ಬೆಂಗಳೂರಿನ ಪಿಜಿಗಳ ದರ್ಬಾರ್ ಎಲ್ಲೆಲ್ಲೂ ಮನೆ ಮಾತಾಗಿವೆ. ಪಿಜಿ ಬ್ಯುಸಿನೆಸ್ ಅನ್ನೋದು ಬೆಂಗಳೂರಿನಲ್ಲಿ ಹದಿನೇ ದಿನೆ ಹೆಚ್ಚಾಗುತ್ತಿದೆ. ಏಕೆಂದರೆ ಬೆಂಗಳೂರಿನಲ್ಲಿ ಪ್ರತಿ ತಿಂಗಳು ಕಂತೆ ಕಂತೆ ಹಣ ಕೊಡುವ ಬೆಸ್ಟ್ ಬ್ಯುಸಿನೆಸ್ ಅದು. ನಾನಾ ರಾಜ್ಯಗಳು, ಬೇರೆ ಬೇರೆ ಜಿಲ್ಲೆಗಳಿಂದ ಬೆಂಗಳೂರಿಗೆ ಬರುವವರು ಅತಿಹೆಚ್ಚಾಗಿ ಪಿಜಿಗಳನ್ನೇ ಅವಲಂಬಿಸುತ್ತಾರೆ. ಹೀಗಾಗಿ ಇಲ್ಲಿ ಎಷ್ಟೇ ಪಿಜಿಗಳು ತಲೆ ಎತ್ತಿದ್ದರು ನಷ್ಟ ಅನ್ನೋದು ಸುಳ್ಳಿನ ಮಾತಾಗಿತ್ತು. ಆದ್ರೆ ಇನ್ಮುಂದೆ ಹಾಗೆ ಇರಲ್ಲ. ಏಕೆಂದರೆ ಬಿಬಿಎಂಪಿ ಅನುಮತಿ ಪಡೆಯದೆ ನಡೆಯುತ್ತಿರುವ ಪಿಜಿಗಳ ಮೇಲೆ, ಗಂಭೀರ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಈ ಕ್ರಮದ ಅನುಸಾರ ನಾನಾ ನಿಯಮ ಉಲ್ಲಂಘನೆ ಮಾಡುತ್ತಿರುವ 187 ಪಿಜಿಗಳಿಗೆ ಬೀಗ ಜಡಿಯಲಾಗಿದೆ ಎನ್ನಲಾಗುತ್ತಿದೆ.

ಹೌದು, ರಾಜಧಾನಿ ಬೆಂಗಳೂರಿನಲ್ಲಿ ಪಿಜಿಗಳ ಸಂಖ್ಯೆ ಹೆಚ್ಚಾಗಿದೆ. ಅಧಿಕೃತವಾಗಿ ನಡೆಯುತ್ತಿರುವ ಪಿಜಿಗಳಿಗಿಂತ, ಅನಧಿಕೃತ ಪಿಜಿಗಳ ಸಂಖ್ಯೆಯೇ ಹೆಚ್ಚಾಗಿದೆ. ಹೀಗಾಗಿ ಬಿಬಿಎಂಪಿ ಈ ಕಠಿಣ ಕ್ರಮ ತೆಗೆದುಕೊಂಡು ಅನಧಿಕೃತ ಪಿಜಿಗಳಿಗೆ ತಕ್ಕ ಪಾಠ ಕಲಿಸಿದೆ.
