ಅಮೆರಿಕದ ಸುಪ್ರೀ ಕೋರ್ಟ್ ಇತ್ತೀಚೆಗೆ ಒಂದು ಮಹತ್ವದ ತೀರ್ಪನ್ನ ನೀಡಿತು. ಅದೇನೆಂದರೆ ಜಗತ್ತಿನ ವಿವಿಧ ರಾಷ್ಟ್ರಗಳ ಮೇಲೆ ಡೊನಾಲ್ಡ್ ಟ್ರಂಪ್ ವಿಧಿಸಿದ್ದ, ಹೆಚ್ಚುವರಿ ಸುಂಕವನ್ನು ರದ್ದುಗೊಳಿಸಬೇಕು ಅನ್ನೋದಾಗಿತ್ತು. ಈಗ ಈ ತೀರ್ಪಿನ ಹಿನ್ನೆಲೆಯಲ್ಲಿ, ಸುಮಾರು 175 ಬಿಲಿಯನ್ ಡಾಲರ್‍ಗಳ ಸುಂಕ ಆದಾಯವನ್ನು ಮರುಪಾವತಿಸಬೇಕಾಗಿದೆ. ಈಗ ಈ ವಿಚಾರ ರಾಜಕೀಯ ವಲಯದಲ್ಲಿ ದೊಡ್ಡ ಚರ್ಚೆಯಾಗ್ತಿದೆ.

ಇನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತ ವಿಧಿಸಿದ್ದ, ಕೆಲವು ಸುಂಕ ಆದೇಶಗಳು ಕಾನೂನುಬಾಹಿರ ಎಂದು ಅಮೆರಿಕ ನ್ಯಾಯಾಲಯ ಹೇಳಿತ್ತು. ಇದಾದ ಬೆನ್ನಲ್ಲೇ ಸಂಗ್ರಹವಾದ ಸುಂಕದ ಹಣವನ್ನು ಆಯಾ ದೇಶಗಳಿಗೆ ವಾಪಸ್ ಕೊಡಬೇಕು ಅನ್ನೋ ಒತ್ತಾಯ ಶುರುವಾಗಿದೆ. ಈ ಹಿನ್ನೆಲೆ ಒರೆಗಾನ್ ಸೆನೆಟರ್ ರಾನ್ ವೈಡೆನ್, ಮ್ಯಾಸಚೂಸೆಟ್ಸ್‌ನ ಎಡ್ ಮಾರ್ಕಿ ಮತ್ತು ನ್ಯೂ ಹ್ಯಾಂಪ್‌ಶೈರ್‌ನ ಜೀನ್ ಶಾಹೀನ್ ಮರುಪಾವತಿ ಪ್ರಕ್ರಿಯೆಯನ್ನು ಆರಂಭಿಸುವಂತೆ ಒತ್ತಾಯಿಸುವ ಮಸೂದೆಯನ್ನು ಮಂಡಿಸಿದ್ದಾರೆ.
ಅಂದಹಾಗೆ ಪ್ರಸ್ತಾಪಿತ ಮಸೂದೆಯ ಪ್ರಕಾರ ಅಮೆರಿಕ ಕಸ್ಟಮ್ಸ್ ಮತ್ತು ಗಡಿ ರಕ್ಷಣಾ ಇಲಾಖೆ 180 ದಿನಗಳ ಒಳಗೆ ಸುಂಕದ ಹಣವನ್ನು ಮರುಪಾವತಿ ಪ್ರಕ್ರಿಯೆಯನ್ನ ಪೂರ್ಣಗೊಳಿಸಬೇಕು. ಅಷ್ಟೇ ಅಲ್ಲ ಆ ಹಣಕ್ಕೆ ಬಡ್ಡಿಯನ್ನೂ ಪಾವತಿ ಮಾಡಬೇಕಾಗಿದೆ. ಈ ಕ್ರಮದಲ್ಲಿ ಸಣ್ಣ ಉದ್ಯಮಗಳಿಗೆ ಮೊದಲ ಆದ್ಯತೆ ನೀಡಲಾಗುತ್ತೆ. ಆಮದುದಾರರು ಹಾಗೂ ದೊಡ್ಡ ಕಂಪನಿಗಳು ಪಡೆದ ಹಣವನ್ನ ತಮ್ಮ ಗ್ರಾಹಕರಿಗೆ ಮರಳಿ ನೀಡುವಂತೆ, ಪ್ರೋತ್ಸಾಹಿಸುವ ವ್ಯವಸ್ಥೆ ಕೂಡ ಇರಲಿದೆ.. ಡೆಮೋಕ್ರಾಟ್ ನಾಯಕರು ಹೇಳುವಂತೆ, ಈ ಸುಂಕಗಳಿಂದ ಸಣ್ಣ ವ್ಯಾಪಾರಿಗಳು ಮತ್ತು ಸಾಮಾನ್ಯ ಕುಟುಂಬಗಳು ಹೆಚ್ಚಿದ ಬೆಲೆಗಳ ಭಾರವನ್ನು ಹೊತ್ತಿದ್ದಾರೆ.
ಆದರೆ ಈ ಮಸೂದೆಯನ್ನು ಕಾನೂನು ಪ್ರಕಾರ ಆಗುವ ಸಾಧ್ಯತೆ ಕಡಿಮೆ ಅಂತಲೂ ಕೇಳಿ ಬರ್ತಿದೆ. ಸುಪ್ರೀಂ ಕೋರ್ಟ್ 6-3 ಮತಗಳ ಅಂತರದಿಂದ ಈ ತೀರ್ಪು ನೀಡಿದ್ದರೂ, ಮರುಪಾವತಿಯನ್ನ ಹೇಗೆ ಮತ್ತು ಯಾವ ರೀತಿಯಲ್ಲಿ ನೀಡಬೇಕು ಅನ್ನೋದರ ಬಗ್ಗೆ ಯಾವುದೆ ಸ್ಪಷ್ಟ ನಿದರ್ಶನ ಇಲ್ಲ. ಇತ್ತ ಡೊನಾಲ್ಡ್ ಟ್ರಂಪ್ ಆಡಳಿತದ ನಿಲುವೇ ಬೇರೆ ಆಗಿದೆ. ಅದೇನೆಂದರೆ ಮರುಪಾವತಿಗಳು ಮುಂದಿನ ನ್ಯಾಯಾಂಗ ಪ್ರಕ್ರಿಯೆಗಳ ಮೇಲೆ ಅವಲಂಬಿಸಿರಬೇಕು ಎಂಬುದಾಗಿದೆ. ಖಜಾನೆ ಕಾರ್ಯದರ್ಶಿ ಸ್ಕಾಟ್ ಬೆಸೆಂಟ್ ಹೇಳುವಂತೆ, ಈ ವಿಷಯವನ್ನು ತ್ವರಿತವಾಗಿ ರಾಜಕೀಯವಾಗಿ ನಿರ್ಧರಿಸುವುದಕ್ಕಿಂತ ಕಾನೂನು ವ್ಯವಸ್ಥೆಯ ಮೂಲಕವೇ ಬಗೆಹರಿಸಬೇಕು.
ಅಂದಹಾಗೆ ಈ ವಿಚಾರ ಮುಂದಿನ ಮಧ್ಯಂತರ ಚುನಾವಣೆಗೂ ಮುನ್ನ, ರಾಜಕೀಯ ಚರ್ಚೆಗೆ ಕಾರಣವಾಗೋ ಎಲ್ಲ ಲಕ್ಷಣಗಳು ಕಾಣುತ್ತಿವೆ. ಅಲ್ಲದೆ ಡೆಮೋಕ್ರಾಟ್‌ಗಳು ಟ್ರಂಪ್ ಸರ್ಕಾರ ಅಮೆರಿಕನ್ನರಿಂದ ಕಾನೂನುಬಾಹಿರವಾಗಿ ತೆರಿಗೆ ಸಂಗ್ರಹಿಸಿದೆ ಎಂದು ವಾದಿಸುತ್ತಿವೆ. ಹೀಗಿರುವಾಗ ರಿಪಬ್ಲಿಕನ್ ನಾಯಕರು ಸುಂಕಗಳು ದೇಶದ ಆರ್ಥಿಕ ಹಿತಕ್ಕಾಗಿ ಅಗತ್ಯವಿತ್ತು ಎಂದು ಸಮರ್ಥಿಸುತ್ತಿದ್ದಾರೆ. 1977ರ ಅಂತರರಾಷ್ಟ್ರೀಯ ತುರ್ತು ಆರ್ಥಿಕ ಅಧಿಕಾರ ಕಾಯ್ದೆಯನ್ನು ಆಧಾರವನ್ನಾಗಿ ಮಾಡಿಕೊಂಡು ಸುಂಕ ವಿಧಿಸಲಾಗಿದೆ ಎಂದು ಟ್ರಂಪ್ ಹೇಳಿಕೊಂಡಿದ್ದಾರೆ.
ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದ ಪೆನ್ ವಾರ್ಟನ್ ಬಜೆಟ್ ಮಾದರಿಯ ಅಂದಾಜು ಪ್ರಕಾರ, ಮರುಪಾವತಿ ಮೊತ್ತ ಒಟ್ಟು 175 ಬಿಲಿಯನ್ ಡಾಲರ್ ಆಗಬಹುದು. ಇದು ಸರಾಸರಿ ಪ್ರತಿ ಅಮೆರಿಕನ್ ಮನೆಯವರಿಗೆ ಸುಮಾರು 1,300 ಡಾಲರ್‌ಗಳಷ್ಟು ಆಗಬಹುದು. ಆದರೆ ಈ ಹಣವನ್ನು ಹೇಗೆ ಹಂಚಿಕೆ ಮಾಡುವುದು ಎಂಬುದು ಸವಾಲಿನ ವಿಷಯವಾಗಿದೆ. ಏಕೆಂದರೆ ಸುಂಕಗಳ ಪರಿಣಾಮ ನೇರವಾಗಿ ಗ್ರಾಹಕರಿಗೂ, ಪರೋಕ್ಷವಾಗಿ ಕಂಪನಿಗಳಿಗೂ ತಟ್ಟಿದೆ.
ಒಟ್ಟಿನಲ್ಲಿ, ಸುಪ್ರೀಂ ಕೋರ್ಟ್ ತೀರ್ಪಿನ ಬಳಿಕ ಮರುಪಾವತಿ ವಿಚಾರ ಅಮೆರಿಕದ ರಾಜಕೀಯ ಹಾಗೂ ಆರ್ಥಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಮಸೂದೆ ಅಂಗೀಕರಿಸುವುದೇ ಅಥವಾ ನ್ಯಾಯಾಲಯದ ಮುಂದಿನ ಕ್ರಮವೇ ಅಂತಿಮ ನಿರ್ಧಾರಕ್ಕೆ ಕಾರಣವಾಗುವುದೇ ಎಂಬುದು ಮುಂದಿನ ದಿನಗಳಲ್ಲಿ ಸ್ಪಷ್ಟವಾಗಲಿದೆ.


Click it and Unblock the Notifications