ಒಂದು ಕಂಪನಿ ಜನಪ್ರಿಯತೆ ಪಡೆಯಲು ಜಾಹೀರಾತು ತುಂಬಾ ಪ್ರಮುಖ ಪಾತ್ರ ವಹಿಸುತ್ತದೆ. ಗ್ರಾಹಕರನ್ನು ತನ್ನತ್ತ ಸೆಳೆಯಲು ಹಲವಾರು ಕಂಪನಿಗಳು ಜಾಹೀರಾತಿನ ಮೊರೆ ಹೋಗುತ್ತವೆ. ಸಾಮಾಜಿಕ ಜಾಲತಾಣದಲ್ಲಿ ಹೀಗೊಂದು ಜಾಹೀರಾತು ಸಿಕ್ಕಪಟ್ಟೆ ಸುದ್ದಿ ಮಾಡುತ್ತಿದೆ. ಅಷ್ಟಕ್ಕೂ ಈ ಜಾಹೀರಾತಿನಲ್ಲಿ ಅಂತಹದ್ದೇನಿದೆ ಗೊತ್ತಾ? ಅದನ್ನು ನೋಡಿದರೆ ನಿಮಗೆ ಹೀಗೂ ಜಾಹೀರಾತನ್ನು ನೀಡಬಹುದಾ ಅನ್ನೋ ಪ್ರಶ್ನೆ ಮೂಡುತ್ತದೆ. ಹಾಗಾದರೆ ಆ ಜಾಹೀರಾತು ಯಾವುದು? ಅದರಲ್ಲಿ ಏನಿದೆ? ಅದು ಸತ್ಯನಾ? ಸುಳ್ಳಾ? ಎಲ್ಲದರ ಬಗ್ಗೆ ಈಗ ತಿಳಿಯೋಣ.
ಪ್ರತಿಯೊಂದು ಬ್ರಾಂಡ್ ಕಂಪನಿಗಳು ತಮ್ಮ ಉತ್ಪನ್ನಗಳ ಬಗ್ಗೆ ಟಿವಿ ಹಾಗೂ ಸೋಶಿಯಲ್ ಮೀಡಿಯಾಗಳಲ್ಲಿ ಭಿನ್ನ ವಿಭಿನ್ನವಾದ ಜಾಹೀರಾತುಗಳನ್ನು ನೀಡುತ್ತವೆ. ಅದೇ ರೀತಿಯಲ್ಲಿ ಇಲ್ಲೊಂದು ರೆಸ್ಟೋರೆಂಟ್ ರಸ್ತೆ ಬದಿಯಲ್ಲಿ ಇರುವ ಬಹುದೊಡ್ಡ ಬಿಲ್ ಬೋರ್ಡ್‌ನಲ್ಲಿ ವಿಭಿನ್ನವಾಗಿ ಜಾಹೀರಾತನ್ನು ನೀಡಿದೆ. ಈ ಜಾಹೀರಾತು ಕ್ರಿಯೇಟಿವ್ 3D ಅಡ್ವರ್‌ಟೈಸ್‌ಮೆಂಟ್ ಆಗಿದೆ. ಈ ವಿಡಿಯೋವನ್ನು ಕಂಡು ಜನ ಬೆರಗಾಗಿದ್ದಾರೆ.

ಹೌದು... ಬೆಂಗಳೂರು ತಿಂಡೀಸ್ ಎಂಬ ರೆಸ್ಟೋರೆಂಟ್ ಈ ಕ್ರಿಯೇಟಿವ್ ಜಾಹೀರಾತನ್ನು ನೀಡಿದೆ. ಈ ಜಾಹೀರಾತಿನ ವಿಡಿಯೋದಲ್ಲಿ ಹೊಟೇಲ್ ಕೆಲಸಗಾರನೊಬ್ಬ ಬಿಸಿ ಬಿಸಿ ಚಹಾವನ್ನು ಗಾಜಿನ ಲೋಟಕ್ಕೆ ಸುರಿದು ಸರ್ವ್ ಮಾಡುತ್ತಾನೆ. ಈ ವೇಳೆ ಹಕ್ಕಿಗಳು ಹಾರಾಡುವುದನ್ನು ಕಾಣಬಹುದು. ಈ ದೃಶ್ಯ ಬಿಲ್ ಬೋರ್ಡ್ ಮೇಲೆ ಕಾಣಿಸುವ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋವನ್ನು ನೋಡಿ ಕೆಲವರು ಇದೊಂದು ನಕಲಿ ಅಂದರೆ ಇನ್ನೂ ಕೆಲವರು ಇದು ಅಸಲಿ ಎಂದಿದ್ದಾರೆ. ಕೆಲವರು ಇದು ನಕಲಿಯಂತೆ ಕಾಣಿಸುತ್ತಿಲ್ಲ ತುಂಬಾ ಅದ್ಬುತವಾಗಿದೆ ಎಂದು ಹೊಗಳಿದ್ದಾರೆ. ಹಾಗಾದರೆ ಇದು ಅಸಲಿನಾ? ನಕಲಿನಾ?
