ಬೆಳಗಾವಿಯ ಗಡಿ ವಿವಾದ, ಸಂಘರ್ಷವೇನು ನಿನ್ನೆ ಮೊನ್ನೆಯದಲ್ಲಿ..ದಶಕಗಳಿಂದಲೂ ಬೆಳಗಾವಿ ಗಡಿ ಹಾಗೂ ಕರ್ನಾಟಕದ ನಡುವೆ ಭಾಷಾ ಸಂಘರ್ಷ ಹೆಚ್ಚಾಗುತ್ತಲೇ ಇದೆ. ಹಾಗೆಯೇ ಕಳೆದೆರಡು ದಿನಗಳಲ್ಲಿ ಮತ್ತೆ ಬೆಳಗಾವಿಯಲ್ಲಿ ಗಡಿ ಭುಗಿಲೆದ್ದಿದ್ದು, ಬಸ್ ವ್ಯವಸ್ಥೆಗೆ ಅಡಚರಣೆಯಾಗಿದೆ. ಅಂದರೆ ಎರಡೂ ಕಡೆಯ ಬಸ್ ಚಾಲಕರ ಮೇಲೆ ದಾಳಿ ನಡೆದ ಕಾರಣ, ಕರ್ನಾಟಕ ಮತ್ತು ಮಹಾರಾಷ್ಟ್ರ ನಡುವಿನ ಬಸ್ ಸೇವೆಗಳು ನಿಂತು ಹೋಗಿವೆ.

ಭಾಷಾ ಸಂಘರ್ಷಕ್ಕೆ ಹೆಸರುವಾಸಿಯಾಗಿರುವ ಬೆಳಗಾವಿಯಲ್ಲಿ ವಿವಾದಾತ್ಮಕ ಚಟುವಟಿಕೆಗಳು ನಡೆಯೋದೇನು ಅಪರೂಪವಲ್ಲ. ಹಾಗೆಯೇ ಮೊನ್ನೆ ಕೂಡ, ಅಂದರೆ ಫೆಬ್ರವರಿ 21ರಂದು ಬೆಳಗಾವಿಯ ಮಾರಿಹಾಳದಲ್ಲಿ, ಮರಾಠಿಯಲ್ಲಿ ಮಾತನಾಡಿಲ್ಲ ಎಂದು ಆರೋಪಿಸಿ ಬಸ್ ಚಾಲಕ ಹಾಗೂ ಕಂಡಕ್ಟರ್ ಮೇಲೆ ಹಲ್ಲೆ ನಡೆದಿದೆ. ಈ ಮೂಲಕ ದಶಕಗಳ ಧ್ವೇಷ, ವಿವಾದ ಮತ್ತೆ ಕೆಂಡಕಾರಿದೆ.
ಹುಡುಗಿಯೊಬ್ಬಳು ಮರಾಠೀಯಲ್ಲಿ ಟಿಕೆಟ್ ಕೇಳಿದ್ದಳು. ನನಗೆ ಮರಾಠಿ ಗೊತ್ತಿಲ್ಲ ಕನ್ನಡದಲ್ಲಿ ಮಾತನಾಡಿ ಎಂದಾಗ ಆಕೆಯ ಸ್ನೇಹಿತ ಕಂಡಕ್ಟರ್ ಮೇಲೆ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಅಲ್ಲದೇ ಮಾರಿಹಾಳದಲ್ಲಿ, ಯುವಕರ ಗುಂಪೊಂದು ಬಸ್ ಅನ್ನು ಅಡ್ಡಗಟ್ಟಿ ಕಂಡಕ್ಟರ್‌ಗೆ ಥಳಿಸಿದರು ಎನ್ನಲಾಗಿದೆ. ಈ ಪ್ರಕರಣ ಸಂಬಂಧ ಪೊಲೀಸರು ಈಗ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಇತ್ತ ಹುಡುಗಿಯು ಕಂಡಕ್ಟರ್ ಮೇಲೆ ಅಸಭ್ಯ ವರ್ತನೆ ಮಾಡಿದ್ದಾರೆಂಬ ಆರೋಪ ಮಾಡಿದ್ದು, ಕಂಡಕ್ಟರ್ ಮೇಲೂ ಪ್ರಕರಣ ದಾಖಲಾಗಿದೆ ಎಂದು ಬೆಳಗಾವಿ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಮಾರ್ಬನಿಯಾಂಗ್ ತಿಳಿಸಿದ್ದಾರೆ.
ಇನ್ನು ಇದರ ಭಾಗವಾಗಿ ಪ್ರತೀಕಾರ ನಡೆದಿದ್ದು, ಫೆಬ್ರವರಿ 22ರಂದು ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾ. ಗುಯಿಲಾಲ್‌ನಲ್ಲಿ ಮಹಾರಾಷ್ಟ್ರ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್ ಚಾಲಕನಿಗೆ ಅವಮಾನಿಸಲಾಗಿದೆ. ಭಾಸ್ಕರ್ ಜಾಧವ್ ಎಂಬ ಬಸ್ ಚಾಲಕನ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿ ಕಪ್ಪು ಬಣ್ಣ ಬಳಿದಿದ್ದಾರೆ. ಈ ಪ್ರಕರಣ ಸಂಬಂಧವೂ ಕೆಲವು ಬಂಧಿತರಾಗಿದ್ದಾರೆ. ಘಟನೆ ನಂತ ಮಹಾರಾಷ್ಟ್ರ ಸಾರಿಗೆ ಸಚಿವ ಪ್ರತಾಪ್ ಸರ್‍ನಾಯಕ್ ಕೆಂಡಾಮಂಡಲವಾಗಿದ್ದಾರೆ. ಕರ್ನಾಟಕಕ್ಕೆ ರಾಜ್ಯ ಸಾರಿಗೆ ಬಸ್‌ಗಳನ್ನು ಸ್ಥಗಿತಗೊಳಿಸುವಂತೆ ಆದೇಶಿಸಿದ್ದಾರೆ.
ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬೆಂಗಳೂರಿನಿಂದ ಮುಂಬೈಗೆ ಚಲಿಸುತ್ತಿದ್ದ ಮಹಾರಾಷ್ಟ್ರ ರಾಜ್ಯ ರಸ್ತೆ ಸಾರಿಗೆ ನಿಗಮ ಬಸ್ ಮೇಲೆ ಚಿತ್ರದುರ್ಗದಲ್ಲಿ, ಕನ್ನಡ ಪರ ಕಾರ್ಯಕರ್ತರು ದಾಳಿ ನಡೆಸಿದ್ದಾರೆ. ಅಲ್ಲದೇ ಫೆಬ್ರವರಿ 23 ರಂದು, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗೆ ಸೇರಿದ ಅಲ್ಟ್ರಾ-ಐಷಾರಾಮಿ ಬಸ್ ಅನ್ನು ಜೈ ಮಹಾರಾಷ್ಟ್ರ, ಮರಾಠಿ ಮತ್ತು ಮಹಾರಾಷ್ಟ್ರ ನವನಿರ್ಮಾಣ ಸೇನೆ ಮುಂತಾದ ಘೋಷಣೆಗಳೊಂದಿಗೆ ಕಪ್ಪು ಬಣ್ಣದಿಂದ ಬರೆಯಲಾಗಿದೆ. ಈ ಘಟನೆಯ ನಂತರ ಕರ್ನಾಟಕ ಸಾರಿಗೆ ಬಸ್‌ಗಳು ಮಹಾರಾಷ್ಟ್ರಕ್ಕೆ ಸೇವೆ ಒದಗಿಸುವುದನ್ನು ನಿಲ್ಲಿಸಿವೆ. ನಾವು ಸದ್ಯಕ್ಕೆ ಮಹಾರಾಷ್ಟ್ರ ಕಡೆ ಹೋಗುವ ಬಸ್‌ಗಳನ್ನು ಸೀಮಿತಗೊಳಿಸಿದ್ದೇವೆ ಎಂದು NWKRTC ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅಲ್ಲದೇ ಪರಿಸ್ಥಿತಿ ತಿಳಿಗೊಳಿಸಿ ಸುಗಮ ಬಸ್ ಸೇವೆಗಳನ್ನು ಖಚಿತಪಡಿಸಿಕೊಳ್ಳಲು ಮಹಾರಾಷ್ಟ್ರದೊಂದಿಗೆ ಸಂಪರ್ಕದಲ್ಲಿರುವ ಬಗ್ಗೆ ತಿಳಿಸಿದ್ದಾರೆ.
ಇನ್ನು ಬೆಳಗಾವಿ ಜಿಲ್ಲೆಯಲ್ಲಿ ಗಣನೀಯ ಸಂಖ್ಯೆಯ ಮರಾಠಿಗರು ಇದ್ದಾರೆ. ಅವರಲ್ಲಿ ಒಂದು ವರ್ಗ ಬೆಳಗಾವಿಯನ್ನು ಮಹಾರಾಷ್ಟ್ರದೊಂದಿಗೆ ಸೇರಿಸಬೇಕೆಂದು ಪಟ್ಟು ಹಿಡಿದಿದ್ದು, ಆಗಾಗ ಪ್ರತಿಭಟನೆಗೆ ಮುಂದಾಗುತ್ತದೆ. ಆದರೆ ಕರ್ನಾಟಕ ಸರ್ಕಾರ ಮತ್ತು ಸ್ಥಳೀಯ ಕನ್ನಡ ಜನರು ಈ ಬೇಡಿಕೆಯನ್ನು ತೀವ್ರವಾಗಿ ವಿರೋಧಿಸುತ್ತಾರೆ. ಇದರಿಂದ ತನ್ನ ಶಕ್ತಿಯನ್ನು ಪ್ರತಿಪಾದಿಸಲು, ಕರ್ನಾಟಕ ಸರ್ಕಾರವು ವರ್ಷಕ್ಕೊಮ್ಮೆ ಶಾಸಕಾಂಗ ಅಧಿವೇಶನವನ್ನು ನಡೆಸುವ ಬೆಳಗಾವಿಯಲ್ಲಿ ಸುವರ್ಣ ವಿಧಾನಸೌಧವನ್ನು ನಿರ್ಮಿಸಿದೆ. ಒಟ್ಟಿನಲ್ಲಿ ಬೆಳಗಾವಿ ಗಡಿ ಗಲಾಟೆ ಬಸ್‌ಗಳಿಗೂ ತಟ್ಟಿದ್ದು, ಸಾರ್ವಜನಿಕರಿಗೆ ತೊಂದರೆ ಉಂಟಾಗಿದೆ.


Click it and Unblock the Notifications