ಬೆಂಗಳೂರಿನ ನಮ್ಮ ಮೆಟ್ರೋ ರೈಲು ನಿಗಮ, ನಗರದಲ್ಲಿ ಸಾರಿಗೆ ವ್ಯವಸ್ಥೆಯನ್ನು ಸುಧಾರಿಸಲು ನಾನಾ ಪ್ರಯತ್ನ ಮಾಡುತ್ತಿದೆ. ಇದರ ಭಾಗವಾಗಿ ಮೆಟ್ರೋ ಮಾರ್ಗದ ವಿಸ್ತರಣೆಯನ್ನು ಕೂಡ ಕೈಗೊಂಡಿದೆ. ಈಗಾಗಲೇ ಬೆಂಗಳೂರಿನಲ್ಲಿ ಕಾರ್ಯ ನಿರ್ವಹಿಸುತ್ತಿರುವ ನಮ್ಮ ಮೆಟ್ರೋ ಸೀಮಿತ ವ್ಯಾಪ್ತಿಯಲ್ಲಿದೆ. ಇದು ನಗರದ ಹೊರ ವಲಯ ಪ್ರದೇಶಗಳಿಗೆ, ಸರಿಯಾದ ಸಂಪರ್ಕ ನೀಡಿಲ್ಲ. ಹೀಗಾಗಿ ಹೊಸದಾಗಿ 8 ಮಾರ್ಗಗಳ ಮೆಟ್ರೋ ವಿಸ್ತರಣೆಗೆ ಯೋಜನೆ ರೂಪಿಸಲಾಗಿದೆ. ಈ ಹೊಸ ಎಂಟು ಮಾರ್ಗಗಳ ವಿಸ್ತರಣೆಗೆ ಕಾರ್ಯ ಸಾಧ್ಯತಾ ಅಧ್ಯಯನ ನಡೆಯಬೇಕಿದ್ದು, ಅದು 2025ರ ಜುಲೈ ವೇಳೆಗೆ ಪೂರ್ಣಗೊಳ್ಳಲಿದೆ ಎನ್ನಲಾಗುತ್ತಿದೆ.

ಹೌದು, ಬೆಂಗಳೂರು ಮೆಟ್ರೋ ವಿಸ್ತರಣೆಗೆ 197 ಕಿಮೀ ಕಾರ್ಯಸಾಧ್ಯತಾ ಅಧ್ಯಯನವನ್ನು ಕೈಗೊಳ್ಳಲಾಗಿದೆ. ಈ ಅಧ್ಯಯನವನ್ನು 2025ರ ಜುಲೈ ವೇಳೆಗೆ ಅಂತಿಮಗೊಳಿಸಿ, ಕರ್ನಾಟಕ ಸರ್ಕಾರಕ್ಕೆ ಮೌಲ್ಯಮಾಪನಕ್ಕಾಗಿ ಸಲ್ಲಿಸುವ ಹಾದಿಯಲ್ಲಿದೆ ಬಿಎಂಆರ್‍ಸಿಎಲ್. ಈ ಅಧ್ಯಯನದ ಮುಖ್ಯ ಉದ್ದೇಶ ಈ ಮಾರ್ಗಗಳ ಆರ್ಥಿಕ, ತಾಂತ್ರಿಕ, ಮತ್ತು ಪರಿಸರ ಸಂಬಂಧಿತ ಉಪಯುಕ್ತತೆ ಅಂದಾಜು ಮಾಡುವುದಾಗಿದೆ. ಅಂದಹಾಗೆ ಬಜೆಟ್‌ನಲ್ಲಿ ಸಿಎಂ ಸಿದ್ದರಾಮಯ್ಯ ಅವರು ಇತ್ತೀಚೆಗೆ ವಿಮಾನ ನಿಲ್ದಾಣ ಮಾರ್ಗದ ದೇವನಹಳ್ಳಿ ವಿಸ್ತರಣೆ ಸೇರಿದಂತೆ ಎಂಟು ಪ್ರಮುಖ ಕಾರಿಡಾರ್‌ಗಳಲ್ಲಿ ಕಾರ್ಯಸಾಧ್ಯತಾ ಅಧ್ಯಯನವನ್ನು ಘೋಷಿಸಿದ್ದರು. ಪ್ರಸ್ತುತ ಅದರ ಕಾರ್ಯಸಾಧ್ಯತಾ ಅಧ್ಯಯನ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇನ್ನು ನಮ್ಮ ಮೆಟ್ರೋ ಯೋಜನೆಯ ಯಶಸ್ವು ಅವಲಂಬಿಸಿರುವ ಪ್ರಮುಖ ಹಂತವೇ ಕಾರ್ಯಸಾಧ್ಯತಾ ಅಧ್ಯಯನ. ಈ ಅಧ್ಯಯನದಲ್ಲಿ ಮೆಟ್ರೋ ಮಾರ್ಗಗಳನ್ನು ವಿಸ್ತರಿಸುವುದಕ್ಕೂ ಮುನ್ನ, ಅವು ಆರ್ಥಿಕವಾಗಿ, ತಾಂತ್ರಿಕವಾಗಿ ಮತ್ತು ಪರಿಸರದ ದೃಷ್ಟಿಯಿಂದ ಅನುಕೂಲಕರವೋ ಅಲ್ಲವೋ ಎಂಬುದನ್ನು ಮೌಲ್ಯಮಾಪನ ಮಾಡಲಾಗುತ್ತದೆ. ವಿಸ್ತರಣೆಯಾಗುವ ಈ ಹೊಸ ಮಾರ್ಗಗಳು ಕೇವಲ ಬೆಂಗಳೂರಿನೊಳಗೆ ಮಾತ್ರ, ಬೆಂಗಳೂರು ಹೊರವಲಯ ಹಾಗೂ ಅದರ ಸುತ್ತ-ಮುತ್ತಲಿನ ನಗರ ಪ್ರದೇಶಗಳಿಗೆ ವಿಸ್ತರಿಸಲು ಸಹಾಯ ಮಾಡಲಿವೆ ಎನ್ನಲಾಗಿದೆ. ಇದರಿಂದ ದೈನಂದಿನ ಸಂಚಾರವೂ ಕಡಿಮೆಯಾಗಲಿದೆ. ಇದಿಷ್ಟೇ ಅಲ್ಲ ಕೈಗಾರಿಕಾ ಪ್ರದೇಶಗಳು ಮತ್ತು ವಾಣಿಜ್ಯ ಕೇಂದ್ರಗಳಿಗೆ ಉತ್ತಮ ಸಂಪರ್ಕವೂ ಲಭ್ಯವಾಗುತ್ತದೆ ಎನ್ನಲಾಗಿದೆ.
ಕಾರ್ಯಸಾಧ್ಯತಾ ಅಧ್ಯಯನದಲ್ಲಿರುವ ಹೊಸ ಮಾರ್ಗಗಳು:
1.ಚಲ್ಲಘಟ್ಟ-ಬಿಡದಿ ಮಾರ್ಗ 15 ಕಿಮೀ
2.ರೇಷ್ಮೆಸಂಸ್ಥೆ-ಹಾರೋಹಳ್ಳಿ ಮಾರ್ಗ 24 ಕಿಮೀ
3.ಕಾಳೇನ ಅಗ್ರಹಾರ - ಬನ್ನೇರುಘಟ್ಟ-ಜಿಗಣಿ - ಆನೇಕಲ್ - ಅತ್ತಿಬೆಲೆ - ಸರ್ಜಾಪುರ - ವರ್ತೂರು - ಕಾಡುಗೋಡಿ ಮಾರ್ಗದ 68 ಕಿಮೀ
4.ಬೊಮ್ಮಸಂದ್ರ- ಅತ್ತಿಬೆಲೆ ಮಾರ್ಗದಲ್ಲಿ 11 ಕಿಮೀ
5.ಮಾದಾವರ-ತುಮಕೂರು ಮಾರ್ಗದಲ್ಲಿ 52.41 ಕಿಮೀ)
6.ಕಡಬಗೆರೆ-ತಾವರೆಕೆರೆ ಮಾರ್ಗದಲ್ಲಿ6 ಕಿಮೀ
7.ದೊಡ್ಡಜಾಲ - ದೇವನಹಳ್ಳಿ ಮಾರ್ಗದಲ್ಲಿ 6 ಕಿಮೀ
8.ಕೆ.ಆರ್. ಪುರಂ - ಹೊಸಕೋಟೆ ಮಾರ್ಗದಲ್ಲಿ 15 ಕಿಮೀ
ಈ ಮೇಲಿನ ಹೊಸ ಕಾರಿಡಾರ್‍ಗಳಲ್ಲಿ ಕಾರ್ಯಸಾಧ್ಯತಾ ಅಧ್ಯಯನ ನಡೆಯಲಿದ್ದು, ಇವುಗಳು ಅಲ್ಲವೋ ಎಂದು ಪರಿಶೀಲನೆ ನಡೆಸಲಾಗುತ್ತಿದೆ. ಈ ಹೊಸ ಕಾರಿಡಾರ್‍ಗಳಲ್ಲಿ ಹೆಚ್ಚಿನವು ನಗರ ಮಿತಿಯನ್ನು ಮೀರಿದೆ. ಅಂದರೆ ಕನಕಪುರ ತಾಲ್ಲೂಕಿನ ಹಾರೋಹಳ್ಳಿ, ರಾಮನಗರ ಜಿಲ್ಲೆಯ ಬಿಡದಿ, ಬೆಂಗಳೂರು ಗ್ರಾಮಾಂತರ ತಾಲ್ಲೂಕಿನ ದೇವನಹಳ್ಳಿ ಮತ್ತು ರಾಜ್ಯದ ಕಾಂಗ್ರೆಸ್ ಸರ್ಕಾರದ ಅನೇಕ ಸಚಿವರು ಪ್ರತಿಪಾದಿಸಿದ ತುಮಕೂರು ಈ ಮೆಟ್ರೋ ಮಾರ್ಗಗಳ ವಿಸ್ತರಣೆಗೆ ಒಳಗೊಂಡಿವೆ ಎನ್ನಲಾಗಿದೆ. ಕಾಂಗ್ರೆಸ್‌ನ ಅನೇಕ ಸಚಿವರು ಪ್ರತಿನಿಧಿಸುವ ಪ್ರದೇಶಗಳಿಗೆ ಈ ಪ್ರಯೋಜನ ನೀಡಲಾಗುತ್ತಿದೆ ಎಂದು ಕೇಳಿಬರುತ್ತಿದೆ. ಹೀಗಾಗಿ ವಿರೋಧ ಪಕ್ಷ ಬಿಜೆಪಿ ವಿರೋಧ ವ್ಯಕ್ತಪಡಿಸುತ್ತಿದೆ.
ಇನ್ನು ಮೆಟ್ರೋ ಮಾರ್ಗ ಬಿಡದಿ ಮತ್ತು ಕನಕಪುರಕ್ಕೆ ವಿಸ್ತರಣೆಯಾಗಬೇಕೆಂಬುದು, ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಪ್ರತಿಪಾದನೆ. ಏಕೆಂದರೆ ಈ ಒಂದು ಕ್ರಮದಿಂದ ಕೈಗಾರಿಕಾ ಬೆಳವಣಿಗೆಗೆ ಉತ್ತೇಜನ ನೀಡಿದಂತಾಗುತ್ತದೆ ಎಂಬುದು ಅವರ ವಾದ. ಅದೇ ರೀತಿ, ಕರ್ನಾಟಕದ ಗೃಹ ಸಚಿವ ಜಿ. ಪರಮೇಶ್ವರ ಅವರು ಮೆಟ್ರೋ ಜಾಲವನ್ನು ತುಮಕೂರಿಗೆ ವಿಸ್ತರಿಸಬೇಕೆಂದು ಒತ್ತಾಯಿಸಿದ್ದಾರೆ. ಕಾರಣ, ತುಮಕೂರು ಬೆಂಗಳೂರು ಪಕ್ಕದಲ್ಲೇ ಇದೆ. ತುಮಕೂರಿನಿಂದ ಬೆಂಗಳೂರಿಗೆ ಪ್ರತಿದಿನ ಟ್ರಾವೆಲ್ ಮಾಡುವವರು ಸಾಕಷ್ಟು ಮಂದಿ ಇದ್ದಾರೆ ಎನ್ನಲಾಗಿದೆ. ಇದಕ್ಕಾಗಿಯೇ ಮೆಟ್ರೋ ಮಾರ್ಗ ತುಮಕೂರಿಗೂ ಬೇಕು ಎಂಬುದು ಡಾ. ಜಿ.ಪರಮೇಶ್ವರ್ ಅವರ ಒತ್ತಾಯ. ಇತ್ತ ದೇವನಹಳ್ಳಿಯನ್ನು ಹಿರಿಯ ಕಾಂಗ್ರೆಸ್ ನಾಯಕ ಮತ್ತು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್. ಮುನಿಯಪ್ಪ ಪ್ರತಿನಿಧಿಸುತ್ತಾರೆ. ಆದರೆ ಬಿಜೆಪಿ ಸಂಸದರಾದ ತೇಜಸ್ವಿ ಸೂರ್ಯ ಮತ್ತು ಪಿಸಿ ಮೋಹನ್ ಅವರು ನಮ್ಮ ಮೆಟ್ರೋ ನಗರ ಮಿತಿಗೆ ಸೀಮಿತವಾಗಿರಬೇಕು ಎಂದು ವಾದಿಸಿದ್ದಾರೆ.
