ಬೆಂಗಳೂರು ಕೆಂಪೇಗೌಡ ಏರ್ಪೋರ್ಟ್‌ನಿಂದ ನಗರಕ್ಕೆ ಮರಳುತ್ತಿರುವ ಪ್ರಯಾಣಿಕರಿಗೆ ದೊಡ್ಡ ಅಸಮಾಧಾನ ಕಾಡ್ತಿದೆ. ಅದೇನೆಂದರೆ, ವಿಮಾನ ನಿಲ್ದಾಣದಿಂದ ನಗರಕ್ಕೆ ಬರುವ ಪ್ರಯಾಣದ ದರ ಇತ್ತೀಚೆಗೆ ಅತಿ ದುಬಾರಿಯಾಗಿದೆ ಎಂಬ ಬೇಸರ ಹೊರ ಹಾಕ್ತಿದ್ದಾರೆ. ಅಂದರೆ ವಿಮಾನ ನಿಲ್ದಾಣದಲ್ಲಿ ಕಾರ್ಯನಿರ್ವಹಿಸುವ ಕ್ಯಾಬ್ ಸೇವೆಗಳು, ಬೇರೆ ರೈಡ್ ಆಪ್‌ಗಳಿಗಿಂತ ಹೆಚ್ಚು ದರ ವಿಧಿಸುತ್ತಿವೆ ಎಂಬ ಆರೋಪವಿದೆ. ರಸ್ತೆ ಸಂಪರ್ಕದಲ್ಲಿ ಈಗ ಮೊದಲಿಗಿಂತ ಸುಧಾರಣೆಯಾಗಿದೆ. ಪಿಕಪ್ ವ್ಯವಸ್ಥೆಯಲ್ಲೂ ಸುಗಮವಾಗಿದೆ. ಹೀಗಿದ್ರೂ ಮನೆಗೆ ತಲುಪುವ ವೆಚ್ಚ ಮಾತ್ರ ಕಡಿಮೆಯಾಗಿಲ್ಲ ಅನ್ನೋದು ಅವರ ಬೇಸರ.

ಅಂದಹಾಗೆ ಕಳೆದ ಎರಡು ತಿಂಗಳಿನಿಂದ ಈ ದರದಲ್ಲಿ ಭಾರಿ ಏರಿಕೆ ಕಂಡುಬರುತ್ತಿದೆ ಅನ್ನೋದು ಕೆಲ ಪ್ರಯಾಣಿಕರಿಂದ ಕೇಳಿಬಂದ ಆರೋಪ. ವಿಶೇಷವಾಗಿ ಸಂಜೆಯ ಸಮಯದಲ್ಲೇ ಹೆಚ್ಚು ದರ ತೋರಿಸೋದು. ಅದರಲ್ಲೂ ಒಂದೇ ದೂರಕ್ಕೆ ವಿವಿಧ ಆಪ್ಗಳಲ್ಲಿ ವಿಭಿನ್ನ ದರಗಳು ಕಾಣಿಸುತ್ತಿರುವುದು ಜನರಲ್ಲಿ ಗೊಂದಲ ಉಂಟುಮಾಡುತ್ತಿದೆ. ಕೆಲವೊಮ್ಮೆ ಒಂದು ಆಪ್ನಲ್ಲಿ 800 ರೂಪಾಯಿ ತೋರಿದರೆ, ಮತ್ತೊಂದು ಆಪ್ನಲ್ಲಿ ಅದೇ ಪ್ರಯಾಣಕ್ಕೆ 1,000 ರೂಪಾಯಿಗೂ ಹೆಚ್ಚು ಕೇಳಲಾಗುತ್ತಿದೆ. ಎಸ್ಯುವಿ ಅಥವಾ ದೊಡ್ಡ ವಾಹನಗಳನ್ನು ಆಯ್ಕೆ ಮಾಡಿದರೆ ವೆಚ್ಚ ಇನ್ನಷ್ಟು ಹೆಚ್ಚಾಗುತ್ತಿದೆ.
ಇನ್ನು ನಗರದ ಪ್ರಮುಖ ಪ್ರದೇಶಗಳಾದ ಇಂದಿರಾನಗರ, ಎಂಜಿ ರಸ್ತೆ, ಜೆಪಿ ನಗರ, ಆರ್ಟಿ ನಗರ ಮುಂತಾದ ಕಡೆಗಳಿಗೆ ಪ್ರಯಾಣಿಸುವ ದರಗಳಲ್ಲಿ ಸಾಕಷ್ಟು ವ್ಯತ್ಯಾಸ ಕಂಡುಬರುತ್ತಿದೆ. ಅದನ್ನಂತೂ ಕೇಳೋದೇ ಬೇಡ. ಸಾಮಾನ್ಯ ಕ್ಯಾಬ್ಗಳಿಗೆ 750 ರಿಂದ 950 ರೂಪಾಯಿವರೆಗೆ ದರ ತೋರಿಸುವ ಸಂದರ್ಭಗಳಿವೆ. ಕೆಲ ಸೇವೆಗಳು ಪ್ರೀಮಿಯಂ ಅಥವಾ ಎಲೆಕ್ಟ್ರಿಕ್ ವಾಹನಗಳಿಗೆ 1,300 ರೂಪಾಯಿಗಿಂತ ಹೆಚ್ಚು ದರ ವಿಧಿಸುತ್ತಿವೆ. ಕುಟುಂಬ ಸಮೇತರಾಗಿ ಪ್ರಯಾಣಿಸುವವರಿಗೆ ಇದು ಹೆಚ್ಚುವರಿ ಆರ್ಥಿಕ ಭಾರವಾಗಿದೆ.
