ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿಸ್ ಗಡ್ಕರಿ ಅವರು ಒಂದು ಮಹತ್ವವಾದ ಸುದ್ದಿ ನೀಡಿದ್ದಾರೆ. ಅದೇನೆಂದರೆ ಈ ವರ್ಷದ ಅಂತ್ಯದೊಳಗೆ ಬೆಂಗಳೂರು-ಚೆನ್ನೈ ಎಕ್ಸ್ಪ್ರೆಸ್ವೇ ಸಂಪೂರ್ಣವಾಗಿ ಕಾರ್ಯಾರಂಭ ಮಾಡಲಿದೆ ಎಂಬ ಖುಷಿಸುದ್ದಿ ಹೇಳಿದ್ದಾರೆ.

ಹೌದು, ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್ ಹೈವೇ ಯಾವಾಗ ಎಂದು ಕಾದು ಕುಳಿತಿದ್ದವರಿಗೆ ಕೊನೆಗೂ ಗುಡ್‌ನ್ಯೂಸ್ ಸಿಕ್ಕಿದೆ. ಸುಮಾರು 260 ಕಿಲೋಮೀಟರ್ ಉದ್ದದ ಈ ಹೆದ್ದಾರಿ ಈಗ ಭಾಗಶಃ ಕಾರ್ಯನಿರ್ವಹಿಸುತ್ತಿದ್ದು, ಸಂಪೂರ್ಣವಾಗಿ ಸಿದ್ಧವಾದ ನಂತರ ದಕ್ಷಿಣ ಭಾರತದ ಎರಡು ಪ್ರಮುಖ ನಗರಗಳ ನಡುವಿನ ಸಂಚಾರ ಹೆಚ್ಚು ಸುಗಮವಾಗಲಿದೆ ಎಂಬ ನಿರೀಕ್ಷೆಯಿದೆ.
ಇನ್ನು ಬಿಲ್ಡ್ ಇಂಡಿಯಾ ಇನ್ಫ್ರಾ ಪ್ರಶಸ್ತಿ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವರು, ದೇಶದ ವಿವಿಧ ಭಾಗಗಳಲ್ಲಿ ವೇಗವಾಗಿ ಹೆದ್ದಾರಿ ಅಭಿವೃದ್ಧಿ ನಡೆಯುತ್ತಿದೆ ಎಂದು ಹೇಳಿದರು. ದೆಹಲಿ-ಡೆಹ್ರಾಡೂನ್ ಎಕ್ಸ್ಪ್ರೆಸ್ವೇ ಈಗಾಗಲೇ ಸಿದ್ಧವಾಗಿದ್ದು, ಆ ಮಾರ್ಗದಲ್ಲೂ ಎರಡು ಗಂಟೆಗಳೊಳಗೆ ಪ್ರಯಾಣಿಸಲು ಸಾಧ್ಯವಾಗಿದೆ ಎಂದು ಅವರು ತಿಳಿಸಿದರು. ಇದೇ ರೀತಿಯಲ್ಲಿ ಚೆನ್ನೈ-ಬೆಂಗಳೂರು ಎಕ್ಸ್ಪ್ರೆಸ್ವೇ ಸಹ ಶೀಘ್ರದಲ್ಲೇ ಜನರಿಗೆ ಸಂಪೂರ್ಣವಾಗಿ ಲಭ್ಯವಾಗಲಿದೆ ಎಂದು ಹೇಳಿದರು.
ದೆಹಲಿಯಿಂದ ಚೆನ್ನೈವರೆಗೆ ಇರುವ ಅಂತರವನ್ನು ಸುಮಾರು 320 ಕಿಲೋಮೀಟರ್ ಕಡಿಮೆ ಮಾಡುವ ಯೋಜನೆಯೂ ಸರ್ಕಾರದ ಮುಂದೆ ಇದೆ ಎಂದು ಗಡ್ಕರಿ ತಿಳಿಸಿದರು. ಪರಿಸರ ಸ್ನೇಹಿ ರಸ್ತೆಗಳನ್ನು ನಿರ್ಮಿಸುವುದು ಸರ್ಕಾರದ ಮುಖ್ಯ ಗುರಿಯಾಗಿದೆ ಎಂದರು. ಸುರಂಗ ಮಾರ್ಗ ನಿರ್ಮಾಣದಲ್ಲಿ ಭಾರತ ಉತ್ತಮ ಸಾಧನೆ ಮಾಡುತ್ತಿದೆ ಎಂದು ಅವರು ಹೆಮ್ಮೆಪಟ್ಟರು.
ಹೈಡ್ರೋಜನ್ ಇಂಧನದ ಬಳಕೆಯನ್ನು ಉತ್ತೇಜಿಸಲು ಸರ್ಕಾರ ಹೊಸ ಯೋಜನೆಗಳನ್ನು ರೂಪಿಸುತ್ತಿದೆ. ವಿವಿಧ ಹೆದ್ದಾರಿ ಮಾರ್ಗಗಳಲ್ಲಿ ಹೈಡ್ರೋಜನ್ ಇಂಧನ ಭರ್ತಿ ಕೇಂದ್ರಗಳನ್ನು ಸ್ಥಾಪಿಸಲು ಯೋಜಿಸಲಾಗಿದೆ. ಇದಕ್ಕಾಗಿ ಅಂತರರಾಷ್ಟ್ರೀಯ ಕಂಪನಿಗಳೊಂದಿಗೆ ಸಂಶೋಧನೆ ಮತ್ತು ಸಹಕಾರ ಅಗತ್ಯವಿದೆ ಎಂದು ಸಚಿವರು ಹೇಳಿದರು.
ಮೂಲಸೌಕರ್ಯ ಕಾಮಗಾರಿಗಳಲ್ಲಿ ಗುಣಮಟ್ಟ ಕಾಪಾಡುವುದು ಬಹಳ ಮುಖ್ಯ ಎಂದು ಅವರು ಒತ್ತಿ ಹೇಳಿದರು. ವಂಚನೆ ಅಥವಾ ಅಕ್ರಮದಲ್ಲಿ ತೊಡಗುವ ಗುತ್ತಿಗೆದಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು. ನೆರೆ ರಾಷ್ಟ್ರಗಳೊಂದಿಗೆ ಸಂಪರ್ಕವನ್ನು ಬಲಪಡಿಸುವುದೂ ಸರ್ಕಾರದ ಪ್ರಮುಖ ಆದ್ಯತೆಯಾಗಿದೆ ಎಂದು ಅವರು ಹೇಳಿದರು.
ರಾಜ್ಯಗಳಿಗೆ ಸಹಾಯ ಮಾಡುವ ಹೊಸ ನೀತಿಯನ್ನು ಕೇಂದ್ರ ಸರ್ಕಾರ ರೂಪಿಸುತ್ತಿದೆ. ರಾಷ್ಟ್ರೀಯ ಹೆದ್ದಾರಿ ಮಟ್ಟದ ಗುಣಮಟ್ಟ ಹೊಂದಿರುವ ರಸ್ತೆಗಳನ್ನು ನಿರ್ಮಿಸುವ ಮೂಲಕ ದೇಶದಾದ್ಯಂತ ಸಂಪರ್ಕ ಮತ್ತು ಪ್ರಯಾಣದ ದಕ್ಷತೆಯನ್ನು ಹೆಚ್ಚಿಸುವುದು ಈ ಯೋಜನೆಯ ಉದ್ದೇಶವಾಗಿದೆ.


Click it and Unblock the Notifications