ವೇಗವಾಗಿ ಬೆಳೆಯುತ್ತಿರುವ ನಗರಗಳಲ್ಲಿ ಬೆಂಗಳೂರು (Bengaluru) ಕೂಡಾ ಒಂದು. ಅತ್ತ ಮೆಟ್ರೋ, ಡಿಜಿಟಲ್, ಏರ್‌ಪೋರ್ಟ್ ಹೀಗೆ ಹಲವು ರೀತಿಯಲ್ಲಿ ಬೆಳವಣಿಗೆ ಕಾಣುತ್ತಲೇ ಇದೆ. ವಿಶ್ವದ ಅತ್ಯುತ್ತಮ ವಿಮಾನ ನಿಲ್ದಾಣ ಎಂದು ಹೆಗ್ಗಳಿಕೆಗೆ ಪಾತ್ರವಾಗಿರುವ ಬೆಂಗಳೂರು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ (Bengaluru Airport), ಇದೀಗ ಮತ್ತೊಂದು ಸ್ಥಾನ ಗಿಟ್ಟಿಸಿಕೊಂಡಿದೆ.

ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ (KIA) ಡಿಜಿ ಯಾತ್ರಾ ಯೋಜನೆಯ ಪ್ರಮುಖ ಕೇಂದ್ರ ಎಂದು ಗುರುತಿಸಿಕೊಂಡಿದೆ. ಫೇಸ್ ರೆಕಗ್ನಿಷನ್ ಆಧಾರಿತ ಈ ಪ್ರಯಾಣಿಕರ ವ್ಯವಸ್ಥೆ ಭಾರತದ ವಾಯುಯಾನ ಪ್ರಯಾಣಕ್ಕೆ ಹೊಸ ಆಯಾಮ ನೀಡಿದೆ. 2025ರ ನವೆಂಬರ್‌ವರೆಗೆ, ಕೆಐಎನಲ್ಲಿ 76.9 ಲಕ್ಷ ಪ್ರಯಾಣಿಕರು ಡಿಜಿ ಯಾತ್ರಾ (Digi Yatra App) ಬಳಸಿದ್ದಾರೆ ಎಂದು ವರದಿಯಾಗಿದೆ. ಈ ಮೂಲಕ ದೇಶದಲ್ಲಿ ಅತೀ ಹೆಚ್ಚು ಡಿಜಿ ಯಾತ್ರಾ ಅಪ್ಲಿಕೇಶನ್ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಬಳಕೆಯಾಗಿದೆ ಎಂದು ಹೇಳಲಾಗಿದೆ.
ಡಿಜಿ ಯಾತ್ರಾ ಬಳಕೆಯಲ್ಲಿ ಹೆಚ್ಚಳ!
ಕೇಂದ್ರ ನಾಗರಿಕ ವಿಮಾನಯಾನ ರಾಜ್ಯ ಸಚಿವರು ಸಂಸತ್ತಿನಲ್ಲಿ ನೀಡಿದ ದತ್ತಾಂಶದಂತೆ, ಡಿಜಿ ಯಾತ್ರಾ ಬಳಕೆ ದೇಶಾದ್ಯಂತ ವೇಗ ಪಡೆದುಕೊಂಡಿದೆ. 2023ರ ಅಂತ್ಯಕ್ಕೆ 38 ಲಕ್ಷ ಇದ್ದ ಅಪ್ಲಿಕೇಶನ್ ಡೌನ್‌ಲೋಡ್‌ಗಳು, 2024ರ ಡಿಸೆಂಬರ್‌ನಲ್ಲಿ 93 ಲಕ್ಷಕ್ಕೆ ಏರಿ, ನವೆಂಬರ್ 2025ಕ್ಕೆ 1.9 ಕೋಟಿ ತಲುಪಿವೆ. ಈ ಸೇವೆ ಪ್ರಸ್ತುತ 24 ವಿಮಾನ ನಿಲ್ದಾಣಗಳಲ್ಲಿ ಲಭ್ಯವಿದ್ದು, ಹಂತಹಂತವಾಗಿ ದೇಶದೆಲ್ಲೆಡೆ ವಿಸ್ತರಿಸಲಾಗುತ್ತದೆ ಎನ್ನಲಾಗಿದೆ. .
ಬೆಂಗಳೂರು ವಿಮಾನ ನಿಲ್ದಾಣಕ್ಕೆ ಅಗ್ರಸ್ಥಾನ!
ಬೆಂಗಳೂರು ಡಿಜಿ ಯಾತ್ರಾ ಅಳವಡಿಕೆಯಲ್ಲಿ ಮೊದಲ ಸ್ಥಾನದಲ್ಲಿದೆ. 2024ರಲ್ಲಿ 75.7 ಲಕ್ಷ ಬಳಕೆದಾರರೊಂದಿಗೆ ದೇಶದಲ್ಲಿ ಅಗ್ರಸ್ಥಾನ ಗಿಟ್ಟಿಸಿಕೊಂಡಿದೆ. ಅಕ್ಟೋಬರ್ ಒಂದು ತಿಂಗಳಲ್ಲಿ ಡಿಜಿ ಯಾತ್ರ ಬಳಕೆದಾರರ ಸಂಖ್ಯೆ 7.18 ಲಕ್ಷ ಆಗುವ ಮೂಲಕ ಭಾರೀ ಏರಿಕೆ ಕಂಡಿತ್ತು. ಇದೀಗ 2025ರ ಜನವರಿಯಿಂದ ನವೆಂಬರ್‌ವರೆಗೆ 76.9 ಲಕ್ಷ ಬಳಕೆದಾರರು ಡಿಜಿ ಯಾತ್ರ ಸೇವೆಯನ್ನು ಬಳಸಿಕೊಂಡಿದ್ದಾರೆ. ನವೆಂಬರ್ ತಿಂಗಳೊಂದರಲ್ಲೇ 7.52 ಲಕ್ಷ ಪ್ರಯಾಣಿಕರು ಡಿಜಿ ಯಾತ್ರಾ ಪ್ಲಾಟ್‌ಫಾರ್ಮ್ ಬಳಸಿದ್ದು, ಇದು ಬೆಂಗಳೂರು ವಿಮಾನ ನಿಲ್ದಾಣದ ಸೇವೆ ಹೇಗಿದೆ ಎಂಬುದನ್ನು ತೋರಿಸಿಕೊಟ್ಟಿದೆ.
ಇನ್ನು ಬೆಂಗಳೂರು ಮಾತ್ರವಲ್ಲದೇ ದೆಹಲಿಯಲ್ಲಿ 2024ರಲ್ಲಿ 63.4 ಲಕ್ಷ, 2025ರ ಜನವರಿ-ನವೆಂಬರ್‌ವರೆಗೆ 57.3 ಲಕ್ಷ ಜನರು ಡಿಜಿ ಯಾತ್ರ ಅಪ್ಲಿಕೇಶನ್ ಬಳಸಿದ್ದಾರೆ. ಮುಂಬೈನಲ್ಲಿ 2024ರಲ್ಲಿ 27.1 ಲಕ್ಷ ಇದ್ದ ಬಳಕೆದಾರರ ಸಂಖ್ಯೆ, 2025ರಲ್ಲಿ 50.1 ಲಕ್ಷಕ್ಕೆ ಏರಿಕೆಯಾಗಿದೆ. ಹೈದರಾಬಾದ್ 2024ರಲ್ಲಿ 36.7 ಲಕ್ಷ ಮತ್ತು 2025ರಲ್ಲಿ 37.9 ಲಕ್ಷದೊಂದಿಗೆ ಸ್ವಲ್ಪ ಮಟ್ಟಿಗೆ ಏರಿಕೆ ಕಂಡಿದೆ. ಕೋಲ್ಕತ್ತಾದಲ್ಲಿ ಮಾತ್ರ 2024ರಲ್ಲಿ 35.8 ಲಕ್ಷ ಇದ್ದ ಬಳಕೆದಾರರು 2025ರಲ್ಲಿ 22.4 ಲಕ್ಷಕ್ಕೆ ಇಳಿಕೆಯಾಗಿದೆ.
ಏನಿದು ಡಿಜಿ ಯಾತ್ರಾ ಅಪ್ಲಿಕೇಶನ್?
ಡಿಜಿ ಯಾತ್ರಾ ಎಂದರೆ ವಿಮಾನ ನಿಲ್ದಾಣಗಳಲ್ಲಿ ಯಾರ ಸಂಪರ್ಕವೂ ಇಲ್ಲದೇ ನಿಮ್ಮ ದಾಖಲೆಗಳನ್ನು ಸ್ವಯಂ ಪರಿಶೀಲನೆ ಮಾಡಿಕೊಳ್ಳುವುದಾಗಿದೆ. ಇದನ್ನು ಡಿಜಿ ಯಾತ್ರಾ ಅಪ್ಲಿಕೇಶನ್ ಮೂಲಕ ಮಾಡಬಹುದು. ಡಿಜಿಟಲ್ ಸೌಲಭ್ಯಗಳ ಮೂಲಕ ಡಾಕ್ಯುಮೆಂಟ್ ಪರಿಶೀಲನೆ ಮಾಡಬಹುದು. ಅದಕ್ಕಾಗಿ ಯಾವುದೇ ರೀತಿಯಲ್ಲಿ ಕಾಗದ ಪತ್ರಗಳು, ಇತರ ಯಾವುದೇ ದಾಖಲೆಗಳನ್ನು ನೀಡುವ ಅಗತ್ಯವಿಲ್ಲ. ಡಿಜಿಟಲ್ ಮೂಲಕ ಮತ್ತು ಫೇಸ್ ರೆಕಗ್ನೈಸೇಶನ್ ಸಿಸ್ಟಂ ಮೂಲಕ ಪರಿಶೀಲನೆ ನಡೆಯುತ್ತದೆ.


Click it and Unblock the Notifications