ಬೆಂಗಳೂರು ಜನರಿಗೆ ದೊಡ್ಡ ಶಾಕ್ ಎದುರಾಗಿದೆ..ಅದೇನೆಂದರೆ ಬೆಂಗಳೂರು ನಗರದಲ್ಲಿ ತ್ಯಾಜ್ಯ ನಿರ್ವಹಣಾ ಶುಲ್ಕ ಸಂಗ್ರಹಿಸಲು, ರಾಜ್ಯ ಸರ್ಕಾರ ಅನುಮೋದನೆ ನೀಡಿರುವುದರಿಂದ, ಮುಂಬರುವ ಏಪ್ರಿಲ್ 1ರಿಂದ ಆಸ್ತಿ ತೆರಿಗೆ ಹೆಚ್ಚಾಗುವ ಸಾಧ್ಯತೆಯಿದೆ. ಈ ನಿಯಮ ಬೆಂಗಳೂರು ಘನ ತ್ಯಾಜ್ಯ ನಿರ್ವಹಣಾ ಲಿಮಿಟೆಡ್ ನೀಡುವ ಸೇವೆಗಳಿಗೆ ಅನ್ವಯಿಸಿ, ಅದರ ಹೊಸ ಬಳಕೆದಾರರಿಗೆ ಶುಲ್ಕವನ್ನು ವಿಧಿಸಲಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಇನ್ನು ಈ ಹೊಸ ನಿಯಮದ ವಿರುದ್ಧ ಬೆಂಗಳೂರಿನ ಹಲವಾರು ನಾಗರಿಕರು ಟೀಕೆ ವ್ಯಕ್ತಪಡಿಸುತ್ತಿದ್ದಾರೆ. ಏಕೆಂದರೆ ಪ್ರತಿ ತಿಂಗಳು ಬಂತು ಎಂದರೆ ಆದಾಯಕ್ಕಿಂತ ಖರ್ಚೇ ಹೆಚ್ಚಾಗಿರುತ್ತದೆ. ಹೀಗಿರುವಾಗ ಇದು ಕೂಡ ಜನಸಾಮಾನ್ಯರ ಮೇಲೆ ಹೆಚ್ಚುವರಿ ಆರ್ಥಿಕ ಹೊರೆ ಹೇರಲಿದೆ ಎಂದು ಕಿಡಿ ಕಾರುತ್ತಿದ್ದಾರೆ.
ಇನ್ನೂ ಒಂದು ವಿಚಾರ ಗಮನಿಸಬಹುದಾದರೆ, ನಮ್ಮ ಮೆಟ್ರೋ ಟಿಕೆಟ್ ದರ ಹೆಚ್ಚಿಸಿದ ಒಂದು ತಿಂಗಳ ಅಂತರದಲ್ಲಿ, ಈ ಆಸ್ತಿ ತೆರಿಗೆ ಶುಲ್ಕ ಹೆಚ್ಚಳವಾಗಿದೆ. ಅಂದರೆ ಒಂದಾದ ನಂತರ ಮತ್ತೊಂದರ ಬೆಲೆ ಏರಿಕೆಯಾಗುತ್ತಲೇ ಇದೆ. ಇನ್ನು ಈ ಆಸ್ತಿ ತೆರಿಗೆಯನ್ನು ಪಾವತಿಸುತ್ತಿರುವ ಎಲ್ಲಾ ನಾಗರಿಕರಿಗೆ ಇದು ಅನ್ವಯವಾಗುತ್ತಿದೆ. ಅಲ್ಲದೇ ಅದು ಕಟ್ಟಡದ ವಿಸ್ತಾರವನ್ನು ಅವಲಂಬಿಸಿ ವಿಧಿಸಲಾಗುತ್ತದೆ. ಆರು ವಿಭಿನ್ನ ಶ್ರೇಣಿಗಳು ಇದರಲ್ಲಿ ಸೇರಿವೆ.
ತೆರಿಗೆ ಶುಲ್ಕ ಹೇಗಿರಲಿದೆ..?
