ಈ ಭಾರಿಯ ಅಕ್ಷಯ ತೃತೀಯವು ಚಿನ್ನ ಮತ್ತು ಬೆಳ್ಳಿಯ ವ್ಯಾಪಾರಿಗಳಿಗೆ ಬಹು ಅದೃಷ್ಟದ ದಿನವಾಗಿತ್ತು. ಬೆಲೆಗಳು ಗಗನಕ್ಕೇರಿದ್ದರೂ, ಭಾರತೀಯರು ಮುಗಿಬಿದ್ದು ಚಿನ್ನಾಭರಣ ಮತ್ತು ಬೆಳ್ಳಿಯ ವಸ್ತುಗಳನ್ನು ಖರೀದಿಸಿದರು. ಅದರಲ್ಲೂ ಕರ್ನಾಟಕದಲ್ಲಂತೂ ಶುಭ ವಸ್ತುಗಳ ಖರೀದಿ ತುಸುಜೋರಾಗಿತ್ತು.
ಅಂದಾಜಿನ ಪ್ರಕಾರ, ಒಂದೇ ದಿನದಲ್ಲಿ ಬರೋಬ್ಬರಿ ₹16,000 ಕೋಟಿಗೂ ಹೆಚ್ಚು ವಹಿವಾಟು ನಡೆದಿದೆ. ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟದವರು ಹೇಳುವ ಪ್ರಕಾರ, ಇದರಲ್ಲಿ ಸುಮಾರು ₹12,000 ಕೋಟಿ ಮೌಲ್ಯದ ಚಿನ್ನಾಭರಣ ಮತ್ತು ಅದಕ್ಕೆ ಸಂಬಂಧಿಸಿದ ವಸ್ತುಗಳು ಮಾರಾಟವಾಗಿವೆ. ಅಚ್ಚರಿಯ ವಿಷಯವೆಂದರೆ, ಚಿನ್ನದ ಬೆಲೆ ಏರಿಕೆಯಾಗಿದ್ದರೂ ಜನರು ತಮ್ಮ ಸಂಪ್ರದಾಯವನ್ನು ಮುಂದುವರೆಸಿಕೊಂಡು ಬಂದಿದ್ದಾರೆ. ಇನ್ನು ಬೆಳ್ಳಿಯ ಮಾರಾಟವು ಹಿಂದೆ ಬಿದ್ದಿಲ್ಲ. ಸುಮಾರು ₹4,000 ಕೋಟಿ ವಹಿವಾಟು ನಡೆದಿದೆ ಎಂದು ಅಂದಾಜಿಸಲಾಗಿದೆ.

ಮದುವೆಯ ಸೀಸನ್ ಮತ್ತು ಅಕ್ಷಯ ತೃತೀಯದಂದು ಬೆಲೆಬಾಳುವ ಲೋಹಗಳನ್ನು ಖರೀದಿಸುವುದು ಸಾಂಸ್ಕೃತಿಕವಾಗಿ ಮಹತ್ವದ್ದಾಗಿರುವುದರಿಂದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಅಂಗಡಿಗಳಿಗೆ ಭೇಟಿ ನೀಡಿ ಖರೀದಿಗೆ ಆಸಕ್ತಿ ತೋರಿದರು.
ಕರ್ನಾಟಕದಲ್ಲಿ ಬರೋಬ್ಬರಿ 2ಟನ್ ಚಿನ್ನ ಮಾರಾಟ
ಅಕ್ಷಯ ತೃತೀಯ ದಿನ ಕರುನಾಡಿನಲ್ಲಿಯೂ ಸ್ವರ್ಣಾಭರಣ ಖರೀದಿ ಭರಾಟೆ ಜೋರಾಗಿದ್ದು , ಬರೋಬ್ಬರಿ ೨ ಟನ್ ನಷ್ಟು ಚಿನ್ನ ಮಾರಾಟವಾಗಿದೆ. ಸುಮಾರು 1,700 ಕೋಟಿ ರೂ ನಿಂದ 1,800 ಕೋಟಿ ರೂ ವಹಿವಾಟು ನಡೆದಿದೆ ಎಂದು ವರದಿಯಾಗಿದೆ. ಕಳೆದ ವರ್ಷವೂ ರಾಜ್ಯದಲ್ಲಿ ಸುಮಾರು 2 ಟನ್ ನಷ್ಟು ವಹಿವಾಟು ನಡೆದಿದ್ದರೂ ಬೆಲೆ ಕಡಿಮೆ ಇದ್ದೂದರಿಂದ ಒಟ್ಟಾರೆ ಮೊತ್ತವು 700 ಕೋಟಿ. ರೂ ನಿಂದ 800 ನಷ್ಟು ವಹಿವಾಟು ನಡೆದಿತ್ತು. ಹಾಗೆ ನೋಡಿದ್ರೆ ಕಳೆದ ವರ್ಷ ಹಾಗೂ ಈ ವರ್ಷ ಮಾರಾಟದ ಪ್ರಮಾಣ ಸರಿಸಮಾನಾಗಿದೆ.
