ಆಸ್ತಿ ತೆರಿಗೆ, ಆ ಶುಲ್ಕ, ಈ ಶುಲ್ಕ..ಜೊತೆಗೆ ಒಂದಷ್ಟು ಬೆಲೆಗಳ ಏರಿಕೆ ನಡುವೆ ಕಂಗಾಲಾಗಿ ಹೋಗಿದ್ದ ಬೆಂಗಳೂರು ಮಂದಿಗೆ ಸ್ವಲ್ಪ ರಿಲ್ಯಾಕ್ಸ್ ಆಗುವಂತಹ ಸುದ್ದಿ ಸಿಕ್ಕಿದೆ. ಇದೊಂಥರಾ ಬಂಪರ್ ಆಫರ್ ಅಂತಲೂ ಹೇಳಬಹುದು. ಅದೇನೆಂದರೆ 2025-26ನೇ ಆರ್ಥಿಕ ವರ್ಷಕ್ಕೆ ಯಾರು ಸಂಪೂರ್ಣವಾಗಿ ಆಸ್ತಿ ತೆರಿಗೆ ಮಾಡುತ್ತಾರೋ ಅವರಿಗೆ, 5% ರಿಯಾಯಿತಿ ನೀಡಲಾಗುತ್ತಿದೆ. ಹೀಗಾಗಿ ಈ ಅತ್ಯುತ್ತಮ ಕೊಡುಗೆಯ ಲಾಭ ಪಡೆದುಕೊಳ್ಳಲು, ಆದಷ್ಟು ಬೇಗ ನಿಮ್ಮ ಆಸ್ತಿ ತೆರಿಗೆ ಪಾವತಿ ಮಾಡುವಂತೆ ಬಿಬಿಎಂಪಿ ಮನವಿ ಮಾಡಿದೆ.

ಇನ್ನು ಈ ರೀತಿಯ ಘೋಷಣೆ ಇದೇ ಮೊದಲೇನಲ್ಲ. ಈ ಹಿಂದೆಯೂ ಈ ಆಫರ್ ಬಿಬಿಎಂಪಿಗೆ ವರ್ಕೌಟ್ ಆಗಿತ್ತು. ಅಂದರೆ 2024-25ನೇ ಹಣಕಾಸು ವರ್ಷದಲ್ಲಿ ಬಿಬಿಎಂಪಿಗೆ, ಈ ರೀತಿಯ ಘೋಷಣೆಯಿಂದ ಯಶಸ್ವಿಯಾಗಿ ತೆರಿಗೆ ಸಂಗ್ರಹವಾಗಿದೆ. ಈಗಲೂ ಅದೇ ಅಸ್ತ್ರ ಬಳಸಿಕೊಂಡು, ಬಿಬಿಎಂಪಿ ಆಸ್ತಿ ತೆರಿಗೆ ಸಂಗ್ರಹಕ್ಕೆ ಮುಂದಾಗಿದೆ. ಅಂದಹಾಗೆ ಈ ಅವಧಿಯಲ್ಲಿ ಬಿಬಿಎಂಪಿ ಸಂಗ್ರಹಿಸಿದ ಒಟ್ಟು ಆಸ್ತಿ ತೆರಿಗೆ, 4,930 ಕೋಟಿ ರೂಪಾಯಿ. ಅದಕ್ಕೂ ಮುಂಚಿನ ವರ್ಷ ಸಂಗ್ರಹವಾದ. 3,918 ಕೋಟಿ ರೂಪಾಯಿಯೊಂದಿಗೆ ಹೋಲಿಸಿದರೆ ಶೇ. 25 ರಷ್ಟು ಹೆಚ್ಚಾಗಿದೆ. ಆದರೂ ಬಿಬಿಎಂಪಿ ತನ್ನ ಉದ್ದೇಶಿತ ಗುರಿಯಾದ ರೂ. 5,200 ಕೋಟಿಗೆ ಇನ್ನೂ ಸ್ವಲ್ಪ ತಲುಪದೇ ಉಳಿದಿದೆ. ಇದರೊಂದಿಗೆ ಸಂಸ್ಥೆಯು ತನ್ನ ಆದಾಯ ಗುರಿಯ ಶೇ. 94 ರಷ್ಟು ಸಾಧಿಸಿದೆ.