2020ರ ಮಾರ್ಗಸೂಚಿಯ ಅಳವಡಿಕೆ:
ಎಲ್ಲಾ ಪಿಜಿ ನಿರ್ವಾಹಕರು ಕಡ್ಡಾಯವಾಗಿ ಪರವಾನಗಿ ಪಡೆಯಬೇಕು ಎಂದು, 2024ರ ಆಗಸ್ಟ್‌ನಲ್ಲಿ ಮಾರ್ಗಸೂಚಿ ಪ್ರಕಟಿಸಲಾಗಿತ್ತು. ಈ ಮಾರ್ಗಸೂಚಿ ಬಿಬಿಎಂಪಿ-2020 ಕಾಯಿದೆಯಡಿ ಪ್ರಕಟಗೊಳಿಸಲಾಗಿತ್ತು. ಹಾಗೆಯೇ ಪಿಜಿಗಳಲ್ಲಿ ನೀಡುವ ಆಹಾರ ಸುರಕ್ಷಿತವಾಗಿರಬೇಕು, ಕಟ್ಟಡ ಸ್ವಚ್ಛವಾಗಿರಬೇಕು ಹಾಗೂ ರಸ್ತೆ ಅಗಲದ ಕುರಿತಾಗಿಯೂ ಕಟ್ಟುನಿಟ್ಟಾಗಿರಬೇಕು ಎಂದು, ಬಿಬಿಎಂಪಿ ಕಠಿಣ ಆದೇಶ ಮಾಡಿತ್ತು. ಆದರೆ ಈ ಆದೇಶ ಮಾಡಿ ಎಂಟು ತಿಂಗಳು ಕಳೆದರೂ ಬೆಂಗಳೂರಿನ ಪಿಜಿಗಳು ಕ್ಯಾರೆ ಎನ್ನದೆ ನಿರ್ವಹಿಸಿಕೊಂಡು ಹೋದವು. ಹೀಗೆ ನಿಯಮಗಳನ್ನು ಉಲ್ಲಂಘಿಸಿದ ಸಾಕಷ್ಟು ಬೀಗ ಜಡಿಯಲಾಗಿದ್ದು, ಬಿಬಿಎಂಪಿಯ ಈ ಕೆಲಸ ಮುಂದುವರಿದಿದೆ. ಅಂದರೆ ನಿಯಂ ಉಲ್ಲಂಘಿಸಿ ನಡೆಯುತ್ತಿರುವ ಪಿಜಿಗಳನ್ನು ಕಂಡುಹಿಡಿದು ಬೀಗ ಜಡಿಯಲು ಮುಂದಾಗಿದೆ ಬಿಬಿಎಂಪಿ.
ಅನಧಿಕೃತ ಪಿಜಿಗಳ ಸಂಖ್ಯೆ ಎಷ್ಟಿದೆ..?
ಅನಧಿಕೃತ ಪಿಜಿಗಳ ಸಂಖ್ಯೆ ನೋಡುತ್ತಾ ಹೋದರೆ ಬೆಚ್ಚಿ ಬೀಳಬಹುದು. ಮಹದೇವಪುರದಲ್ಲಿ ಲೈಸೆನ್ಸ್ ಇಲ್ಲದೇ 100 ಪಿಜಿಗಳ ಕಾರ್ಯ ನಿರ್ವಹಿಸುತ್ತಿವೆ. ಅದೇ ರೀತಿಯಾಗಿ FSSAI ಪರವಾನಗಿ ಇಲ್ಲದೆಯೂ 55 ಪಿಜಿಗಳನ್ನು ಕಾರ್ಯ ನಡೆಸುತ್ತಿದ್ದು ಅವುಗಳನ್ನು ಈಗಾಗಲೇ ಬಂದ್ ಮಾಡಲಾಗಿದೆ. ಹಾಗೂ ಈ ವಲಯದಲ್ಲಿ 500ಕ್ಕೂ ಹೆಚ್ಚು ಪಿಜಿಗಳು ಅನಧಿಕೃತವೇ ಎನ್ನಲಾಗಿದೆ. ಇನ್ನುಳಿದ 190 ಪಿಜಿಗಳು ಮಾತ್ರ ಬಿಬಿಎಂಪಿಯಿಂದ ಪರವಾನಗಿ ಪಡೆದಿವೆ ಎನ್ನಲಾಗಿದೆ.
ವಲಯವಾರು ಸ್ಥಿತಿ:
ವಲಯವಾರು ಪಿಜಿಗಳ ಸಂಖ್ಯೆ ನೋಡುತ್ತಾ ಹೋದರೆ ಶಾಕ್ ಆಗಬಹುದು.
ಉತ್ತರ ವಲಯ:
ಉತ್ತರ ವಲಯದಲ್ಲಿ ಒಟ್ಟು 762 ಪಿಜಿಗಳು ಕಾರ್ಯ ನಿರ್ವಹಿಸುತ್ತಿವೆ. ಈ ಪೈಕಿ ಕೇವಲ 361 ಪಿಜಿಗಳು ಬಿಬಿಎಂಪಿ ಹೊರಡಿಸಿರುವ ಮಾರ್ಗಸೂಚಿ ಅನುಗುಣವಾಗಿ ಕಾರ್ಯ ನಿರ್ವಹಿಸುತ್ತಿವೆ. ಈ ವಲಯದಲ್ಲಿ ಸದ್ಯದ ಮಾಹಿತಿ ಪ್ರಕಾರ 66 ಪಿಜಿಗಳಿಗೆ ನೋಟಿಸ್ ಕೊಡಲಾಗಿದೆ. ನೋಟಿಸ್ ನೀಡಿರುವ ಪೈಕಿ 12 ಪಿಜಿಗಳಿಗೆ ಬೀಗ ಹಾಕಲಾಗಿದೆ.
