ಕ್ಯಾರಕಾಸ್ (ವೆನೆಜುವೆಲಾ): ವೆನೆಜುವೆಲಾ ರಾಜಧಾನಿ ಕ್ಯಾರಕಸ್ (Venezuela, Caracas) ಮೇಲೆ ಅಮೆರಿಕ ನಡೆಸಿದ ದಾಳಿ ಸದ್ಯ ರಾಷ್ಟ್ರಮಟ್ಟದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಅತ್ತ ಅಮೆರಿಕಾದ ವೈಮಾನಿಕ ದಾಳಿಗೆ ವೆನೆಜುವೆಲಾ ಅಕ್ಷರಶಃ ನಲುಗಿ ಹೋಗಿದೆ. ಈಗಾಗಲೇ ವೆನೆಜುವೆಲಾ ಅಧ್ಯಕ್ಷ ನಿಕೋಲಸ್ ಮಡುರೊ ಅವರನ್ನು ಅಮೆರಿಕಾ ಸೇನೆ ವಶಪಡಿಸಿಕೊಂಡಿರುವ ಸುದ್ದಿಯೂ ಹೊರಬಿದ್ದಿದೆ. ಇದೀಗ ವೆನೆಜುವೆಲಾ ಅಧ್ಯಕ್ಷ ನಿಕೋಲಸ್ ಮಡುರೊ ಬಂಧನದ (Nicolas Maduri Arrest) ಬೆನ್ನಲ್ಲೇ, ಅಮೆರಿಕವೇ ಸದ್ಯ ಆ ರಾಷ್ಟ್ರದ ಆಡಳಿತವನ್ನು ನಿರ್ವಹಿಸಲಿದೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಘೋಷಣೆ ಮಾಡಿದ್ದಾರೆ. ಈ ಬಗ್ಗೆ ಫ್ಲೋರಿಡಾದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಟ್ರಂಪ್, ಹೊಸ ಆಡಳಿತ ಜಾರಿಯಾಗುವವರೆಗೂ ಅಮೆರಿಕ, ವೆನೆಜುವೆಲಾವನ್ನು (America - Venezuela) ನಿರ್ವಹಣೆ ಮಾಡಲಿದೆ ಎಂದು ಹೇಳಿದದಾರೆ.

ಪತ್ರಿಕಾಗೋಷ್ಠಿಯಲ್ಲಿ ಟ್ರಂಪ್ ಹೇಳಿದ್ದೇನು?
ಫ್ಲೋರಿಡಾದಲ್ಲಿ ಪ್ರೆಸ್ ಕಾನ್ಫರೆನ್ಸ್‌ನಲ್ಲಿ ಮಾತನಾಡಿದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, "ದೇಶವನ್ನು ಸದ್ಯದ ಮಟ್ಟಿಗೆ ಮುನ್ನಡೆಸುವ ಅಧಿಕಾರವನ್ನು ತಕ್ಷಣ ಯಾರಿಗೂ ಹಸ್ತಾಂತರಿಸಲು ಸಾಧ್ಯವಿಲ್ಲ. ಆದ್ದರಿಂದ ಸದ್ಯಕ್ಕೆ ನಾವೇ ವೆನೆಜುವೆಲಾ ಆಡಳಿತ ನಡೆಸುತ್ತೇವೆ" ಎಂದು ಹೇಳಿದರು. ಅಲ್ಲದೇ "ವೆನೆಜುವೆಲಾದ ತೈಲ ಉದ್ಯಮವನ್ನು ಅಮೆರಿಕಾ ನಡೆಸಲಿದೆ ಎಂದು ಘೋಷಿಸಿದ ಟ್ರಂಪ್, ನಮ್ಮ ಅತಿದೊಡ್ಡ ಯುಎಸ್ ತೈಲ ಕಂಪನಿಗಳು, ವಿಶ್ವದ ದೊಡ್ಡ ಡೊಡ್ಡ ಕಂಪನಿಗಳು ನಮ್ಮಲ್ಲಿವೆ. ಆದ್ದರಿಂದ ನಾವು ಅಲ್ಲಿಗೆ ಹೋಗಿ ಶತಕೋಟಿ ಡಾಲರ್‌ಗಳನ್ನು ಹೂಡಿಕೆ ಮಾಡಿ, ಹಾಳಾಗಿರುವ ತೈಲ ಮೂಲಸೌಕರ್ಯವನ್ನು ಸರಿಪಡಿಸಿ, ದೇಶಕ್ಕಾಗಿ ಹಣ ಗಳಿಸಲು ಪ್ರಾರಂಭಿಸುತ್ತೇವೆ" ಎಂದು ಟ್ರಂಪ್ ಘೋಷಿಸಿದರು.
ಅಮೆರಿಕಾದ ಅತ್ಯಂತ ಶಕ್ತಿಶಾಲಿ ದಾಳಿಗಳಲ್ಲೊಂದು!
