ಬೆಂಗಳೂರು, ನವೆಂಬರ್ 12: ಬೆಂಗಳೂರಿಗರಿಗೆ ಪಾಲಿಕೆ ಸಿಹಿ ಸುದ್ದಿ ನೀಡಿದೆ. ಅದರಲ್ಲೂ ಪ್ರಾಪರ್ಟಿ ಮಾಲಿಕರು ತಮ್ಮ ಆಸ್ತಿಗಳ ಇ ಖಾತಾ ಪಡೆಯಲು ಬೆಂಗಳೂರಿನ ಸೈಬರ್‌ಗಳಿಗೆ ಅಲೆದು ಸಾಕಾಗಿದ್ದರು. ಆದ್ರೀಗ ಈ ಸಮಸ್ಯೆ ಬಗೆಹರಿಸಲು ಪಾಲಿಕೆ ಬೇರೆ ಆಯ್ಕೆಯನ್ನ ಜನರ ಮುಂದಿಟ್ಟಿದೆ. ಈ ಮೊದಲು ಬಿಬಿಎಂಪಿ ಕಚೇರಿ ಹಾಗೆ ಇತರೆ ಸೈಬರ್ ಸೆಂಟರ್‌ಗಳಲ್ಲಿ, ಇತರೆ ವೆಬ್‌ಸೈಟ್‌ಗಳಲ್ಲಿ ಇ ಖಾತಾ ಪಡೆಯುತ್ತಿದ್ದರು. ಆದ್ರೀಗ ಬಿಬಿಎಂಪಿ ಇ ಖಾತಾ ತೆರೆಯಲು ಸುಲಭ ಮಾರ್ಗವನ್ನ ಜನರಿಗೆ ಪರಿಚಯಿಸ್ತಿದೆ. ಇ ಖಾತಾ ಮಾಡಿಸಲು ಬೆಂಗಳೂರಲ್ಲಿ ಅಲೆದಾಡುವ ಬದಲು ಸಮೀಪದ ಬೆಂಗಳೂರು ಒನ್ ಕೇಂದ್ರಗಳಲ್ಲೇ ಈಗ ಇ ಖಾತಾ ಪಡೆಯಬಹುದು.

ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿ ಇ-ಖಾತಾ ಪಡೆಯಲು ಮೊದಲು ಪಾಲಿಕೆ ಕಚೇರಿಗಳಲ್ಲಿ ಸೇವೆಗಳನ್ನು ಒದಗಿಸಲಾಗ್ತಿತ್ತು. ನಂತರ, ವೆಬ್‌ಸೈಟ್‌ಗಳ ಮೂಲಕ ಇ-ಖಾತಾ ಪಡೆಯಲು ಅವಕಾಶ ನೀಡಲಾಗಿತ್ತು. ಆದ್ರೆ ಇತ್ತೀಚಿನ ದಿನಗಳಲ್ಲಿ ಕೆಲವು ಸೈಬರ್ ಸೆಂಟರ್‌ಗಳಲ್ಲಿ ಇ ಖಾತಾ ಮಾಡಿಸುವವರಿಂದ ಅಕ್ರಮವಾಗಿ ಹಣವನ್ನು ವಸೂಲಿ ಮಾಡಲಾಗುತ್ತಿತ್ತು. ಹೀಗಾಗಿ ಈ ಬಗ್ಗೆ ಹಲವು ದೂರುಗಳು ಸಹ ಬಂದಿದ್ದವು. ಈ ಹಿನ್ನೆಲೆ ಇದನ್ನ ತಡೆಯುವ ಸಲುವಾಗಿ ಬಿಬಿಎಂಪಿ ಹೊಸ ಯೋಜನೆಯ ಮೂಲಕ ಬೆಂಗಳೂರು ಒನ್ ನಾಗರೀಕ ಕೇಂದ್ರಗಳಲ್ಲೂ ಇ-ಖಾತಾ ಸೇವೆಯನ್ನು ಪ್ರಾರಂಭಿಸಿದೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ಯಾರೆಲ್ಲ ಇ ಖಾತಾ ಪಡೆಯಲು ಬಯಸುತ್ತಾರೋ ಅಂತವರಿಗೆ ಪಾಲಿಕೆ ಕಚೇರಿಗಳಲ್ಲಿ ಅವಕಾಶ ನೀಡಲಾಗಿದೆ. ಈಗಾಗಲೇ ಪಾಲಿಕೆಯು ಬಿಬಿಎಂಪಿ ಕಚೇರಿಗಳಲ್ಲಿ ಇ-ಖಾತಾಗೆ ಕೌಂಟರ್ ತೆರೆಯಲು ಸೂಚಿಸಿದೆ. ಈಗ ಸಾರ್ವಜನಿಕರು ಈ ಕೇಂದ್ರಗಳಿಗೆ ಭೇಟಿ ನೀಡಿ ಇ-ಖಾತಾ ಪಡೆಯಬಹುದು.
