೇಳಿಕೆಯಲ್ಲಿ, "ದಸರಾ ಹಬ್ಬವು ಪಾಂಡವರು ವನವಾಸದಿಂದ ಹೊರಬಂದ ದಿನ ಎಂದು ಪರಿಗಣಿಸಲಾಗುತ್ತದೆ. ಇಂದು, ದಸರಾ ಹಬ್ಬದ ಪ್ರಯುಕ್ತ ನಾನು ಅಷ್ಟೇ ಸಂತೋಷವಾಗಿದ್ದೇನೆ. ನನ್ನ ಉತ್ತರಾಧಿಕಾರಿಯಾಗಲು ಒಪ್ಪಿಕೊಂಡಿರುವ ಅಜಯ್ ಜಡೇಜಾ ಅವರಿಗೆ ಧನ್ಯವಾದಗಳು. ನನ್ನ ಸಂದಿಗ್ಧತೆಗೆ ಒಂದು ಪರಿಹಾರವನ್ನು ಕಂಡುಕೊಂಡಿದ್ದೇನೆ. ಜಾಮ್‌ನಗರದ ಜನರ ಸೇವೆಗೆ ಅಜಯ್ ಜಡೇಜಾ ಅವರು ಹೊಣೆಗಾರಿಕೆ ವಹಿಸುವುದು ನಿಜಕ್ಕೂಇಲ್ಲಿನ ಜನರಿಗೆ ವರದಾನವಾಗಿದೆ" ಎಂದು ತಿಳಿಸಿದ್ದಾರೆ.
ಶತ್ರುಸಲ್ಯಸಿಂಹಜಿ ದಿಗ್ವಿಜಯಸಿಂಹಜಿ ಜಡೇಜಾ ಅವರು 1939 ರಲ್ಲಿ ಜನಿಸಿದರು ಮತ್ತು ಫೆಬ್ರವರಿ 3, 1966 ರಂದು ಜಾಮ್‌ನಗರದ ಜಾಮ್ ಸಾಹೇಬರಾಗಿ ಅಧಿಕಾರ ಸ್ವೀಕರಿಸಿದರು. ಅವರು ಅಜಯ್ ಜಡೇಜಾ ಅವರ ತಂದೆಯ ಸೋದರಸಂಬಂಧಿ. ಅಂದರೆ ಅಜಯ್ ಅವರ ಚಿಕ್ಕಪ್ಪ.
ಫೆಬ್ರವರಿ 1, 1971 ರಂದು ಜನಿಸಿದ 53 ವರ್ಷದ ಅಜಯ್ ಜಡೇಜಾ ಅವರು 1992 ಮತ್ತು 2000 ರ ನಡುವೆ ಭಾರತಕ್ಕಾಗಿ 196 ಏಕದಿನ ಅಂತರಾಷ್ಟ್ರೀಯ ಮತ್ತು 15 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ.ಅಜಯ್ ಜಡೇಜಾ ಅವರು ರಣಜಿ ಟ್ರೋಫಿ ಮತ್ತು ದುಲೀಪ್ ಟ್ರೋಫಿ ಹೆಸರಿಗೆ ಕಾರಣವಾದ ಕೆ ರಣಜಿತ್‌ಸಿಂಗ್ ಜಿ ಮತ್ತು ಕೆಎಸ್ ದುಲೀಪ್ ಸಿಂಗ್ ಜಿ ಅವರ ಸಂಬಂಧಿಕರಾಗಿದ್ದಾರೆ. 196 ಏಕದಿನ ಪಂದ್ಯವಾಡಿರುವ ಅಜಯ್ ಜಡೇಜಾ 5,359 ರನ್ ಗಳಿಸಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ಸ್ಪೋಟಕ ಬ್ಯಾಟರ್ ಆಗಿದ್ದ ಜಡೇಜಾ ಆರು ಶತಕ ಮತ್ತು 30 ಅರ್ಧ ಶತಕ ಬಾರಿಸಿದ್ದಾರೆ
ಜಾಮ್ ನಗರದ ರಾಜಮನೆತನ ಕುತೂಹಲಕಾರಿ ಸಂಗತಿಗಳು:
ರಾಜವಂಶ ಮತ್ತು ಆಳ್ವಿಕೆ: ಭಾರತ ಸ್ವತಂತ್ರವಾಗುವ ಮೊದಲು, ಜಡೇಜಾ ರಾಜವಂಶವು ನವನಗರ (ಈಗಿನ ಜಾಮ್‌ನಗರ)ವನ್ನು ಆಳಿತ್ತು. ಜಾಮ್ ಸಾಹೇಬ್ ಎಂಬ ಬಿರುದನ್ನು ಬಳಸುತ್ತಿದ್ದ ಈ ರಾಜವಂಶದ ಪೂರ್ವಜರು ಕಚ್‌ನ ರಾವ್ ರಾಜವಂಶದ ಸಾಲಿಗೆ ಸೇರಿದ್ದಾರೆ.