ವೈರಲ್ ಆದ ವಿಡಿಯೋದಲ್ಲಿ ಬೆಂಗಳೂರಿನ ಪ್ರಮುಖ ರಸ್ತೆಯೊಂದರ ಪಕ್ಕದ ಬೃಹತ್ ಬಿಲ್ ಬೋರ್ಡ್ ನಲ್ಲಿ ಸೃಜನಾತ್ಮಕವಾಗಿ ಜಾಹೀರಾತನ್ನು ಹಾಕಲಾಗಿದೆ. ಈ ವಿಡಿಯೋವನ್ನು ಬೆಂಗಳೂರು ತಿಂಡೀಸ್ ಹೋಟೆಲ್ ಉದ್ಯಮದಾರರಿಂದ ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಮ್ ಪೇಜ್‌ನಲ್ಲಿ ಹಂಚಿಕೊಳ್ಳಲಾಗಿದೆ.
ಈ ವಿಡಿಯೋ 1.4 ಲಕ್ಷ ಜನರು ವೀಕ್ಷಣೆ ಮಾಡಿದ್ದಾರೆ. ಕೆಲವರು ವಿಭಿನ್ನ ಜಾಹೀರಾತಿಗೆ ವಿಭಿನ್ನವಾಗಿ ಕಾಮೆಂಟ್ ಮಾಡಿದ್ದಾರೆ. ಇನ್ನೂ ಕೆಲವರು 'ರಸ್ತೆ ಬದಿ ಹಾಕಲಾದ ಈ ಜಾಹೀರಾತನ್ನು ವಾಹನ ಸವಾರರು ನೋಡುತ್ತಾರೆ. ಇದರಿಂದ ಸಂಚಾರದ ಮೇಲೆ ಗಮನ ಕಳೆದುಕೊಂಡು ಅಪಘಾತಗಳು ಆಗುವ ಸಾಧ್ಯತೆ ಇದೆ. ಹೀಗಾಗಿ ಕೂಡಲೇ ಈ ಜಾಹೀರಾತನ್ನು ತೆಗೆಯಬೇಕು' ಎಂದು ಒತ್ತಾಯಿಸಿದ್ದಾರೆ.
ಆದರೆ ಈ ವಿಡಿಯೋ ಆನ್‌ಲೈನ್ ವೀಕ್ಷಣೆಗೆ ಮಾತ್ರ ಲಭ್ಯವಿದೆ. ಭೌತಿಕವಾಗಿ ಈ ಜಾಹೀರಾತನ್ನು ಎಲ್ಲಿಯೂ ಹಾಕಲಾಗಿಲ್ಲ. ಬೆಂಗಳೂರು ತಿಂಡೀಸ್ ವತಿಯಿಂದ ಬೆಂಗಳೂರಿನ ಮೂರು ಕಡೆಗಳಲ್ಲಿ ಶಾಖೆಗಳನ್ನು ತೆರೆಯಲಾಗಿದೆ ಎಂಬ ಸಂದೇಶವನ್ನು ಈ ಜಾಹೀರಾತಿನಲ್ಲಿ ನೀಡಲಾಗಿದೆ. ಇದು ಆನ್‌ಲೈನ್‌ನಲ್ಲಿ ಗ್ರಾಹಕರನ್ನು ಸೆಳೆಯುವ ಹೊಸ ಜಾಹೀರಾತಿನ ಶೈಲಿ ಎನ್ನುವುದು ಸ್ಪಷ್ಟವಾಗಿದೆ.
ಕಾಮೆಂಟ್ ಹೀಗಿದೆ..
ಜಾಹೀರಾತನ್ನು ಟೀಕಿಸುತ್ತಾ ಬಳಕೆದಾರರು ಹೀಗೆ ಬರೆದಿದ್ದಾರೆ, "ಈ ವೀಡಿಯೊವನ್ನು ಹೆಚ್ಚಿನ ಜನರು ನಿಜವೆಂದು ನಂಬುತ್ತಾರೆ. ಪ್ರಮುಖ ಪತ್ರಿಕೆಗಳು ಸಹ ಅದನ್ನು ನಿಜವೆಂದು ಪ್ರಕಟಿಸುತ್ತವೆ. ಆದರೆ ಇದೊಂದು ನಕಲಿ ವಿಡಿಯೋ'' ಎಂದಿದ್ದಾರೆ.
ಮತ್ತೊಬ್ಬ ಬಳಕೆದಾರ, "ಆ ಭಾರೀ ಟ್ರಾಫಿಕ್‌ನಲ್ಲಿಯೂ ಗ್ಲಾಸ್‌ನಲ್ಲಿ ಕಾಫಿ ಸುರಿಯುವ ಸದ್ದು ಕೇಳಿಸುತ್ತದೆ" ಎಂದು ಕಾಮೆಂಟ್ ಮಾಡಿದ್ದಾರೆ.
"ಇದು ನಕಲಿ ಎಂದು ತೋರುತ್ತದೆ. ಇದು ನಿಜವಾಗಿರಲಾರದು" ಎಂದು ಮೂರನೇ ಬಳಕೆದಾರರು ಪ್ರತಿಕ್ರಿಯಿಸಿದ್ದಾರೆ.


Click it and Unblock the Notifications