2025-26ರಲ್ಲಿ ₹6,000 ಕೋಟಿ ಗುರಿ:
ಇನ್ನು ಹೊಸ ಆರ್ಥಿಕ ವರ್ಷವಾದ 2025-26ರಲ್ಲಿ ಬಿಬಿಎಂಪಿ ತನ್ನ ತೆರಿಗೆ ಸಂಗ್ರಹದ ಗುರಿಯನ್ನು ಹೆಚ್ಚಾಗಿಸಿದೆ. ಅಂದರೆ ಸಂಪೂರ್ಣವಾಗಿ ನಗರದಿಂದ, 6,000 ಕೋಟಿ ರೂಪಾಯಿ ಆಸ್ತಿ ತೆರಿಗೆ ಸಂಗ್ರಹಿಸುವ ಉದ್ದೇಶವನ್ನು ಹೊಂದಿದೆ. ಈ ಗುರಿಯನ್ನು ಸಾಧಿಸಲು ತೆರಿಗೆ ಪಾವತಿದಾರರಿಗೆ ಪ್ರಾರಂಭದ ದಿನಗಳಲ್ಲಿಯೇ ರಿಯಾಯಿತಿ ನೀಡುವುದರ ಮೂಲಕ ಪ್ರೋತ್ಸಾಹ ನೀಡಲಾಗುತ್ತಿದೆ.
ಯಲಹಂಕ, ಮಹದೇವಪುರ ತೆರಿಗೆ ಸಂಗ್ರಹಣೆಯಲ್ಲಿ ಮುಂಚೂಣಿ:
ಅಂದಹಾಗೆ ಕಳೆದ ಆರ್ಥಿಕ ವರ್ಷದಲ್ಲಿ ಕೆಲವೊಂದು ವಲಯಗಳು, ತಮ್ಮ ಗುರಿಯನ್ನು ಮೀರಿ ಆಸ್ತಿ ತೆರಿಗೆ ಸಂಗ್ರಹದಲ್ಲಿ ಅದ್ಭುತ ಸಾಧನೆ ತೋರಿಸಿವೆ. ಉದಾಹರಣೆಗೆ ಯಲಹಂಕ ವಲಯದಲ್ಲಿ ಆಸ್ತಿ ತೆರಿಗೆ ಸಂಗ್ರಹ 445 ಕೋಟಿ ರೂಪಾಯಿಯ ಗುರಿಗೆ ಬದಲಾಗಿ 464 ಕೋಟಿ ರೂಪಾಯಿ ಸಂಗ್ರಹಿಸಲಾಗಿದೆ. ಇದು ಸುಮಾರು ಶೇ. 4.3 ರಷ್ಟು ಹೆಚ್ಚಾಗಿದೆ. ಈ ಸಾಧನೆಯು ಯಲಹಂಕವನ್ನು ಅತ್ಯುತ್ತಮ ನಿರ್ವಹಿತ ವಲಯಗಳ ಪೈಕಿ ಒಂದು ಎಂದು ಮಾಡಿದೆ.
ಅದರಂತೆಯೇ ಮಹದೇವಪುರ ವಲಯವೂ ಆಸ್ತಿ ತೆರಿಗೆ ಸಂಗ್ರಹದಲ್ಲಿ ಗಮನ ಸೆಳೆಯುವಂತಹ ಸಾಧನೆ ಮಾಡಿದೆ. ಐಟಿ ಕಂಪನಿಗಳು, ವಾಣಿಜ್ಯ ಕಚೇರಿಗಳು ಹೆಚ್ಚಿರುವ ಪ್ರದೇಶವಿದು. ಮಹದೇವಪುರ ವಲಯವು ರೂ. 1,309 ಕೋಟಿಯ ಗುರಿಯನ್ನು ಮೀರಿ ರೂ. 1,310 ಕೋಟಿ ಸಂಗ್ರಹಿಸಿರುವುದು ಪ್ರಶಂಸನೀಯವಾಗಿದೆ. ಮಹದೇವಪುರ ವಲಯವು ಒಬ್ಬರೇ ಶೇ. 26 ಕ್ಕಿಂತ ಹೆಚ್ಚು ಪಾಲನ್ನು ನಗರದ ಒಟ್ಟು ಆಸ್ತಿ ತೆರಿಗೆ ಸಂಗ್ರಹಣೆಯಲ್ಲಿ ಹೊಂದಿರುವುದು ಬಿಬಿಎಂಪಿಯು ಈ ವಲಯವನ್ನು ನಿರೀಕ್ಷೆಯಂತೆಯೇ ಲಾಭದಾಯಕ ವಲಯವೆಂದು ಪರಿಗಣಿಸಲು ಕಾರಣವಾಗಿದೆ.
