ಇನ್ನೊಂದೆರಡ್ಮೂರು ತಿಂಗಳುಗಳಲ್ಲಿ ಮಳೆಗಾಲ ಶುರುವಾಗುತ್ತದೆ. ಮಳೆಗಾಲ ಬಂತು ಎಂದರೆ ಬೆಂಗಳೂರಿನ ಜನರ ಒದ್ದಾಟ ಹೇಳೋಹಾಗಿಲ್ಲ. ರಾಜಧಾನಿ ಬೆಂಗಳೂರಿನಲ್ಲಿ ಮಳೆಯಾರ್ಭಟ ಕಣ್ಣಾರೆ ನೋಡಿ ಅನುಭವಿಸಿದೋರಿಗೇ ಗೊತ್ತು. ಎಲ್ಲೆಂದರಲ್ಲಿ ನೀರು ನಿಂತುಕೊಳ್ಳುವುದು. ಭಾರಿ ಮಳೆಯಿಂದ ಮರಗಳು, ವಿದ್ಯುತ್ ಕಂಬಗಳು ಬೀಳುವುದು. ಇದೆಲ್ಲದರ ಪರಿಣಾಮವಾಗಿ ಟ್ರಾಫಿಕ್ ಕಿರಿಕಿರಿ ಹೆಚ್ಚಾಗುವುದು. ಇದು ಮಳೆಗಾಲದಲ್ಲಿ ಬೆಂಗಳೂರು ಜನರಿಗೆ ಸಿಗುವ ಉಡುಗೊರೆ. ಬೆಂಗಳೂರಿನಲ್ಲಿ ಏನೇ ಬದಲಿಸಿದರೂ ಟ್ರಾಫಿಕ್ ಮಾತ್ರ ಬದಲಾಗೋದಿಲ್ಲವೇನೋ ಎಂಬಂತಿರುತ್ತದೆ. ಮಳೆ ಬಂದರೆ ಬೆಂಗಳೂರಿಗೆ ಪ್ರವಾಹವೇ ಬಂದಂತಾಗಿರುತ್ತದೆ. ಈ ಪ್ರವಾಹ ನಿಯಂತ್ರಣಕ್ಕೆ ಬಿಬಿಎಂಪಿ ಒಂದಷ್ಟು ಕಸರತ್ತು ನಡೆಸಿದ್ದರೂ, ಆ ಯೋಜನೆಗಳು ಮಾತ್ರ ಇನ್ನೂ ನಿಧಾನಗತಿಯಲ್ಲಿ ಸಾಗುತ್ತಿವೆ.

ಹೌದು, ಪ್ರವಾಹಕ್ಕೆ ತಡೆ ನೀಡುವ ಯೋಜನೆಗಾಗಿ ಬಿಬಿಎಂಪಿಯು, ಕೇಂದ್ರ ಸರ್ಕಾರದಿಂದ 247 ಕೋಟಿ ರೂ.ಗಳಷ್ಟು ಎನ್‌ಡಿಎಮ್‌ಎಫ್ (ರಾಷ್ಟ್ರೀಯ ವಿಪತ್ತು ತಗ್ಗಿಸುವಿಕೆ ನಿಧಿ) ಅನುದಾನ ಪಡೆದಿತ್ತು. ಈ ಅನುದಾನ ಕೈಯಲ್ಲಿದ್ದರೂ ಯೋಜನೆ ಮಾತ್ರ ಇನ್ನೂ ಅನುಷ್ಠಾನಗೊಂಡಿಲ್ಲ. ಈ ಹೂಡಿಕೆ ಇನ್ನೂ ಕಾಗದದ ಮೇಲೆಯೇ ಬಾಕಿಯಿದೆ ಎಂಬುದು ಕಹಿ ಸತ್ಯ.
