ಬೆಂಗಳೂರು, ನವೆಂಬರ್ 03: ಬೆಳೆಯುತ್ತಿರುವ ಬೆಂಗಳೂರು ನಗರದಲ್ಲಿ ಅದರಲ್ಲೂ ವಿಶೇಷವಾಗಿ ನಗರದ ಹೊರವಲಯದಲ್ಲಿ ಅವ್ಯವಸ್ಥಿತ ಯೋಜನೆಗಳಿಗೆ ಕಡಿವಾಣ ಹಾಕಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮುಂದಾಗಿದೆ. ಇದಕ್ಕಾಗಿ ಹೊಸ ಆದೇಶವೊಂದನ್ನು ಹೊರಡಿಸಿದ್ದು, ಅನುಮೋದನೆಯನ್ನು ಹೊಂದಿರದ ಸಿಂಗಲ್ ಪ್ಲಾಟ್‌ಗಳಿಗೆ 'ಎ' ಅಥವ 'ಬಿ' ಖಾತಾ ನೀಡುವುದನ್ನು ಬಿಬಿಎಂಪಿ ನಿಲ್ಲಿಸಲಿದೆ.
ಬೆಂಗಳೂರು ನಗರಕ್ಕೆ ಸಂಬಂಧಿಸಿದಂತೆ ಇದೊಂದು ಮಹತ್ವದ ಆದೇಶ ಎಂದು ಪರಿಗಣಿಸಲಾಗುತ್ತಿದೆ. ಯೋಜನಾ ಮಂಡಳಿಯ ಅನುಮೋದನೆಯನ್ನು ಹೊಂದಿರದ ಸಿಂಗಲ್ ಪ್ಲಾಟ್‌ಗಳಿಗೆ (ಏಕ ನಿವೇಶನ ಸ್ವತ್ತು) 'ಎ' ಅಥವಾ 'ಬಿ' ಖಾತಾ ನೀಡುವುದನ್ನು ನಿಲ್ಲಿಸಲಿದೆ. ಪ್ಲಾಟ್ ಅನ್ನು ಕೃಷಿಯೇತರ ಉದ್ದೇಶಕ್ಕೆ ಪರಿವರ್ತಿಸಿದ್ದರೂ ಸಹ ಖಾತೆ ನೀಡುವುದಿಲ್ಲ.

ವಿಶೇಷವಾಗಿ ಬೆಂಗಳೂರು ನಗರದ ಹೊರವಲಯದಲ್ಲಿ ಅವ್ಯವಸ್ಥಿತ ಅಭಿವೃದ್ಧಿಗೆ ಕಡಿವಾಣ ಹಾಕಲು ಬಿಬಿಎಂಪಿ ಈ ತೀರ್ಮಾನವನ್ನು ಕೈಗೊಂಡಿದೆ. ಈ ನಿರ್ಧಾರದಿಂದ ಅನುಮೋದಿಸದ ಸೈಟ್‌ಗಳ ಮಾರಾಟವನ್ನು ನಿರ್ಬಂಧಿಸಲಾಗುತ್ತದೆ. ಏಕೆಂದರೆ ಖಾತಾ ಇಲ್ಲದೇ ಖರೀದಿದಾರರು ಕಟ್ಟಡದ ಯೋಜನೆ ಅನುಮೋದನೆಗೆ ಅರ್ಜಿ ಸಲ್ಲಿಸಲು ಸಾಧ್ಯವಿಲ್ಲ.
ಅಕ್ಟೋಬರ್ ತಿಂಗಳಿನಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಪತ್ರ ಬರೆದ ಬಳಿಕ ಬಿಬಿಎಂಪಿ ಈ ಕುರಿತು ಆದೇಶವನ್ನು ಹೊರಡಿಸಿದೆ. ಬಿಡಿಎ ಏಕ ನಿವೇಶನ ಸ್ವತ್ತು (20,000 ಚದರ ಮೀಟರ್) ಅಳತೆಗೆ ಅನುಮೋದಿಸುವ ಅಧಿಕಾರವನ್ನು ಹೊಂದಿದೆ. ಹೊಸ ಅದೇಶದ ಪ್ರಕಾರ ಬಿಡಿಎ ಯೋಜನಾ ಅನುಮೋದಿತ ಪ್ರದೇಶದಲ್ಲಿ ಬರುವ ಅಥವ ನೋಂದಾಯಿತಿ ಬಡಾವಣೆಗಳ ಸ್ವತ್ತುಗಳಿಗೆ ಮಾತ್ರ ಬಿಬಿಎಂಪಿ 'ಎ' ಖಾತಾವನ್ನು ನೀಡಬಹುದಾಗಿದೆ.