ಇನ್ನು ಈ ಮೇಲಿನ ಎಲ್ಲಾ ಅಂಕಿ ಅಂಶಗಳು, ಬಿಬಿಎಂಪಿಯ ನಿರಂತರ ಪರಿಶ್ರಮವನ್ನು ಪ್ರತಿಬಿಂಬಿಸುತ್ತಿವೆ. ಅಲ್ಲದೇ ಇವುಗಳು ಬೆಂಗಳೂರು ನಗರನಿವಾಸಿಗಳ ಜವಾಬ್ದಾರಿಯನ್ನು ಕೂಡ ಒತ್ತಿ ಹೇಳುತ್ತಿವೆ. ತೆರಿಗೆಯನ್ನು ಮುಂಚಿತವಾಗಿ ಪಾವತಿಸುವ ಮೂಲಕ, ಶೇ. 5 ರಷ್ಟು ರಿಯಾಯಿತಿಯ ಲಾಭ ಪಡೆಯುವುದು ಕೇವಲ ವೈಯಕ್ತಿಕ ಲಾಭವಷ್ಟೇ ಅಲ್ಲ, ಬಿಬಿಎಂಪಿಯ ಬಜೆಟ್ ಗುರಿಗಳನ್ನು ಸಹ ಸಾಧಿಸಲು ನೆರವಾಗುತ್ತದೆ. ಬಿಬಿಎಂಪಿ ಬಂಡವಾಳ ವೆಚ್ಚ, ರಸ್ತೆ, ಚರಂಡಿ, ಬೀದಿ ಬೆಳಕು, ಕಸ ಸಂಗ್ರಹಣೆಯಂತಹ ಮೂಲಭೂತ ಸೌಕರ್ಯಗಳ ವಿಸ್ತರಣೆಗೆ ಈ ಆದಾಯವನ್ನು ಬಳಸುತ್ತಿದೆ.
ಬಿಬಿಎಂಪಿಯ ಹೊಸ ರಿಯಾಯಿತಿ ಯೋಜನೆ ತೆರಿಗೆ ಪಾವತಿದಾರರಿಗೆ ಸ್ಪಷ್ಟವಾದ ಸಿಗ್ನಲ್ ನೀಡುತ್ತದೆ. ಮುಂಚಿತ ಪಾವತಿ, ಹೆಚ್ಚಿನ ಲಾಭ. ಈ ರೀತಿಯ ರಿಯಾಯಿತಿಗಳು ನಾಗರಿಕರಲ್ಲಿ ಪಾವತಿಸುವ ಪರಿಪಕ್ವತೆಗೆ ಉತ್ತೇಜನ ನೀಡುತ್ತವೆ. ಈ ವರ್ಷ ನಿಮ್ಮ ಆಸ್ತಿ ತೆರಿಗೆಯನ್ನು ಏಪ್ರಿಲ್ 30ರೊಳಗೆ ಪೂರ್ತಿಯಾಗಿ ಪಾವತಿಸಿ, ಶೇ. 5 ರಷ್ಟು ರಿಯಾಯಿತಿಯನ್ನು ಪಡೆದು, ನಿಮ್ಮ ಪಾಲಿನ ಬಿಬಿಎಂಪಿ ಅಭಿವೃದ್ಧಿಗೆ ಕೈ ಜೋಡಿಸಿ.


Click it and Unblock the Notifications