ಬಿಬಿಎಂಪಿ ಮುಖ್ಯ ಇಂಜಿನಿಯರ್ ಹೇಳಿದ್ದು ಹೀಗೆ:
ಇನ್ನು ಈ ಬಗ್ಗೆ ಬಿಬಿಎಂಪಿ ಮುಖ್ಯ ಇಂಜಿನಿಯರ್, ಬಿ.ಎಸ್. ಪ್ರಹ್ಲಾದ್ ಮಾತನಾಡಿದ್ದಾರೆ. ಅವರು ಹೇಳುವ ಪ್ರಕಾರ, ಈ ನಿಧಿಗೆ ನಾವು ಕಳೆದ ಎರಡು ವರ್ಷಗಳಿಂದ ಕಾದಿದ್ದೆವು. ಜನವರಿಯಲ್ಲಿಯೇ ದೃಢೀಕರಣ ಸಿಕ್ಕಿತು. ಈಗ ಟೆಂಡರ್‌ಗಳನ್ನು ಕರೆದಿದ್ದೇವೆ. ಈ ಟೆಂಡರ್ ಪ್ರಕ್ರಿಯೆಯು ಇದೀಗ ಮಾತ್ರ ಪ್ರಾರಂಭವಾಗಿರುವುದರಿಂದ, ಈ ವರ್ಷ ಮಳೆಯಲ್ಲಿಯೇ ಫಲ ಕಾಣಬಹುದೇ ಎಂಬ ಪ್ರಶ್ನೆಗೆ ಅಧಿಕಾರಿಗಳಿಗೂ ಸ್ಪಷ್ಟ ಉತ್ತರವಿಲ್ಲ ಎಂಬುದಾಗಿದೆ.
ಈ 247ಕೋಟಿ ರೂ.ಗಳಲ್ಲಿ ಪ್ರಮುಖವಾಗಿ ಮಳೆನೀರು ಚರಂಡಿ ವ್ಯವಸ್ಥೆಗಳ ಬಲಪಡಿಕೆ, ಪ್ರವಾಹಪೀಡಿತ ಪ್ರದೇಶಗಳಲ್ಲಿ ನೀರು ಹರಿಯುವ ಮಾರ್ಗಗಳ ನಿರ್ಮಾಣ, ಮತ್ತು ಐದು ಪ್ರಮುಖ ಸರೋವರಗಳ ಪುನರುಜ್ಜೀವನೆಗೆ 75 ಕೋಟಿ ರೂ.ಗಳನ್ನು ಮೀಸಲಿಟ್ಟಿದ್ದಾರೆ. ಆದರೆ ಈ ಎಲ್ಲ ಯೋಜನೆಗಳ ತ್ವರಿತ ಜಾರಿಗೆ ಯಾವುದೇ ದೃಢವಾದ ಯೋಜನಾ ಕ್ರಮಗಳು ಈಗಾಗಲೇ ಗೋಚರಿಸುತ್ತಿಲ್ಲ.
ಇನ್ನು 2024ರ ಆಗಸ್ಟ್ ಮತ್ತು ಸೆಪ್ಟೆಂಬರ್‌ನಲ್ಲಿ ನಗರದಲ್ಲಿ ಸುರಿದ ಧಾರಾಕಾರ ಮಳೆ ಬೆಂಗಳೂರಿನ ಮೂಲಸೌಕರ್ಯದ ದುರ್ಬಲತೆಯನ್ನು ಬಿಚ್ಚಿಟ್ಟಿತು. ಬೆಳ್ಳಂದೂರು, ಸರ್ಜಾಪುರ ರಸ್ತೆ, ವೈಟ್‌ಫೀಲ್ಡ್, ಯಲಹಂಕದಂತಹ ಪ್ರದೇಶಗಳಲ್ಲಿ ಮನೆಗಳು, ರಸ್ತೆಗೋಡೆಗಳು ನೀರಿನಲ್ಲಿ ಮುಳುಗಿ ಹೋಗಿ, ನಾವಿಗೇಷನ್ ದೋಣಿಗಳು ಮತ್ತು ಟ್ರ್ಯಾಕ್ಟರ್‌ಗಳೇ ನಿತ್ಯ ಪ್ರಯಾಣದ ಮಾರ್ಗವಾಗಿದ್ದವು. ಐಟಿ ಉದ್ಯೋಗಿಗಳು ರಸ್ತೆಗಳಲ್ಲೇ ಗಂಟೆಗಟ್ಟಲೆ ಸಿಲುಕಿದ್ದರು. ಮೂಲಭೂತ ಸೇವೆಗಳಿಗಾಗಿ ಜನರು ಹರಸಾಹಸಪಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು.