ಈಗಾಗಲೇ ಬೆಂಗಳೂರು ಒನ್ ಸಿಬ್ಬಂದಿಗೆ ಇ-ಖಾತಾ ತೆರೆಯುವ ಬಗ್ಗೆ ಪಾಲಿಕೆ ತರಬೇತಿ ನೀಡಿದೆ. ಹೀಗಾಗಿ ಇ-ಖಾತಾ ಮಾಡಲು 45 ರೂಪಾಯಿ ದರವನ್ನ ಪಾಲಿಕೆ ನಿಗದಿ ಮಾಡಿದೆ. ಸೈಬರ್ ಸೆಂಟರ್‌ಗಳಲ್ಲಿ ಅಕ್ರಮವಾಗಿ ಹಣ ವಸೂಲಿ ಮಾಡುವುದಕ್ಕೆ ಕಡಿವಾಣ ಹಾಕಲು ಈ ಸುಲಭ ಮಾರ್ಗವನ್ನ ಬಿಬಿಎಂಪಿ ತಂದಿದೆ. ಇದರಿಂದಾಗಿ ಜನರು ಈಗ ತಮ್ಮ ಹತ್ತಿರದ ಬೆಂಗಳೂರು ಒನ್ ಕೇಂದ್ರಗಳಲ್ಲಿ ದಾಖಲೆಗಳನ್ನು ಸಲ್ಲಿಸಿ ಆದಷ್ಟು ಬೇಗ ಇ-ಖಾತಾ ಪಡೆಯಲು ಅವಕಾಶ ಮಾಡಿಕೊಟ್ಟಿದೆ.
ಇ ಖಾತಾ ಪಡೆಯಲು ಇಲ್ಲಿದೆ ಸುಲಭ ಮಾರ್ಗ..
ಸುಲಭ ಮಾರ್ಗದಲ್ಲಿ ಸಾರ್ವಜನಿಕರು ಇ ಖಾತಾ ಪಡೆಯಲು ಅವಕಾಶ ಕಲ್ಪಿಸಿರುವ ಪಾಲಿಕೆ ಈಗ ಅದನ್ನ ಹೇಗೆ ಪಡೆಯಬೇಕು ಎಂಬುದರ ಬಗ್ಗೆ ವಿಡಿಯೋ ಬಿಡುಗಡೆ ಮಾಡಿದೆ. ವಿಡಿಯೋ ನೋಡಿಕೊಂಡೆ ಜನರು ಸುಲಭವಾಗಿ ಇ.ಖಾತಾ ಪಡೆಯಲು ಪಾಲಿಕೆ ನೆರವಾಗಲಿದೆ. ಇನ್ನು ಈ ವಿಡಿಯೋವನ್ನ ಕನ್ನಡ ಹಾಗು ಇಂಗ್ಲಿಷ್ ಎರಡು ಭಾಷೆಗಳಲ್ಲಿ ಪಾಲಿಕೆಯ ಯೂಟ್ಯೂಬ್ ಚಾನೆಲ್‌ನಲ್ಲಿ ಹಂಚಿಕೊಳ್ಳಲಾಗಿದೆ. ಇದರಿಂದಾಗಿ ಇ-ಖಾತಾ ಬಗ್ಗೆ ಜನರಿಗಿರುವ ಗೊಂದಲವನ್ನ ನಿವಾರಿಸುವ ಕೆಲಸವನ್ನ ಪಾಲಿಕೆ ಮಾಡ್ತಿದೆ.
ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳ ವಿವರ
ಅರ್ಜಿ ಸಲ್ಲಿಸಲು ನಿಮ್ಮ ಬಳಿ ನಿಮ್ಮ ಆಸ್ತಿ ತೆರಿಗೆ ರಶೀದಿ, ನಿಮ್ಮ ಮಾರಾಟ ಅಥವಾ ನೋಂದಾಯಿತ ಪತ್ರ, ಎಲ್ಲಾ ಮಾಲೀಕರ ಆಧಾರ್
ಬೆಸ್ಕಾಂ ಬಿಲ್, ನೀವು ಕಾವೇರಿ ಸಂಪರ್ಕವನ್ನು ಹೊಂದಿದ್ದರೆ ನಿಮ್ಮ ಜಲಮಂಡಳಿ ಬಿಲ್ ಕಡ್ಡಾಯವಾಗಿರುತ್ತವೆ. ಆದ್ರೆ ಬಿಡಿಎ ಅಥವಾ ಯೋಜನಾ ಪ್ರಾಧಿಕಾರದಿಂದ ಲೇಔಟ್ ಅಥವಾ ಸೈಟ್ ಅನುಮೋದನೆ ದಾಖಲೆಗಳು, ಬಿಬಿಎಂಪಿಯಿಂದ ಕಟ್ಟಡ ಯೋಜನೆ ಅನುಮೋದನೆ, ಡಿಸಿ ಪರಿವರ್ತನೆ ದಾಖಲೆಗಳು ಿಮ್ಮ ಬಳಿ ಇದ್ದರೆ ಅರ್ಜಿ ಸಲ್ಲಿಸಲು ಬಾಕಾಗುತ್ತದೆ.
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (BDA) ಅಥವಾ ಕರ್ನಾಟಕ ಹೌಸಿಂಗ್ ಬೋರ್ಡ್(KHB) ಅಥವಾ ಯಾವುದೇ ಸರ್ಕಾರಿ ಪ್ರಾಧಿಕಾರದಿಂದ ಹಂಚಿಕೆ ಪತ್ರಗಳನ್ನ ನಿಮ್ಮ ಪ್ರಕರಣಕ್ಕೆ ಅನ್ವಯಿಸಿದರೆ ಮತ್ತು ನೀವು ಇದರ ದಾಖಲೆ ಹೊಂದಿದ್ದರೆ ಮಾತ್ರ ಅರ್ಜಿ ಸಲ್ಲಿಸುವ ವೇಳೆ ಬೇಕಾಗಬಹುದು. ಅಲ್ಲದೆ ಈ ಎಲ್ಲಾ ದಾಖಲೆಗಳು ಬೆಂಗಳೂರು ಒನ್ ಕೇಂದ್ರಕ್ಕೆ ಸಲ್ಲಿಸಬೇಕಿಲ್ಲ. ಆದರೆ ಆನ್‌ಲೈನ್ ವಿವರಗಳನ್ನು ಸಲ್ಲಿಸಲು ಈ ದಾಖಲೆಗಳು ಬೇಕಾಗುತ್ತದೆ.
ಸಾರ್ವಜನಿಕರಿಗೆ ಸಹಾಯವಾಗುವ ನಿಟ್ಟಿನಲ್ಲಿ ವಲಯವಾರು ಸಹಾಯವಾಣಿ, ಪಾಲಿಕೆಯಲ್ಲಿ ನೆರವು ಕೇಂದ್ರಗಳು ಹೀಗೆ ಹಲವು ರೀತಿಯಲ್ಲಿ ಇ ಖಾತಾ ಪಡೆಯಬಹುದು. ಈಗ ಇ-ಖಾತಾ ಪಡೆಯಲು ಬೆಂಗಳೂರು ಒನ್ ಕೇಂದ್ರಗಳಲ್ಲಿ ಅವಕಾಶ ಕೊಟ್ಟಿರುವುದು ನಗರವಾಸಿಗಳಿಗೆ ಸಮಾಧಾನ ತಂದಿದೆ.


Click it and Unblock the Notifications