ಭಾರತ-ಪಾಕ್ ನಡುವಿನ ಸಂಘರ್ಷ ನಿಂತಿದ್ದರೂ ಅದು ಬೂದಿ ಮುಚ್ಚಿದ ಕೆಂಡದಂತಿದೆ. ಪಾಕಿಸ್ತಾನಕ್ಕೆ ಟರ್ಕಿ ರಾಷ್ಟ್ರದ ಬೆಂಬಲ ಸಿಗುತ್ತಿದೆ. ಇದರ ನಡುವೆಯೇ ಬೆಂಗಳೂರು ವ್ಯಾಪಾರ ಸಮುದಾಯ ಮಹತ್ವದ ನಿರ್ಧಾರ ತೆಗೆದುಕೊಂಡಿದದೆ. ಅದೇನೆಂದರೆ ಪಾಕಿಸ್ತಾನಕ್ಕೆ ಬೆಂಬಲ ನೀಡುತ್ತಿರುವ ಟರ್ಕಿ ರಾಷ್ಟ್ರದಿಂದ ಉತ್ಪನ್ನಗಳನ್ನು ಆಮದು ಮಾಡಿಸಿಕೊಳ್ಳುವುದಿಲ್ಲ ಎಂಬ, ಮಹತ್ವದ ಹೆಜ್ಜೆಯನ್ನು ಬೆಂಗಳೂರು ವ್ಯಾಪಾರಿಗಳಿಟ್ಟಿದ್ದಾರೆ.

ಹೌದು, ಟರ್ಕಿ ದೇಶದಿಂದ ಕರ್ನಾಟಕಕ್ಕೆ ಜವಳಿ, ಡ್ರೈ ಫ್ರೂಟ್ಸ್, ಟೈಲ್ಸ್, ಮಾರ್ಬಲ್‌ಗಳು ಮತ್ತು ಆಲಿವ್ ಎಣ್ಣೆಯಂತಹ ಹಲವಾರು ಉತ್ಪನ್ನಗಳು ಆಮದು ಆಗುತ್ತಿತ್ತು. ಆದರೆ ಆಪರೇಷನ್ ಸಿಂದೂರ್ ನಂತರ ಟರ್ಕಿ ನಡೆಯನ್ನು ಖಂಡಿಸಿರುವ ಬೆಂಗಳೂರು ವ್ಯಾಪಾರಿಗಳು, ಟರ್ಕಿಯೊಂದಿಗಿದ್ದ ವ್ಯಾಪಾರ ಸಂಬಂಧವನ್ನು ಕಡಿತಗೊಳಿಸಿದ್ದಾರೆ. ಈ ಮೂಲಕ ದೇಶಪ್ರೇಮದ ಸಂದೇಶ ಸಾರಿದ್ದಾರೆ.
ಟರ್ಕಿಗೆ ಕರ್ನಾಟಕ ಕೊಟ್ಟ ತಿರುಗುಬಾಣ ಇದಾಗಿದೆ. ಇದು ಕೇವಲ ರಾಜಕೀಯ ನೆಲೆ ಮಾತ್ರವಲ್ಲ. ಇದು ವ್ಯಾಪಾರಿಕ ತಂತ್ರವನ್ನು ಮರುಆಲೋಚಿಸುವ ಅವಕಾಶವೆಂದು ಅವರು ಪರಿಗಣಿಸುತ್ತಿದ್ದಾರೆ.ಇದರೊಂದಿಗೆ, ಟರ್ಕಿಯ ಮೇಲಿನ ಅವಲಂಬನೆ ಕಡಿಮೆಯಾಗುವ ಸಾಧ್ಯತೆ ಇರುವಂತೆಯೇ, ಸ್ಥಳೀಯ ಉತ್ಪಾದಕರಿಗೆ ಹೊಸ ಅವಕಾಶಗಳು ನಿರ್ಮಾಣವಾಗುವ ನಿರೀಕ್ಷೆಯಿದೆ.
