ದಕ್ಷಿಣ ಭಾರತದಲ್ಲಿ ಹಿಂದಿ ಹೇರಿಕೆಯ ವಿವಾದ ದೊಡ್ಡ ಮಟ್ಟದಲ್ಲೇ ಭುಗಿಲೆದ್ದಿತ್ತು. ಒಂದಷ್ಟು ಜನ ಹಿಂದಿ ರಾಷ್ಟ್ರೀಯ ಭಾಷೆ ಎಂದು ವಾದ ಮಾಡಿದರೆ, ಇನ್ನೊಂದಷ್ಟು ಜನ ಹಿಂದಿ ರಾಷ್ಟ್ರೀಯ ಭಾಷೆ ಅಲ್ಲ ಅಂತಾ ತಿರುಗಿಬಿದ್ದಿದ್ರು. ಯಾವುದೇ ಕಾರಣಕ್ಕೂ ಹಿಂದಿ ಹೇರಿಕೆಯಾಗಬಾರದು ಎಂದು ಕನ್ನಡಪರ ಸಂಘಟನೆಗಳು ಕಿಡಿ ಕಾರಿದ್ರು. ಈಗ ಆ ಎಲ್ಲಾ ಹೋರಾಟಕ್ಕೆ ಜಯದ ಮುನ್ನುಡಿ ಬರೆದಂತಿದೆ, ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ನಡೆ. ಅದೇನೆಂದರೆ ಡಿಜಿಟಲ್ ಡಿಸ್ಪ್ಲೇ ಫಲಕಗಳಲ್ಲಿ ಹಿಂದಿ ಭಾಷೆಯನ್ನು ತೆಗೆದುಹಾಕಲಾಗಿದೆ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಈ ಹಿಂದೆ ವಿಮಾನ ನಿಲ್ದಾಣದ ಡಿಜಿಟಲ್ ಬೋರ್ಡ್‌ಗಳಲ್ಲಿ ಮೂರು ಭಾಷೆಗಳಲ್ಲಿ ಹಿಂದಿ, ಇಂಗ್ಲಿಷ್ ಮತ್ತು ಕನ್ನಡದಲ್ಲಿ ವಿಮಾನಗಳ ಮಾಹಿತಿ ನೀಡಲಾಗುತ್ತಿತ್ತು. ಆದರೆ ಇದೀಗ ವಿಮಾನ ನಿಲ್ದಾಣದ ನೂತನ ಬೋರ್ಡ್‌ಗಳಲ್ಲಿ ಕೇವಲ ಕನ್ನಡ ಮತ್ತು ಇಂಗ್ಲಿಷ್ ಮಾತ್ರವಿದೆ. ಹಿಂದಿಯು ಇಲ್ಲದೆ ಇರುವ ಈ ಬದಲಾವಣೆಗೆ ಹಲವಾರು ಕನ್ನಡ ಪ್ರಿಯರು ಸಾಮಾಜಿಕ ಮಾಧ್ಯಮಗಳಲ್ಲಿ ಜೋರಾಗಿ ಬೆಂಬಲ ವ್ಯಕ್ತಪಡಿಸಿದ್ದಾರೆ.
