ಬೆಂಗಳೂರು ನಗರದಲ್ಲಿ ಟ್ರಾಫಿಕ್ ಸಮಸ್ಯೆ ಕಡಿಮೆ ಮಾಡಲು ಸರ್ಕಾರ ಪ್ರಮುಖ ಯೋಜನೆಯಾಗಿ ಬೆಂಗಳೂರು ಬಿಸಿನೆಸ್ ಕಾರಿಡಾರ್ ಅನ್ನು ಆಯ್ಕೆ ಮಾಡಿದೆ. ಹಳೆಯ ಕಾಲದಲ್ಲಿ ಈ ಯೋಜನೆಯನ್ನು ಪೆರಿಫೆರಲ್ ರಿಂಗ್ ರೋಡ್ ಎಂದು ಕರೆಯಲಾಗುತ್ತಿತ್ತು. 2008-09 ರಲ್ಲಿ ಈ ಯೋಜನೆಗಾಗಿ ಭೂ ಸ್ವಾಧೀನ ಪ್ರಕ್ರಿಯೆ ಆರಂಭವಾಗಿತ್ತು. ಆಗ 1,810 ಎಕರೆ ಭೂಮಿಯ ಒಂದು ಭಾಗವಾಗಿ 948 ಎಕರೆ 14.5 ಗುಂಟೆ ಭೂಮಿಗೆ ಪ್ರತಿ ಎಕರೆ 20-30 ಲಕ್ಷ ರೂಪಾಯಿ ಪರಿಹಾರ ನೀಡಲು ಆದೇಶ ಹೊರಡಿಸಲಾಯಿತು. ಆದರೆ ರೈತರ ವಿರೋಧದಿಂದಾಗಿ ಯೋಜನೆ ಸುಮಾರು 15 ವರ್ಷಗಳ ಕಾಲ ಸ್ಥಗಿತಗೊಂಡಿತ್ತು. ಇದರಿಂದ ತೀರ್ಮನ ಬದಲಿಸಿದ ಸರ್ಕಾರ ಪ್ರತಿ ಎಕರೆಗೆ ದೊಡ್ಡ ಮೊತ್ತ ನೀಡಲು ನಿರ್ಧರಿಸಿದೆ.

ಹೌದು, ಪ್ರಸ್ತುತ, ಭೂಮಿಯ ಬೆಲೆ ಬಹಳ ಹೆಚ್ಚಾಗಿದೆ. ವಿಶೇಷವಾಗಿ ವರ್ತೂರು ಮತ್ತು ಗುಂಜೂರು ಪ್ರದೇಶಗಳಲ್ಲಿ ಪ್ರತಿ ಎಕರೆ 15 ಕೋಟಿ ರೂಪಾಯಿಯಿಂದ 40 ಕೋಟಿ ರೂಪಾಯಿಗಳವರೆಗೆ ಬೇಡಿಕೆ ಇದೆ. ಹಳೆಯ ಆದೇಶಗಳು ಈಗಿನ ಭೂಮಿಯ ಬೆಲೆಗಳಿಗೆ ಹೊಂದಿಕೆಯಾಗದ ಕಾರಣ, ಬಿಡಿಎ ಹೊಸ ಸಹಾಯಧನ ಪ್ಯಾಕೇಜ್ ರೂಪಿಸಿದೆ. ಈ ಮೂಲಕ ಮಾತುಕತೆ ಮೂಲಕ ಭೂಸ್ವಾಧೀನ ಪ್ರಕ್ರಿಯೆ ಆರಂಭಿಸಿ, ಕಾಮಗಾರಿ ಟೆಂಡರ್ ಆಹ್ವಾನಿಸಲು ಮುಂದಾಗಿದೆ.
ಕಳೆದ ಕೆಲವು ವಾರಗಳಲ್ಲಿ, ಬಿಡಿಎ ಕೆಲ ಗ್ರಾಮಗಳಲ್ಲಿ ಪ್ರತಿ ಎಕರೆ 15.6 ಕೋಟಿ ರೂಪಾಯಿಗಳವರೆಗೆ ಭೂಮಿಗೆ ಪರಿಹಾರ ನೀಡುವ ಪ್ರಕ್ರಿಯೆ ಆರಂಭಿಸಿದೆ. ಹಲವು ರೈತರು ಈಗಾಗಲೇ ಒಪ್ಪಿಕೊಂಡಿದ್ದು, ಮೊದಲ ಹಂತದಲ್ಲಿ ಸುಮಾರು 100 ಎಕರೆ ಭೂಮಿಯನ್ನು ಸ್ವಾಧೀನಪಡಿಸಲು ಸಾಧ್ಯವಾಗಲಿದೆ. ಪ್ರಕ್ರಿಯೆಯನ್ನು ತ್ವರಿತಗೊಳಿಸಲು ನಾಲ್ಕು ಜಿಲ್ಲಾಧಿಕಾರಿಗಳನ್ನು ನೇಮಿಸಲಾಗಿದೆ. ರೈತರಿಂದ ಒಪ್ಪಿಗೆ ಪತ್ರ ಬಂದ ತಕ್ಷಣವೇ ಭೂಸ್ವಾಧೀನ ಪ್ರಕ್ರಿಯೆ ಪ್ರಾರಂಭವಾಗಲಿದೆ.
