ಬೆಂಗಳೂರು, ನವೆಂಬರ್ 11: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ನಗರದ ಬಹುನಿರೀಕ್ಷಿತ ಬೆಂಗಳೂರು ಬ್ಯುಸಿನೆಸ್ ಕಾರಿಡಾರ್ (ಬಿಬಿಸಿ) ಯೋಜನೆಗೆ ಚಾಲನೆ ನೀಡಲು ತಯಾರಿ ಆರಂಭಿಸಿದೆ. ನಗರದ ಸಂಚಾರ ದಟ್ಟಣೆ ಕಡಿಮೆ ಮಾಡಲು ಈ ಯೋಜನೆ ಮಹತ್ವದ್ದು ಎಂದು ಅಂದಾಜಿಸಲಾಗಿದೆ. ಆದರೆ ಈ ಯೋಜನೆಗೆ ಆಸ್ತಿಯನ್ನು ನೀಡುವ ಜಮೀನು ಮಾಲೀಕರಿಗೆ ಈಗ ಹೊಸ ಭೀತಿ ಶುರುವಾಗಿದೆ.
ಬೆಂಗಳೂರು ನಗರದ ಬಹು ನಿರೀಕ್ಷಿತ 73 ಕಿ. ಮೀ. ಪೆರಿಫೆರಲ್ ವರ್ತುಲ ರಸ್ತೆ (ಪಿಆರ್‌ಆರ್) ಯೋಜನೆ ಸುಮಾರು 27,000 ಕೋಟಿ ರೂ.ಗಳನ್ನು ಮೊತ್ತದ್ದು. ಯೋಜನೆಯನ್ನು ಈಗ ಬೆಂಗಳೂರು ಬ್ಯುಸಿನೆಸ್ ಕಾರಿಡಾರ್ (ಬಿಬಿಸಿ) ಎಂದು ಮರು ನಾಮಕಾರಣ ಮಾಡಿ, ಆರಂಭಿಸಲಾಗುತ್ತಿದೆ.

ಈ ಯೋಜನೆಗೆ 2,650 ಎಕರೆ ಭೂಮಿಯನ್ನು 1894ರ ಭೂ ಸ್ವಾಧೀನ ಕಾಯ್ದೆಯಡಿ ಸ್ವಾಧೀನ ಪಡಿಸಿಕೊಳ್ಳಲಾಗುತ್ತದೆ. ಈ ಯೋಜನೆ ಭೂ ಸ್ವಾಧೀನಕ್ಕಾಗಿಯೇ ಬಿಡಿಎ 8 ಕೆಎಎಸ್ ಅಧಿಕಾರಿಗಳನ್ನು ನೇಮಕ ಮಾಡಿದೆ. ಈ ಯೋಜನೆಗೆ ಭೂಮಿ ನೀಡಿ ಪರಿಹಾರ ಪಡೆಯುವ ರೈತರು ಈಗ ಆದಾಯ ತೆರಿಗೆ ಪಾವತಿ ಮಾಡುವ ಇಕ್ಕಟ್ಟಿಗೆ ಸಿಲುಕಿದ್ದಾರೆ.
ಸದ್ಯ ಇರುವ ಕಾನೂನು ನಿಯಮಗಳ ಪ್ರಕಾರ 2013ರ ಭೂ ಸ್ವಾಧೀನ ಕಾಯ್ದೆಯಡಿ ಜಮೀನು ಮಾಲೀಕರಿಗೆ ಪರಿಹಾರ ನೀಡಿದರೆ ಆದಾಯ ತೆರಿಗೆಯಿಂದ ವಿನಾಯಿತಿ ಇದೆ. ಆದರೆ ಉಳಿದ ಯಾವುದೇ ಕಾಯ್ದೆಯಡಿ ಭೂ ಸ್ವಾಧೀನ ಮಾಡಿಕೊಂಡರೆ ಪರಿಹಾರ ಪಡೆಯುವವರು ಆದಾಯ ತೆರಿಗೆ ಪಾವತಿ ಮಾಡಬೇಕಿದೆ.
ಕರ್ನಾಟಕ ಸರ್ಕಾರ ಸೆಪ್ಟೆಂಬರ್ 21ರಂದು ಆದೇಶವೊಂದನ್ನು ಹೊರಡಿಸಿದೆ.
ಬೆಂಗಳೂರು ಬ್ಯುಸಿನೆಸ್ ಕಾರಿಡಾರ್ ಯೋಜನೆಗೆ ಅಗತ್ಯವಿರುವ ಭೂಮಿಯನ್ನು 1984ರ ಭೂ ಸ್ವಾಧೀನ ಕಾಯ್ದೆಯ ಅಡಿಯಲ್ಲಿ ಸ್ವಾಧೀನ ಮಾಡಿಕೊಳ್ಳಲಾಗುತ್ತದೆ ಎಂದು ಹೇಳಿದೆ.
ಯೋಜನೆಗೆ ಭೂಮಿ ನೀಡುವ ರೈತರಿಂದ ಆಯಾ ಗ್ರಾಮಗಳ ಸ್ಥಿರಾಸ್ತಿಗಳ ಮಾರ್ಗಸೂಚಿ ದರಗಳ ಆಧಾರದಲ್ಲಿ ಪರಿಹಾರ ಮೊತ್ತವನ್ನು ನಿಗದಿಪಡಿಸಲಾಗುತ್ತದೆ. ಸಮ್ಮತಿಯ ಆಧಾರದ ಮೇಲೆ ಸ್ವಾಧೀನ ಪ್ರಕ್ರಿಯೆ ನಡೆಯಲದೆ. ಈಗಾಗಲೇ ಬಿಡಿಎ ಆಸ್ತಿ ಮಾಲೀಕರನ್ನು ಗುರುತಿಸಿ, ಅವರಿಗೆ ನೋಟಿಸ್ ನೀಡುವ ಕಾರ್ಯವನ್ನು ಆರಂಭಿಸಿದೆ.
