ವ್ಯಾಪಾರ ಗುಪ್ತಚರ ಸಂಸ್ಥೆ ಟೋಫ್ಲರ್ ಒದಗಿಸಿದ ಹಣಕಾಸು ವಿವರಗಳ ಪ್ರಕಾರ, ಐಫೋನ್ ತಯಾರಕ ಸಂಸ್ಥೆ ಆಪಲ್ ಇಂಡಿಯಾ ಮಾರ್ಚ್ 2023 ಕ್ಕೆ ಕೊನೆಗೊಂಡ ಹಣಕಾಸು ವರ್ಷದಲ್ಲಿ ಶೇಕಡ 48 ರಷ್ಟು ಆದಾಯ ಏರಿಕೆಯನ್ನು ಕಂಡಿದೆ. ಇದರಿಂದಾಗಿ ಆದಾಯವು 49,322 ಕೋಟಿ ರೂಪಾಯಿಗೆ ತಲುಪಿದೆ.
ಆಪಲ್ ಇಂಡಿಯಾ 2022 ರ ಹಣಕಾಸು ವರ್ಷದಲ್ಲಿ 33,381 ಕೋಟಿ ರೂಪಾಯಿ ಆದಾಯವನ್ನು ದಾಖಲಿಸಿದೆ. ಕಂಪನಿಯ ಲಾಭವು ಹಣಕಾಸು ವರ್ಷ 2022 ರಲ್ಲಿ 1,263 ಕೋಟಿ ರೂಪಾಯಿ ಆಗಿದ್ದು, ಹಣಕಾಸು ವರ್ಷ 2023ರಲ್ಲಿ ಶೇಕಡ 77 ರಷ್ಟು ಏರಿಕೆಯಾಗಿ 2,230 ಕೋಟಿ ರೂಪಾಯಿ ಏರಿಕೆಯಾಗಿದೆ.

"ಕಂಪನಿಯ ಒಟ್ಟು ವೆಚ್ಚವನ್ನು 46,444 ಕೋಟಿ ರೂಪಾಯಿ ಎಂದು ವರದಿ ಮಾಡಲಾಗಿದೆ," ಎಂದು ಟೋಫ್ಲರ್ ಹೇಳಿದರು. ಹಣಕಾಸು ವರ್ಷ 2022ರಲ್ಲಿ ಕಂಪನಿಯ ವೆಚ್ಚ ಸುಮಾರು 31,693 ಕೋಟಿ ರೂಪಾಯಿ ಆಗಿದೆ.
ಭಾರತದಲ್ಲಿ ಉತ್ಪಾದನೆ 5 ಪಟ್ಟು ಹೆಚ್ಚಿಸಲು ಆಪಲ್ ಚಿಂತನೆ
ಐಫೋನ್ ತಯಾರಕ ಸಂಸ್ಥೆಯಾದ ಆಪಲ್ ಮುಂದಿನ ನಾಲ್ಕೈದು ವರ್ಷಗಳಲ್ಲಿ ಭಾರತದಲ್ಲಿ ತನ್ನ ಐಫೋನ್ ಉತ್ಪಾದನೆಯನ್ನು ಐದು ಪಟ್ಟು ಹೆಚ್ಚಿಸಲು ಚಿಂತನೆ ನಡೆಸಿದೆ. ಐದು ವರ್ಷಗಳ ಅವಧಿಯಲ್ಲಿ ದೇಶದಲ್ಲಿ ಐಫೋನ್ ಉತ್ಪಾದನೆಯನ್ನು ಸುಮಾರು 40 ಬಿಲಿಯನ್ ಡಾಲರ್‌ಗೆ ಅಂದರೆ ಸುಮಾರು 3.32 ಲಕ್ಷ ಕೋಟಿ ರೂಪಾಯಿಗೆ ಹೆಚ್ಚಿಸಲು ಮುಂದಾಗಿದೆ ಎಂದು ವರದಿಯಾಗಿದೆ.