ಒಂದೇ ದಿನ ನಡೆದ ಇಷ್ಟೊಂದು ವಹಿವಾಟಿನಲ್ಲಿ ಶೇ. 60 ರಾಜ್ಯ ರಾಜಧಾನಿ ಬೆಂಗಳೂರಿನಲ್ಲೇ ನಡೆದಿದ್ದು, ಬಾಕಿ ಉಳಿದಿರುವುದು ಮಂಗಳೂರು, ಹುಬ್ಬಳ್ಳಿ, ಮೈಸೂರಿನಲ್ಲಿ ಹೆಚ್ಚಿನ ವ್ಯಾಪಾರವಾಗಿದೆ. ಮಿಡ್ಲ್ ಕ್ಲಾಸ್ ಜನಗಳಿಗೆ ತಕ್ಕಂತೆ ರಾಜ್ಯದಲ್ಲಿ 18 ಕ್ಯಾರೆಟ್ ಚಿನ್ನ ತಯಾರಿಸಿ ಮಾರಾಟ ಮಾಡುವುದರಿಂದ ಅದರತ್ತಲೂ ಹೆಚ್ಚಿನ ಜನ ಒಲವು ನೀಡಿರುವುದು ಕಂಡುಬಂತು.
ಚಿನ್ನದ ಬೆಲೆ ಗಗನಕ್ಕೇರಿದ್ರೂ ಬೇಡಿಕೆಯಲ್ಲಿ ಹೆಚ್ಚಳ
ಈ ಅಕ್ಷಯ ತೃತೀಯ ವೇಳೆಗೆ ಚಿನ್ನದ ಬೆಲೆ ಸುಮಾರು ₹1 ಲಕ್ಷ ಆಗಿತ್ತು. ಆದರೂ ಜನ ಚಿನ್ನ ಕೊಂಡುಕೊಳ್ಳವಲ್ಲಿ ನಿರಾಸೆ ತೋರಿಲ್ಲ. 10 ಗ್ರಾಂ ಚಿನ್ನದ ಬೆಲೆ ₹99,500 ರಿಂದ ₹99,900 ರವರೆಗೆ ಇತ್ತು. ಕಳೆದ ವರ್ಷ ಇದೇ ಸಮಯದಲ್ಲಿ ಬೆಲೆ ₹72,300 ಇತ್ತು. ಅಂದರೆ ಈ ಬಾರಿ ಸುಮಾರು 38% ಬೆಲೆ ಜಾಸ್ತಿಯಿತ್ತು.
"ಬೆಲೆಗಳು ಹೆಚ್ಚಿದ್ದರೂ, ಬೇಡಿಕೆ ಬಲವಾಗಿತ್ತು. ವಿಶೇಷವಾಗಿ ಮದುವೆ ಖರೀದಿಗಳು ಮತ್ತು ಆ ದಿನಕ್ಕೆ ಸಂಬಂಧಿಸಿದ ಸಂಪ್ರದಾಯದಿಂದಾಗಿ ಜನರು ಖರೀದಿಸಲು ಮುಗಿಬಿದ್ದಿದ್ದರು " ಎಂದು CAIT ಪ್ರಧಾನ ಕಾರ್ಯದರ್ಶಿ ಮತ್ತು ಬಿಜೆಪಿ ಸಂಸದ ಪ್ರವೀಣ್ ಖಂಡೇಲ್ವಾಲ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
"ಪಿಎನ್‌ಜಿ ಜ್ಯುವೆಲ್ಲರ್ಸ್‌ನ ಮುಖ್ಯಸ್ಥರಾದ ಸೌರಭ್ ಗಾಡ್ಗಿಲ್ ಅವರು " 25 ರಿಂದ 40 ವರ್ಷ ವಯಸ್ಸಿನ ಅನೇಕ ಜನರು ಈಗ ಚಿನ್ನ ಕೊಳ್ಳಲು ಬರುತ್ತಿದ್ದಾರೆ. ಅವರವರ ಯೋಗ್ಯತೆಗೆ ತಕ್ಕಂತೆ ಚಿನ್ನದ ನಾಣ್ಯಗಳು, ಬಿಸ್ಕತ್ತುಗಳು ಮತ್ತು ಕಡಿಮೆ ತೂಕದ ಆಭರಣಗಳನ್ನು ಕೊಳ್ಳುತ್ತಿದ್ದಾರೆ.
ಚಿನ್ನ, ವಜ್ರ ಮತ್ತು ಬೆಳ್ಳಿ ಆಭರಣಗಳನ್ನು ಕೊಳ್ಳಲು ಜನರು ಆಸಕ್ತಿ ತೋರಿಸುತ್ತಿದ್ದಾರೆ. ಚಿನ್ನದ ಬೆಲೆ ತುಂಬಾ ಹೆಚ್ಚಿದ್ದರೂ, ಜನರು ಖುಷಿಯಿಂದ ಬೆಲೆಯನ್ನು ಒಪ್ಪಿಕೊಂಡು ಖರೀಸುತ್ತಿದ್ದಾರೆ. ಈಗಿನ ಟ್ರೆಂಡ್ ನೋಡಿದರೆ, ಕಿರಿಯ ವಯಸ್ಸಿನ ಗ್ರಾಹಕರು ಸ್ಟಡ್ಡಿಂಗ್ ಮಾಡಿದ ಆಭರಣಗಳು ಮತ್ತು ಲ್ಯಾಬ್‌ನಲ್ಲಿ ತಯಾರಿಸಿದ ವಜ್ರಗಳನ್ನು ಹೆಚ್ಚಾಗಿ ಕೊಳ್ಳುತ್ತಿದ್ದಾರೆ" ಎಂದು ಹೇಳಿದ್ದಾರೆ.


Click it and Unblock the Notifications