ಮುಂಬೈ, ಮೇ 31: ಪ್ರಪಂಚದ ಸಿರಿವಂತ ಕುಟುಂಬವಾಗಿ ಗುರುತಿಸಿಕೊಂಡಿರುವ ಹಾಗೂ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಅಧ್ಯಕ್ಷ ಮುಖೇಶ್ ಅಂಬಾನಿ ಅವರ ಕಿರಿಯ ಪುತ್ರ ಅನಂತ್ ಅಂಬಾನಿ ಮತ್ತು ಕೈಗಾರಿಕೋದ್ಯಮಿ ವೀರೇನ್ ಮರ್ಚೆಂಟ್ ಅವರ ಪುತ್ರಿ ರಾಧಿಕಾ ಮರ್ಚೆಂಟ್ ಅವರ ವಿವಾಹ ದಿನಾಂಕ ಫಿಕ್ಸ್ ಆಗಿದೆ.
ಈ ವರ್ಷದ ಫೆಬ್ರವರಿಯಲ್ಲಿ ಗುಜರಾತ್ ಜಾಮ್ ನಗರದಲ್ಲಿ ನಡೆದ ಮೂರು ದಿನಗಳ ಅನಂತ್ ಮತ್ತು ರಾಧಿಕಾ ವಿವಾಹ ಪೂರ್ವ ಕಾರ್ಯಕ್ರಮದ ನಂತರ, ಮುಂಬೈ ನಗರದ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ ನಲ್ಲಿರುವ ಜಿಯೋ ಕನ್ವೆನ್ಸನ್ ಸೆಂಟರ್ ನಲ್ಲಿ ಹಿಂದೂ ಸಂಪ್ರದಾಯದಂತೆ ಮದುವೆ ನಡೆಯಲಿದೆ ಎಂದು ವರದಿಯಾಗಿದೆ. ಈಗಾಗಲೇ ಸಖತ್ ವೈರಲ್ ಆದ ಈ ಮದುವೆ ಆಮಂತ್ರಣ ಪತ್ರಿಕೆಯೂ ಪ್ರೇಮಪಕ್ಷಿಗಳಿಗಾಗಿ ಆಯೋಜಿಸಲಾದ ಮೂರು ದಿನಗಳ ಅದ್ದೂರಿ ಕಾರ್ಯಕ್ರಮದ ವಿವರಗಳನ್ನು ಬಹಿರಂಗಪಡಿಸಿದೆ.

ಅನಂತ್ ಅಂಬಾನಿ-ರಾಧಿಕಾ ಮರ್ಚೆಂಟ್ ಮದುವೆಯ ದಿನಾಂಕ
ಮುಂಬೈ ನಗರದ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ ನಲ್ಲಿರುವ ಜಿಯೋ ಕನ್ವೆನ್ಸನ್ ಸೆಂಟರ್ ನಲ್ಲಿ ಜುಲೈ 12ರ ಶುಕ್ರವಾರ 2024 ರಂದು ಈ ಜೋಡಿ ದಾಂಪತ್ಯ ಜೀವನ ಪ್ರವೇಶಿಸಲಿದ್ದಾರೆ.
ವಿವಾಹ ಸಮಾರಂಭವು ಜು.12 ರಿಂದ ಜು.14ರವರೆಗೆ ಮೂರು ದಿನಗಳ ಕಾಲ ಜರುಗಲಿವೆ. ಸಾಂಪ್ರದಾಯಿಕ ಭಾರತೀಯ ಉಡುಪುಗಳ ಡ್ರೆಸ್ ಕೋಡ್ ಅನುಸರಿಸುವಂತೆ ಅತಿಥಿಗಳಿಗೆ ಸಲಹೆ ನೀಡಲಾಗಿದೆ. ಜು. ೧೨ ರಂದು ಶುಭ ವಿವಾಹ, ಜುಲೈ 13 ಶುಭ ಆಶೀರ್ವಾದದ ದಿನ ಅಥವಾ ದೈವಿಕ ಆಶೀರ್ವಾದ ಆಚರಣೆ, (ಭಾರತೀಯ ಔಪಚಾರಿಕ ಉಡುಗೆ), ಜು. 14 ರ ಭಾನುವಾರದಂದು 'ಮಂಗಲ್ ಉತ್ಸವ' ಅಥವಾ ಮದುವೆಯ ಆರತಕ್ಷತೆ ನಡೆಯಲಿದೆ. ಅಂದು ಡ್ರೆಸ್ ಕೋಡ್ ಅನ್ನು 'ಭಾರತೀಯ ಚಿಕ್' ಎಂದು ಸಲಹೆ ನೀಡಲಾಗಿದೆ.
ಎನ್ಕೋರ್ ಹೆಲ್ತ್‌ಕೇರ್ ಪ್ರೈವೇಟ್ ಲಿಮಿಟೆಡ್‌ನ ಸಿಇಒ ಮತ್ತು ಉದ್ಯಮಿ ಶೈಲಾ ಮರ್ಚೆಂಟ್ ಅವರ ಪುತ್ರಿ ರಾಧಿಕಾ ಮರ್ಚೆಂಟ್ ಅಂಬಾನಿ ಕುಟುಂಬವನ್ನು ಸೇರಲು ಸಿದ್ಧರಾಗಿದ್ದಾರೆ. ಅನಂತ್ ಅಂಬಾನಿ-ರಾಧಿಕಾ ಮರ್ಚೆಂಟ್ ವಿವಾಹದ ಮೂಲಕ ಎರಡು ಪ್ರಮುಖ ಕೈಗಾರಿಕೋದ್ಯಮಿ ಕುಟುಂಬಗಳು ಒಂದಾಗಲಿದೆ.
ಕೆಂಪು ಮತ್ತು ಚಿನ್ನದ ಬಣ್ಣದ 'ಸೇವ್ ದಿ ಡೇಟ್' ಆಮಂತ್ರಣ ಪತ್ರಿಕೆ ಆಕರ್ಷಕ ಮತ್ತು ಸಾಂಪ್ರದಾಯಿಕವಾಗಿದ್ದು ಶ್ಲೋಕಗಳನ್ನು ಬರೆಯಲಾಗಿದ್ದು, ತಿರುಪತಿ ನಾಮಮ್ ಇದ್ದು, ಬಾರ್ಡರ್ ನಲ್ಲಿ ದೇವರು ಮತ್ತು ದೇವತೆಯ ಚಿತ್ರಗಳನ್ನು ಕಾಣಬಹುದಾಗಿದೆ. ಈ ವರ್ಷದ ಆರಂಭದಲ್ಲಿ , ಗುಜರಾತ್‌ನ ಜಾಮ್‌ನಗರದಲ್ಲಿ ನಡೆದ ಅನಂತ್ ಮತ್ತು ರಾಧಿಕಾ ಅವರ ಪ್ರಿ ವೆಡ್ಡಿಂಗ್ ಕಾರ್ಯಕ್ರಮದಲ್ಲಿ ಪ್ರಪಂಚದಾದ್ಯಂತದ ಸೆಲೆಬ್ರಿಟಿಗಳು, ಉದ್ಯಮಿಗಳು ಪಾಲ್ಗೊಂಡಿದ್ದರು.


Click it and Unblock the Notifications