ಬೆಂಗಳೂರು: ಬೆಂಗಳೂರಿನಲ್ಲಿ ಸದ್ಯ ಬಿಎಂಟಿಸಿ (BMTC), ಕೆಎಸ್‌ಆರ್‌ಟಿಸಿ, ಎಸಿ ಬಸ್‌ಗಳು ಬಹಳ ಉತ್ತಮ ಸೇವೆ ಸಲ್ಲಿಸುತ್ತಿದೆ. ಇದೀಗ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮತ್ತೆ ಡಬಲ್ ಡೆಕ್ಕರ್ ಬಸ್‌ಗಳು ರಸ್ತೆಗಿಳಿಯಲು ಸಜ್ಜಾಗಿದೆ. ಈ ಮೂಲಕ 1997ರ ನಂತರ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಡಬಲ್ ಡೆಕ್ಕರ್ ಬಸ್‌ಗಳು ರಾರಾಜಿಸಲು ಆರಂಭಿಸಿವೆ. ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ (KSTDC) ವತಿಯಿಂದ "ಅಂಬಾರಿ ಡಬಲ್ ಡೆಕ್ಕರ್ ಹಾಪ್ ಆನ್, ಹಾಪ್ ಆಫ್" (Ambari Double Decker Hop-On Hop-Off) ಸೇವೆಯನ್ನು ಜನವರಿ 21, 2026ರಂದು ಅಧಿಕೃತವಾಗಿ ಚಾಲನೆ ನೀಡಲಾಗಿದೆ.

ಹೌದು, ಕೊನೆಗೂ ರಾಜಧಾನಿ ಬೆಂಗಳೂರಿಗೆ ಮೈಸೂರಿನಂತೆ ಡಬಲ್ ಡೆಕ್ಕರ್ ಬಸ್ ಬಂದಾಗಿದೆ. ಪ್ರವಾಸೋದ್ಯಮ ಸಚಿವ ಎಚ್.ಕೆ ಪಾಟೀಲ್ ಅವರು ರವೀಂದ್ರ ಕಲಾಕ್ಷೇತ್ರದ ಎದುರು ಈ ವಿಶೇಷ ಬಸ್‌ಗೆ ಹಸಿರು ನಿಶಾನೆ ತೋರಿಸಿ ಚಾಲನೆ ನೀಡಿದರು.
1997 ರ ನಂತರ ಮೊದಲ ಡಬಲ್ ಡೆಕ್ಕರ್ ಬಸ್!
1997ರ ನಂತರ ಮೊದಲ ಬಾರಿಗೆ ಡಬಲ್-ಡೆಕ್ಕರ್ ಬಸ್‌ಗಳು ಬೆಂಗಳೂರು ನಗರದ ರಸ್ತೆಗಳಿಗೆ ಮರಳಿ ಬಂದಿದೆ. ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ (KSTDC) ಪ್ರವಾಸಿಗರನ್ನು ಗುರಿಯಾಗಿಸಿಕೊಂಡು ಹಾಪ್-ಆನ್, ಹಾಪ್-ಆಫ್ ಸೇವೆಯನ್ನು ಆರಂಭಿಸಿದೆ.
ಈ ಸೇವೆಯು ಪ್ರವಾಸಿಗರಿಗೆ ದಿನವಿಡೀ ನಿಗದಿತ ನಿಲುಗಡೆಗಳಲ್ಲಿ ಹತ್ತಿ ಇಳಿಯುವ ಸೌಲಭ್ಯ ಒದಗಿಸಲಿದೆ. ಇದು ಕೇಂದ್ರ ಬೆಂಗಳೂರಿನ ಪ್ರಮುಖ ಹೆಗ್ಗುರುತುಗಳನ್ನು ಸುಲಭವಾಗಿ ಮತ್ತು ಅನುಕೂಲಕರವಾಗಿ ಪ್ರವೇಶಿಸಲು ಅನುವು ಮಾಡಿಕೊಡಲಿದೆ.
ಡಬಲ್ ಡೆಕ್ಕರ್ ಸಾಗುವ ಮಾರ್ಗ:
ಪ್ರಾಯೋಗಿಕ ಮಾರ್ಗವು ರವೀಂದ್ರ ಕಲಾಕ್ಷೇತ್ರದಿಂದ ಆರಂಭಿಸಿ ಕಾರ್ಪೊರೇಷನ್ ಸರ್ಕಲ್, ಹಡ್ಸನ್ ಸರ್ಕಲ್, ಕಸ್ತೂರಬಾ ರಸ್ತೆ, ವಿಶ್ವೇಶ್ವರಯ್ಯ ಮ್ಯೂಸಿಯಂ, ಚಿನ್ನಸ್ವಾಮಿ ಸ್ಟೇಡಿಯಂ, ಜಿಪಿಒ, ಹೈಕೋರ್ಟ್ ಹಾಗೂ ವಿಧಾನಸೌಧದಲ್ಲಿ ಕೊನೆಗೊಳ್ಳುತ್ತದೆ. ನಂತರ ಮತ್ತೆ ಕಲಾಕ್ಷೇತ್ರಕ್ಕೆ ಹಿಂತಿರುಗುತ್ತದೆ.
