ಕ್ಯಾರಕಾಸ್ (ವೆನಿಜುವೆಲಾ): ಪ್ರಸ್ತುತ ವಿಶ್ವದಲ್ಲಿ ನಡೆಯುತ್ತಿರುವ ವೈಮಾನಿಕ ದಾಳಿಗಳ ಪಟ್ಟಿಗೆ ಇದೀಗ ಮತ್ತೊಂದು ಸೇರ್ಪಡೆಗೊಂಡಿದೆ. ಇದೀಗ ಅಮೆರಿಕ ಮತ್ತು ವೆನಿಜುವೆಲಾ (America-Venezuela) ನಡುವೆ ಯುದ್ಧದ ಭೀತಿ ಶುರುವಾಗಿದೆ. ಶನಿವಾರ ರಾತ್ರಿ ವೆನೆಜುವೆಲಾದ ರಾಜಧಾನಿ ಕ್ಯಾರಕಾಸ್ ಮೇಳೆ ಟ್ರಂಪ್ ಅಧಿಕಾರದ ಅಮೆರಿಕಾ ದೊಡ್ಡ ಮಟ್ಟದಲ್ಲಿ ವೈಮಾನಿಕ ದಾಳಿ ನಡೆಸಿದೆ. ಡೊನಾಲ್ಡ್ ಟ್ರಂಪ್ (Donald Trump) ಆದೇಶದ ಬೆನ್ನಲ್ಲೇ ಅಮೆರಿಕಾ ಸೇನೆ, ಕ್ಯಾರಕಾಸ್ (Caracas) ಮೇಲೆ ದಾಳಿ ನಡೆಸಿದ್ದು, ಜೊತೆಗೆ ಇದೇ ವೇಳೆ ಅಮೆರಿಕಾ ಸೇನೆ ವೆನೆಜುವೆಲಾ ಅಧ್ಯಕ್ಷ ನಿಕೋಲಸ್ ಮಡುರೋ (Nicolas Maduro) ಅವರನ್ನು ಹಾಗೂ ಆತನ ಪತ್ನಿಯನ್ನು ವಶಕ್ಕೆ ಪಡೆದುಕೊಂಡಿದೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಣೆ ಮಾಡಿದ್ದಾರೆ.

ಹೌದು, ಮಾಜಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆದೇಶದ ಮೇರೆಗೆ ಅಮೆರಿಕ ಸೇನೆ, ವೆನೆಜುವೆಲಾದಲ್ಲಿ ರಾತ್ರೋರಾತ್ರಿ ಬೃಹತ್ ಮಟ್ಟದಲ್ಲಿ ವಾಯು ದಾಳಿ ನಡೆಸಿದೆ. ಅಲ್ಲದೇ ಈಗಾಗಲೇ ನಡುರಾತ್ರಿ ಅಧ್ಯಕ್ಷ ನಿಕೋಲಸ್ ಮಡುರೊ ಅವರನ್ನು ಸೆರೆಹಿಡಿಯಲಾಗಿದೆ ಎಂದು ಘೋಷಿಸಿದ್ದಾರೆ. ಹಲವು ವರ್ಷಗಳಿಂದ ಮಾದಕವಸ್ತು ಕಳ್ಳಸಾಗಣೆ ಮತ್ತು ವಿವಾದಿತ ಚುನಾವಣೆಗಳ ಆರೋಪಗಳ ಬೆನ್ನಲ್ಲೇ ಅಮೆರಿಕ ಈ ಕ್ರಮ ಕೈಗೊಂಡಿದೆ ಎಂದು ಹೇಳಲಾಗಿದೆ. ಇದೀಗ, ಅಮೆರಿಕಾ ದಾಳಿಯಿಂದಾಗಿ ವೆನೆಜುವೆಲಾ ಸರ್ಕಾರವು ರಾಷ್ಟ್ರೀಯ ತುರ್ತು ಪರಿಸ್ಥಿತಿಯನ್ನು ಘೋಷಿಸಿ ಸಶಸ್ತ್ರ ಪಡೆಗಳಿಗೆ ಸಿದ್ಧವಾಗಲು ಸೂಚಿಸಿದೆ.
ಟ್ರಂಪ್ ಹೇಳಿದ್ದೇನು?
