ಜನ ಸಾಮಾನ್ಯರಿಗೆ ಮತ್ತೊಂದು ಶಾಕಿಂಗ್ ಸುದ್ದಿ ಇಲ್ಲಿದೆ. ಅದೇನೆಂದರೆ ಭಾರತೀಯ ರಿಸರ್ವ್ ಬ್ಯಾಂಕ್ ಒಂದು ಮಹತ್ವದ ಘೋಷಣೆ ಮಾಡಿದೆ. ಮುಂಬರುವ ಮೇ 1, 2025ರಿಂದ ಎಟಿಎಂ ನಗದು ಹಿಂಪಡೆಯುವಿಕೆ ಸಂಬಂಧ ಹೊಸ ಶುಲ್ಕಗಳನ್ನು ಜಾರಿಗೆ ತರಲು ಅನುಮತಿ ನೀಡಿದೆ. ಈ ಹೊಸ ನಿಯಮಗಳ ಪ್ರಕಾರ, ಗ್ರಾಹಕರು ತಮ್ಮ ಉಚಿತ ವಹಿವಾಟು ಮಿತಿಯನ್ನು ಮೀರಿದರೆ, ಪ್ರತಿ ವಹಿವಾಟಿಗೆ ₹21 ಬದಲಿಗೆ ₹23 ಶುಲ್ಕ ವಿಧಿಸಲಾಗುತ್ತದೆ. ಈ ಕ್ರಮವನ್ನು ಬ್ಯಾಂಕುಗಳ ಪ್ರಸ್ತಾವನೆಗಳ ಆಧಾರದ ಮೇಲೆ ಮತ್ತು ಎಟಿಎಂ ನಿರ್ವಹಣಾ ವೆಚ್ಚ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೈಗೊಳ್ಳಲಾಗಿದೆ.

ಇನ್ನು ಮೆಟ್ರೋ ಸಿಟಿಗಳಲ್ಲಿ ಕಾರ್ಯನಿರ್ವಹಿಸುವ ಇತರ ಬ್ಯಾಂಕುಗಳ ಎಟಿಎಂಗಳಲ್ಲಿ, ಮೂರು ಉಚಿತ ವಹಿವಾಟು ನಡೆಸಬಹುದು. ಮೆಟ್ರೋ ಸಿಟಿ ಅಲ್ಲದ ಪ್ರದೇಶಗಳಲ್ಲಿ ಐದು ಉಚಿತ ವಹಿವಾಟು ನಡೆಸಬಹುದು. ಈ ಉಚಿತ ವಹಿವಾಟುಗಳ ಮಿತಿಯನ್ನು ಮೀರಿಸಿದಾಗ, ಪ್ರತಿ ವಹಿವಾಟಿಗೆ ಈಗಿನ ₹21 ಶುಲ್ಕವನ್ನು ₹23 ಗೆ ಹೆಚ್ಚಿಸಲು ಅವಕಾಶ ನೀಡಲಾಗಿದೆ. ಈ ಬದಲಾವಣೆ ನಗದು ಹಿಂಪಡೆಯುವಿಕೆ ಸೇರಿದಂತೆ ನಗದು ಮರುಬಳಕೆ ಯಂತ್ರಗಳು ಮೂಲಕ ನಡೆಯುವ ಎಲ್ಲಾ ವಹಿವಾಟುಗಳಿಗೆ ಅನ್ವಯವಾಗುತ್ತದೆ.
ಇಷ್ಟೇ ಅಲ್ಲ ಎಟಿಎಂ ವಹಿವಾಟುಗಳಿಗೆ ಸಂಬಂಧಿಸಿದರೆ, ಆರ್‍ಬಿಐ ಇಂಟರ್‌ಚೇಂಜ್ ಶುಲ್ಕದ ರಚನೆಯನ್ನು ಸಹ ಪರಿಷ್ಕರಿಸಿದೆ. ಈ ಇಂಟರ್‍ಚೇಂಜ್ ಫೀಸ್ ಒಂದು ಒಂದು ಬ್ಯಾಂಕ್ ಮತ್ತೊಂದು ಬ್ಯಾಂಕ್‌ಗೆ ಎಟಿಎಂ ಸೇವೆಗಳನ್ನು ಬಳಸಲು ವಿಧಿಸುವ ಶುಲ್ಕವಾಗಿದೆ. ಹೊಸ ಮಾರ್ಗಸೂಚಿಗಳ ಪ್ರಕಾರ, ಹಣಕಾಸು ವಹಿವಾಟುಗಳಿಗಾಗಿ ₹17 ಮತ್ತು ಹಣಕಾಸೇತರ ವಹಿವಾಟುಗಳಿಗಾಗಿ ₹6 ಇಂಟರ್‌ಚೇಂಜ್ ಶುಲ್ಕ ನಿಗದಿಗೊಳಿಸಲಾಗಿದೆ. ಸಾಮಾನ್ಯವಾಗಿ, ಈ ಶುಲ್ಕವನ್ನು ಗ್ರಾಹಕರಿಗೆ ಅವರ ಬ್ಯಾಂಕಿಂಗ್ ವೆಚ್ಚದ ಭಾಗವಾಗಿ ವರ್ಗಾಯಿಸಲಾಗುತ್ತದೆ.
ಅಂದಹಾಗೆ ಬಿಎಲ್‌ಎಸ್ ಇ-ಸರ್ವಿಸಸ್‌ನ ಅಧ್ಯಕ್ಷರಾದ ಶಿಖರ್ ಅಗರ್ವಾಲ್ ಅವು ಈ ಬಗ್ಗೆ ಪ್ರತಿಕ್ರಿಯೆ ಕೂಡ ನೀಡಿದ್ದಾರೆ. ಈ ನೂತನ ಬದಲಾವಣೆಯಡಿ ಎಟಿಎಂ ಇಂಟರ್‌ಚೇಂಜ್ ಶುಲ್ಕವನ್ನು ಹೆಚ್ಚಿಸುವ ನಿರ್ಧಾರ ಭಾರತದಲ್ಲಿ ನಗದು ವಹಿವಾಟಿನ ವೆಚ್ಚ ಹೆಚ್ಚುತ್ತಿರುವುದನ್ನು ಉಲ್ಲೇಖಿಸುತ್ತದೆ ಎಂದು ಹೇಳಿದ್ದಾರೆ. ಹಾಗೆಯೇ . ಈ ಹೆಚ್ಚಳವು ಸಾಮಾನ್ಯ ಎಟಿಎಂ ಬಳಕೆದಾರರಿಗೆ ಆರ್ಥಿಕ ಹೊರೆ ತರಬಹುದು, ಆದರೆ ಇದರ ಪರಿಣಾಮವಾಗಿ ಗ್ರಾಮೀಣ ಮತ್ತು ಅರೆ-ನಗರ ಪ್ರದೇಶಗಳ ಗ್ರಾಹಕರು ಮೈಕ್ರೋ ಎಟಿಎಂಗಳು ಮತ್ತು ಬಿಸಿ (BC) ನೆಟ್‌ವರ್ಕ್‌ಗಳತ್ತ ಹೆಚ್ಚು ಒಲಿಯುವ ಸಾಧ್ಯತೆ ಇದೆ, ಏಕೆಂದರೆ ಇವುಗಳಲ್ಲಿ ವಹಿವಾಟುಗಳಿಗೆ ಹೆಚ್ಚುವರಿ ಶುಲ್ಕವಿಲ್ಲ.
ಇನ್ನು ಈ ಹೊಸ ನಿಯಮಗಳು ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳು, ಸಹಕಾರಿ ಬ್ಯಾಂಕುಗಳು, ಅಧಿಕೃತ ಎಟಿಎಂ ನೆಟ್‌ವರ್ಕ್ ಆಪರೇಟರ್‌ಗಳು, ಕಾರ್ಡ್ ಪಾವತಿ ನೆಟ್‌ವರ್ಕ್ ಆಪರೇಟರ್‌ಗಳು ಮತ್ತು ವೈಟ್-ಲೇಬಲ್ ಎಟಿಎಂ ಆಪರೇಟರ್‌ಗಳು ಸೇರಿದಂತೆ ಎಲ್ಲಾ ವಾಣಿಜ್ಯ ಬ್ಯಾಂಕುಗಳಿಗೆ ಅನ್ವಯಿಸುತ್ತವೆ. ಜನವರಿ 2025 ರ ಅಂತ್ಯದ ವೇಳೆಗೆ, ದೇಶದಲ್ಲಿ ಒಟ್ಟು 1,30,902 ಆನ್-ಸೈಟ್ ಎಟಿಎಂಗಳು ಮತ್ತು CRM ಗಳು, ಹಾಗೆಯೇ 85,804 ಆಫ್-ಸೈಟ್ ಎಟಿಎಂಗಳು ಕಾರ್ಯನಿರ್ವಹಿಸುತ್ತಿದ್ದವು.
ಇದರೊಂದಿಗೆ, ಪ್ರಮುಖ ಬ್ಯಾಂಕುಗಳು ತಮ್ಮ ಕ್ರೆಡಿಟ್ ಕಾರ್ಡ್ ಸೇವೆಗಳಲ್ಲಿ ಕೂಡಾ ಬದಲಾವಣೆಗಳನ್ನು ತರುತ್ತಿವೆ. ಎಸ್‌ಬಿಐ ಮತ್ತು ಐಡಿಎಫ್‌ಸಿ ಫಸ್ಟ್ ಬ್ಯಾಂಕ್ ಮುಂತಾದ ಬ್ಯಾಂಕುಗಳು ತಮ್ಮ ಸಹ-ಬ್ರಾಂಡೆಡ್ ಕ್ರೆಡಿಟ್ ಕಾರ್ಡ್ ಯೋಜನೆಗಳನ್ನು ಪರಿಷ್ಕರಿಸುತ್ತಿವೆ, ಇದರಲ್ಲಿ ಟಿಕೆಟ್ ವೋಚರ್‌ಗಳು, ನವೀಕರಣ ಸೌಲಭ್ಯಗಳು, ಮತ್ತು ಮೈಲಿಗಲ್ಲು ಬಹುಮಾನಗಳು ರದ್ದುಗೊಳ್ಳುವ ಸಾಧ್ಯತೆ ಇದೆ. ಆಕ್ಸಿಸ್ ಬ್ಯಾಂಕ್ ಕೂಡಾ ಏಪ್ರಿಲ್ 18 ರಿಂದ ಈ ರೀತಿಯ ಬದಲಾವಣೆಗಳನ್ನು ಜಾರಿಗೆ ತರಲಿದೆ, ಇದು ಅದರ ವಿಸ್ತಾರ ಕ್ರೆಡಿಟ್ ಕಾರ್ಡ್ ಬಳಕೆದಾರರ ಮೇಲೆ ಪರಿಣಾಮ ಬೀರುತ್ತದೆ.
ಇಂಟರ್‌ಚೇಂಜ್ ಶುಲ್ಕಗಳ ಹೆಚ್ಚಳವು ವಿಶೇಷವಾಗಿ ಸಣ್ಣ ಬ್ಯಾಂಕುಗಳ ಗ್ರಾಹಕರ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಎಟಿಎಂ ಬಳಕೆ ದುಬಾರಿಯಾಗುತ್ತಿದ್ದಂತೆ, ಹೆಚ್ಚು ಗ್ರಾಹಕರು ಡಿಜಿಟಲ್ ಪಾವತಿಗಳನ್ನು ಅಥವಾ ಇತರ ಪರ್ಯಾಯಗಳತ್ತ ತಿರುಗುವ ಸಾಧ್ಯತೆ ಇದೆ. ಈ ಹೊಸ ನಿಯಮಗಳು ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಪ್ರಮುಖ ಬದಲಾವಣೆಯನ್ನು ತರಲಿದ್ದು, ಗ್ರಾಹಕರು ತಮ್ಮ ವಹಿವಾಟು ಪದ್ದತಿಗಳನ್ನು ಪುನರ್ ಪರಿಗಣಿಸುವ ಅಗತ್ಯವಿದೆ.
ಆರ್‌ಬಿಐನ ಈ ಹೊಸ ನಿಯಮಗಳು ಮೇ 1, 2025ರಿಂದ ಜಾರಿಗೆ ಬರಲಿದ್ದು, ಗ್ರಾಹಕರು ಎಟಿಎಂ ಬಳಕೆ ತಂತ್ರವನ್ನು ಬದಲಾಯಿಸಿಕೊಳ್ಳಬೇಕಾಗಬಹುದು. ಉಚಿತ ವಹಿವಾಟು ಮಿತಿಯ ಬಗ್ಗೆ ಅರಿವು ಇಟ್ಟುಕೊಂಡು, ಬೇಡದ ಖರ್ಚು ತಪ್ಪಿಸಲು ಯತ್ನಿಸುವುದು ಒಳಿತು. ಆರ್ಥಿಕ ಯೋಜನೆಯೊಂದಿಗೆ ಎಟಿಎಂ ಬಳಕೆಯನ್ನು ಸಮರ್ಥವಾಗಿ ನಿರ್ವಹಿಸುವುದು ಉತ್ತಮ.
ನಿಮ್ಮ ಬ್ಯಾಂಕಿನ ಉಚಿತ ಎಟಿಎಂ ವಹಿವಾಟು ಮಿತಿಯನ್ನು ಅರಿತುಕೊಳ್ಳುವುದು ಅತ್ಯಗತ್ಯ. ಯಾವುದೇ ಅನಗತ್ಯ ಶುಲ್ಕಗಳಿಂದ ತಪ್ಪಿಸಿಕೊಳ್ಳಲು, ಮೊದಲು ನಿಮ್ಮ ಬ್ಯಾಂಕಿನ ಎಟಿಎಂ ಬಳಸಿ, ನಂತರ ಅನಿವಾರ್ಯವಾಗಿದ್ರೆ ಮಾತ್ರ ಇತರ ಬ್ಯಾಂಕುಗಳ ಎಟಿಎಂ ಬಳಸಿ. ಮೈಕ್ರೋಎಟಿಎಂ ಸೇವೆಗಳನ್ನು ಬಳಸುವುದರಿಂದ ಈ ಶುಲ್ಕದಿಂದ ತಪ್ಪಿಸಿಕೊಳ್ಳಬಹುದು.


Click it and Unblock the Notifications