ಸಿಲಿಕಾನ್ ಸಿಟಿ ಬೆಂಗಳೂರು ಉದ್ಯಮಿಗಳ ತವರು..ಇಲ್ಲಿ ಇಲ್ಲ ಎನ್ನುವುದೇನೂ ಇಲ್ಲ. ಆದ್ರೆ ಒಂದೇ ಒಂದು ಬೇಸರ ಏನಂದ್ರೆ, ಬಾಡಿಗೆ ಕಟ್ಟಲು ಜೇಬು ಗಟ್ಟಿಯಾಗಿರಬೇಕಷ್ಟೇ. ಇತ್ತೀಚಿನ ಬಾಡಿಗೆ ದರಗಳಿಂದಾಗಿ ವಸತಿಗೆ ಹೋದರೆ ಆಘಾತದ ನಗರವೂ ಆಗಿದೆ! ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಒಂದು ಜಾಹೀರಾತು, ಬೆಂಗಳೂರಿನ ಬಾಡಿಗೆ ಸಂಸ್ಕೃತಿಯ ಬಗ್ಗೆ ತೀವ್ರ ಚರ್ಚೆಗೆ ಕಾರಣವಾಗಿದೆ.

ಕೆನಡಾದ ಡಿಜಿಟಲ್ ಕ್ರಿಯೇಟರ್ ಕ್ಯಾಲೆಬ್ ಫ್ರೈಸೆನ್ ಅವರು X ಖಾತೆಯಲ್ಲಿ ಹಂಚಿಕೊಂಡಿರುವ ಆ ಪೋಸ್ಟ್ ವೈರಲ್ ಫೀವರ್ ತರ ಹರಡಿದೆ. ಬೆಂಗಳೂರಿನ ಬೆನ್ನಿಗಾನ ಹಳ್ಳಿಯಲ್ಲಿರುವ ಒಂದು 4BHK ಸಂಪೂರ್ಣ ಸುಸಜ್ಜಿತ ಮನೆಗೆ ಮಾಸಿಕ 2.3 ರೂ. ಲಕ್ಷ ಬಾಡಿಗೆ ಇದೆ ಎಂಬ ಆಘಾತದ ಸುದ್ದಿ ಹಂಚಿಕೊಂಡಿದ್ದಾರೆ, ಅದಕ್ಕೆ 23 ರೂ. ಲಕ್ಷ ಭದ್ರತಾ ಠೇವಣಿಯ ಅಗತ್ಯವಿದೆ ಎಂದು ಉಲ್ಲೇಖಿಸಿದ್ದಾರೆ. ಅಂದರೆ 12 ತಿಂಗಳ ಬಾಡಿಗೆಯಷ್ಟೇ ಭದ್ರತಾ ಮೊತ್ತ.
ಜಾಗತಿಕ ಪ್ರಮಾಣದ ಹೋಲಿಕೆ:
ಕ್ಯಾಲೆಬ್ ಫ್ರೈಸೆನ್ ಈ ಬಾಡಿಗೆ ಮತ್ತು ಠೇವಣಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ, ಜಾಗತಿಕ ನಗರಗಳ ಮಾನದಂಡಗಳ ಜೊತೆಗೆ ಹೋಲಿಕೆ ಮಾಡಿದ್ದಾರೆ. ಅವರು ಹೈಲೈಟ್ ಮಾಡಿದಂತೆ:
- ನ್ಯೂಯಾರ್ಕ್ & ಟೊರೊಂಟೊ: ಸಾಮಾನ್ಯವಾಗಿ 1 ತಿಂಗಳ ಭದ್ರತಾ ಠೇವಣಿ
- ಸಿಂಗಪೂರ್: ವರ್ಷಕ್ಕೆ 1 ತಿಂಗಳ ಗುತ್ತಿಗೆ
- ಸ್ಯಾನ್ ಫ್ರಾನ್ಸಿಸ್ಕೋ: 2 ತಿಂಗಳ ಭದ್ರತಾ ಠೇವಣಿ
- ದುಬೈ: ವಾರ್ಷಿಕ ಬಾಡಿಗೆಯ 5%-10%
- ಲಂಡನ್: ಸುಮಾರು 6 ವಾರಗಳ ಭದ್ರತಾ ಠೇವಣಿ
ಈ ಪಟ್ಟಿಯಲ್ಲಿ ಬೆಂಗಳೂರು ಮಾತ್ರ 12 ತಿಂಗಳ ಭದ್ರತಾ ಠೇವಣಿಯನ್ನು ಕೇಳುತ್ತಿರುವುದು ವಿಶಿಷ್ಟ!
