ದೇಶಾದ್ಯಂತ ಬ್ಯಾಂಕ್ ನೌಕರರ ಸಂಘಟನೆಗಳು 2026ರ ಜನವರಿ 27 ಅಂದರೆ ಇಂದು ರಾಷ್ಟ್ರವ್ಯಾಪಿ ಮುಷ್ಕರಕ್ಕೆ (Bank Protest) ಕರೆ ನೀಡಿವೆ. ಬ್ಯಾಂಕ್ ನೌಕರರು ವಾರದಲ್ಲಿ ಕೇವಲ 5 ದಿನ ಮಾತ್ರ ಕೆಲಸ ಮಾಡುವಂತೆ ಒತ್ತಾಯಿಸಿ ಯುನೈಟೆಡ್ ಫೋರಮ್ ಆಫ್ ಬ್ಯಾಂಕ್ ಯೂನಿಯನ್ಸ್ ಇಂದು ಮುಷ್ಕರಕ್ಕೆ ಕರೆ ನೀಡಲಾಗಿದೆ. ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ಸ್ (UFBU) ಅನೇಕ ತಿಂಗಳ ಮಾತುಕತೆ ವಿಫಲವಾದ ನಂತರ ಈ ನಿರ್ಧಾರಕ್ಕೆ ಬಂದಿದೆ ಎನ್ನಲಾಗಿದೆ. ಈ ಪರಿಣಾಮ ಇಂದು (ಮಂಗಳವಾರ) ದೇಶಾದ್ಯಂತ ಸಾರ್ವಜನಿಕ ವಲಯದ ಬ್ಯಾಂಕುಗಳ ಬ್ಯಾಂಕಿಂಗ್ ಕಾರ್ಯಾಚರಣೆಗಳಿಗೆ ಅಡ್ಡಿಯಾಗುವ ಸಾಧ್ಯತೆ ಇದೆ.

ಕಳೆದ ಮೂರು ದಿನಗಳಿಂದ ಬ್ಯಾಂಕ್ ಕ್ಲೋಸ್!
ಇನ್ನು ಜನವರಿ 24 (ನಾಲ್ಕನೇ ಶನಿವಾರ), ಜನವರಿ 25 (ಭಾನುವಾರ) ಮತ್ತು ಜನವರಿ 26 (ಗಣರಾಜ್ಯೋತ್ಸವ) ರಂದು ಬ್ಯಾಂಕ್‌ಗಳಿಗೆ ರಜೆ ಇತ್ತು. ಇದೀಗ ಸತತ ಮೂರು ದಿನಗಳ ನಂತರ ನಾಲ್ಕನೇ ದಿನವೂ ಬ್ಯಾಂಕ್ ಮುಷ್ಕರಕ್ಕೆ ಮುಂದಾಗಿದೆ. ಇದರಿಂದ ಗ್ರಾಹಕರ ವ್ಯವಹಾರಗಳಿಗೆ ಪೆಟ್ಟು ಬೀಳಲಿದ್ದು, ಸತತ ನಾಲ್ಕು ದಿನಗಳ ಕಾಲ ಬ್ಯಾಂಕಿಂಗ್ ಸೇವೆಯಲ್ಲಿ ಅಡಚಣೆಯಾಗುವ ಸಾಧ್ಯತೆಯಿದೆ.
ಏಕೆ ಈ ಪ್ರತಿಭಟನೆ?
ಪ್ರಸ್ತುತ, ಬ್ಯಾಂಕ್‌ಗಳು ಪ್ರತಿ ತಿಂಗಳ ಎರಡನೇ ಮತ್ತು ನಾಲ್ಕನೇ ಶನಿವಾರ ಹಾಗೂ ಭಾನುವಾರದಂದು ಮಾತ್ರ ರಜೆ ಪಡೆಯುತ್ತವೆ. ಹೀಗಾಗಿ, ಹಲವು ವಾರಗಳಲ್ಲಿ ಆರು ದಿನಗಳು ಕಾರ್ಯನಿರ್ವಹಿಸುತ್ತವೆ. ಈ ಕೆಲಸದ ದಿನಗಳು ಐದು ದಿನಗಳಿಗೆ ಜಾರಿಯಾಗಬೇಕೆಂಬುದೇ ಬ್ಯಾಂಕ್ ಯೂನಿಯನ್ ಬೇಡಿಕೆ.
