ಜೈಪುರ, ಜೂನ್ 12: ಅಮೇರಿಕಾ ಮೂಲದ ಮಹಿಳೆಗೆ ₹ 300 ಮೌಲ್ಯದ ಕೃತಕ ಆಭರಣವನ್ನು 6 ಕೋಟಿ ರೂ. ಮೌಲ್ಯದ ಆಭರಣ ಎಂದು ವ್ಯಾಪಾರಿಯೊಬ್ಬ ಪಂಗನಾಮ ಹಾಕಿರುವ ಘಟನೆ ರಾಜಸ್ಥಾನದ ಜೈಪುರದಲ್ಲಿ ನಡೆದಿದ್ದು ಇದೀಗ ಪೊಲೀಸ್ ದೂರು ದಾಖಲಾಗಿದೆ.
ಅಮೆರಿಕದ ಪ್ರಜೆಯಾದ ಚೆರಿಶ್ ಭಾರತಕ್ಕೆ ಬಂದಿದ್ದಾಗ ರಾಜಸ್ಥಾನದ ಜೈಪುರದ ಜೊಹ್ರಿ ಬಜಾರ್‌ನಲ್ಲಿರುವ ಅಂಗಡಿಯೊಂದರಲ್ಲಿ ಆಭರಣಗಳನ್ನು ಖರೀದಿಸಿದ್ದರು. ಅತ್ಯಮೂಲ್ಯ ಅಭರಣ ಎಂದು ನಂಬಿದ್ದ ಚೆರಿಶ್ ಅವರು ಈ ವರ್ಷ ಏಪ್ರಿಲ್‌ನಲ್ಲಿ ಅಮೇರಿಕಾದಲ್ಲಿ ನಡೆದ ಪ್ರದರ್ಶನದಲ್ಲಿ ಆಭರಣಗಳನ್ನು ಪ್ರದರ್ಶಿಸಿದ್ದರು. ಈ ವೇಳೆ ಇದು ನಕಲಿ ಅಭರಣ ಎಂದು ತಿಳಿದುಬಂದಿದೆ.

ಚಿನ್ನದ ಪಾಲಿಶ್ ಹಾಕಲಾಗಿದ್ದ ಬೆಳ್ಳಿ ಆಭರಣವನ್ನು 6 ಕೋಟಿ ರೂ. ಖರೀದಿಸಿದ್ದು ಮೋಸ ಹೋದ ಬಗ್ಗೆ ಗೊತ್ತಾಗುತ್ತಿದ್ದಂತೆಯೇ ಚೆರಿಶ್ ಮತ್ತೆ ಭಾರತಕ್ಕೆ ಮರಳಿ ಬಂದಿದ್ದಾರೆ. ಜೈಪುರಕ್ಕೆ ಆಗಮಿಸಿದ ತನಗೆ ಆಭರಣಗಳನ್ನು ಮಾರಾಟ ಮಾಡಿದ್ದ ವ್ಯಾಪಾರಿ ಗೌರವ್ ಸೋನಿ ಬಳಿ ವಿಚಾರಿಸಿದ್ದಾರೆ. ಆದರೆ ಈ ವೇಳೆ ಚೆರಿಶ್ ಮಾಡಿರುವ ಆರೋಪಗಳನ್ನು ತಳ್ಳಿಹಾಕಿದ್ದಾನೆ.
ಬೇರೆ ದಾರಿ ಕಾಣದೆ ಅಮೇರಿಕಾ ಪ್ರಜೆ ಚೆರಿಶ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಜೊತೆಗೆ ಯುಎಸ್ ರಾಯಭಾರ ಕಚೇರಿಯಿಂದ ಸಹಾಯವನ್ನು ಪಡೆದಿದ್ದು , ಈ ವಿಷಯದ ಬಗ್ಗೆ ತನಿಖೆ ನಡೆಸುವಂತೆ ಜೈಪುರ ಪೊಲೀಸರನ್ನು ಒತ್ತಾಯಿಸಿದ್ದಾರೆ.
2022 ರಲ್ಲಿ ಇನ್ಸ್ಟಾಗ್ರಾಮ್ ಮೂಲಕ ಪರಿಚಯವಾದ ಗೌರವ್ ಸೋನಿ ಕಳೆದ ಎರಡು ವರ್ಷಗಳಲ್ಲಿ ಈತನಿಗೆ 6 ಕೋಟಿ ರೂಪಾಯಿ ಪಾವತಿ ಮಾಡಿದ್ದೆ. ಆದರೆ ಆತ ನನಗೆ ಕೃತಕ ಆಭರಣಗಳನ್ನು ನೀಡಿದ್ದಾನೆ ಎಂದು ಮಹಿಳೆ ಮನಕ್ ಚೌಕ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇದಕ್ಕೆ ವಿರುದ್ದವಾಗಿ ಆರೋಪಿಗಳು ಆಕೆಯ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿದ್ದರು. ಈ ವೇಳೆ ಅಮೇರಿಕಾ ರಾಯಭಾರಿ ಕಚೇರಿ ಮದ್ಯಪ್ರವೇಶಿಸಿದ ಹಿನ್ನಲೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.
ಪರಾರಿಯಾಗಿರುವ ಗೌರವ್ ಮತ್ತು ಆತನ ತಂದೆ ರಾಜೇಂದ್ರ ಸೋನಿಗಾಗಿ ಶೋಧ ನಡೆಸಲಾಗುತ್ತಿದ್ದು, ಇಬ್ಬರು ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇಬ್ಬರು ವ್ಯಕ್ತಿಗಳ ಪತ್ತೆಗೆ ವಿಶೇಷ ತಂಡಗಳನ್ನು ರಚಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆಭರಣಕ್ಕೆ ನಕಲಿ ಪ್ರಮಾಣಪತ್ರ ನೀಡಿದ ವ್ಯಕ್ತಿ ನಂದ್ ಕಿಶೋರ್ ಎಂಬಾತನನ್ನು ಬಂಧಿಸಲಾಗಿದೆ. ಆರೋಪಿಗಳ ಬಂಧನಕ್ಕೆ ಜೈಪುರ ಪೊಲೀಸರ ವಿಶೇಷ ತಂಡ ರಚಿಸಲಾಗಿದೆ.
ಅಂಗಡಿ ಮಾಲೀಕರು ಇತ್ತೀಚೆಗೆ 3 ಕೋಟಿ ರೂಪಾಯಿ ಮೌಲ್ಯದ ಅಪಾರ್ಟ್‌ಮೆಂಟ್ ಖರೀದಿಸಿದ್ದಾರೆ ಎಂದು ಪೊಲೀಸರ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.


Click it and Unblock the Notifications