ಈ ಆದೇಶದ ಮೂಲ ಉದ್ದೇಶ ಬೇರೆಯದೇ ಆಗಿದೆ. ನಗರದ ಹೊರವಲಯದಲ್ಲಿನ ಅನಧಿಕೃತ ಬೆಳವಣಿಗೆಗೆ ತಡೆ ಹಾಕುವ ಜೊತೆಗೆ ಸಾರ್ವಜನಿಕ ಮೂಲ ಸೌಲಭ್ಯಗಳಾದ ರಸ್ತೆ, ಪಾರ್ಕ್ ಮುಂತಾದವುಗಳಿಗೆ ಭೂಮಿಯನ್ನು ಉಳಿಸುವುದು ಉದ್ದೇಶವಾಗಿದೆ. ಈ ಆದೇಶದ ಅನ್ವಯ ಯಾವುದೇ ರೀತಿಯ ಆಸ್ತಿ, ಲೇಔಟ್‌ಗಳಾಗಿರಬಹುದು ಮೊದಲು ಬಿಡಿಎ ಅನುಮೋದನೆಯನ್ನು ಪಡೆದುಕೊಳ್ಳಿ ಎಂಬುದಾಗಿದೆ.
ಬಿಬಿಎಂಪಿ ಆದೇಶದ ಪರಿಣಾಮ ನಗರದ ಹೊರವಲಯದಲ್ಲಿನ ಆಸ್ತಿಗಳ ಮೇಲೆ ಪ್ರಭಾವ ಬೀರುವ ನಿರೀಕ್ಷೆ ಇದೆ. ಈ ಪ್ರದೇಶದಲ್ಲಿ ಅನುಮೋದನೆಯನ್ನು ಪಡೆಯದ ಅನೇಕ ಲೇಔಟ್‌ಗಳು ತಲೆ ಎತ್ತುತ್ತಿವೆ. ಆದರೆ ಈ ಆದೇಶ ಸೆಪ್ಟೆಂಬರ್ 30ರೊಳಗೆ ನೋಂದಾಯಿಸಲಾದ ಆಸ್ತಿಗಳಿಗೆ ಖಾತೆ ನೀಡುವುದಕ್ಕೆ ಅನ್ವಯವಾಗುವುದಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.
ಸೆಪ್ಟೆಂಬರ್ 30ರೊಳಗೆ ನೋಂದಾಯಿತಗೊಂಡಿರುವ ಆಸ್ತಿಗಳು ಯೋಜನಾ ಅಧಿಕಾರಿಗಳಿಂದ ಅನುಮೋದನೆ ಗೊಂಡಿರದಿದ್ದರೂ ಅವುಗಳಿಗೆ 'ಬಿ' ಖಾತಾ ನೀಡುವಂತೆ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅಧಿಕಾರಿಗಳಿಗೆ ಸೂಚನೆಯನ್ನು ನೀಡಿದ್ದಾರೆ.
ಆದರೆ ಬಿಬಿಎಂಪಿಯ ಈ ಆದೇಶ ಗೊಂದಲಕ್ಕೆ ಸಹ ಕಾರಣವಾಗಿದೆ. ಆಸ್ತಿಗಳ ಮಾಲೀಕರು, ಬಿಲ್ಡರ್‌ಗಳು, ವಕೀಲರು, ಜನರು ಬಿಬಿಎಂಪಿಯಲ್ಲಿ ಖಾತೆಗಾಗಿ ನಾವು ಸಲ್ಲಿಕೆ ಮಾಡಿದ ಅರ್ಜಿಗಳ ಮುಂದಿನ ಹಂತವೇನು? ಎಂದು ತಿಳಿಯಲು ಬಿಬಿಎಂಪಿ ಕಚೇರಿಗೆ ಭೇಟಿ ನೀಡುತ್ತಿದ್ದಾರೆ.
ತಾತ ನಿರ್ಮಾಣ ಮಾಡಿದ ಮನೆಯನ್ನು ನಾನು ಈಗ ಕಡೆವಿ ಹೊಸದಾಗಿ ಕಟ್ಟಲು ಸಾಧ್ಯವಿಲ್ಲ. ಏಕೆಂದರೆ ಹೊಸ ಕಟ್ಟಡಕ್ಕೆ ಬಿಬಿಎಂಪಿಯ ಹೊಸ ಆದೇಶದಿಂದ ಅನುಮತಿ ದೊರೆಯುವುದಿಲ್ಲ. ಈ ಆದೇಶ ಗೊಂದಲಕ್ಕೆ ಕಾರಣವಾಗಿದೆ ಎಂದು ನಾಗರಿಕರೊಬ್ಬರು ಹೇಳಿದ್ದಾರೆ.
30-40 ವರ್ಷಗಳಿಂದ ಜಾರಿಯಲ್ಲಿರುವ ನಿಯಮವನ್ನು ಈಗ ಬದಲಾವಣೆ ಮಾಡುತ್ತಿರುವುದೇಕೆ? ಬಹುಶಃ ಬಿಬಿಎಂಪಿ ಮತ್ತು ಬಿಡಿಎ ನಡುವೆ ಸಮನ್ವಯತೆಯ ಕೊರತೆ ಇದೆ. ಇದಕ್ಕಾಗಿ ಹೊಸ ನಿಯಮಗಳ ಮೂಲಕ ಜನರಿಗೆ ತೊಂದರೆ ನೀಡಲಾಗುತ್ತಿದೆ ಎಂದು ಜನರು ಬಿಬಿಎಂಪಿ ವಿರುದ್ಧ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.


Click it and Unblock the Notifications