ಹೌದು, ಮೆಟ್ರೋ ಮಾರ್ಗ ಸೀಮಿತವಾಗಿರಬೇಕೆಂದು ಸಂಸದ ತೇಜಸ್ವಿ ಸೂರ್ಯ ಮತ್ತು ಪಿಸಿ ಮೋಹನ್ ವಾದಿಸುತ್ತಿರುವುದೇಕೆಂದರೆ, ಮೆಟ್ರೋ ಮಾರ್ಗವು ದುಬಾರಿ ಆಯ್ಕೆಯಾಗಿದೆ ಮತ್ತು ನಗರದ ಹೊರಗಿನ ಪ್ರದೇಶಗಳಿಗೆ ಉಪನಗರ ರೈಲು ಮತ್ತು ವೃತ್ತಾಕಾರದ ರೈಲು ಸೇವೆ ಸಲ್ಲಿಸಬಹುದು ಎಂಬುದು ಅವರ ವಾದವಾಗಿದೆ. ಅಂದರೆ ₹23,000 ಕೋಟಿ ಅಂದಾಜು ವೆಚ್ಚದಲ್ಲಿ 287 ಕಿಲೋಮೀಟರ್ ವೃತ್ತಾಕಾರದ ರೈಲು ಜಾಲವನ್ನು ದೇವನಹಳ್ಳಿ, ದೊಡ್ಡಬಳ್ಳಾಪುರ ಮತ್ತು ಮಾಲೂರು ಸೇರಿದಂತೆ ನಗರದ ಹೊರವಲಯದ ಪ್ರಮುಖ ಪ್ರದೇಶಗಳನ್ನು ಸಂಪರ್ಕಿಸಲು ವಿನ್ಯಾಸಗೊಳಿಸಲಾಗಿದೆ. ಇದರಿಂದಾಗಿ ಒಟ್ಟಾರೆ ಚಲನಶೀಲತೆಯನ್ನು ಹೆಚ್ಚಿಸುತ್ತದೆ ಎನ್ನುವುದು ಅವರ ವಾದವಾಗಿದೆ.
ಇನ್ನು ಈ ಹೊಸ ಮಾರ್ಗಗಳ ವಿಸ್ತರಣೆಗೆ ಅನುಮತಿ ಸಿಕ್ಕತೆ, ಮೆಟ್ರೋ ಜಾಲ ಗಣನೀಯವಾಗಿ ಹೆಚ್ಚಾಗುತ್ತದೆ. ಹಾಗೆಯೇ ಮುಂಬರುವ ವರ್ಷಗಳಲ್ಲಿ ಮೆಟ್ರೋ ಮಾರ್ಗದ ಒಟ್ಟು ಉದ್ದ 350 ಕಿ.ಮೀ.ಗೆ ತಲುಪಲಿದೆ. ಪ್ರಸ್ತಾವಿತ ಜಾಲದ ಸರಿಸುಮಾರು ಶೇ. 50 ರಷ್ಟು, ಅಂದರೆ ಸುಮಾರು 95 ಕಿ.ಮೀ. ನಿಂದ 100 ಕಿ.ಮೀ.ವರೆಗೂ ಅಭಿವೃದ್ಧಿಗಾಗಿ ಆಯ್ಕೆಯಾಗಲಿದೆ ಎಂದು ಅಧಿಕಾರಿಗಳು ನಿರೀಕ್ಷಿಸಿದ್ದಾರೆ.
ಇನ್ನು ಈ ಕಾರ್ಯಸಾಧ್ಯತಾ ಅಧ್ಯಯನ ಒಂದು ವ್ಯಾಪಕವಾದ ವ್ಯಾಯಾಮ ಎನ್ನಬಹುದಾಗಿದೆ. ಇಲ್ಲಿ ಸಂಚಾರ ಹರಿವಿನ ಮೌಲ್ಯಮಾಪನಗಳು, ಮೆಟ್ರೋ ನಿಲ್ದಾಣಗಳ ಸ್ಥಳ ಯೋಜನೆ ಹಾಗೂ ವೆಚ್ಚದ ಮೌಲ್ಯಮಾಪನ, ಸುಸ್ಥಿರತೆಯ ಪರಿಗಣನೆ ಸೇರಿ ಹಲವು ಪ್ರಮುಖ ಅಂಶಗಳನ್ನು ಪರಿಶೀಲಿಸಬೇಕಾಗುತ್ತದೆ. ಈ ಮೆಟ್ರೋ ಮಾರ್ಗ ವಿಸ್ತರಣೆ ಬೆಂಗಳೂರಿನ ದೀರ್ಘಕಾಲೀನ ಚಲನಶೀಲತೆಯ ಅಗತ್ಯಗಳನ್ನು ಪೂರೈಸುತ್ತದೆ. ಜೊತೆಗೆ ಪ್ರಯಾಣಿಕರ ಅನುಕೂಲತೆ ಮತ್ತು ದಕ್ಷತೆಯನ್ನು ಸುಧಾರಿಸುತ್ತದೆ ಎಂದು ಖಚಿತಪಡಿಸಿಕೊಳ್ಳುವುದು ನಮ್ಮ ಗುರಿಯಾಗಿದೆ ಎಂಬುದು, ಬಿಎಂಆರ್‌ಸಿಎಲ್‌ನ ಹಿರಿಯ ಅಧಿಕಾರಿಯೊಬ್ಬರ ಅಭಿಪ್ರಾಯ.
