ರಾಜಧಾನಿ ಬೆಂಗಳೂರಿನಲ್ಲಿ ತ್ಯಾಜ್ಯ ನಿರ್ವಹಣೆ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ತ್ಯಾಜ್ಯ ನಿರ್ವಹಣೆಯೇ ದೊಡ್ಡ ಸವಾಲಾಗಿ ಪರಿಣಮಿಸಿದೆ. ಹೀಗಾಗಿ ಬಿಬಿಎಂಪಿಯು ಒಂದು ಮಹತ್ವದ ಕೆಲಸಕಕೆ ಕೈ ಹಾಕಿದೆ. ಅದೇನೆಂದರೆ ರಾಜ್ಯ ಸರ್ಕಾರದ ಷರತ್ತುಬದ್ಧ ಅನುಮೋದನೆ ಪಾಲಿಸಿ, ಬಿಬಿಎಂಪಿಯು ತ್ಯಾಜ್ಯ ನಿರ್ವಹಣೆಗಾಗಿ ಖಾಸಗಿ ಸಂಸ್ಥೆಯ ಭೂಮಿ ಖರೀದಿಗೆ ಸಜ್ಜಾಗಿದೆ. ಭೂಮಿ ಖರೀದಿಸಿದ ನಂತರ ತ್ಯಾಜ್ಯ ಸಂಸ್ಕರಣಾ ಘಟಕ ಸ್ಥಾಪಿಸಲು ಮುಂದಾಗಿದೆ. ಇನ್ನು ಬೆಂಗಳೂರಿನಲ್ಲಿ ಖಾಸಗಿ ಭೂಮಿಯನ್ನು ತ್ಯಾಜ್ಯ ಸಂಸ್ಕರಣಾ ಘಟಕಕ್ಕಾಗಿ, ಇದೇ ಮೊದಲ ಬಾರಿ ಬಳಸಲು ಮುಂದಾಗಲಾಗಿದೆ.

ಯಾರಿಂದ ಭೂಮಿ ಖರೀದಿ:
ಅಂದಹಾಗೆ ಈ ಖಾಸಗಿ ಭೂಮಿಯನ್ನು ಟೆರ್ರಾ ಫರ್ಮಾ ಬಯೋಟೆಕ್ನಾಲಜೀಸ್ ಲಿಮಿಟೆಡ್ ಎಂಬ ಖಾಸಗಿ ಕಂಪನಿಯಿಂದ ಖರೀದಿಸಲು ಬಿಬಿಎಂಪಿ ಮುಂದಾಗಿದೆ. ಇದು ದೊಡ್ಡಬಳ್ಳಾಪುರ ತಾಲೂಕಿನ ಗುಂಡಲಹಳ್ಳಿಯಲ್ಲಿ ಇರುವ ಭೂಮಿಯಾಗಿದ್ದು, ಇದರ ವ್ಯಾಪ್ತಿ 38 ಎಕರೆ 18 ಗುಂಟೆ ಇದೆ. ಈ ಟೆರ್‍ರಾ ಫರ್ಮಾ ಬಯೋಟೆಕ್ನಾಲಜಿ ಲಿಮಿಟೆಡ್ ಕಂಪನಿಯು ಸುಮಾರು ಹದಿನೈದು ವರ್ಷಗಳ ಹಿಂದೆಯೇ, ತ್ಯಾಜ್ಯ ಸಂಸ್ಕರಣೆಗಾಗಿ ನಗರ ಪಾಲಿಕೆಯೊಂದಿಗೆ ಒಪ್ಪಂದ ಮಾಡಿಕೊಂಡಿತ್ತು. ಇದರ ಅನುಸಾರ ದಿನಕ್ಕೆ 1,000 ಟನ್ ತ್ಯಾಜ್ಯ ಸಂಸ್ಕರಿಸಲು ಸ್ಥಾವರ ನಿರ್ಮಿಸಿತ್ತು. ಆದರೆ ಗ್ರಾಮಸ್ಥರು ವ್ಯಾಪಕ ವಿರೋಧಪಡಿಸಿದ ಪರಿಣಾಮ, 2015 ರಲ್ಲಿಯೇ ಯೋಜನೆ ಸ್ಥಗಿತಗೊಂಡಿತ್ತು.
