ಸರ್ಕಾರವು ಇತ್ತೀಚೆಗೆ ಪಿಎಂ ಕರ್ ದಾತ್ ಕಲ್ಯಾಣ ಯೋಜನೆ ಎಂಬ ಹೊಸ ಯೋಜನೆಯನ್ನು ಪರಿಚಯಿಸಿದೆ ಎಂಬ ವೈರಲ್ ಸುದ್ದಿಯನ್ನು ನೀವು ಓದಿರಬಹುದು. ಸುದ್ದಿ ವೇದಿಕೆ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಫಾರ್ವಡ್ ಮಾಡಲಾದ ಈ ಸುದ್ದಿಯಲ್ಲಿ ಸರ್ಕಾರ ತೆರಿಗೆದಾರರಿಗೆ ರಿವಾರ್ಡ್ ನೀಡುತ್ತದೆ ಎಂಬ ಮಾಹಿತಿಯನ್ನು ಒಳಗೊಂಡಿತ್ತು. ಆದರೆ ಸರ್ಕಾರ ಇಂತಹ ಯೋಜನೆಯನ್ನು ಪರಿಚಯಿಸಿದೆಯೇ? ಈ ಸುದ್ದಿಯ ಸತ್ಯಾಸತ್ಯತೆ ಏನು ಎಂಬುವುದರ ಕುರಿತು ನೋಡೋಣ..
ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್ (ಹಿಂದೆ ಟ್ವಿಟರ್) ನಲ್ಲಿನ ಪೋಸ್ಟ್‌ನಲ್ಲಿ, ಈ ಹಕ್ಕು ನಕಲಿ ಮತ್ತು ಪಿಎಂ ಕರ್ದಾತ ಕಲ್ಯಾಣ ಯೋಜನೆಯಂತಹ ಯಾವುದೇ ಯೋಜನೆ ಇಲ್ಲ ಎಂದು ಸರ್ಕಾರ ದೃಢಪಡಿಸಿದೆ. ಜೊತೆಗೆ , ಪಿಐಬಿ (ಪತ್ರಿಕಾ ಮಾಹಿತಿ ಬ್ಯೂರೋ) ಈ ಹೆಸರಿನ ಯಾವುದೇ ಯೋಜನೆ ಅಸ್ತಿತ್ವದಲ್ಲಿಲ್ಲ ಎಂದು ಸ್ಪಷ್ಟಪಡಿಸಿದೆ.

ಬುಲಂದ್ ಇಂಡಿಯಾ ಎಂಬ ಸುದ್ದಿ ವೇದಿಕೆ ಪ್ರಕಟಿಸಿದ ಲೇಖನದ ಪ್ರಕಾರ, ಭಾರತ ಸರ್ಕಾರವು ಪ್ರಾಮಾಣಿಕ ತೆರಿಗೆದಾರರಿಗೆ ಪ್ರತಿಫಲ ನೀಡುವ ಗುರಿಯನ್ನು ಹೊಂದಿರುವ "ಪಿಎಂ ಕರ್ದಾತ ಕಲ್ಯಾಣ ಯೋಜನೆ" ಎಂಬ ಹೊಸ ಉಪಕ್ರಮವನ್ನು ಪ್ರಾರಂಭಿಸಿದೆ ಎಂದು ವರದಿಯಾಗಿತ್ತು. ಜೊತೆಗೆ ಈ ಲೇಖನದ ಪ್ರಕಾರ, ಜವಾಬ್ದಾರಿಯುತ ತೆರಿಗೆ ನಿರ್ವಹಣೆಗೆ ಮೆಚ್ಚುಗೆಯಾಗಿ ಈ ಯೋಜನೆಯು ಪ್ರಯಾಣ ರಿಯಾಯಿತಿಗಳು, ಕಾರ್ ಮೈಲ್ಸ್ (ಪ್ರಸ್ತಾವಿತ ರಿವಾರ್ಡ್ ಪಾಯಿಂಟ್ ವ್ಯವಸ್ಥೆ) ಮತ್ತು ಉಚಿತ ಇಂಟರ್ನೆಟ್ ಡೇಟಾ ಸೇರಿದಂತೆ ಹಲವಾರು ಪ್ರೋತ್ಸಾಹಕಗಳನ್ನು ನೀಡಲಾಗುತ್ತದೆ ಎಂದು ವರದಿ ಮಾಡಿತ್ತು.
