ಬೆಂಗಳೂರು ನಗರದಲ್ಲಿ ಆಟೋರಿಕ್ಷಾ ದರಗಳ ಬಗ್ಗೆ ಪ್ರಯಾಣಿಕರು ಬಹಳ ಕಾಲದಿಂದ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಅಗ್ರಿಗೇಟರ್ ಆಧಾರಿತ ಅಪ್ಲಿಕೇಶನ್‌ಗಳಲ್ಲಿ ಬುಕ್ ಮಾಡುವ ಆಟೋ ಪ್ರಯಾಣಗಳು, ಸರ್ಕಾರ ನಿಗದಿ ಪಡಿಸಿದ ದರಕ್ಕಿಂತ ಹೆಚ್ಚಿನ ವೆಚ್ಚವಾಗುತ್ತಿರುವುದು ಸಾಮಾನ್ಯ ಸಂಗತಿಯಾಗಿ ಪರಿಣಮಿಸಿದೆ. ಇದೇ ಹಿನ್ನೆಲೆಯಲ್ಲಿ, ಬೆಂಗಳೂರಿನ ಇಬ್ಬರು ಸಾಫ್ಟ್‌ವೇರ್ ಇಂಜಿನಿಯರ್‌ಗಳಾದ ಅನ್ಮೋಲ್ ಶರ್ಮಾ ಮತ್ತು ಯಶ್ ಗರ್ಗ್, ಆಟೋ ಪ್ರಯಾಣಿಕರಿಗಾಗಿಯೇ ಒಂದು ಅಪ್ಲಿಕೇಶನ್ ನಿರ್ಮಿಸಿದ್ದಾರೆ..

meterhaaki.comನಲ್ಲಿ ತಿಳಿಯಿರಿ ನಿಜವಾದ ದರ:
ಈ ಅಪ್ಲಿಕೇಶನ್ ಹೆಸರು meterhaaki.com.. ಇದು ಪ್ರಯಾಣಿಕರಿಗೆ ನಿಜವಾದ ಮೀಟರ್ ದರ ಮತ್ತು ಅಪ್ಲಿಕೇಶನ್‌ನಲ್ಲಿ ವಿಧಿಸಿದ ದರದ ವ್ಯತ್ಯಾಸವನ್ನು ತಿಳಿಯಲು ಸಹಾಯ ಮಾಡುತ್ತದೆ. ಇದು meterhaaki.com ವೆಬ್‌ಸೈಟ್‌ನಲ್ಲಿ ಲಭ್ಯವಿದ್ದು, ಪ್ರಯಾಣಿಕರು ತಮ್ಮ ಪ್ರಯಾಣದ ದೂರ ಹಾಗೂ ಕಾಯುವ ಸಮಯವನ್ನು ನಮೂದಿಸಿ ಸರಿಯಾದ ಅಧಿಕೃತ ದರವನ್ನು ಲೆಕ್ಕ ಹಾಕಬಹುದು.
ಪಾರದರ್ಶಕ ಮಾಹಿತಿ:
ಡೆವಲಪರ್‌ಗಳ ಪ್ರಕಾರ, ಈ ಸಾಧನವನ್ನು ಸೃಷ್ಟಿಸುವ ಉದ್ದೇಶ ಪ್ರಯಾಣಿಕರಿಗೆ ಪಾರದರ್ಶಕ ಮಾಹಿತಿ ಒದಗಿಸಿ, ಅವರಿಗೆ ಅನ್ಯಾಯವಾಗದಂತೆ ನೋಡಿಕೊಳ್ಳುವುದಾಗಿದೆ. "ಮೀಟರ್ ಹಾಕಿ" ಅಭಿಯಾನದಿಂದ ಪ್ರೇರಿತರಾಗಿ, ಸರಿಯಾದ ದರ ತಿಳಿಯದ ಕಾರಣ ಹೆಚ್ಚುವರಿ ಪಾವತಿ ಮಾಡುವ ಪರಿಸ್ಥಿತಿ ಕಡಿಮೆ ಆಗಬೇಕೆಂಬ ಉದ್ದೇಶದಿಂದ ಈ ವೆಬ್‌ಸೈಟ್ ರೂಪಿಸಲಾಗಿದೆ. ಇವರು ಮುಂದಿನ ದಿನಗಳಲ್ಲಿ ನಾವಿಗೆಟ್ ಎಂಬ ಮೊಬೈಲ್ ಅಪ್ಲಿಕೇಶನ್ ಮೂಲಕ ಈ ಸೇವೆಯನ್ನು ಇನ್ನಷ್ಟು ಸುಲಭವಾಗಿ ಲಭ್ಯವಾಗುವಂತೆ ಮಾಡುವ ಯೋಜನೆ ಹೊಂದಿದ್ದಾರೆ.
ಇದು ಹೇಗೆ ಕೆಲಸ ಮಾಡುತ್ತದೆ?
ಆಗಸ್ಟ್ 1ರಿಂದ ಜಾರಿಗೆ ಬಂದ ಹೊಸ ದರಗಳನ್ನು ಈ ಕ್ಯಾಲ್ಕುಲೇಟರ್‌ನಲ್ಲಿ ನವೀಕರಿಸಲಾಗಿದೆ. ಈಗ ಮೊದಲ 2 ಕಿಲೋಮೀಟರ್‌ಗಳಿಗೆ ಕನಿಷ್ಠ ದರ ₹36 ಆಗಿದ್ದು, ನಂತರದ ಪ್ರತಿ ಕಿಲೋಮೀಟರ್‌ಗೆ 18 ರೂ. ವಿಧಿಸಲಾಗುತ್ತಿದೆ. ರಾತ್ರಿ 10 ರಿಂದ ಬೆಳಿಗ್ಗೆ 5ರವರೆಗೆ ಈ ದರದ 1.5 ಪಟ್ಟು ಹೆಚ್ಚು ಶುಲ್ಕ ವಸೂಲೆಯಾಗುತ್ತದೆ. ಪ್ರಯಾಣಿಕರು ವೆಬ್‌ಸೈಟ್‌ನಲ್ಲಿ ತಮ್ಮ ಪ್ರಯಾಣದ ದೂರವನ್ನು ನಮೂದಿಸಿ, ಪ್ರಯಾಣದ ನಂತರ ಮೀಟರ್‌ನಿಂದ ಮಾಹಿತಿ ಪಡೆದು ಲೆಕ್ಕ ಹಾಕಬಹುದು. ನಂತರ, ಅಪ್ಲಿಕೇಶನ್‌ನಲ್ಲಿ ತೋರಿಸಿದ ದರದೊಂದಿಗೆ ಹೋಲಿಕೆ ