ಬೆಂಗಳೂರಲ್ಲಿ ಮೊದಲೇ ಆಟೋ ಪ್ರಯಾಣದ ದರ ಕೇಳಿದ್ರೆ ತಲೆ ತಿರುಗುತ್ತಿತ್ತು. ಆದ್ರೆ ಈಗ ಅಧಿಕೃತವಾಗಿ ಆಟೋ ದರ ಏರಿಕೆಗೆ ಅನುಮೋದನೆ ಸಿಕ್ಕಿದೆ. ಆಗಸ್ಟ್ 1 ರಿಂದ ಬೆಂಗಳೂರು ಜನರಿಗೆ ಹೊಸ ಆಟೋ ಪ್ರಯಾಣ ದರದ ಬಿಸಿ ತಟ್ಟಲಿದೆ. ಮೆಟ್ರೋ ಟಿಕೆಟ್ ರೇಟ್ ಜಾಸ್ತಿ ಆಯ್ತು..ಈಗ ಆಟೋ ದರವೂ ತಲೆ ಮೇಲೆ ತಾಂಡವವಾಡಬಹುದು. ಇದೊಂಥರಾ ಬೆಂಕಿಯಿಂದ ಬಾಣಲೆಗೆ ಬಿಟ್ಟಂತಾಗಿದೆ. ಹಾಗಾದ್ರೆ ಹೊಸ ದರಗಳು ಹೇಗಿರುತ್ತವೆ ಎಂದು ತಿಳಿಯಿರಿ.

ಹೊಸ ದರಗಳು ಹೇಗಿರುತ್ತವೆ?
- ಅಗಸ್ಟ್ 1 ರಿಂದ ಕಾರ್ಯರೂಪಕ್ಕೆ ಬರುವಂತೆ ಹೊಸ ದರಗಳ ಪ್ರಕಾರ:
- ಮೊದಲ 2 ಕಿ.ಮೀ.ಗೆ ಈಗಿರುವ ₹30 ಬದಲು ₹36 ನವೀಕೃತ ದರ ವಿಧಿಸಲಾಗುತ್ತದೆ.
- ಪ್ರತಿ ಹೆಚ್ಚುವರಿ ಕಿ.ಮೀ.ಗೆ ₹15 ಬದಲು ₹18 ವಿಧಿಸಲಾಗುವುದು.
- ರಾತ್ರಿ 10 ರಿಂದ ಬೆಳಿಗ್ಗೆ 5 ರವರೆಗೆ ದರಗಳು 1.5 ಪಟ್ಟು ಹೆಚ್ಚಾಗಿ ಜಾರಿಯಲ್ಲಿರುತ್ತವೆ.
ಈ ಪರಿಷ್ಕೃತ ದರಗಳನ್ನು ಆಟೋ ಮೀಟರ್‌ಗಳಲ್ಲಿ ಅಳವಡಿಸಬೇಕು ಎಂದು ಇಲಾಖೆ ತಿಳಿಸಿದೆ. ಅಕ್ಟೋಬರ್ 31ರೊಳಗೆ ಎಲ್ಲ ಆಟೋ ಚಾಲಕರೂ ತಮ್ಮ ಮೀಟರ್‌ಗಳನ್ನು ನವೀಕರಿಸಿ ಪುನಃ ಮುದ್ರೆ ಮಾಡಿಸಬೇಕು ಎಂಬುದಾಗಿ ಅಧಿಸೂಚನೆಯು ಸೂಚಿಸಿದೆ.
ದರ ಏರಿಕೆಯ ಹಿಂದಿನ ಹಿನ್ನಲೆ:
ಅಂದಾಜು ನಾಲ್ಕು ವರ್ಷಗಳ ನಂತರ ಈ ಬಾರಿ ಆಟೋ ದರ ಏರಿಕೆಯಾಗುತ್ತಿರುವುದು ಗಮನಾರ್ಹ. 2021ರ ನವೆಂಬರ್‌ನಲ್ಲಿ ಕೊನೆಯದಾಗಿ ದರ ಪರಿಷ್ಕರಣೆ ನಡೆದಿದೆ. ಇದೀಗ, ನಗರ ಉಪ ಆಯುಕ್ತ ಜಗದೀಶ ಜಿ ನೇತೃತ್ವದ ಐದು ಸದಸ್ಯರ ಸಮಿತಿಯ ಶಿಫಾರಸಿನ ಮೇರೆಗೆ ಈ ಹೊಸ ದರ ರೂಪುಗೊಂಡಿದೆ. ಸಮಿತಿಯು ಈ ವರ್ಷ ಮಾರ್ಚ್‌ನಲ್ಲಿ ಸಂಚಾರದ ಹಾಳಾದ ಪರಿಸ್ಥಿತಿ, ಪ್ರಯಾಣಿಕರ ಸಂಖ್ಯೆಯಲ್ಲಿ ಭಾರಿ ಏರಿಕೆ, ಮತ್ತು ಚಾಲಕರ ಆಯವ್ಯಯ..ಈ ಎಲ್ಲವನ್ನೂ ಪರಿಗಣಿಸಿ ವಿವರಣೆಾತ್ಮಕ ವರದಿಯನ್ನು ಸಿದ್ಧಪಡಿಸಿತು.
