ಬೆಂಗಳೂರು ಉತ್ತರದ ಥಣಿಸಂದ್ರ ಜನರಿಗೆ ಬೆಂಗಳೂರು ಅಭಿವೃದ್ಧಿ ಪ್ರಾಧೀಕಾರ (BDA) ದೊಡ್ಡ ಶಾಕ್ ನೀಡಿದೆ. ನಿನ್ನೆ (ಗುರುವಾರ) ಭೂ ಸುಧಾರಣೆ ಕಾರ್ಯಚರಣೆ ನಡೆಸಿದ್ದು ಸುಮಾರು 60ಕ್ಕೂ ಹೆಚ್ಚು ಮನೆಗಳನ್ನು ನೆಲಸಮ ಮಾಡಿದದೆ. ಈ ಕಾರ್ಯಾಚರಣೆಯಿಂದ ಸುಮಾರು ₹80 ಕೋಟಿ ಮೌಲ್ಯದ ಆಸ್ತಿಗಳು ಧ್ವಂಸಗೊಂಡಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ನೆಲಸಮ ಕಾರ್ಯಾಚರಣೆಗೆ ಸುಮಾರು 150 ಮಂದಿ ಪೊಲೀಸ್ ಸಿಬ್ಬಂದಿ, ಕಂದಾಯ ಅಧಿಕಾರಿಗಳು, ಭೂಮಾಪಕರು ಹಾಗೂ 50ಕ್ಕೂ ಹೆಚ್ಚು ಬಿಡಿಎ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಬೆಳಿಗ್ಗೆಯಿಂದಲೇ ಬುಲ್ಡೋಜರ್‌ಗಳ ಮೂಲಕ ಮನೆಗಳು ಮತ್ತು ಕಟ್ಟಡಗಳನ್ನು ಕೆಡವಲಾಯಿತು. ಇದು ಬಿಡಿಎಗೆ ಸೇರಿದ ಸರ್ಕಾರಿ ಭೂಮಿ ಆಗಿರುವುದರಿಂದ ಅತಿಕ್ರಮಣದಾರರಿಗೆ ಮುಂಚಿತ ನೋಟಿಸ್ ನೀಡುವುದು ಕಡ್ಡಾಯವಲ್ಲ ಎಂದು ಬಿಡಿಎ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಸಂಜೆಯ ವೇಳೆಗೆ ವಾಹನ ಸಂಚಾರ ಹೆಚ್ಚಾದ ಕಾರಣ ಕಾರ್ಯಾಚರಣೆ ತಾತ್ಕಾಲಿಕವಾಗಿ ಸ್ಥಗಿತಗೊಂಡಿತು. ಇದರ ಪರಿಣಾಮವಾಗಿ ಸುಮಾರು 2 ಎಕರೆ ಪ್ರದೇಶದಲ್ಲಿದ್ದ ಕೆಲ ಮನೆಗಳು ಕೆಡವುವಿಕೆಯಿಂದ ಉಳಿದಿವೆ. ಮನೆ ಕಳೆದುಕೊಂಡವರಿಗೆ ಹೆಗ್ಡೆ ನಗರ ಸಮುದಾಯ ಭವನದಲ್ಲಿ ತಾತ್ಕಾಲಿಕ ಆಶ್ರಯ ಕಲ್ಪಿಸಲಾಗಿದೆ. ಅಲ್ಲದೆ ಮೊಬೈಲ್ ಶೌಚಾಲಯಗಳು, ಆಹಾರ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗುತ್ತದೆ ಎಂದು ಬಿಡಿಎ ಅಧಿಕಾರಿಗಳು ತಿಳಿಸಿದ್ದಾರೆ.
ಆದರೆ ಈ ಕ್ರಮಕ್ಕೆ ಸ್ಥಳೀಯ ನಿವಾಸಿಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಾವು ವರ್ಷಗಳಿಂದ ಇಲ್ಲಿ ವಾಸಿಸುತ್ತಿದ್ದು ಆಸ್ತಿ ತೆರಿಗೆಯನ್ನು ಸಹ ಪಾವತಿಸುತ್ತಿದ್ದೇವೆ. ಯಾವುದೇ ಮುನ್ಸೂಚನೆ ಇಲ್ಲದೆ ಮನೆಗಳನ್ನು ಕೆಡವಿರುವುದು ಅನ್ಯಾಯ ಎಂದು ನಿವಾಸಿಗಳು ಆರೋಪಿಸಿದ್ದಾರೆ.