ಐಷಾರಾಮಿ ಮತ್ತು ಸಂಸ್ಕೃತಿ: ಜಾಮ್ ಸಾಹೇಬರು ತಮ್ಮ ಐಷಾರಾಮಿ ಜೀವನಶೈಲಿಗೆ ಹೆಸರುವಾಸಿಯಾಗಿದ್ದರು, ವಿಶೇಷವಾಗಿ ಅವರ ಆಭರಣ ಸಂಗ್ರಹಕ್ಕೆ. ರಂಜಿತ್‌ಸಿನ್ಹಜಿ ಅವರ ಪಚ್ಚೆ ಸಂಗ್ರಹವು ವಿಶ್ವದ ಅತ್ಯುತ್ತಮವಾದವುಗಳಲ್ಲಿ ಒಂದೆಂದು ಪರಿಗಣಿಸಲಾಗಿತ್ತು.
ಕ್ರಿಕೆಟ್‌ನಲ್ಲಿನ ಕೊಡುಗೆ: ಜಾಮ್‌ನಗರದ ರಾಜಮನೆತನವು ಕ್ರಿಕೆಟ್‌ಗೆ ಗಮನಾರ್ಹ ಕೊಡುಗೆ ನೀಡಿದೆ. ಕೆಎಸ್ ರಂಜಿತ್‌ಸಿನ್‌ಜಿ ಮತ್ತು ಕೆಎಸ್ ದುಲೀಪ್‌ಸಿನ್‌ಜಿ ಅವರ ಹೆಸರನ್ನು ಕ್ರಮವಾಗಿ ರಣಜಿ ಟ್ರೋಫಿ ಮತ್ತು ದುಲೀಪ್ ಟ್ರೋಫಿಗೆ ಇಡಲಾಗಿದೆ.
ಅಂತರರಾಷ್ಟ್ರೀಯ ಗೌರವ: ಪೋಲೆಂಡ್‌ನಲ್ಲಿ ಮಾಜಿ ಜಾಮ್ ಸಾಹೇಬ್ ದಿಗ್ವಿಜಯ್‌ಸಿನ್ಹಜಿ ರಂಜಿತ್‌ಸಿನ್ಹಜಿ ಅವರನ್ನು ಗೌರವಿಸಿ ಸ್ಮಾರಕವನ್ನು ನಿರ್ಮಿಸಲಾಗಿದೆ.
ರಾಜಕೀಯ ಸಂಬಂಧ: ಅಜಯ್ ಜಡೇಜಾ ಅವರ ತಂದೆ ದೌಲತ್‌ಸಿನ್ಹಜಿ ಜಡೇಜಾ ಅವರು ಮೂರು ಬಾರಿ ಸಂಸದರಾಗಿದ್ದರು.
ವೈಯಕ್ತಿಕ ಜೀವನ: ಅಜಯ್ ಜಡೇಜಾ ಅವರು ಭಾರತೀಯ ರಾಜಕಾರಣಿ ಜಯಾ ಜೇಟ್ಲಿ ಅವರ ಪುತ್ರಿ ಅದಿತಿ ಜೇಟ್ಲಿ ಅವರನ್ನು ವಿವಾಹವಾಗಿದ್ದಾರೆ ಮತ್ತು ಅವರಿಗೆ ಇಬ್ಬರು ಮಕ್ಕಳಿದ್ದಾರೆ.


Click it and Unblock the Notifications