ಬೆಂಗಳೂರು ಮೆಟ್ರೋ 50 ಮೆಟ್ರೋ ಚಾಲಕ ಹುದ್ದೆಗಳ ನೇಮಕಾತಿಗೆ ಹೊರಡಿಸಿದ್ದ ಅಧಿಸೂಚನೆಯನ್ನು ಹಿಂಪಡೆಯಲು ನಿರ್ಧರಿಸಿದೆ. ಕನ್ನಡ ಪರ ಸಂಘಟನೆಗಳ ತೀವ್ರ ವಿರೋಧದ ನಂತರ ಈ ಬೆಳವಣಿಗೆ ಕಂಡುಬಂದಿದ್ದು, ಕನ್ನಡ ಪರ ಸಂಘಟನೆಗಳ ಹೋರಾಟಕ್ಕೆ ಸಿಕ್ಕ ಜಯವಾಗಿದೆ.

ಗುತ್ತಿಗೆ ಆಧಾರದ ಮೇಲೆ ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್ (BMRCL) 50 ಮೆಟ್ರೋ ಚಾಲಕ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿತ್ತು. ಗುತ್ತಿಗೆ ಆಧಾರದ ಮೇಲೆ ನೇಮಕಾತಿ ಪ್ರಕ್ರಿಯೆ ಜಾರಿಯಾಗುತ್ತಿದ್ದರೂ, ಇದರಲ್ಲಿ ಕನ್ನಡಿಗರನ್ನು ಕಡೆಗಣಿಸಲಾಗಿದೆ ಎಂಬ ಆರೋಪಗಳು ಕೇಳಿಬಂದಿದ್ದವು. ಈ ಆರೋಪಗಳು ಹೋರಾಟದ ಸ್ವರೂಪ ಕೂಡ ಪಡೆದಿತ್ತು. ಇದೀಗ ಅದರ ಪರಿಣಾಮದಿಂದ ಬಿಎಂಆರ್‍ಸಿಎಲ್ ನೇಮಕಾತಿಗೆ ಹೊರಡಿಸಿದ್ದ ಅಧಿಸೂಚನೆಯನ್ನು ಹಿಂಪಡೆಯುವುದಾಗಿ ಘೋಷಿಸಿದೆ.
ಕನ್ನಡಿಗರಿಗೆ ಯಾಕೆ ಅವಕಾಶ ಇರಲಿಲ್ಲ..?
ಇನ್ನು BMRCL ಈ ಹಿಂದೆ ಹೊರಡಿಸಿದ್ದ ಅಧಿಸೂಚನೆಯಲ್ಲಿ, ಮೆಟ್ರೋ ಚಾಲಕ ಹುದ್ದೆಗೆ ಕನಿಷ್ಟ ಶೈಕ್ಷಣಿಕ ಅರ್ಹತೆ ಇದ್ದರೂ, ಮೂರು ವರ್ಷಗಳ ಮೆಟ್ರೋ ಚಾಲನಾ ಅನುಭವವನ್ನು ಕಡ್ಡಾಯವಾಗಿ ಇರಬೇಕು ಎಂಬ ನಿಯಮ ಮಾಡಲಾಗಿತ್ತು. ಆದರೆ ಕನ್ನಡಿಗರಿಗೆ ಮೊದಲು ರೈಲು ಚಾಲನಾ ತರಬೇತಿ ಪಡೆಯಲು ಅವಕಾಶವೇ ಇರಲಿಲ್ಲ. ಹೀಗಾಗಿ ಬಿಎಂಆರ್‍ಸಿಎಲ್‌ನ ಈ ನಿರ್ಧಾರದಿಂದಾಗಿ ಬೆಂಗಳೂರಿನಲ್ಲಿ ಕನ್ನಡಿಗರು ಈ ನೇಮಕಾತಿಯಿಂದ ಹೊರಗುಳಿಯಬೇಕಾಗಿತ್ತು. ಈ ನಿಯಮವು ಹೈದರಾಬಾದ್, ದೆಹಲಿ, ಮುಂಬೈ, ಚೆನ್ನೈ ಮೊದಲಾದ ನಗರಗಳಲ್ಲಿ ಮೆಟ್ರೋ ರೈಲು ನಿರ್ವಹಣೆ ಮಾಡಿರುವ ಅಭ್ಯರ್ಥಿಗಳಿಗೆ ಮಾತ್ರ ಅನುಕೂಲವಾಗುವಂತೆ ಮಾಡಲಾಗಿತ್ತು. ಆದ್ದರಿಂದ ಕನ್ನಡ ಪರ ಹೋರಾಟಗಾರರು ಸಿಟ್ಟಿಗೆದ್ದರಿದ್ದರು. ಈ ಅವ್ಯಾಹತ ನೀತಿಯ ವಿರುದ್ಧ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮತ್ತು ಕನ್ನಡ ಪರ ಸಂಘಟನೆಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿವೆ. ಕರ್ನಾಟಕದಲ್ಲಿ ನಡೆದುವಂತಹ ಮೆಟ್ರೋ ನೇಮಕಾತಿಯಲ್ಲಿ ಕನ್ನಡಿಗರಿಗೆ ಸೂಕ್ತ ಪ್ರಾಮುಖ್ಯತೆ ನೀಡದೆ, ಬಾಹ್ಯರಾಜ್ಯ ಅಭ್ಯರ್ಥಿಗಳಿಗೆ ಅವಕಾಶ ನೀಡಲು ಈ ನಿಯಮಗಳು ರೂಪಗೊಂಡಿವೆ ಎಂದು ಅವರು ಆರೋಪಿಸಿದರು.