ಆದರೆ ಈ ಬಗ್ಗೆ ಪತ್ರಿಕಾ ಮಾಹಿತಿ ಬ್ಯೂರೋ (PIB) ಫ್ಯಾಕ್ಟ್ ಚೆಕ್ ವಿಭಾಗವು ಈ ವರದಿಯನ್ನು ಅಧಿಕೃತವಾಗಿ ಸುಳ್ಳು ಎಂದು ಸ್ಪಷ್ಟಪಡಿಸಿದೆ. "ಬುಲಂದ್ ಇಂಡಿಯಾದ ಲೇಖನವು ಭಾರತ ಸರ್ಕಾರವು ಪ್ರಾಮಾಣಿಕ ತೆರಿಗೆದಾರರಿಗೆ ಪ್ರಯಾಣ ರಿಯಾಯಿತಿಗಳು, ಕಾರ್ ಮೈಲ್ಸ್ ಮತ್ತು ಉಚಿತ ಇಂಟರ್ನೆಟ್ ಡೇಟಾದಂತಹ ಬಹುಮಾನಗಳನ್ನು "PM ಕರ್ದಾತಾ ಕಲ್ಯಾಣ್ ಯೋಜನೆ" ಎಂಬ ಹೊಸ ಯೋಜನೆಯಡಿಯಲ್ಲಿ ನೀಡುತ್ತಿದೆ ಎಂದು ಹೇಳುತ್ತದೆ. ಇದೊಂದು ಸುಳ್ಳು ಸುದ್ದಿಯಾಗಿದ್ದು PM ಕರ್ದಾತಾ ಕಲ್ಯಾಣ್ ಯೋಜನೆಯಂತಹ ಯಾವುದೇ ಯೋಜನೆ ಇಲ್ಲ" ಎಂದು X ನಲ್ಲಿ ಹಂಚಿಕೊಂಡ ಪೋಸ್ಟ್‌ನಲ್ಲಿಸ್ಪಷ್ಟಪಡಿಸಲಾಗಿದೆ. ಅಲ್ಲದೇ ಈ ವೈರಲ್ ಸುದ್ದಿ ಸಂಪೂರ್ಣವಾಗಿ ಸುಳ್ಳಾಗಿದ್ದು, ಜನರ ದಾರಿತಪ್ಪಿಸುವಂತಿದೆ ಎಂದು ಬ್ಯೂರೋ ಹೇಳಿದೆ.
ಅಧಿಕೃತವಾಗಿ ಕಾಣುವ ಯೋಜನೆಗಳ ಹೆಸರಿನಲ್ಲಿ ತಪ್ಪು ಮಾಹಿತಿ ಹರಡುವುದು ಇದೇ ಮೊದಲಲ್ಲ. ವಂಚನೆ ಎಸಗುವವರು ಮತ್ತು ಕ್ಲಿಕ್‌ಬೈಟ್ ವೆಬ್‌ಸೈಟ್‌ಗಳು ಸಾಮಾನ್ಯವಾಗಿ ಹೆಚ್ಚು ಜನರನ್ನು ತಲುಪಲು ಅಥವಾ ವೈಯಕ್ತಿಕ ಮಾಹಿತಿಯನ್ನು ಪಡೆಯಲು ಸರ್ಕಾರಿ ಸೌಲಭ್ಯಗಳ ಬಗ್ಗೆ ಸುಳ್ಳು ಸುದ್ದಿಗಳನ್ನು ಸೃಷ್ಟಿಸುತ್ತಾರೆ.
ಈ ಹಿನ್ನೆಲೆಯಲ್ಲಿ, ಸಾರ್ವಜನಿಕರು ಯಾವುದೇ ಸುದ್ದಿಯನ್ನು ನಂಬುವ ಮೊದಲು ಅಧಿಕೃತ ಸರ್ಕಾರಿ ವೆಬ್‌ಸೈಟ್‌ಗಳು ಅಥವಾ ಪಿಐಬಿ ಫ್ಯಾಕ್ಟ್ ಚೆಕ್‌ನಂತಹ ವಿಶ್ವಾಸಾರ್ಹ ಸತ್ಯಶೋಧನಾ ತಾಣಗಳ ಮೂಲಕ ಖಚಿತಪಡಿಸಿಕೊಳ್ಳುವುದು ಬಹಳ ಮುಖ್ಯ. ಈ ರೀತಿ ಮಾಡುವುದರಿಂದ ಸುಳ್ಳು ಸುದ್ದಿಗಳಿಂದ ಮತ್ತು ವಂಚನೆಗಳಿಂದ ತಮ್ಮನ್ನು ರಕ್ಷಿಸಿಕೊಳ್ಳಬಹುದು.
ಸರ್ಕಾರವು ತೆರಿಗೆ ಪಾವತಿಯನ್ನು ಪ್ರೋತ್ಸಾಹಿಸಲು ಅನೇಕ ಸೌಲಭ್ಯಗಳು ಮತ್ತು ಯೋಜನೆಗಳನ್ನು ಜಾರಿಗೆ ತಂದಿರುವುದು ನಿಜ. ಆದರೆ ಯಾವುದೇ ಅಧಿಕೃತ ಕಾರ್ಯಕ್ರಮವನ್ನು ಸರ್ಕಾರವು ಯಾವಾಗಲೂ ಅಧಿಕೃತವಾಗಿ ಪ್ರಕಟಿಸುತ್ತದೆ. ಆಯಾ ಇಲಾಖೆಗಳ ಸರ್ಕಾರಿ ವೆಬ್‌ಸೈಟ್‌ಗಳು ಮತ್ತು ವಿಶ್ವಾಸಾರ್ಹ ಮಾಧ್ಯಮಗಳಲ್ಲಿ ಈ ಬಗ್ಗೆ ಸಮಗ್ರ ಮಾಹಿತಿ ಲಭ್ಯವಿರುತ್ತದೆ.
ಹಾಗಾಗಿ, ಯಾವುದೇ ಹೊಸ ಯೋಜನೆ ಅಥವಾ ಸೌಲಭ್ಯದ ಬಗ್ಗೆ ನೀವು ತಿಳಿದುಕೊಳ್ಳಲು ಬಯಸಿದರೆ, ಮೊದಲು ಅಧಿಕೃತ ಮೂಲಗಳನ್ನು ಪರಿಶೀಲಿಸುವುದು ಅತ್ಯಂತ ಮುಖ್ಯ. ಇದರಿಂದ ನೀವು ಸುಳ್ಳು ಸುದ್ದಿಗಳನ್ನು ನಂಬುವುದನ್ನು ತಪ್ಪಿಸಬಹುದು ಮತ್ತು ವಂಚನೆಗೆ ಒಳಗಾಗುವುದನ್ನು ತಡೆಯಬಹುದು.
ಅದೇ ರೀತಿ ಪಿಎಂ ಕರ್ದತಾ ಕಲ್ಯಾಣ್ ಯೋಜನೆಯು ಅಸ್ತಿತ್ವದಲ್ಲಿಲ್ಲ ಈ ಬಗ್ಗೆ ಹಬ್ಬಿರುವ ಎಲ್ಲಾ ವದಂತಿಗಳು ಮತ್ತು ಸುದ್ದಿ ವರದಿಗಳು ಸುಳ್ಳು. ತೆರಿಗೆದಾರರು ಜಾಗರೂಕರಾಗಿರಬೇಕು ಮತ್ತು ಪರಿಶೀಲಿಸದ ಸುದ್ದಿಗಳನ್ನು ಹಂಚಿಕೊಳ್ಳುವುದನ್ನು ತಡೆಯಬೇಕು.


Click it and Unblock the Notifications