ವ್ಯಾಪಾರದಲ್ಲಿ ಹೊಸ ಅಧ್ಯಾಯ:
ಇಲ್ಲಿವರೆಗೂ ಟರ್ಕಿಯ ಆಮದುಗಳು ಕರ್ನಾಟಕಕ್ಕೆ ಬರುತ್ತಿದ್ದವು. ಅದರಲ್ಲೂ ವಿಶೇಷವಾಗಿ ಬೆಂಗಳೂರಿನಲ್ಲೇ ಟರ್ಕಿಯ ಆಮದು ಹೆಚ್ಚಾಗಿರುವುದು. ಹಲವಾರು ಹಲವಾರು ವ್ಯವಹಾರಗಳು ಟರ್ಕಿಯ ಪೂರೈಕೆಯ ಮೇಲೆಯೇ ನಂಬಿಕೆ ಇಟ್ಟಿದ್ದವು. ಆದರೆ ಇನ್ನು ಮುಂದೆ ಈ ಮಾರ್ಗವನ್ನು ಕಡಿತಗೊಳಿಸುವ ನಿರ್ಧಾರದಿಂದಾಗಿ, ಭಾರತದಲ್ಲಿನ ಸ್ಥಳೀಯ ಕೈಗಾರಿಕೆಗಳು ಹೆಚ್ಚು ಉತ್ತೇಜನ ಪಡೆಯುವ ಸಾಧ್ಯತೆ ಇದೆ.
ವ್ಯಾಪಾರಿ ಸಂಘಟನೆಯು ಈ ಬದಲಾವಣೆಯನ್ನು ಉತ್ತೇಜಕವಲ್ಲದಂತೆ, ಅವಕಾಶ ರೂಪದಲ್ಲಿಯೇ ನೋಡುತ್ತಿದೆ. ಈ ಹಿನ್ನೆಲೆಯಲ್ಲಿ, ಹಲವು ಉದ್ಯಮಿಗಳು ಭಾರತೀಯ ತಯಾರಕರೊಂದಿಗೆ ಸಹಕಾರ ಬೆಳೆಸಲು ಮುಂದಾಗುತ್ತಿದ್ದಾರೆ.
FKCCI ಅಧ್ಯಕ್ಷ ಎಂ.ಜಿ. ಬಾಲಕೃಷ್ಣ:
ಟರ್ಕಿಯಿಂದ ಜವಳಿ, ರಕ್ಷಣಾ ಉಪಕರಣಗಳು, ಟೈಲ್ಸ್ ಮತ್ತು ಮಾರ್ಬಲ್‌ಗಳಂತಹ ವಿಭಾಗಗಳಲ್ಲಿ ಆಮದು ಹೆಚ್ಚು ಇತ್ತು. ಆದರೆ ಇನ್ನುಮುಂದೆ ಆ ಜಾಗವನ್ನು ಭಾರತೀಯ ತಯಾರಕರು ತುಂಬುವ ಸಾಧ್ಯತೆ ಇದೆ. ನಾವು ಬದಲಿಗಳನ್ನು ಕೇವಲ ಹುಡುಕುತ್ತಿಲ್ಲ - ಬದಲಾಗಲು ತಯಾರಾಗುತ್ತಿದ್ದೇವೆ ಎಂದು FKCCI ಅಧ್ಯಕ್ಷ ಎಂ.ಜಿ. ಬಾಲಕೃಷ್ಣ ಹೇಳಿಕೆ ನೀಡಿದ್ದಾರೆ.