ಕನ್ನಡ ಪರ ಹೋರಾಟ ಮತ್ತು ಸರ್ಕಾರದ ಮಧ್ಯಸ್ಥಿಕೆ:
ಇನ್ನು ಬಿಎಂಆರ್‍ಸಿಎಲ್ ಹೊರಡಿಸಿದ್ದ ಆದೇಶವನ್ನು ತಕ್ಷಣವೇ ಹಿಂಪಡೆಯಬೇಕು ಎಂದು, ಕನ್ನಡ ಪರ ಸಂಘಟನೆಗಳು ಒತ್ತಾಯಿಸಿದ್ದವು. ಹಾಗೆಯೇ BMRCL ಕಚೇರಿಯ ಎದುರು ಪ್ರತಿಭಟನೆ ನಡೆಸಿದವು. ಈ ಪ್ರತಿಭಟನೆಗೆ ಭದ್ರತಾ ದೃಷ್ಟಿಯಿಂದ ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದರು. ಇದರ ನಡುವೆ BMRCL ವ್ಯವಸ್ಥಾಪಕ ನಿರ್ದೇಶಕ ಮಹೇಶ್ವರ ರಾವ್ ಈ ಕುರಿತು ಸ್ಪಷ್ಟನೆ ನೀಡಿದ್ದಾರೆ. ಸರ್ಕಾರದ ನಿಯಮಗಳನ್ನು ಪಾಲಿಸಲು ನಾವು ಬದ್ದ. ಹಳದಿ ಮಾರ್ಗದ ಸಂಚಾರಕ್ಕೆ ಸಂಬಂಧಿಸಿದಂತೆ ಚಾಲಕ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದೇವೆ. ಅಗತ್ಯವಿದ್ದರೆ, ಈ ಪ್ರಕ್ರಿಯೆಯನ್ನು ಸರಿಪಡಿಸುತ್ತೇವೆ ಎಂದು ತಿಳಿಸಿದ್ದಾರೆ.
ಇನ್ನು ಕನ್ನಡಪರ ಹೋರಾಟಗಾರರು ನಡೆಸಿದ ಪ್ರತಿಭಟನೆಯ ತೀವ್ರತೆಯನ್ನು, ಗಮನಿಸಿ ಡಿಸಿಎಂ ಹಾಗೂ ಬೆಂಗಳೂರು ಅಭಿವೃದ್ಧಿ ಸಚಿವರಾದ ಡಿ.ಕೆ. ಶಿವಕುಮಾರ್ ಅವರು ಹಸ್ತಕ್ಷೇಪ ಮಾಡಿದರು. ನಮ್ಮ ಮೆಟ್ರೋಗೆ ನಮ್ಮ ಜನ. ಕನ್ನಡಿಗರಿಗೆ ನ್ಯಾಯ ಮತ್ತು ಪ್ರಾಮುಖ್ಯತೆ ನೀಡಲು ನಾವು ಬದ್ದ, ಎಂಬ ಮಾತುಗಳೊಂದಿಗೆ ಈ ನೇಮಕಾತಿ ಅಧಿಸೂಚನೆಯನ್ನು ಹಿಂತೆಗೆದುಕೊಳ್ಳುವಂತೆ BMRCL ಗೆ ಸೂಚನೆ ನೀಡಿದ್ದಾರೆ.
ಇನ್ನು ಇದರಿಂದ ಕನ್ನಡಿಗರಿಗೆ ಬಿಎಂಆರ್‍ಸಿಎಲ್‌ನಲ್ಲಿ ಉದ್ಯೋಗ ಸಿಗಬೇಕೆಂಬ ಹೋರಾಟಕ್ಕೆ ಬಲ ಸಿಕ್ಕಂತಾಗಿದೆ. ಈ ನೇಮಕಾತಿ ಹಿಂತೆಗೆದುಕೊಳ್ಳುವ ಮೂಲಕ, ಸರ್ಕಾರ ಕನ್ನಡಿಗರ ಹಿತಾಸಕ್ತಿಗಳನ್ನು ಪರಿಗಣಿಸುತ್ತಿದೆ. ಹಾಗೂ ಮುಂದಿನ ನೇಮಕಾತಿಯಲ್ಲಿ ಕನ್ನಡಿಗರಿಗೆ ಪ್ರತ್ಯೇಕ ಮೀಸಲಾತಿ ನೀಡುವ ಸಾಧ್ಯತೆ ಕೂಡ ಇದೆ. ಮೆಟ್ರೋದಲ್ಲಿ ಕಾರ್ಯನಿರ್ವಹಿಸುವ ಉದ್ಯೋಗಿಗಳಿಗೆ ಕನ್ನಡ ತಿಳಿದಿರಬೇಕು ಎಂಬ ನಿಯಮ ಬಿಗಿಗೊಳಿಸುವ ಸಾಧ್ಯತೆಯೂ ಇದೆ.


Click it and Unblock the Notifications