ಲಂಡನ್‌ನ ಐಕಾನಿಕ್ ಕೆಂಪು ಡಬಲ್-ಡೆಕ್ಕರ್ ಬಸ್‌ಗಳಿಂದ ಪ್ರೇರಿತವಾದ ಈ ಬಸ್‌ಗಳು ಬೆಂಗಳೂರಿನ ಪ್ರವಾಸೋದ್ಯಮಕ್ಕೆ ಅಂತರರಾಷ್ಟ್ರೀಯವಾಗಿ ಹೊಸ ಹೆಗ್ಗುರುತು ಸೃಷ್ಟಿಸಲಿದೆ. ಇವು ದೇಶೀಯ ಹಾಗೂ ವಿದೇಶಿ ಪ್ರವಾಸಿಗರನ್ನು ಸೆಳೆಯುವ ನಿರೀಕ್ಷೆ ಇದೆ.
ಬಸ್ ಸಾಮರ್ಥ್ಯ ಎಷ್ಟು?
ಪ್ರತಿ ಬಸ್ 40 ಪ್ರಯಾಣಿಕರ ಸಾಮರ್ಥ್ಯ ಹೊಂದಿದೆ. ಕೆಳಗಿನ ಎಸಿ ಡೆಕ್ಕರ್‌ನಲ್ಲಿ 20 ಜನರು, ಮತ್ತು ಮೇಲಿನ ಓಪನ್ ಜಾಗದ ಡೆಕ್‌ನಲ್ಲಿ 20 ಜನರು ಕುಳಿತುಕೊಳ್ಳುವ ಸಾಮರ್ಥ್ಯ ಹೊಂದಿದೆ. ನಗರದ ಸುಂದರ ಪರಿಸರ, ಬೃಹತ್ ಕಟ್ಟಡಗಳು, ರಮಣೀಯ ದೃಶ್ಯಗಳನ್ನು ಆನಂದಿಸುತ್ತಲೇ ಆರಾಮದಾಯಕ ಪ್ರಯಾಣಕ್ಕೆ ಅವಕಾಶವಿದೆ.
ಆರಂಭಿಕ ಹಂತದಲ್ಲಿ, ಮೈಸೂರು ದಸರಾ ಆಚರಣೆಗಳಲ್ಲಿ ಬಳಸಲಾಗುವ ಮೂರು 'ಅಂಬಾರಿ' ಬಸ್‌ಗಳನ್ನು ನಿಯೋಜಿಸಲಾಗಿದೆ. ಬೆಂಗಳೂರಿನಲ್ಲಿ ಬೇಡಿಕೆ ಹೆಚ್ಚಾದಲ್ಲಿ, ಈ ವಾಹನಗಳ ಸಂಖ್ಯೆಯನ್ನು ಐದಕ್ಕೆ ಏರಿಸಲು KSTDC ಪ್ಲಾನ್ ಮಾಡಿದೆ.
ದರ ಎಷ್ಟು?
ಬಸ್‌ಗಳು ಪ್ರತಿದಿನ ಬೆಳಿಗ್ಗೆ 10 ರಿಂದ ಸಂಜೆ 5:30 ರವರೆಗೆ ಸಂಚರಿಸುತ್ತವೆ. ಒಂದು ಪೂರ್ಣ ದಿನದ ಟಿಕೆಟ್‌ಗೆ ಒಬ್ಬರಿಗೆ ₹180 ರೂ. ಇರಲಿದೆ. kstdc.co.in ವೆಬ್‌ಸೈಟ್ ಅಥವಾ ರವೀಂದ್ರ ಕಲಾಕ್ಷೇತ್ರದಲ್ಲಿ ಟಿಕೆಟ್‌ಗಳನ್ನು ಖರೀದಿಸುವ ಅವಕಾಶವಿದೆ.
ಪ್ರಾಯೋಗಿಕ ಯೋಜನೆ ಯಶಸ್ವಿಯಾದರೆ, ಹಂತಹಂತವಾಗಿ ಮಾರ್ಗವನ್ನು ವಿಸ್ತರಿಸುವ ಯೋಜನೆಯನ್ನು ಕೆಎಸ್‌ಟಿಡಿಸಿ ಮಾಡಿದ್ದು, ಮುಂದಿನ ದಿನಗಳಲ್ಲಿ ಬೆಂಗಳೂರಿನ ಅಭಿವೃದ್ಧಿಗೆ ಇದೂ ಸಹಕಾರಿಯಾಗಲಿದೆ.


Click it and Unblock the Notifications