ಇನ್ನು ಮೆಟ್ರೋ ಮಾರ್ಗ ವಿಸ್ತರಣೆಯ ಕಾರ್ಯಸಾಧ್ಯತಾ ಅಧ್ಯಯನ ಪೂರ್ಣಗೊಳಿಸುವುದು, ಈ ಯೋಜನೆಯ ಆರಂಭಿಕ ಹಂತವಾಗಿದೆ ಎಂದು ಬಿಎಂಆರ್‍ಸಿಎಲ್ ಅಧಿಕಾರಿಗಳು ಹೇಳಿದ್ದಾರೆ. ಅಧ್ಯಯನವನ್ನು ನಡೆಸಿ ಮೌಲ್ಯಮಾಪನಕ್ಕಾಗಿ ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಿದ ನಂತರ, ರಾಜ್ಯ ಸರ್ಕಾರವು ಸಂಶೋಧನೆಗಳನ್ನು ಪರಿಶೀಲಿಸಿ ವಿವರವಾದ ಯೋಜನಾ ವರದಿ ಹಂತಕ್ಕೆ ಮುಂದುವರಿಯುವ ಮಾರ್ಗಗಳನ್ನು ನಿರ್ಧರಿಸುತ್ತದೆ. ಹಾಗೂ ನಗರದಲ್ಲಿ ಭೂಸ್ವಾಧೀನ, ಪರಿಸರ ಅನುಮೋದನೆಗಳು, ಸಮಗ್ರ ಎಂಜಿನಿಯರಿಂಗ್ ಸಮೀಕ್ಷೆಗಳು ಮತ್ತು ಹಣಕಾಸು ಯೋಜನೆಗಳು ಕೂಡ ಸೇರಿವೆ. ಇವುಗಳೆಲ್ಲ ಮುಗಿದ ನಂತರ ನಿರ್ಮಾಣ ಮತ್ತು ಅನುಷ್ಠಾನದತ್ತ ಸಾಗುತ್ತದೆ ಎನ್ನಲಾಗಿದೆ.
ಅಂದಹಾಗೆ ಮೆಟ್ರೋ ಹೊಸ 8 ಮಾರ್ಗಗಳ ಕಾರ್ಯಸಾಧ್ಯತಾ ಅಧ್ಯಯನ ನಗರ ಚಲನಶೀಲತೆ ಮತ್ತು ಸಂಪರ್ಕ ಸುಧಾರಣೆಯತ್ತ ಒಂದು ಪ್ರಮುಖ ಹಂತವಾಗಿದೆ. ಈ ವಿಸ್ತರಣೆಗಳು ಕಾರ್ಯಗತಗೊಂಡರೆ, ಬೆಂಗಳೂರು ನಗರ ಮಿತಿಗಳನ್ನು ಮೀರಿ ವಿವಿಧ ಕೈಗಾರಿಕಾ ಮತ್ತು ಉಪನಗರ ಪ್ರದೇಶಗಳಿಗೆ ಮೆಟ್ರೋ ಸಂಪರ್ಕ ಹೆಚ್ಚಿಸಲಿದೆ. ಇದರಿಂದ ಸಂಚಾರ ದಟ್ಟಣೆ ಕಡಿಮೆಯಾಗುವುದು, ಉದ್ಯೋಗಾವಕಾಶಗಳು ಹೆಚ್ಚಾಗುವುದು, ಕೈಗಾರಿಕಾ ಬೆಳವಣಿಗೆಗೆ ಉತ್ತೇಜನ ದೊರಕುವುದು, ಹಾಗೂ ಬೆಂಗಳೂರು ಮೆಟ್ರೋ ಜಾಲ 350 ಕಿಮೀ ದಾಟುವ ಸಾಧ್ಯತೆ ಇದೆ.


Click it and Unblock the Notifications