ಇತ್ತ ಪ್ರಯಾಣಿಕರ ಅಭಿಪ್ರಾಯದಲ್ಲಿ, ವಿಮಾನ ನಿಲ್ದಾಣದಲ್ಲಿ ಲಭ್ಯವಿರುವ ಅಧಿಕೃತ ಸೇವೆಗಳು ಇತರ ಪ್ಲಾಟ್ಫಾರ್ಮ್ಗಳಿಗಿಂತ ಕನಿಷ್ಠ 15ರಿಂದ 20 ಪ್ರತಿಶತ ಹೆಚ್ಚು ದರ ಕೇಳುತ್ತಿವೆ. ಕೆಲವರು ಕಡಿಮೆ ದರದ ಆಯ್ಕೆಗಳನ್ನು ಹುಡುಕಲು ಹೆಚ್ಚಿನ ಸಮಯ ಕಳೆಯಬೇಕಾಗುತ್ತಿದೆ ಎಂದು ಹೇಳಿದ್ದಾರೆ. ಪ್ರಯಾಣದ ಬಳಿಕ ದಣಿದ ಸ್ಥಿತಿಯಲ್ಲಿ ಇರುವವರಿಗೆ ಇದು ಇನ್ನಷ್ಟು ತೊಂದರೆಯಾಗಿದೆ.
ಅಂದಹಾಗೆ ಸಂಬಂಧಪಟ್ಟ ಕಂಪನಿಗಳ ಪ್ರಕಾರ, ದರ ನಿಗದಿ ಬೇಡಿಕೆ ಮತ್ತು ಪೂರೈಕೆಯ ಆಧಾರದಲ್ಲಿ ನಡೆಯುತ್ತದೆ. ಒಂದೇ ಸಮಯದಲ್ಲಿ ಹೆಚ್ಚಿನ ಪ್ರಯಾಣಿಕರು ವಾಹನಗಳನ್ನು ಬುಕ್ ಮಾಡಿದರೆ ದರ ಏರಿಕೆ ಆಗುವುದು ಸಹಜ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ವಿಮಾನ ನಿಲ್ದಾಣ ಪ್ರದೇಶದಲ್ಲಿ ಕಾರ್ಯನಿರ್ವಹಿಸುವ ಹಲವು ಸೇವೆಗಳ ನಡುವೆ ಸ್ಪರ್ಧೆ ಇರುವುದರಿಂದ ಸ್ಪರ್ಧಾತ್ಮಕ ದರ ನೀಡಲು ಪ್ರಯತ್ನಿಸುತ್ತಿದ್ದೇವೆ ಎಂಬುದೂ ಅವರ ಮಾತು. ಆದರೆ, ಕೆಲವು ಕಂಪನಿಗಳು ಈ ವಿಷಯಕ್ಕೆ ಪ್ರತಿಕ್ರಿಯಿಸಿಲ್ಲ.
ಒಟ್ಟಾರೆ, ವಿಮಾನ ನಿಲ್ದಾಣದಿಂದ ನಗರಕ್ಕೆ ಮರಳುವ ಪ್ರಯಾಣವು ಇನ್ನೂ ದುಬಾರಿಯಾಗಿಯೇ ಉಳಿದಿದೆ. ಪಾರದರ್ಶಕ ದರ ವ್ಯವಸ್ಥೆ ಮತ್ತು ಸಮಂಜಸ ಶುಲ್ಕದ ಅಗತ್ಯವಿದೆ ಎಂದು ಪ್ರಯಾಣಿಕರು ಒತ್ತಾಯಿಸುತ್ತಿದ್ದಾರೆ. ಸರ್ಕಾರ ಹಾಗೂ ಸಂಬಂಧಿತ ಅಧಿಕಾರಿಗಳು ಈ ವಿಚಾರವನ್ನು ಗಮನಿಸಿ, ಜನರಿಗೆ ಅನುಕೂಲಕರ ಪರಿಹಾರ ಒದಗಿಸಬೇಕು ಎಂಬ ಬೇಡಿಕೆಯೂ ಕೇಳಿಬರುತ್ತಿದೆ.


Click it and Unblock the Notifications