ಒಣ ಹಣ್ಣುಗಳಲ್ಲಿ ಮಧ್ಯಪ್ರಾಚ್ಯದ ದಿಕ್ಕಿನ ದೃಷ್ಠಿ:
ಬೆಂಗಳೂರು ಮಾರುಕಟ್ಟೆಗಳಲ್ಲಿ ಟರ್ಕಿಯ ಏಪ್ರಿಕಾಟ್, ಅಂಜೂರ, ಹ್ಯಾಝೆಲ್‌ನಟ್ಸ್ ಮತ್ತು ಪಿಸ್ತಾ ತುಂಬಾ ಜನಪ್ರಿಯವಾಗಿದ್ದವು. ಆದರೆ ಈಗ ಈ ಉತ್ಪನ್ನಗಳಿಗೆ ಪರ್ಯಾಯಗಳಿಗಾಗಿ ಮಧ್ಯಪ್ರಾಚ್ಯದ ದೇಶಗಳತ್ತ ಮುಖ ಮಾಡಲಾಗುತ್ತಿದೆ. ಆದರೆ ಈಗ ನಾವು ಮಧ್ಯಪ್ರಾಚ್ಯದಿಂದ ಈ ಹಣ್ಣುಗಳನ್ನು ತರುವ ಯೋಜನೆಯಲ್ಲಿದ್ದೇವೆ ಎಂದು, ಒಣ ಹಣ್ಣುಗಳ ಸಗಟು ವ್ಯಾಪಾರಿ ಆಸಿಫ್ ಪಾಷಾ ತಿಳಿಸಿದ್ದಾರೆ. ಹೊಸ ಪ್ಯಾಕಿಂಗ್ ಮತ್ತು ಶ್ರೇಣೀಕರಣ ತಂತ್ರಜ್ಞಾನಗಳ ಸಹಾಯದಿಂದ ಭಾರತೀಯ ಹಾಗೂ ಪ್ರಾದೇಶಿಕ ಪೂರೈಕೆದಾರರು ಉತ್ತಮವಾಗಿ ಸ್ಪರ್ಧಿಸಬಲ್ಲರು ಎಂಬ ನಂಬಿಕೆ ನಮಗಿದೆ ಎಂದಿದ್ದಾರೆ.
ಜವಳಿ ವ್ಯಾಪಾರದಲ್ಲಿ ಹೊಸ ಆಯಾಮ:
ಟರ್ಕಿಯಿಂದ ಹತ್ತಿ ಬಟ್ಟೆ ಮತ್ತು ಪರದೆ ಬಟ್ಟೆಗಳನ್ನು ಆಮದು ಮಾಡಿಕೊಳ್ಳುತ್ತಿದ್ದ ಹಲವಾರು ಜವಳಿ ವ್ಯಾಪಾರಿಗಳು ಈಗ ದಾರಿಯ ಬದಲಾವಣೆಯಲ್ಲಿ ತೊಡಗಿದ್ದಾರೆ. ಪೂರ್ವದಲ್ಲಿ ನಮ್ಮ ಹಲವಾರು ಗ್ರಾಹಕರು ಟರ್ಕಿಶ್ ಬಟ್ಟೆಯನ್ನು ಆದ್ಯತೆ ನೀಡುತ್ತಿದ್ದರು. ಈಗ ನಾವು ವಿಯೆಟ್ನಾಂನಿಂದ ಬಟ್ಟೆಗಳನ್ನು ತರುತ್ತಿದ್ದೇವೆ ಮತ್ತು ತಮಿಳುನಾಡು ಹಾಗೂ ಗುಜರಾತ್‌ನ ಗಿರಣಿಗಳೊಂದಿಗೆ ಕೈಜೋಡಿಸಿ ಉತ್ತಮ ಗುಣಮಟ್ಟದ ಸ್ಥಳೀಯ ಉತ್ಪನ್ನಗಳನ್ನು ನೀಡಲು ಯತ್ನಿಸುತ್ತಿದ್ದೇವೆ ಎಂದು ಜವಳಿ ವ್ಯಾಪಾರೋದ್ಯಮಿಗಳು ತಿಳಿಸಿದ್ದಾರೆ.
ಟರ್ಕಿಯೆ ಹೇಗೆ ಪ್ರಮುಖ ಆಮದು ತಾಣವಾಗಿತ್ತು?