ಬಿಡಿಎ ಹಿರಿಯ ಅಧಿಕಾರಿಗಳ ಪ್ರಕಾರ, ಈ ಭೂಮಿ ಅರ್ಕಾವತಿ ಲೇಔಟ್ ಯೋಜನೆಗೆ ಸೇರಿದ್ದು, 2004ರಲ್ಲಿ ಸರ್ಕಾರ ಈ ಜಮೀನನ್ನು ಸ್ವಾಧೀನಪಡಿಸಿಕೊಂಡಿದೆ. ನಂತರ ಭೂಮಾಲೀಕರು ಮತ್ತು ಕೆಲವು ಖರೀದಿದಾರರು ನ್ಯಾಯಾಲಯದ ಮೆಟ್ಟಿಲೇರಿದ್ದರು. ಸರ್ಕಾರ ರಚಿಸಿದ್ದ ಕೇಶವನಾರಾಯಣ ಸಮಿತಿ 2023ರಲ್ಲಿ ಈ ಭೂಮಿ ಬಿಡಿಎಗೆ ಸೇರಿದೆ ಎಂದು ತೀರ್ಪು ನೀಡಿದೆ. ಆದರೂ ಕೆಲವರು ಈ ವಿಚಾರವನ್ನು ಮರೆಮಾಚಿ ಸಾಮಾನ್ಯ ಜನರಿಗೆ ನಿವೇಶನಗಳನ್ನು ಮಾರಾಟ ಮಾಡಿ ಮನೆ ಕಟ್ಟಿಸಿಕೊಂಡಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಇತ್ತೀಚೆಗೆ ಮನೆ ಖರೀದಿಸಿದ್ದ ರೂಹಿ ಬಾನು ಮಾತನಾಡಿ, ತಮ್ಮ ಕುಟುಂಬವು ಲಕ್ಷಾಂತರ ರೂಪಾಯಿ ಸಾಲ ಮಾಡಿ ಮನೆ ತೆಗೆದುಕೊಂಡಿದೆ ಎಂದು ಹೇಳಿದರು. ಮನೆ ಖರೀದಿಸಲು ಹಳೆಯ ಮನೆ ಮಾರಾಟ ಮಾಡಿದ್ದು, ನೋಂದಣಿಗಾಗಿ ಸಾಲ ಕೂಡ ಮಾಡಲಾಗಿದೆ. ಈಗ ಮನೆ ಯಾವಾಗ ಬೇಕಾದರೂ ಕೆಡವಬಹುದು ಎಂಬ ಭಯದಲ್ಲಿ ಜೀವನ ನಡೆಸುತ್ತಿದ್ದೇವೆ ಎಂದು ಅವರು ತಮ್ಮ ನೋವು ವ್ಯಕ್ತಪಡಿಸಿದರು.
ಸ್ಥಳೀಯ ಮಹಿಳೆಯರಾದ ಸುಮಯ್ಯ ಸುಲ್ತಾನ ಮತ್ತು ಐದು ತಿಂಗಳ ಗರ್ಭಿಣಿ ಫಿರ್ದೌಸ್ ಕೂಡ ನೆಲಸಮ ಕಾರ್ಯಾಚರಣೆಯಿಂದ ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಯಾವುದೇ ಸೂಚನೆ ಇಲ್ಲದೆ ಮನೆಗಳನ್ನು ಕೆಡವಲಾಗಿದ್ದು, ವಸ್ತುಗಳು ಸಂಪೂರ್ಣವಾಗಿ ಹಾನಿಯಾಗಿವೆ ಎಂದು ಅವರು ಆರೋಪಿಸಿದ್ದಾರೆ. ಶೌಚಾಲಯದಲ್ಲಿದ್ದಾಗಲೇ ಹೊರಗೆಳೆದರು ಎಂಬ ಆರೋಪಗಳು ಸಹ ಕೇಳಿಬಂದಿವೆ.
ಈ ನೆಲಸಮ ಕಾರ್ಯಾಚರಣೆ ಹಲವು ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳನ್ನು ಬೀದಿಗೆ ತಳ್ಳಿದ್ದು, ಅವರ ಮುಂದಿನ ಜೀವನದ ಬಗ್ಗೆ ಆತಂಕ ಹೆಚ್ಚಾಗಿದೆ. ಸರ್ಕಾರ ಮತ್ತು ಸಂಬಂಧಿತ ಅಧಿಕಾರಿಗಳು ಈ ಸಮಸ್ಯೆಗೆ ಮಾನವೀಯ ದೃಷ್ಟಿಯಿಂದ ಪರಿಹಾರ ನೀಡಬೇಕು ಎಂಬ ಒತ್ತಾಯ ಸಾರ್ವಜನಿಕ ವಲಯದಲ್ಲಿ ಹೆಚ್ಚುತ್ತಿದೆ.


Click it and Unblock the Notifications