ಇನ್ನಾದರೂ ಇದರಿಂದ ಸರ್ಕಾರ ಬುದ್ದಿವಂತಿಕೆಯ ಪಾಠ ಕಲಿಯಬೇಕಿದೆ. ಏಕೆಂದರೆ ಈ ಬಾರಿ ಮುಂಚಿತವಾಗಿ 247 ಕೋಟಿ ರೂ.ಗಳನ್ನು ಮಂಜೂರು ಮಾಡಿದೆ. ಆದರೆ ಈ ಅನುದಾನವನ್ನು ಬಳಸುವುದು ಮುಂದಿನ ವರ್ಷಕ್ಕೆ ಮಾತ್ರ ಸಾಧ್ಯವಾಗಬಹುದು ಎಂಬುದು ಅಧಿಕಾರಿಗಳ ನೈಜ ನಿರೀಕ್ಷೆ ಇದೆ.
ಇನ್ನು ಈ ಅಪಾಯದ ಪೂರ್ವಭಾವಿ ನಿರ್ವಹಣೆಗಾಗಿ ತುರ್ತು ಅನುದಾನಗಳನ್ನು ನೀಡಲಾಗಿದೆ. ಅವುಗಳು ಕೇವಲ ಟೆಂಡರ್ ಪ್ರಕ್ರಿಯೆಗಳ ಚುಟುಕಾಗಿ ಉಳಿದಿವೆ. ಬೆಂಗಳೂರಿನಲ್ಲಿ ಮುಂಬರುವ ಮಳೆಯಲ್ಲೂ ಮತ್ತೆ ನೆರೆ ಉಂಟಾಗುತ್ತದೆ. ಹೀಗಾಗಿ ಮೊದಲೇ ಎಚ್ಚೆತ್ತುಕೊಳ್ಳಬೇಕಾಗುತ್ತದೆ. ಮಳೆಗಾಲ ಇನ್ನೂ ಮೂರು ತಿಂಗಳು ದೂರವಿದೆ. ಆದರೆ ಕಾಮಗಾರಿಗಳು ಜೂನ್ ಅಂತ್ಯದ ವೇಳೆಗೆ ಆರಂಭವಾಗುವುದೆಂದು ಬಿಬಿಎಂಪಿ ತಿಳಿಸಿದೆ. ಆದರೆ ಪ್ರತಿ ಬಾರಿ ಟೆಂಡರ್ ಪ್ರಕ್ರಿಯೆ, ಗುತ್ತಿಗೆದಾರರ ಬದಲಾವಣೆ, ಕಾನೂನು ಜಟಿಲತೆ ಎಂಬ ಹೆಸರಿನಲ್ಲಿ ಕಾಮಗಾರಿಗಳು ವಿಳಂಬವಾಗುವುದು ಬೆಂಗಳೂರಿಗರಿಗೆ ಹೊಸದೇನಲ್ಲ. ಬೆಂಗಳೂರಿನ ಪ್ರತಿ ಮಳೆಗಾಲವೂ ನದಿ ಪ್ರವಾಹದಂತಿರುವುದು ನಗರ ಪಾಲಿಕೆಯ ನಿರ್ಲಕ್ಷ್ಯಕ್ಕೆ ನಿದರ್ಶನ. ಈ ಬಾರಿ ಹಣ ಬಂದಿದೆ. ಆದರೆ ಅದರ ಪರಿಣಾಮ ಮಾತ್ರ ಮುಂದಿನ ಮಳೆಯ ನಂತರವೇ ತಿಳಿಯಬೇಕಾಗಿದೆ. ಈ ಬಡಾವಣೆಯಲ್ಲೊಂದು ಪ್ರಶ್ನೆ ಎದ್ದಿದೆ.


Click it and Unblock the Notifications