ಬಹುತೇಕ ನೆಟಿಜನ್‌ಗಳು ಈ ಕ್ರಮವನ್ನು ಶ್ಲಾಘಿಸಿದ್ದು, ಈಗಾದರೂ ನಮ್ಮ ಭಾಷೆಗೆ ನ್ಯಾಯ ಸಿಕ್ಕಿದೆ, ಕೆಐಎ ಏರ್‌ಪೋರ್ಟ್ ಕನ್ನಡಿಗರ ಘೌರವವನ್ನು ಗುರುತಿಸಿದೆ ಎಂಬುದಾಗಿ ಕೊಂಡಾಡುತ್ತಿದ್ದಾರೆ. ಕೆಲವರು ಇದನ್ನು ಹಿಂದಿ ಹೇರಿಕೆಗೆ ತಡೆಯಾಗಿ, ಸ್ಥಳೀಯ ನುಡಿಗೆ ಸಿಗುವ ಸ್ಥಾನಮಾನವಾಗಿ ಹೇಳಿದ್ದಾರೆ. ಈ ಕ್ರಮವನ್ನು ವಿರೋಧಿಸುವವರೂ ಇಡೀ ಭಾರತದಾದ್ಯಂತ ಇದ್ದಾರೆ. ವಿಶೇಷವಾಗಿ ಉತ್ತರ ಭಾರತದ ಕೆಲವು ಪ್ರಯಾಣಿಕರು, ಇಂಗ್ಲಿಷ್ ಅಥವಾ ಕನ್ನಡ ತಿಳಿಯದವರು ಏನು ಮಾಡಬೇಕು?, ದೆಹಲಿ ಏರ್‌ಪೋರ್ಟ್‌ನಲ್ಲಿ ಕನ್ನಡದಲ್ಲಿಯೂ ಮಾಹಿತಿ ಸಿಗುತ್ತದೆಯಾ? ಎಂಬ ಪ್ರಶ್ನೆಗಳನ್ನು ಎತ್ತಿದ್ದಾರೆ. ಕೆಲವರು ಈ ಬದಲಾವಣೆಯನ್ನು ಭಾಷಾ ಸಂಘರ್ಷದ ನವ ರೂಪ ಎನ್ನುತ್ತಿದ್ದಾರೆ.
ಇದೊಂದು ಸರಳ ಭಾಷಾ ಬದಲಾವಣೆಯಂತೆ ಕಾಣಿಸಿದರೂ, ಇದರ ಹಿಂದೆ ರಾಷ್ಟ್ರ ಮಟ್ಟದ ಭಾಷಾ ರಾಜಕೀಯ, ಪ್ರತಿಷ್ಠೆ, ಸಂಸ್ಕೃತಿಯ ಘರ್ಷಣೆ ಜೋರಾಗಿದೆ. ಏರ್‌ಪೋರ್ಟ್‌ಗಳು ಅಂತಾರಾಷ್ಟ್ರೀಯ ಪ್ರಯಾಣಿಕರ ಪ್ರಮುಖ ಪ್ರವೇಶ ಬಾಗಿಲಾಗಿರುವ ಕಾರಣ, ಅಲ್ಲಿ ಯಾವ ಭಾಷೆ ಇರಬೇಕು ಎಂಬುದು ಕೇವಲ ತಾಂತ್ರಿಕ ನಿರ್ಧಾರವಲ್ಲ, ಅದು ಒಂದು ಪ್ರಾದೇಶಿಕ ಆಚರಣೆ ಮತ್ತು ರಾಜಕೀಯ ಅಭಿಪ್ರಾಯದ ಪ್ರತಿಬಿಂಬವೂ ಹೌದು. ಭಾರತದಲ್ಲಿ ಭಾಷಾ ಸಮಾನತೆ ಎಂಬ ನಂಬಿಕೆ ಮತ್ತು ಪ್ರಾದೇಶಿಕ ಭಾಷೆಗಳ ಸಂರಕ್ಷಣೆಯ ಅಗತ್ಯ. ಈ ಎರಡರ ನಡುವೆ ಸಮತೋಲನ ಕಾಯ್ದುಕೊಳ್ಳುವುದು ಆಡಳಿತಯಂತ್ರಗಳ ಜವಾಬ್ದಾರಿ. ಕನ್ನಡಿಗರ ದೃಷ್ಟಿಯಲ್ಲಿ, ತಮ್ಮ ಭಾಷೆಯು ತಮ್ಮ ನೆಲ-ಜಲದ ಅಸ್ತಿತ್ವವನ್ನೇ ಪ್ರತಿಬಿಂಬಿಸುವ ಮಹತ್ವದ್ದಾಗಿದೆ. ಹಾಗಾಗಿ, ಯಾವುದೇ "ಹೇರಿಕೆಯ" ಶಬ್ದವು ಕೂಡ ತೀವ್ರ ಪ್ರತಿಕ್ರಿಯೆಗೆ ಕಾರಣವಾಗುತ್ತದೆ.