ಕರ್ನಾಟಕ ಹೈಕೋರ್ಟ್ ವಿಭಾಗೀಯ ಪೀಠ ಅಕ್ಟೋಬರ್ 29ರಂದು ನೀಡಿರುವ ತೀರ್ಪಿನಲ್ಲಿ ಸಹ ಭೂಸ್ವಾಧೀನ, ಪುರ್ನರ್ವಸತಿ ಮತ್ತು ಪುನರ್ ಸ್ಥಾಪನೆ ಕಾಯ್ದೆ-2013ರ ಸೆಕ್ಷನ್ 96 ಭೂಸ್ವಾಧೀನ ಪ್ರಕ್ರಿಯೆಯಲ್ಲಿ ವಿತರಿಸುವ ಪರಿಹಾರ ಮೊತ್ತಕ್ಕೆ ಆದಾಯ ತೆರಿಗೆ ವಿಧಿಸುವುದರಿಂದ ವಿನಾಯಿತಿ ನೀಡುತ್ತದೆ. 1984ರ ಕಾಯ್ದೆಯಲ್ಲಿ ಅಂತಹ ಸೆಕ್ಷನ್ ಇಲ್ಲ ಎಂದು ಹೇಳಿದೆ.
ಈ ಯೋಜನೆಯನ್ನು ಜಾರಿಗೊಳಿಸಲು ಬಿಡಿಎಗೆ ಶೇ 100ರಷ್ಟು ಅನುದಾನವನ್ನು ವಸತಿ ಮತ್ತು ನಗರಾಭಿವೃದ್ಧಿ ನಿಗಮ ನಿಯಮಿತ (ಹುಡ್ಕೊ) ನೀಡಲಿದೆ. ಈ ಕುರಿತು ಲಿಖಿತವಾಗಿ ಸಹ ಹುಡ್ಕೊ ಭರವಸೆಯನ್ನು ಕೊಟ್ಟಿದೆ. ಕೆಲವೇ ದಿನಗಳಲ್ಲಿ ಹುಡ್ಕೋ ಮುಖ್ಯಸ್ಥರು ಬಿಡಿಎ ಕಛೇರಿಯಲ್ಲಿ ಈ ಕುರಿತು ಒಪ್ಪಂದಕ್ಕೆ ಸಹಿ ಹಾಕಲಿದ್ದಾರೆ.
ಈಗಾಗಲೇ ರೈತರು 2013ರ ಕಾಯ್ದೆಯಡಿ ಬಿಡಿಎ ನಮಗೆ ಪರಿಹಾರವನ್ನು ನೀಡುತ್ತಿಲ್ಲ ಎಂದು ಅಸಮಾಧಾನಗೊಂಡಿದ್ದಾರೆ. ಈಗ ಪರಿಹಾರ ಪಡೆಯುವ ಮೊತ್ತದಲ್ಲಿ ಆದಾಯ ತೆರಿಗೆ ಪಾವತಿ ಮಾಡಬೇಕು ಎಂಬುದು ರೈತರ ಆಕ್ರೋಶವನ್ನು ಮತ್ತಷ್ಟು ಹೆಚ್ಚಿಸಿದೆ.
ಬಿಬಿಸಿ ಯೋಜನೆಯ ಭೂ ಸ್ವಾಧೀನಕ್ಕಾಗಿಯೇ ಕೆಎಎಎಸ್ ಅಧಿಕಾರಿಗಳನ್ನು ಬಿಡಿಎ ನೇಮಕ ಮಾಡಿದೆ. ಇದಕ್ಕಾಗಿ ಹೊಸ ಕಛೇರಿಯನ್ನು ಯಲಹಂಕದಲ್ಲಿ ತೆರೆಯಲಾಗಿದೆ. ಯೋಜನೆಗೆ 76 ಹಳ್ಳಿಗಳ ಭೂಮಿ ಬೇಕು ಎಂದು ಅಂದಾಜಿಸಲಾಗಿದೆ.
ಈ ರಸ್ತೆ ತುಮಕೂರು ರಸ್ತೆ-ಹೊಸೂರು ರಸ್ತೆಯನ್ನು ಸಂಪರ್ಕಿಸುತ್ತದೆ. ಇದು ದೊಡ್ಡಬಳ್ಳಾಪುರ, ಬಳ್ಳಾರಿ ರಸ್ತೆ, ಹಳೆ ಮದ್ರಾಸ್ ರಸ್ತೆ ಮೂಲಕ ಸಾಗುತ್ತದೆ. ಯೋಜನೆಗೆ ಸರ್ಕಾರದ ಸುಮಾರು 193 ಎಕರೆ ಜಾಗದ ಅಗತ್ಯವಿದೆ. ಆದರೆ 2022ರಲ್ಲಿನ ಆದೇಶದಂತೆ ಸರ್ಕಾರಿ ಭೂಮಿಯನ್ನು ಉಚಿತವಾಗಿ ಯೋಜನೆಗೆ ನೀಡಲಾಗುತ್ತಿದೆ.


Click it and Unblock the Notifications