ಬೆಂಗಳೂರಿನಲ್ಲಿ ಟ್ರಾಫಿಕ್ ಸಮಸ್ಯೆ ದಿನೇ ದಿನೇ ಹೆಚ್ಚಾಗುತ್ತಿದ್ದು ನಗರದ ಜನತೆಯನ್ನು ಹೈರಾಣಾಗಿಸಿದೆ. ಟ್ರಾಫಿಕ್ ಸಮಸ್ಯೆ ಕಡಿಮೆ ಮಾಡಲು , ನಗರದಲ್ಲಿ ಮೇಲ್ಸೇತುವೆ, ಅಂಡರ್ ಪಾಸ್, ಹೊಸ ರಸ್ತೆ ನಿರ್ಮಾಣ ಸೇರಿದಂತೆ ಹಲವು ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಇದೀಗ ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಮೈಸೂರು ರಸ್ತೆಯಿಂದ ನೈಸ್ ರಸ್ತೆಗೆ ನೇರವಾಗಿ ಸಂಪರ್ಕ ಕಲ್ಪಿಸಲು ಬಿಬಿಎಂಪಿ ಕೆಲಸ ಆರಂಭಿಸಿದೆ.
ನೈಸ್‌ರೋಡ್ ಕ್ಲೋವರ್‌ಲೀಫ್ ಜಂಕ್ಷನ್‌ಗೆ ನೇರ ಸಂಪರ್ಕ ಕಲ್ಪಿಸಲು ದೀಪಾಂಜಲಿ ನಗರದ ಮೆಟ್ರೋ ನಿಲ್ದಾಣದ ಬಳಿ ಇರುವ ಇಂಟರ್ ಸೆಕ್ಷನ್‌ಅನ್ನು ಮರುವಿನ್ಯಾಸಗೊಳಿಸಲು ಬಿಬಿಎಂಪಿ ಮುಂದಾಗಿದೆ. ಒಂದು ವಾರದಗೊಳಗೆ ಮರುವಿನ್ಯಾಸ ಮಾಡುವ ಗುರಿ ಹೊಂದಿದ್ದರೂ, ಭೂಸ್ವಾಧೀನ ಪ್ರಕ್ರಿಯೆ ಸವಾಲಾಗಿರುವ ಕಾರಣ ಪ್ರವೇಶ ರಸ್ತೆಯಲ್ಲಿ ಕಾಮಗಾರಿ ಆರಂಭಿಸುವುದು ವಿಳಂಬವಾಗುವ ಸಾಧ್ಯತೆ ಇದೆ.

ಮೈಸೂರು ರಸ್ತೆಯಿಂದ (ಬಿಎಚ್‌ಇಎಲ್ ಜಂಕ್ಷನ್) ನೈಸ್ ರಸ್ತೆ ಸಂಪರ್ಕ ಕಲ್ಪಿಸಲು ಬಿಬಿಎಂಪಿ ತನಗೆ ಸೇರಿದ ಸ್ವತ್ತಿನಲ್ಲಿ ಕೆಲಸ ಮಾಡುತ್ತಿದೆ ಎಂದು ಬಿಬಿಎಂಪಿ ಮುಖ್ಯ ಎಂಜಿನಿಯರ್ (ಪ್ರಾಜೆಕ್ಟ್ಸ್) ಎಂ ಲೋಕೇಶ್ ಹೇಳಿರುವುದಾಗಿ ಡಿಎಚ್ ವರದಿ ಮಾಡಿದೆ. ಪ್ರವೇಶ ರಸ್ತೆ ನಿರ್ಮಾಣವನ್ನು ನೈಸ್ (ನಂದಿ ಇನ್ಫ್ರಾಸ್ಟ್ರಕ್ಚರ್ ಕಾರಿಡಾರ್ ಎಂಟರ್‌ಪ್ರೈಸ್) ನಿರ್ವಹಿಸುತ್ತದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ನೈಸ್ ವ್ಯವಸ್ಥಾಪಕ ನಿರ್ದೇಶಕ ಅಶೋಕ್ ಖೇಣಿ ಮಾತನಾಡಿ, ಹೊರ ವರ್ತುಲ ರಸ್ತೆಯಲ್ಲಿರುವ ಕ್ಲೋವರ್‌ಲೀಫ್ ಜಂಕ್ಷನ್‌ನಿಂದ ಮೈಸೂರು ರಸ್ತೆಗೆ ನೇರ ಪ್ರವೇಶದ ಮಾರ್ಗವು ಸುಮಾರು ಒಂದು ಕಿಲೋ ಮೀಟರ್ ಇರುತ್ತದೆ. ನಾವು ಈಗಾಗಲೇ ಕಾಮಗಾರಿಗೆ ಅಗತ್ಯವಿರುವ 60% ಭೂಮಿಯನ್ನು ಹೊಂದಿದ್ದೇವೆ, ಉಳಿದ 400 ಮೀಟರ್ ಭೂಮಿಯಲ್ಲಿ ಕಾಮಗಾರಿ ಮಾಡಲು ಕರ್ನಾಟಕ ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿ ಮಂಡಳಿ ಒಪ್ಪಿಗೆಗಾಗಿ ಕಾಯುತ್ತಿದ್ದೇವೆ, 10 ವರ್ಷಗಳ ಹಿಂದೆಯೇ ಈ ಜಮೀನಿಗೆ ಪರಿಹಾರ ನೀಡಲಾಗಿದೆ" ಎಂದು ಹೇಳಿದ್ದಾರೆ.
2024ರ ಆರಂಭದಲ್ಲಿ ಡಿಸಿಎಂ ಡಿಕೆ ಶಿವಕುಮಾರ್, ನಗರದ ವಿವಿಧ ಅಭಿವೃದ್ಧಿ ಕಾರ್ಯಗಳ ಪರಿಶೀಲನೆ ಸಂದರ್ಭದಲ್ಲಿ ಮೈಸೂರು ರಸ್ತೆ ಮತ್ತು ನೈಸ್ ರಸ್ತೆ ನಡುವೆ ಈ ಸಂಪರ್ಕವನ್ನು ಸ್ಥಾಪಿಸಲು ಮತ್ತು ಹೊರ ವರ್ತುಲ ರಸ್ತೆಯಲ್ಲಿ ಟ್ರಾಫಿಕ್ ಕಡಿಮೆ ಮಾಡಲು ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದರು.
ಟ್ರಾಫಿಕ್ ಸಮಸ್ಯೆಯಿಂದ ಜನ ಹೈರಾಣು
ಬೆಂಗಳೂರು ನಗರದಲ್ಲಿ ಟ್ರಾಫಿಕ್ ಸಮಸ್ಯೆಯಿಂದ ಜನ ಹೈರಾಣಾಗಿದ್ದಾರೆ. ಸಾಲು ಸಾಲು ರಜೆಯಿಂದಾಗಿ ಊರಿಗೆ ಹೋಗಿದ್ದ ಜನ ಒಮ್ಮೆಲೆ ಮರಳಿಬಂದ ಕಾರಣ ಭಾನುವಾರ ರಾತ್ರಿ ಮತ್ತು ಸೋಮವಾರ ಬೆಳಿಗ್ಗೆ ನಗರದ ಮೈಸೂರು ರಸ್ತೆ, ಗೊರಗುಂಟೆ ಪಾಳ್ಯ, ನೈಸ್ ರಸ್ತೆ ಬಳಿ ಭಾರಿ ಟ್ರಾಫಿಕ್ ಉಂಟಾಗಿತ್ತು. ನಾಗಸಂದ್ರ ಮೆಟ್ರೋ ನಿಲ್ದಾಣದಲ್ಲಿ ಅರ್ಧ ಕಿಲೋ ಮೀಟರ್ ಉದ್ದದ ಸಾಲು ಕಂಡು ಬಂದಿತು. ದಿನೇ ದಿನೇ ನಗರದಲ್ಲಿ ವಲಸಿಗರು, ವಾಹನಗಳ ಸಂಖ್ಯೆ ಹೆಚ್ಚುತ್ತಿದ್ದು, ಅದಕ್ಕೆ ತಕ್ಕಂತೆ ಮೂಲ ಸೌಕರ್ಯಗಳು ಇಲ್ಲದ ಕಾರಣ ಸಾಕಷ್ಟು ಸಮಸ್ಯೆಯಾಗುತ್ತಿದೆ.


Click it and Unblock the Notifications