ಟ್ರಂಪ್ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿರುವ ಪ್ರಕಾರ, "ವೆನುಜೆವೆಲಾ ಮತ್ತು ಅದರ ನಾಯಕನ ವಿರುದ್ಧ ಈಗಾಗಲೇ ಅಮೆರಿಕ ಸೇನೆ ದೊಡ್ಡಮಟ್ಟದಲ್ಲಿ ದಾಳಿ ನಡೆಸಿದೆ. ಈ ದಾಳಿ ಬೆನ್ನಲ್ಲೇ, ಅಧ್ಯಕ್ಷ ಮಡುರೊ ಮತ್ತು ಅವರ ಪತ್ನಿಯನ್ನು ವಿಶೇಷ ಪಡೆಗಳು ವಶಕ್ಕೆ ಪಡೆದುಕೊಂಡು ದೇಶದಿಂದಲೇ ಹೊರಗೆ ಕಳುಹಿಸಲಾಗಿದೆ" ಎಂದು ತಿಳಿಸಿದರು. ಆದರೆ, ಕ್ಯಾರಕಾಸ್‌ನ ಅಧಿಕಾರಿಗಳು ಈ ಹೇಳಿಕೆಯನ್ನು ತಕ್ಷಣವೇ ದೃಢೀಕರಿಸಿಲ್ಲ.
ಇನ್ನು ಈ ದಾಳಿಗಳನ್ನು "ಅಮೆರಿಕದ ಕಾನೂನು ಜಾರಿ ಸಂಸ್ಥೆಗಳ ಸಹಯೋಗದೊಂದಿಗೆ" ನಡೆಸಲಾಗಿದೆ ಎಂದು ಟ್ರಂಪ್ ಘೋಷಿಸಿದರು. ಫ್ಲೋರಿಡಾದ ಮಾರ್-ಎ-ಲಾಗೋ ರೆಸಾರ್ಟ್‌ನಲ್ಲಿ ಬೆಳಿಗ್ಗೆ 11 ಗಂಟೆಗೆ (GMT 1600) ವಿವರವಾದ ಮಾಹಿತಿ ನೀಡುವ ಯೋಜನೆಯನ್ನು ಸಹ ಪ್ರಕಟಿಸಿದರು. ವಿಶೇಷ ಪಡೆಗಳು ಮಡುರೊ ಅವರನ್ನು ವಶಕ್ಕೆ ಪಡೆಯಲು ದಾಳಿ ನಡೆಸಿದ್ದವು ಎಂದು ಅಮೆರಿಕದ ಅಧಿಕಾರಿಯೊಬ್ಬರು ರಾಯಿಟರ್ಸ್‌ಗೆ ತಿಳಿಸಿದ್ದಾರೆ. ಆದರೆ, ಸಾವುನೋವುಗಳು ಸಂಭವಿಸಿರುವುದರ ಬಗ್ಗೆ ಉನ್ನೂ ಯಾವುದೇ ಮಾಹಿತಿಗಳು ಬಹಿರಂಗವಾಗಿಲ್ಲ.
ಅಮೆರಿಕಾ ದಾಳಿ ಹಿಂದಿನ ಉದ್ದೇಶ ಏನು?
ವರದಿಗಳ ಪ್ರಕಾರ, ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕಳೆದ ಹಲವು ತಿಂಗಳುಗಳಿಂದ ವೆನಿಜುವೆಲಾ ಅಧ್ಯಕ್ಷರ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಲೇ ಬಂದಿದ್ದರು. ಅದರಲ್ಲೂ ನಿಕೋಲಸ್ ಮಡುರೊ ಅವರನ್ನು "ಕಾರ್ಟೆಲ್ ಡಿ ಲಾಸ್ ಸೋಲ್ಸ್" ಎಂಬ ಮಾದಕ ವಸ್ತು ಕಾರ್ಟೆಲ್‌ನ ಉನ್ನತ ಮಟ್ಟದ ಸದ್ಯಸರಲ್ಲಿ ಒಬ್ಬರು ಎಂದು ಆರೋಪಿಸಿದ್ದರು. ಅಲ್ಲದೇ ಇದು ಅಮೆರಿಕಾಗೆ ಗೌಪ್ಯವಾಗಿ ಮಾದಕ ವಸ್ತುಗಳನ್ನು ರವಾನಿಸುತ್ತಿದೆ ಎಂದು ಆರೋಪ ಮಾಡಿದ್ದರು. ಆದರೆ ಇದಕ್ಕೆ ಟ್ರಂಪ್ ಯಾವುದೇ ಸಾಕ್ಷಿಗಳನ್ನು ತೋರಿಸಿರಲಿಲ್ಲ. ಆದರೆ ವೆನಿಜುವೆಲಾದ ವಿರುದ್ಧ ವೈಮಾನಿಕ ದಾಳಿಗೆ ಕಾರಣವಾಗಿ ಇದನ್ನು ಬಳಸಿಕೊಂಡಿದ್ದಾರೆ ಎನ್ನಲಾಗಿದೆ.