ಇದರಿಂದ ಈ ಹಿಂದೆ ತ್ಯಾಜ್ಯ ಸಂಸ್ಕರಣಾ ಘಟಕಗಳನ್ನು, ಸಾರ್ವಜನಿಕರ ಭೂಮಿಯಲ್ಲೇ ಸ್ಥಾಪಿಸಲಾಗಿತ್ತು. ಆದರೂ, ಈ ಬಾರಿ ಖಾಸಗಿ ಭೂಮಿಯನ್ನು ನೇರವಾಗಿ ಖರೀದಿಸುವ ನಿರ್ಧಾರವು ಬಿಬಿಎಂಪಿಯ ಹೊಸ ಪ್ರಯೋಗವಾಗಿದೆ. ಇನ್ನು ಇದಕ್ಕಾಗಿ ಪರಿಹಾರ ಮೊತ್ತ ನಿರ್ಧರಿಸುವ ಜವಾಬ್ದಾರಿ, ಈಗ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿಗೆ ನೀಡಲಾಗಿದೆ.
ಸಮಗ್ರ ತ್ಯಾಜ್ಯ ಸಂಸ್ಕರಣಾ ಸೌಲಭ್ಯ:
ಖರೀದಿ ಮಾಡಲಾಗುವ ಖಾಸಗಿ ಜಮೀನು 134 ಎಕರೆ ವಿಸ್ತೀರ್ಣದ ಭೂ ಭಾಗದಲ್ಲಿದೆ, ಇದರಲ್ಲಿ ವಿವಿಧ ಮಾಲೀಕತ್ವಗಳಿವೆ. ಅಂದರೆ 46 ಎಕರೆ ಕಂದಾಯ ಇಲಾಖೆಗೆ ಸೇರಿದ್ದರೆ, 27 ಎಕರೆ ಖರಾಬ್ ಭೂಮಿಯಾಗಿದ್ದು ಸರ್ಕಾರಿ ಮಾಲೀಕತ್ವದಲ್ಲಿದೆ, 38 ಎಕರೆ ಟೆರ್ರಾ ಫರ್ಮಾದ ಸ್ವಾಮ್ಯದಲ್ಲಿದೆ, 22 ಎಕರೆ ಅದೇ ಕಂಪನಿಗೆ ಗುತ್ತಿಗೆ ನೀಡಲಾಗಿರುವ ರೈತರಿಂದ ಉಪಯೋಗದಲ್ಲಿದೆ. ಈ ಸಂಪೂರ್ಣ ಭೂ ಪ್ರದೇಶದಲ್ಲಿ ತ್ಯಾಜ್ಯ ತಂತ್ರಜ್ಞಾನ ಪಾರ್ಕ್ ರೂಪದಲ್ಲಿ ಸಮಗ್ರ ತ್ಯಾಜ್ಯ ಸಂಸ್ಕರಣಾ ಘಟಕ ಸ್ಥಾಪನೆಗೊಳ್ಳಲಿದೆ. ಪ್ರಸ್ತುತ ಯೋಜನೆಯು ನಗರ ತ್ಯಾಜ್ಯದ ಸುಮಾರು 25% ನ್ನು ಸಂಸ್ಕರಿಸುವ ಸಾಮರ್ಥ್ಯ ಹೊಂದಿರಲಿದೆ.
ಇದಕ್ಕೆ ಸರ್ಕಾರದ ಷರತ್ತೇನು..?
ಇನ್ನು ಖಾಸಗಿ ಭೂಮಿ ಖರೀದಿಗೆ ರಾಜ್ಯ ಸರ್ಕಾರವು ಷರತ್ತುಬದ್ಧ ಅನುಮೋದನೆ ನೀಡಿದೆ. 2013ರ ಭೂಸ್ವಾಧೀನ ಕಾಯ್ದೆಯಡಿಯಲ್ಲಿ ಈ ಯೋಜನೆಗೆ ಅನುಮೋದನೆ ನೀಡಲಾಗಿದೆ. ಇನ್ನು ಷರತ್ತೇನೆಂದರೆ, ಟೆರ್ರಾ ಫರ್ಮಾ ತನ್ನ ಸಂಪೂರ್ಣ ಆಸ್ತಿ ಹಾಗೂ ಪಕ್ಕದ ಸರ್ಕಾರಿ ಭೂಮಿಯಿಂದ ಪರಂಪರೆ ತ್ಯಾಜ್ಯವನ್ನು ತನ್ನ ಖರ್ಚಿನಲ್ಲಿ ಸಂಪೂರ್ಣವಾಗಿ ತೆಗೆದುಹಾಕಬೇಕು. ಹಾಗೂ ಬಿಬಿಎಂಪಿ ಟೆರ್ರಾ ಫರ್ಮಾಗೆ ಬಾಕಿ ಇರುವ 6.81 ಕೋಟಿ ರೂ. ಸಾಲದ ಮೊತ್ತವನ್ನು 10 ವರ್ಷಗಳ ಬಡ್ಡಿಯೊಂದಿಗೆ ಕಡಿತಗೊಳಿಸಬೇಕು ಎಂಬುದಾಗಿದೆ. ಈ ಸಾಲವು 2015 ರಲ್ಲಿ ತ್ಯಾಜ್ಯ ಪಾರ್ಕ್ ನಿರ್ಮಾಣಕ್ಕೆ ನೀಡಲಾಗಿತ್ತು. ಸರ್ಕಾರವು ಟೆರ್ರಾ ಫರ್ಮಾದ ಉಪಕರಣಗಳನ್ನು ಖರೀದಿಸುವ ಅಥವಾ 60.99 ಕೋಟಿ ರೂ.ಗಳ ಪರಿಹಾರ ನಿರಾಕರಿಸಿದೆ. ಸರ್ಕಾರಿ ಭೂಮಿಯಲ್ಲಿ ತ್ಯಾಜ್ಯ ಸುರಿಯುವುದರಿಂದ ಉಂಟಾಗುವ ಹಾನಿಗೆ ಪರಿಹಾರ ಪಾವತಿಸಲು ಕಂಪನಿಯು ಒಪ್ಪಂದ ಮಾಡಿಕೊಳ್ಳಬೇಕಿದೆ.
ಪಿಪಿಪಿ ಮಾದರಿಯಲ್ಲಿ ಅಭಿವೃದ್ಧಿ:
ಇಡೀ ಯೋಜನೆ ಪಬ್ಲಿಕ್ ಪ್ರೈವೇಟ್ ಪಾರ್ಟ್ನರ್‌ಶಿಪ್ (PPP) ಮಾದರಿಯಲ್ಲಿ ಸಾಗಲಿದೆ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನೇತೃತ್ವದಲ್ಲಿ ತ್ಯಾಜ್ಯ ಸಂಸ್ಕರಣೆಗೆ ನಾನಾ ಕಡೆಗಳ ಪರಿಶೀಲನೆ ನಡೆಯುತ್ತಿದೆ. ದೊಡ್ಡಬಳ್ಳಾಪುರ ಸ್ಥಳ ಈ ಪೈಕಿ ಪ್ರಮುಖವಾದದ್ದಾಗಿದೆ. ಬಿಬಿಎಂಪಿಯು ಇನ್ನೂ ಮೂರು ಕಡೆಗಳಲ್ಲಿ, ತಲಾ 100 ಎಕರೆ ಭೂಮಿ ಬೇಕಾಗಿರುವ ಸ್ಥಳಗಳ ಹುಡುಕಾಟದಲ್ಲಿದೆ.
ಈ ಯೋಜನೆ ಸಂಬಂಧಿತ ಹಣಕಾಸು ಹಾಗೂ ಪರಿಹಾರ ಸಂಬಂಧದ ವಿಷಯಗಳು ಈಗಾಗಲೇ ಕರ್ನಾಟಕ ಹೈಕೋರ್ಟ್ ಮೊರೆ ಹೋಗಿರುವ ಕಾರಣ, ಬಿಬಿಎಂಪಿಯು ಯಾವುದೇ ಪರಿಹಾರ ನೀಡುವ ಮೊದಲು ನ್ಯಾಯಾಲಯದ ಸೂಚನೆ ಪಡೆದುಕೊಳ್ಳಬೇಕಾಗಿದೆ. ಬಿಬಿಎಂಪಿಯ ಹಿರಿಯ ಅಧಿಕಾರಿಯೊಬ್ಬರ ಪ್ರಕಾರ, ನಗರದ ಹೊರವಲಯದಲ್ಲಿ ಸಾಕಷ್ಟು ಭೂಮಿ ದೊರಕುವುದಿಲ್ಲ ಎಂಬುದು ಈ ನಿರ್ಧಾರಕ್ಕೆ ಕಾರಣವಾಗಿದೆ. ಅವರು, "ನಾವು ಕೆಲವೊಮ್ಮೆ ಉಚಿತವಾಗಿ ಭೂಮಿ ಪಡೆಯುತ್ತಿದ್ದರೂ, ಯೋಜನೆ ಜಾರಿಯಾಗುವುದು ಅತ್ಯಂತ ಕಷ್ಟಕರವಾಗುತ್ತಿದೆ" ಎಂದು ಹೇಳಿದ್ದಾರೆ.


Click it and Unblock the Notifications