ಈ ಎಲ್ಲ ಚರ್ಚೆಗಳ ನಡುವಲ್ಲೇ, ಕೆಂಪೇಗೌಡ ವಿಮಾನ ನಿಲ್ದಾಣದ ಆಡಳಿತದಿಂದ ಅಧಿಕೃತ ಹೇಳಿಕೆ ಇನ್ನೂ ಬರಬೇಕಾಗಿದೆ. ಹಿಂದಿಯನ್ನು ನಿಜವಾಗಲೂ ಶಾಶ್ವತವಾಗಿ ತೆಗೆದು ಹಾಕಿದರೋ ಅಥವಾ ತಾತ್ಕಾಲಿಕ ತಂತ್ರಜ್ಞಾನ ಸಂಬಂಧಿತ ಬದಲಾವಣೆಯೇ ಎಂದು ಸ್ಪಷ್ಟತೆ ಇಲ್ಲ. ಆದರೆ, ಸಾಮಾಜಿಕ ಮಾಧ್ಯಮದಲ್ಲಿ ಕೆಲವರು ವಿಡಿಯೋಗಳು, ಚಿತ್ರಗಳು ಹಾಕಿ, ಇದು ನಮ್ಮ ಗೆಲುವು ಎಂದು ಉಲ್ಲಾಸ ವ್ಯಕ್ತಪಡಿಸುತ್ತಿದ್ದಾರೆ. ಭಾಷೆಗಳು ನಮ್ಮ ಸಂಸ್ಕೃತಿಯ ಭಾಗವೇ ಆದರೂ, ಅವುಗಳನ್ನು ನಿರ್ವಹಿಸುವ ಮತ್ತು ಗೌರವಿಸುವ ದಾರಿಯು ನ್ಯಾಯಸಮ್ಮತವಾಗಿರಬೇಕು. ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹಿಂದಿಯನ್ನು ತೆಗೆದುಹಾಕುವುದು ಕನ್ನಡಿಗರ ಹೋರಾಟಕ್ಕೆ ಒಂದು ಸಣ್ಣ ಜಯವೇ ಆಗಿದ್ದರೂ, ಇದು ಭಾಷಾ ಹಕ್ಕುಗಳು, ಸಂಸ್ಕೃತಿ ಮತ್ತು ಪ್ರಾದೇಶಿಕ ಸ್ವಾತಂತ್ರ್ಯದ ಬಗ್ಗೆ ಹರಿದೆಯಾದ ಚರ್ಚೆಯನ್ನು ಆರಂಭಿಸಿದೆ.
ಅಂತಿಮವಾಗಿ, ಯಾವುದೇ ಭಾಷಾ ನೀತಿ ಪ್ರಕಟಿಸುವಾಗ, ಅದು ಎಲ್ಲ ಪ್ರಾದೇಶಿಕ ಭಾಷೆಗಳಿಗೇ ಸಮಾನ ಗೌರವ ನೀಡುವುದಾಗಿ ಖಚಿತಪಡಿಸಿಕೊಳ್ಳಬೇಕಾಗಿದೆ. ಬೇರೆಯವರು ನಮ್ಮ ಭಾಷೆಗಳನ್ನು ಕಲಿಯುವುದು, ನಮ್ಮ ಸಂಸ್ಕೃತಿಯನ್ನು ಗೌರವಿಸುವುದೇ ಆದರೂ, ಇದನ್ನು ಹೇರಿಕೆ ಎಂದಾಗಿ ಅಲ್ಲ, ಆದರೆ ಪರಸ್ಪರ ಸಮ್ಮಾನದಿಂದ, ಸಹಕಾರದಿಂದ ಇರಬೇಕು.


Click it and Unblock the Notifications