ಇನ್ನು ಆಟೋ ರಿಕ್ಷಾ ಚಾಲಕರ ಪ್ರಮುಖ ಸಂಘಗಳಾದ ARDU (Auto Rickshaw Drivers Union) ಮತ್ತು AATDU (Adarsha Auto and Taxi Drivers Union) ಎರಡೂ ಸಂಘಗಳು ಮೂಲ ದರ ₹40 ಮತ್ತು ಪ್ರತಿ ಕಿ.ಮೀ.ಗೆ ₹20 ನಿಗದಿಪಡಿಸಬೇಕೆಂದು ಒತ್ತಾಯಿಸಿದ್ದರೂ, ಅಧಿಕಾರಿಗಳು ಶೇ. 20ರಷ್ಟು ದರ ಏರಿಕೆ ಮಾತ್ರಕ್ಕೆ ಅನುಮೋದನೆ ನೀಡಿದರು.
ಆರಂಭದಲ್ಲಿ ಸರ್ಕಾರ ದರ ಏರಿಕೆ ಮಾಡುವ ಬಗ್ಗೆ ಸ್ಪಷ್ಟ ನಿಲುವು ತೆಗೆದುಕೊಳ್ಳದೆ ಹಿಂದೇಟು ಹಾಕಿತ್ತು. ಕಾರಣ, ಆಟೋ ಸಂಘಗಳು ಬೈಕ್ ಟ್ಯಾಕ್ಸಿಗಳ ಸ್ಪರ್ಧೆಯಿಂದ ತಮ್ಮ ಉಳಿತಾಯ ಹಾನಿಯಾಗುತ್ತದೆ ಎಂಬ ಆತಂಕ ಹೊಂದಿದ್ದವು. ಆದರೆ, ಜೂನ್ 16 ರಿಂದ ನಗರದಲ್ಲಿ ಬೈಕ್ ಟ್ಯಾಕ್ಸಿ ಸೇವೆ ನಿಷೇಧಿಸಲ್ಪಟ್ಟ ನಂತರ, ಸರ್ಕಾರ ಆಟೋ ದರ ಏರಿಕೆಗೆ ಹಸಿರು ನಿಶಾನೆ ತೋರಿಸಿತು.
ವಾಸ್ತವವಾಗಿ, ಕಳೆದ 11 ವರ್ಷಗಳಲ್ಲಿ ಬೆಂಗಳೂರು ನಗರದಲ್ಲಿ ಆಟೋ ರಿಕ್ಷಾ ದರಗಳನ್ನು ಕೇವಲ ಎರಡು ಬಾರಿ ಪರಿಷ್ಕರಿಸಲಾಗಿದೆ. 2021ರ ನವೆಂಬರ್‌ನಲ್ಲಿ ನಡೆದ ಬದಲಾವಣೆ ಬಳಿಕ ಇದೀಗ ಮರುಬಾರಿಗೆ ದರ ಹೆಚ್ಚಳ ನಡೆಯುತ್ತಿದೆ. ಖರ್ಚುಗಳ ಏರಿಕೆ, ಇಂಧನ ಬೆಲೆಗಳ ಭಾರೀ ಒತ್ತಡ, ಪಾಲಿಸಿಯ ಬದಲಾವಣೆ..ಎಲ್ಲವೂ ಸೇರಿ ಈ ಬದಲಾವಣೆ ಅಗತ್ಯವಾಯಿತು ಎಂಬ ಅಭಿಪ್ರಾಯವನ್ನು ಸರ್ಕಾರ ಹಂಚಿಕೊಂಡಿದೆ.


Click it and Unblock the Notifications