ಕಂಪನಿಯು ಕಳೆದ ಆರ್ಥಿಕ ವರ್ಷದಲ್ಲಿ 7 ಬಿಲಿಯನ್ ಡಾಲರ್ ಉತ್ಪಾದನಾ ಗುರಿಯನ್ನು ದಾಟಿದೆ ಎಂಬ ಮಾಹಿತಿಯೂ ಲಭ್ಯವಾಗಿದೆ. ಆದರೆ ಈ ಬಗ್ಗೆ ಮಾಧ್ಯಮಗಳಿಗೆ ಆಪಲ್ ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ. ಈಗಾಗಲೇ ಭಾರತದಲ್ಲಿ ಆಪಲ್ ಉತ್ಪಾದನೆಯನ್ನು ಆರಂಭ ಮಾಡಲಾಗಿದೆ.
ಆಪಲ್ ಭಾರತದಲ್ಲಿ ಐಫೋನ್‌ಗಳನ್ನು ತಯಾರಿಸುತ್ತದೆ. ಮುಂದಿನ ವರ್ಷ ಏರ್‌ಪಾಡ್‌ಗಳ ಉತ್ಪಾದನೆಯನ್ನು ಪ್ರಾರಂಭಿಸಲು ಯೋಜಿಸುತ್ತಿದೆ. ಭಾರತದಲ್ಲಿ ಐಪ್ಯಾಡ್ ಅಥವಾ ಲ್ಯಾಪ್‌ಟಾಪ್‌ಗಳನ್ನು ತಯಾರಿಸಲು ಆಪಲ್ ಯಾವುದೇ ತಕ್ಷಣದ ಯೋಜನೆಯನ್ನು ಹೊಂದಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
"ಐಟಿ ಹಾರ್ಡ್‌ವೇರ್ ಪಿಎಲ್‌ಐನಲ್ಲಿ ಭಾಗವಹಿಸಲು ಆಪಲ್ ಸಂಸ್ಥೆ ಯಾವುದೇ ಪ್ಲ್ಯಾನ್ ಅನ್ನು ಮಾಡಿಕೊಂಡಿಲ್ಲ. ಮುಂದಿನ ದಿನಗಳಲ್ಲಿ ಈ ಬಗ್ಗೆ ಚಿಂತನೆ ನಡೆಸಬಹುದು. ಆದರೆ ಸದ್ಯಕ್ಕೆ ಭಾರತದಲ್ಲಿ ಉತ್ಪಾದನಾ ಮಟ್ಟವನ್ನು ಅಧಿಕ ಮಾಡುವ ಕಡೆ ಮಾತ್ರ ಸಂಸ್ಥೆ ಗಮನಹರಿಸುತ್ತಿದೆ," ಎಂದು ಅಧಿಕಾರಿ ತಿಳಿಸಿದರು.
ಇನ್ನು ಸಂಸ್ಥೆಯು ಸೆಪ್ಟೆಂಬರ್ 25, 2022 ರಂದು ಕೊನೆಗೊಂಡ ಹಣಕಾಸು ವರ್ಷದಲ್ಲಿ ಜಾಗತಿಕವಾಗಿ 191 ಬಿಲಿಯನ್ ಡಾಲರ್ ಮೌಲ್ಯದ ಐಫೋನ್‌ಗಳನ್ನು ಮಾರಾಟ ಮಾಡಿದೆ. 8.36 ಬಿಲಿಯನ್ ಡಾಲರ್ ಮೌಲ್ಯದ ಧರಿಸುವ ಉತ್ಪನ್ನಗಳು (ವಾಚ್, ಹೆಡ್‌ಫೋನ್ ಮೊದಲಾದವು, ಮನೆಗೆ ಬೇಕಾಗುವ ಪರಿಕರಗಳುನ್ನು ಮಾರಾಟ ಮಾಡಿದೆ.


Click it and Unblock the Notifications