ರೈತರಿಗೆ ನೀಡಲಾಗುವ ಪರಿಹಾರ ಆಯ್ಕೆಗಳು:
ಭೂಮಾಲೀಕರಿಗೆ ಐದು ರೀತಿಯ ಪರಿಹಾರ ಆಯ್ಕೆಗಳನ್ನು ನೀಡಲಾಗಿದೆ:
- ನಗದು ಪರಿಹಾರ
- ನಿವೇಶನ (Residential plots)
- ವಾಣಿಜ್ಯ ನಿವೇಶನ (Commercial plots)
- ವರ್ಗಾವಣೆ ಅಭಿವೃದ್ಧಿ ಹಕ್ಕುಗಳು (TDR)
- ಮಹಡಿ ವಿಸ್ತೀರ್ಣ ಅನುಪಾತ (FAR-based development rights)
ಇಲ್ಲಿಯೂ ಹೆಚ್ಚಿನ ಭೂಮಾಲೀಕರು ವಾಣಿಜ್ಯ ನಿವೇಶನಗಳು 65:35 ಅನುಪಾತದಲ್ಲಿ ಟಿಡಿಆರ್ ಜೊತೆ ಆಯ್ಕೆ ಮಾಡುತ್ತಿದ್ದಾರೆ. ನಿರೀಕ್ಷೆಯಂತೆ, ಬಹಳಷ್ಟು ರೈತರು ಪರ್ಯಾಯ ಸಹಾಯಧನ ಪ್ಯಾಕೇಜ್‌ಗೆ ಒಪ್ಪಿಕೊಂಡಿದ್ದಾರೆ.
ಯೋಜನೆಯ ಮುಂದಿನ ಹಂತಗಳು:
ಬಿಡಿಎ ಪ್ರಸ್ತುತ ಯೋಜನೆಯ ದೃಷ್ಠಾಂತ ಯೋಜನಾ ವರದಿ (DPR) ಸಿದ್ಧಪಡಿಸುತ್ತಿದೆ. ನಿಯಮ ಪ್ರಕಾರ, ಶೇಕಡಾ 80 ರಷ್ಟು ಭೂಸ್ವಾಧೀನ ಪೂರ್ಣಗೊಂಡ ನಂತರ ಮಾತ್ರ ಟೆಂಡರ್ ಆಹ್ವಾನ ಮಾಡಬಹುದು. ಆದರೆ ಬಿಡಿಎ ಸರ್ಕಾರಕ್ಕೆ ಪತ್ರ ಬರೆದಿದ್ದು, ಶೇಕಡಾ 60 ರಷ್ಟು ಭೂಸ್ವಾಧೀನದ ನಂತರ ಟೆಂಡರ್ ಆಹ್ವಾನಕ್ಕೆ ಅನುಮತಿ ನೀಡಬೇಕೆಂದು ಮನವಿ ಮಾಡಿದೆ.
ಈ ಯೋಜನೆಯ ಪೂರ್ಣಗೊಳನೆಯ ನಂತರ ಬೆಂಗಳೂರು ನಗರದ ಟ್ರಾಫಿಕ್ ಜಾಮ್ ಸಮಸ್ಯೆ ಕಡಿಮೆ ಆಗಲಿದೆ. ಜೊತೆಗೆ ಹೊಸ ವಾಣಿಜ್ಯ, ಉದ್ಯಮ, ಮತ್ತು ವಸತಿ ಪ್ರದೇಶಗಳ ಅಭಿವೃದ್ಧಿಗೆ ದಾರಿ ತೆರೆದಿದೆ. ಭೂಸ್ವಾಧೀನ ಪ್ರಕ್ರಿಯೆಯಲ್ಲಿ ರೈತರಿಗೆ ನಿಗದಿತ ಪರಿಹಾರಗಳು ನೀಡಿದರೆ, ಯೋಜನೆ ತ್ವರಿತಗತಿ ಪಡೆದು, ನಗರಾಭಿವೃದ್ಧಿಗೆ ಮಹತ್ವದ ಕೊಡುಗೆ ನೀಡಲಿದೆ.


Click it and Unblock the Notifications