ಇನ್ನು ಅಮೆರಿಕಾ ದಾಳಿಗೆ ವಲಸೆ, ಡ್ರಗ್ಸ್, "ನಾರ್ಕೋ-ಟೆರರಿಸಂ" ಮುಖ್ಯ ಕಾರಣಗಳು ಎಂದು ಬಣ್ಣಿಸಲಾಗಿದೆ. ಟ್ರಂಪ್ ವೆನೆಜುವೆಲಾವನ್ನು ಅಮೆರಿಕಾ ದಕ್ಷಿಣ ಗಡಿಗೆ ಲಕ್ಷಾಂತರ ವಲಸಿಗರ ಆಗಮನಕ್ಕೆ ಸಂಪರ್ಕಿಸಿದ್ದಾರೆ. 2013 ರಿಂದ ಸುಮಾರು 8 ಮಿಲಿಯನ್ ವೆನೆಜುವೆಲಾದವರು ಆರ್ಥಿಕ ಕುಸಿತ, ರಾಜಕೀಯ ಉದ್ವಿಗ್ನತೆಯಿಂದಾಗಿ ಪಲಾಯನಗೈದಿದ್ದಾರೆ. ಅಲ್ಲದೇ ಹೆಚ್ಚಿನವರು ಲ್ಯಾಟಿನ್ ಅಮೆರಿಕಾದಲ್ಲೂ ನೆಲೆಸಿದ್ದಾರೆ.
ಅಷ್ಟೇ ಅಲ್ಲದೇ ಯಾವುದೇ ಪುರಾವೆಗಳಿಲ್ಲದೆ, ಮಡುರೊ "ತಮ್ಮ ಜೈಲುಗಳು ಮತ್ತು ಮಾನಸಿಕ ಆಸ್ಪತ್ರೆಗಳನ್ನು ಖಾಲಿ ಮಾಡಿ" ಕೈದಿಗಳನ್ನು ಯುಎಸ್‌ಗೆ ವಲಸೆ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ ಎಂದು ಟ್ರಂಪ್ ಆರೋಪಿಸಿದ್ದಾರೆ. ಆದರೆ ರಾಜಧಾನಿ ಕ್ಯಾರಕಾಸ್ ಈ ಹೇಳಿಕೆಗಳನ್ನು ಸ್ಪಷ್ಟವಾಗಿ ನಿರಾಕರಿಸಿದೆ.
ಇನ್ನು ವೈಮಾನಿಕ ದಾಳಿಗೆ ಮಾದಕ ವಸ್ತು ಸಾಗಾಟ ಎರಡನೇ ಕಾರಣ. ವೆನೆಜುವೆಲಾ ಕೊಕೇನ್‌ಗೆ ಪ್ರಮುಖ ಸಾಗಾಟ ಮಾರ್ಗ, ಯುಎಸ್ ಫೆಂಟಾನಿಲ್ ಬಿಕ್ಕಟ್ಟಿಗೆ ಇದೇ ಪ್ರಮುಖ ಕಾರಣ ಎಂದು ಟ್ರಂಪ್ ವಾದಿಸಿದರು. 'ಟ್ರೆನ್ ಡಿ ಅರಾಗುವಾ', 'ಕಾರ್ಟೆಲ್ ಡಿ ಲಾಸ್ ಸೋಲ್ಸ್' ಎಂಬೆರಡು ವೆನೆಜುವೆಲಾದ ಅಪರಾಧ ಘಟಕಗಳನ್ನು 'ವಿದೇಶಿ ಭಯೋತ್ಪಾದಕ ಸಂಸ್ಥೆಗಳು' (FTOs) ಎಂದು ಟ್ರಂಪ್ ಘೋಷಿಸಿದರು. ಎರಡನೆಯದನ್ನು ಮಡುರೊ ಅವರೇ ಮುನ್ನಡೆಸುತ್ತಿದ್ದಾರೆ ಎಂಬುದು ಟ್ರಂಪ್ ಆರೋಪವಾಗಿದೆ. ಈ ಎಲ್ಲಾ ಕಾರಣಗಳಿಂದಲೇ ಅಮೆರಿಕಾ, ಕ್ಯಾರಕಸ್ ಮೇಲೆ ದಾಳಿ ನಡೆಸಿದೆ ಎನ್ನಲಾಗಿದೆ.


Click it and Unblock the Notifications