2024ರ ಮಾರ್ಚ್‌ನಲ್ಲಿ UFBU ಮತ್ತು ಇಂಡಿಯನ್ ಬ್ಯಾಂಕ್ಸ್ ಅಸೋಸಿಯೇಷನ್ (IBA) ಎಲ್ಲಾ ಶನಿವಾರಗಳನ್ನು ರಜೆಯೆಂದು ಘೋಷಿಸಲು ಒಮ್ಮೆ ಒಪ್ಪಿಕೊಂಡಿದ್ದವು. ಆದರೆ, ಸರ್ಕಾರದಿಂದ ಇದಕ್ಕೆ ಅಧಿಕೃತ ಅನುಮೋದನೆ ಸಿಕ್ಕಿಲ್ಲ. ಈ ಹಿನ್ನೆಲೆಯಲ್ಲಿ ಸಂಘಟನೆಗಳು ಇದೀಗ ಮತ್ತೆ ಮುಷ್ಕರಕ್ಕೆ ಮುಂದಾಗಿವೆ.
ಮುಷ್ಕರ ಘೋಷಣೆಗೂ ಮುನ್ನ ಸಂಘಗಳು ಎಲ್ಲೆಡೆ ನೋಟಿಸ್ ನೀಡಿದ್ದವು. ಮುಖ್ಯ ಕಾರ್ಮಿಕ ಆಯುಕ್ತರ ನೇತೃತ್ವದಲ್ಲಿ ನಡೆದ ಸಮನ್ವಯ ಸಭೆಗಳು ಕೂಡಾ ಯಶಸ್ವಿಯಾಗಲಿಲ್ಲ. ಮಾತುಕತೆಗಳಲ್ಲಿ ಯಾವವುದೇ ರಜೆ ನೀಡುವ ಸುಳಿವು ಸಿಗದ ಕಾರಣ ಮುಷ್ಕರ ನಡೆಸುವುದಾಗಿ UFBU ಖಚಿತಪಡಿಸಿದೆ.
ಈ ರಾಷ್ಟ್ರವ್ಯಾಪಿ ಮುಷ್ಕರ ಸಾರ್ವಜನಿಕ ವಲಯದ ಬ್ಯಾಂಕ್‌ಗಳು ಮತ್ತು ಕೆಲವು ಹಳೆಯ ಖಾಸಗಿ ಬ್ಯಾಂಕ್‌ಗಳ ಮೇಲೆ ಪ್ರಭಾವ ಬೀರಲಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI), ಪಂಜಾಬ್ ನ್ಯಾಷನಲ್ ಬ್ಯಾಂಕ್ (PNB), ಬ್ಯಾಂಕ್ ಆಫ್ ಬರೋಡಾ ಮತ್ತು ಬ್ಯಾಂಕ್ ಆಫ್ ಇಂಡಿಯಾ ಮುಂತಾದ ಪ್ರಮುಖ ಬ್ಯಾಂಕ್‌ಗಳಲ್ಲಿ ಸೇವೆಗಳು ಅಸ್ತವ್ಯಸ್ತವಾಗಬಹುದು.
ಆದರೆ, ಎಚ್‌ಡಿಎಫ್‌ಸಿ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಆಕ್ಸಿಸ್ ಬ್ಯಾಂಕ್ ಮತ್ತು ಕೋಟಕ್ ಮಹೀಂದ್ರಾ ಬ್ಯಾಂಕ್‌ನಂತಹ ದೊಡ್ಡ ಖಾಸಗಿ ಬ್ಯಾಂಕ್‌ಗಳ ಮೇಲೆ ಮುಷ್ಕರದ ಪ್ರಭಾವ ಕಡಿಮೆ ಬೀಳಬಹುದು ಎನ್ನಲಾಗಿದೆ. ಅವುಗಳ ನೌಕರರು ಮುಷ್ಕರ ಕರೆ ನೀಡಿದ UFBU ಸಂಘಗಳ ಭಾಗವಾಗಿಲ್ಲ.
ಮುಷ್ಕರ ನಡೆದರೆ, ಜನವರಿ 27ರಂದು ಬ್ಯಾಂಕ್‌ಗಳಲ್ಲಿ ನಗದು ವ್ಯವಹಾರ, ಚೆಕ್ ಕ್ಲಿಯರೆನ್ಸ್, ಡಿಮ್ಯಾಂಡ್ ಡ್ರಾಫ್ಟ್ ಸೇರಿದಂತೆ ವೈಯಕ್ತಿಕ ಸೇವೆಗಳು ಲಭ್ಯವಿರುವುದಿಲ್ಲ. ಗ್ರಾಹಕರು ಯುಪಿಐ, ಐಎಂಪಿಎಸ್, ಎನ್‌ಇಎಫ್‌ಟಿ, ಆರ್‌ಟಿಜಿಎಸ್ ಮತ್ತು ಮೊಬೈಲ್ ಬ್ಯಾಂಕಿಂಗ್ ಸೇವೆಗಳನ್ನು ಬಳಸಬಹುದು.


Click it and Unblock the Notifications