600 ಚದರ ಅಡಿವರೆಗಿನ ಮನೆಗಳಿಗೆ ತಿಂಗಳಿಗೆ ₹10 ವಿಧಿಸಲಾಗುತ್ತದೆ. ಅಂದರೆ ವರ್ಷಕ್ಕೆ ವಾರ್ಷಿಕ ₹120 ವಿಧಿಸಲಾಗುತ್ತದೆ. 4,000 ಚದರ ಅಡಿಗಿಂತ ದೊಡ್ಡ ಕಟ್ಟಡಗಳಿಗೆ ₹400 ವಿಧಿಸಲಾಗುತ್ತದೆ. ಅಂದರೆ ವಾರ್ಷಿಕ ₹4,800 ಕಟ್ಟಬೇಕಾಗುತ್ತದೆ. ಇದು ವಾರ್ಷಿಕ ಆಸ್ತಿ ತೆರಿಗೆಯನ್ನು ಗಣನೀಯವಾಗಿ ಹೆಚ್ಚಿಸಲಿದೆ ಎನ್ನಲಾಗಿದೆ.
ನಗರಾಭಿವೃದ್ಧಿ ಇಲಾಖೆಯು ಈ ಬಳಕೆದಾರ ಶುಲ್ಕವನ್ನು ಬೆಂಗಳೂರಿನ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ವರದಿ ಸಲ್ಲಿಸುವ ಮೂಲಕ ಅನುಮೋದನೆ ನೀಡಿದೆ. ಆದರೆ, BSWML ಈಗಾಗಲೇ ಘನ ತ್ಯಾಜ್ಯ ನಿರ್ವಹಣಾ ಸೆಸ್ ಹೆಸರಿನಲ್ಲಿ ತೆರಿಗೆ ಸಂಗ್ರಹಿಸುತ್ತಿರುವುದರಿಂದ, ಈ ಹೊಸ ಬಳಕೆದಾರ ಶುಲ್ಕ ಅವಶ್ಯಕತೆ ಇಲ್ಲ ಎಂದು ಹಲವರು ಅಸಹಮತಿ ವ್ಯಕ್ತಪಡಿಸಿದ್ದಾರೆ.ಈ ಹೊಸ ನೀತಿಯ ಪ್ರಕಾರ, ಅಪಾರ್ಟ್‌ಮೆಂಟ್ ಸಂಕೀರ್ಣಗಳು ಅಥವಾ ದೊಡ್ಡ ವಾಣಿಜ್ಯ ಸಂಸ್ಥೆಗಳು ತ್ಯಾಜ್ಯ ಸಂಸ್ಕರಣೆಗೆಂದು ಅದರದ್ದೇ ಆದ ಯಾವುದೇ ನೋಂದಾಯಿತ ಏಜೆನ್ಸಿ ಹೊಂದಿಲ್ಲ. ತಮ್ಮದೇ ಆದ ನೋಂದಾಯಿತ ಏಜೆನ್ಸಿ ಹೊಂದಿಲ್ಲದಿದ್ದರೆ, ತ್ಯಾಜ್ಯ ನಿರ್ವಹಣೆಗೆ ಪ್ರತಿ ಕಿಲೋಗ್ರಾಂ ₹12 ಶುಲ್ಕ ವಿಧಿಸಲಾಗುತ್ತದೆ. ಇದು ದೊಡ್ಡ ವಾಣಿಜ್ಯ ಸಂಸ್ಥೆಗಳ ಮೇಲೆ ಹೆಚ್ಚು ಆರ್ಥಿಕ ಹೊರೆ ತರಲಿದೆ.
ಇನ್ನು ಇದನ್ನು ಕೆಲವರು ಅಬೈಜ್ಞಾನಿಕ ತೆರಿಗೆ ಅಂತಲೂ ಟೀಕಿಸುತ್ತಿದ್ದಾರೆ. ಅಂದರೆ ಈಗಾಗಲೇ ಸ್ವಚ್ಚ ಭಾರತ ಅಭಿಯಾನ ಮತ್ತು BBMP ದಿಂದ ತೆರಿಗೆ ಸಂಗ್ರಹಣೆಯಾಗಿದೆ. ಹಾಗೆಯೇ ಬೇರೆ ಬೇರೆ ನಗರಗಳಂತೆ ಬೆಂಗಳೂರಿನಲ್ಲಿ ತ್ಯಾಜ್ಯ ವಿಲೇವಾರಿ ವ್ಯವಸ್ಥೆ ಸುಧಾರಿಸಿದರೆ, ಈ ಹೊಸ ತೆರಿಗೆ ಅನಗತ್ಯ ಎಂಬ ಅಭಿಪ್ರಾಯಗಳೂ ವ್ಯಕ್ತವಾಗುತ್ತಿವೆ. ಅಲ್ಲದೇ ಮೆಟ್ರೋ ದರ ಏರಿಕೆ, ಪೆಟ್ರೋಲ್-ಡೀಸೆಲ್ ದರದ ಏರಿಕೆ, ಇನ್ನಷ್ಟು ತೆರಿಗೆ ಬಾಧ್ಯತೆಗಳು ಸೇರಿ ಜೀವನ ವೆಚ್ಚ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಆಸ್ತಿ ತೆರಿಗೆಯೊಂದಿಗೆ ಹೆಚ್ಚುವರಿ ಬಳಕೆದಾರ ಶುಲ್ಕ ವಸೂಲಿಕೆ ಸರಿಯಾದ ತೀರ್ಮಾನವೇ ಎಂದು ಪ್ರಶ್ನಿಸಿ ಕಿಡಿ ಕಾರುತ್ತಿದ್ದಾರೆ.