ಟ್ರಂಪ್, "ಸುರಕ್ಷಿತ, ಸೂಕ್ತ ಮತ್ತು ನ್ಯಾಯಯುತ ಪರಿವರ್ತನೆಯನ್ನು ಕೈಗೊಳ್ಳುವವರೆಗೂ ನಾವು ದೇಶವನ್ನು ನಡೆಸುತ್ತೇವೆ" ಎಂದು ಈ ವೇಳೆ ಸ್ಪಷ್ಟಪಡಿಸಿದರು. ತಡರಾತ್ರಿ ನಡೆದ "ಆಪರೇಷನ್ ಅಬ್ಸಲ್ಯೂಟ್ ರಿಸಾಲ್ವ್" ಹೆಸರಿನ ವೆನೆಜುವಲಾ ಮೇಲಿನ ಅಮೆರಿಕಾ ಸೇನಾ ಕಾರ್ಯಾಚರಣೆಯನ್ನು ಅವರು ಶ್ಲಾಘಿಸಿದರು. ಅಮೆರಿಕದ ಸೇನಾ ಶಕ್ತಿ ಮತ್ತು ಸಾಮರ್ಥ್ಯವನ್ನು ಗುರುತಿಸಿ "ಇತಿಹಾಸದಲ್ಲೇ ಇದೊಂದು ಅತ್ಯಂತ ಅದ್ಭುತ, ಪರಿಣಾಮಕಾರಿ ಹಾಗೂ ಶಕ್ತಿಶಾಲಿ ಕಾರ್ಯಾಚರಣೆ"ಯೆಂದು ಟ್ರಂಪ್ ಬಣ್ಣಿಸಿದರು.
"ಅಮೆರಿಕ ಈ ದಾಳಿ ಮೂಲಕ, ಇಷ್ಟೊಂದು ಕಡಿಮೆ ಸಮಯದಲ್ಲಿ ಸಾಧಿಸಿದನ್ನು, ವಿಶ್ವದ ಯಾವುದೇ ರಾಷ್ಟ್ರವೂ ಸಾಧಿಸಲು ಸಾಧ್ಯವಿಲ್ಲ" ಎಂದು ಟ್ರಂಪ್ ಹೇಳಿದರು. ಅಮೆರಿಕ ಪಡೆಗಳು, ಕಾನೂನು ಸಂಸ್ಥೆಗಳ ಸಹಯೋಗದಲ್ಲಿ "ತಡರಾತ್ರಿಯಲ್ಲಿ ಅಮೆರಿಕಾ ಸೇನೆ ಅಧ್ಯಕ್ಷ ಮಡುರೊ ಅವರನ್ನು ಯಶಸ್ವಿಯಾಗಿ ವಶಕ್ಕೆ ಪಡೆದರು ಹಾಗೂ ವೆನೆಜುವೆಲಾದ ಎಲ್ಲಾ ಮಿಲಿಟರಿ ಪಡೆಗಳನ್ನು ನಿಷ್ಪ್ರಯೋಜಕರಂತೆ ಮಾಡಿತು" ಎಂದು ಘೋಷಿಸಿದರು.
ನಿಕೋಲಸ್ ಮಡುರೋ ವಿರುದ್ಧ ಟೀಕೆ!
ಇನ್ನು ವೆನೆಜುವೆಲಾ ಅಧ್ಯಕ್ಷ ನಿಕೋಲಸ್ ಮಡುರೋ ಅವರನ್ನು ಟೀಕಿಸಿದ ಟ್ರಂಪ್, "ಮಡುರೊ ಅವರ ಆಡಳಿತ ಅತ್ಯಂತ ಭಯಾನಕ ಮತ್ತು ಉಸಿರುಕಟ್ಟುವಂತಹ ನಾಯಕತ್ವ ಎಂದು ಟೀಕಿಸಿದರು. ಆದ್ದರಿಂದ ಅಮೆರಿಕಾದ ಈ ಕಾರ್ಯಾಚರಣೆಯು ವೆನೆಜುವೆಲಾ ಜನರಿಗೆ ಶಾಂತಿ ಮತ್ತು ಸ್ಥಿರತೆ ತರುವ ಗುರಿಯನ್ನು ಹೊಂದಿದೆ ಎಂದು ಟ್ರಂಪ್ ಸ್ಪಷ್ಟಪಡಿಸಿದರು. ವೆನೆಜುವೆಲಾದ ಮಹಾನ್ ಜನರಿಗೆ ಶಾಂತಿ, ಸ್ವಾತಂತ್ರ್ಯ ಮತ್ತು ನ್ಯಾಯ ಬೇಕು" ಎಂದು ಒತ್ತಿ ಹೇಳಿದರು.


Click it and Unblock the Notifications