ದಾಸರಹಳ್ಳಿ ವಲಯ:
ದಾಸರಹಳ್ಳಿ ವಲಯದಲ್ಲಿ ಒಟ್ಟು 137 ಪಿಜಿಗಳಿವೆ. ಅವುಗಳ ಪೈಕಿ 121 ಅಧಿಕೃತವಾಗಿದ್ದರೂ, ಎರಡು ಪಿಜಿಗಳು ನಿಯಮ ಉಲ್ಲಂಘನೆ ಕಾರಣದಿಂದ ಬಂದ್ ಮಾಡಲಾಗಿದೆ.
ಪಶ್ಚಿಮ ವಲಯ:
ಪಶ್ಚಿಮ ವಲಯದಲ್ಲಿ ಕೂಡ 231 ಪಿಜಿಗಳು ಮಾತ್ರ ಬಿಬಿಎಂಪಿ ಪರವಾನಗಿ ಪಡೆದುಕೊಂಡು ಕಾರ್ಯ ನಿರ್ವಹಿಸುತ್ತಿವೆ. 132 ಪಿಜಿಗಳು ಅನಧಿಕೃತವಾಗಿ ಕಾರ್ಯ ನಿರ್ವಹಿಸುತ್ತಿವೆ. ಈ ಪೈಕಿ 16 ಪಿಜಿಗಳಿಗೆ ಬೀಗ ಹಾಕಲಾಗಿದೆ.
FSSAI ಪರವಾನಗಿ ಇಲ್ಲದ ಪಿಜಿಗಳು:
ಪಿಜಿಗಳಲ್ಲಿ ಅಡುಗೆ ವ್ಯವಸ್ಥೆ ಹೊಂದಿದ್ದು, ಆಹಾರ ನೀಡುವ ಪಿಜಿಗಳು ಬಿಬಿಎಂಪಿಯಿಂದ ಉದ್ದಿಮೆ ಪರವಾನಗಿ ಕಡ್ಡಾಯವಾಗಿ ಪಡೆಯಬೇಕು. ಅದರಂತೆಯೇ ಬಿಬಿಎಂಪಿ ಲೈಸೆನ್ಸ್ ಸಿಕ್ಕ ಮೂರು ತಿಂಗಳೊಳಗಗೆ ಕಡ್ಡಾಯವಾಗಿ FSSAI ಲೈಸೆನ್ಸ್ ಕೂಡ ಪಡೆಯಬೇಕಯ. ಆದರೆ ಅನೇಕ ಪಿಜಿ ಮಾಲೀಕರು ಈ ನಿಯಮವನ್ನೂ ಉಲ್ಲಂಘನೆ ಮಾಡಿದ್ದಾರೆ. ಇದರಿಂದ ವಿದ್ಯಾರ್ಥಿಗಳು ಹಾಗೂ ಉದ್ಯೋಗಸ್ಥರು ಅವರ ಆರೋಗ್ಯದ ಬಗ್ಗೆ ಆತಂಕ ವ್ಯಕ್ತಪಡಿಸುತ್ತಿದ್ದಾರೆ.