ಟರ್ಕಿಯ ಲಾಜಿಸ್ಟಿಕ್ಸ್ ಸೌಕರ್ಯ, ಕಚ್ಚಾ ವಸ್ತುಗಳ ಲಭ್ಯತೆ ಮತ್ತು ಕಡಿಮೆ ಕಾರ್ಮಿಕ ವೆಚ್ಚಗಳು. ಈ ಎಲ್ಲಾ ಅಂಶಗಳು ಟರ್ಕಿಯನ್ನು ಕರ್ನಾಟಕದ ವ್ಯಾಪಾರಿಗಳಿಗೆ ಆಕರ್ಷಕ ತಾಣವನ್ನಾಗಿ ಮಾಡಿದ್ದವು. ಟರ್ಕಿಯ ಕೃಷಿ ವಲಯವು ಉತ್ಪಾದಿಸುವ ಗುಣಮಟ್ಟದ ಒಣ ಹಣ್ಣುಗಳಿಗೆ ಬೆಂಗಳೂರು ಮಾರುಕಟ್ಟೆ ಸದಾ ಬಲವಾದ ಬೇಡಿಕೆಯನ್ನು ಹೊಂದಿತ್ತು.
ಇದೇ ರೀತಿ, ಟರ್ಕಿಯ ತಂತ್ರಜ್ಞಾನದ ಗುಣಮಟ್ಟ ಮತ್ತು ಉತ್ಪಾದನಾ ಶ್ರೇಣಿಗಳು ಬಹುತೇಕ ವಿಭಾಗಗಳಲ್ಲಿ ಪ್ರಭಾವಶಾಲಿಯಾಗಿ ಬಿಂಬಿತವಾಗಿದ್ದವು. ಆದರೆ ಈಗ, ರಾಜಕೀಯ ಕಾರಣಗಳಿಂದ ಆ ಸಂಬಂಧ ಕಡಿತಗೊಂಡಿರುವುದು, ಭಾರತೀಯ ಉತ್ಪಾದಕರಿಗೆ ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಲು ಉತ್ತಮ ಸಮಯವಾಗಿದೆ.
ಟರ್ಕಿಯಿಂದ ಆಮದು ಕಡಿತಗೊಳಿಸುವ ಈ ತೀರ್ಮಾನವು ಕೇವಲ ತಾತ್ಕಾಲಿಕ ತಾತ್ವಿಕ ನಿರ್ಧಾರವಲ್ಲ. ಇದು ಭಾರತೀಯ ಉತ್ಪಾದಕರಿಗಾಗಿ ಹೊಸ ಅವಕಾಶಗಳ ಬಾಗಿಲನ್ನು ತೆರೆದಿದೆ. ಸ್ಥಳೀಯ ಉತ್ಪಾದನೆಯು ಪ್ರೋತ್ಸಾಹಿತವಾಗುತ್ತಿದ್ದು, ಮಾರುಕಟ್ಟೆಯಲ್ಲಿ ಹೊಸ ಸ್ಪರ್ಧಾತ್ಮಕತೆಯನ್ನು ಹುಟ್ಟಿಸುವ ಸಾಧ್ಯತೆ ಇದೆ. ವ್ಯಾಪಾರಿಕ ನಿಟ್ಟಿನಲ್ಲಿ ನೋಡಿದರೆ, ಟರ್ಕಿಯೊಂದಿಗೆ ಸಂಬಂಧ ಕಡಿತಗೊಳ್ಳುವಿಕೆಯು ಆತ್ಮನಿರ್ಭರ ಭಾರತ ಕನಸಿಗೆ ಒಂದು ಪಥ ನಿರ್ಮಿಸುತ್ತಿರುವಂತಿದೆ. ಸ್ಥಳೀಯ ಉತ್ಪಾದಕರು ತಮ್ಮ ಗುಣಮಟ್ಟ, ತಂತ್ರಜ್ಞಾನ ಮತ್ತು ಪೂರೈಕೆ ಶ್ರೇಣಿಗಳನ್ನು ಸುಧಾರಿಸುತ್ತಿದ್ದಂತೆ, ಭಾರತದ ಒಳಾಂಗಣ ಮಾರುಕಟ್ಟೆ ಇನ್ನಷ್ಟು ಶಕ್ತಿಶಾಲಿಯಾಗುವುದು ಅನುಮಾನವಿಲ್ಲ.


Click it and Unblock the Notifications