ಈ ಹೊಸ ನಿಯಮ ಒಂದು ರೀತಿ ಆದಾಯ ಸಂಗ್ರಹಣೆಯ ದಾರಿಯಾಗಿದೆ ಎಂದರೂ ತಪ್ಪಾಗಲ್ಲ. BSWML ಪ್ರಕಾರ ಈ ಬಳಕೆದಾರ ಶುಲ್ಕದಿಂದ ವರ್ಷಕ್ಕೆ ಸುಮಾರು ₹600 ಕೋಟಿ ರೂಪಾಯಿಗಳ ಆದಾಯ ನಿರೀಕ್ಷಿಸಲಾಗಿದೆ. ಆದರೆ, ಈ ಪ್ರಮಾಣ ಇನ್ನೂ ಹೆಚ್ಚಿರಬಹುದು, ಏಕೆಂದರೆ ಬೆಂಗಳೂರು ದಿನದಿಂದ ದಿನಕ್ಕೆ ವಿಸ್ತರಿಸುತ್ತಿದ್ದು, ತ್ಯಾಜ್ಯ ಉತ್ಪಾದನೆಯ ಪ್ರಮಾಣವೂ ಹೆಚ್ಚುತ್ತಿದೆ.
ಒಟ್ನಲ್ಲಿ ಬೆಂಗಳೂರು ನಗರದಲ್ಲಿ ಏಪ್ರಿಲ್ 1ರಿಂದ ಆಸ್ತಿ ತೆರಿಗೆ ಹೆಚ್ಚಳವಾಗುವ ಸಾಧ್ಯತೆಯಂತೂ ಇದೆ.ಅಧಿಕಾರಿಗಳು ತ್ಯಾಜ್ಯ ನಿರ್ವಹಣಾ ಬಳಕೆದಾರ ಶುಲ್ಕವನ್ನು ಹೊಸದಾಗಿ ವಿಧಿಸಲು ಅನುಮೋದನೆ ನೀಡಿದರೆ, 600 ಚದರ ಅಡಿವರೆಗಿನ ಮನೆಗಳಿಗೆ ₹10, 4,000 ಚದರ ಅಡಿಗಿಂತ ದೊಡ್ಡ ಕಟ್ಟಡಗಳಿಗೆ ₹400 ಮಾಸಿಕ ಶುಲ್ಕ ವಿಧಿಸಲಾಗುತ್ತದೆ. ಅಪಾರ್ಟ್‌ಮೆಂಟ್ ಮತ್ತು ವಾಣಿಜ್ಯ ಸಂಸ್ಥೆಗಳಿಗೆ ಹೆಚ್ಚುವರಿ ₹12 ಪ್ರತಿ ಕಿಲೋಗ್ರಾಂ ಶುಲ್ಕ ವಿಧಿಸಲಾಗುತ್ತದೆ. ಹಾಗೆಯೇ ಈ ಹೊಸ ಆರ್ಥಿಕ ಹೊರೆ ನಾಗರಿಕರಿಗೆ ಯಾವ ಮಟ್ಟದಲ್ಲಿ ಪರಿಣಾಮ ಬೀರುತ್ತದೆ ಎಂಬುದನ್ನು ಮುಂದಿನ ದಿನಗಳಲ್ಲಿ ಸ್ಪಷ್ಟವಾಗಲಿದೆ. ಬೆಂಗಳೂರು ವಾಸಿಗಳಿಗೆ ಈ ಬೆಳವಣಿಗೆ ತಲೆಯನೋವನ್ನು ತಂದಿರುವುದು ಖಚಿತ.


Click it and Unblock the Notifications