40 ಅಡಿಗಿಂತ ಕಡಿಮೆ ರಸ್ತೆಯಲ್ಲೂ ಪಿಜಿ:
ನಿಯಮಗಳ ಪ್ರಕಾರ ವಸತಿ ಪ್ರದೇಶಗಳಲ್ಲಿ 40 ಅಡಿಗಿಂತ ಕಡಿಮೆ ಅಗಲದ ರಸ್ತೆಗಳಲ್ಲಿ ಯಾವುದೇ ವಾಣಿಜ್ಯ ಚಟುವಟಿಕೆ ನಡೆಯಬಾರದು ಎಂದು, ಸರ್ಕಾರ ಘೋಷಣೆ ಮಾಡಿದೆ. ಆದರೆ, ಈ ನಿಯಮವನ್ನು ಕೂಡ ಹಲವಾರು ಪಿಜಿಗಳು ಉಲ್ಲಂಘನೆ ಮಾಡಿವೆ. ಇದನ್ನು ಕೂಡ ಬಿಬಿಎಂಪಿ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ. ಈ ಕ್ರಮದಿಂದ ಭದ್ರತಾ ವಿಚಾರಗಳು ಮತ್ತು ತುರ್ತು ಸಮಯದಲ್ಲಿ ಪ್ರವೇಶದ ಅಡಚಣೆಗಳು ಉಂಟಾಗಬಹುದು ಎನ್ನಲಾಗಿದೆ.
ಬೊಮ್ಮನಹಳ್ಳಿ, ರಾಜರಾಜೇಶ್ವರಿನಗರ ಹಾಗೂ ಯಲಹಂಕ ವಲಯಗಳಿಗೆ ಸಂಬಂಧಿಸಿದಂತೆ ವಿವರ ಪಡೆಯಲು ಅಧಿಕಾರಿಗಳನ್ನು ಸಂಪರ್ಕಿಸಿದಾಗ ಅವರು ಪ್ರತಿಕ್ರಿಯೆ ನೀಡದೆ ಮೌನ ವಹಿಸಿದ್ದಾರೆ. ನಿಖರವಾದ ಮಾಹಿತಿ ಇಲ್ಲದಿರುವುದು ಕೂಡ ಬಿಬಿಎಂಪಿಯ ಗಂಭೀರ ದೌರ್ಬಲ್ಯ ಎಂದು ಗುರುತಿಸಬಹುದಾಗುದೆ.
ಪಿಜಿ ಮಾಲೀಕರ ಬೇಡಿಕೆ:
ಇನ್ನು ಬೆಂಗಳೂರಿನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪಿಜಿಗಳ ಸಂಖ್ಯೆ 20-25 ಸಾವಿರದಷ್ಟಿದೆ ಎನ್ನಬಹುದು. ಈ ಪೈಕಿ ಎಷ್ಟೋ ಪಿಜಿಗಳಿಗೆ ನಿಖರವಾದ ಮಾಹಿತಿ ಇಲ್ಲ ಎಂಬುದು ನಿಜಕ್ಕೂ ಆತಂಕದ ಸುದ್ದಿ. ಹೀಗಾಗಿ ಪಿಜಿ ಮಾಲೀಕರು ನಲವತ್ತು ಅಡಿ ರಸ್ತೆ ನೆಪವೊಡ್ಡಿ ಬಂದ್ ಮಾಡುವುದನ್ನು ತೀವ್ರವಾಗಿ ವಿರೋಧ ವ್ಯಕ್ತಪಡಿಸಿದ್ದಾರೆ. ನಿರ್ದಿಷ್ಟ ಮಾರ್ಗಸೂಚಿ ರೂಪಿಸಿ ಅನುಮತಿ ನೀಡುವಂತೆ ಮನವಿ ಸಲ್ಲಿಸಿದ್ದಾರೆ ಎಂದು ಬೆಂಗಳೂರಿನ ಪಿಜಿ ಅಸೋಸಿಯೇಷನ್‌ನ ಜಂಟಿ ಕಾರ್ಯದರ್ಶಿ ಬಿ. ಅರ್ಜುನ್ ತಿಳಿಸಿದ್ದಾರೆ.
ಬಿಬಿಎಂಪಿಯ ವಿಶೇಷ ಆಯುಕ್ತ ಸುರಳ್ಕರ್ ವಿಕಾಸ್ ಕಿಶೋರ್ ಅವರು ನೀಡಿರುವ ಮಾಹಿತಿಯಂತೆ, ಮಾರ್ಗಸೂಚಿ ಹಾಗೂ ಪರವಾನಗಿ ನಿಯಮಗಳನ್ನು ಲೆಕ್ಕಿಸದೆ ಕಾರ್ಯನಿರ್ವಹಿಸುವ ಪಿಜಿಗಳ ಮೇಲೆ ಕ್ರಮ ಮುಂದುವರಿಯಲಿದ್ದು, ನಿಯಮ ಪಾಲನೆ ಮಾಡದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು.


Click it and Unblock the Notifications