ಈ ಪೋಸ್ಟ್ ವೈರಲ್ ಆದ ನಂತರ, ಹಲವರು ಟ್ವೀಟ್‌ಗಳಿಗೆ ಪ್ರತಿಕ್ರಿಯೆ ನೀಡುತ್ತಾ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ. ಕೆಲವರು ಅದ್ವಿತೀಯ ದುರಾಸೆ ಎಂದು ಕಿಡಿ ಕಾರಿದ್ರೆ, ಇನ್ನೊಬ್ಬರು ಬಾಡಿಗೆದಾರರ ಮೇಲೆ ವಿಶ್ವಾಸವಿಲ್ಲದ ಸಂಸ್ಕೃತಿ ಕಾರಣವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ವಸತಿ ಆಧಾರಭೂತ ಅವಶ್ಯಕತೆ ಆಗಿದ್ದರೆ, ಬೆಲೆ ನಿಯಂತ್ರಣ ಇರಲೇಬೇಕು ಇನ್ನೊಬ್ಬರು ಒತ್ತಾಯಿಸಿದ್ದಾರೆ.
ವೈರಲ್ ಆದ ಆಸ್ತಿ ವಿವರ:
ವೈರಲ್ ಆದ ಆಸ್ತಿ 4,500 ಚದರ ಅಡಿಯಲ್ಲಿ ವಿಶಾಲವಾಗಿದ್ದು, ಸಂಪೂರ್ಣವಾಗಿ ಫರ್ನಿಚರ್‌ನೊಂದಿಗೆ ಬರುತ್ತದೆ. ಇದು ಬೆಂಗಳೂರಿನ ಪ್ರೀಮಿಯಂ ರೆಸಿಡೆನ್ಷಿಯಲ್ ವಲಯವೊಂದರಲ್ಲಿ ಇದೆ.
ವಾಸ್ತವಿಕತೆಗೆ ಹತ್ತಿರವೇ ಈ ಬೇಡಿಕೆ?
ಈ ಪ್ರಮಾಣದ ಠೇವಣಿಯನ್ನು ಕೆಲವು ಸ್ಥಳೀಯರು ಸಹ ಸಹಜವೆಂದು ಪರಿಗಣಿಸುತ್ತಿದ್ದಾರೆ. ಹೈ-ಎಂಡ್ ವಸತಿಗಳಲ್ಲಿ 5-6 ತಿಂಗಳ ಬಾಡಿಗೆಗಿಂತ ಹೆಚ್ಚಿನ ಭದ್ರತಾ ಠೇವಣಿ ಕೇಳುವ ಸಂದರ್ಭಗಳು ಹೆಚ್ಚಾಗಿವೆ. ಆದರೆ, ಒಂದು ಸಂಪೂರ್ಣ ವರ್ಷದ ಬಾಡಿಗೆಯನ್ನು ಭದ್ರತಾ ಠೇವಣಿಯಾಗಿ ಕೇಳುವುದು ಬಹುತೇಕ ಅಪರೂಪ.
ಬೆಂಗಳೂರು ನಗರದಲ್ಲಿ ವಸತಿಗಾಗಿ ಭಾರೀ ಹಣ ಹೂಡಬೇಕಾದ ಸ್ಥಿತಿ ಇದಾಗಿದೆ. ನೆಲೆಸಲು ಜಾಗ ಬೇಕಾದರೆ ಕೇವಲ ಮಾಸಿಕ ಬಾಡಿಗೆಗಷ್ಟೇ ಅಲ್ಲ, ಭಾರಿ ಠೇವಣಿಗೂ ಸಿದ್ಧರಾಗಬೇಕು. ಈ ಸಂಚಲನಕಾರಿ ಘಟನೆಯು ಈಗ ನಗರದಲ್ಲಿ ಬಾಡಿಗೆ ನೀತಿಗಳ ಪುನರ್‌ಚಿಂತನೆಗೆ ನಾಂದಿ ಹಾಡಿದಂತಾಗಿದೆ.


Click it and Unblock the Notifications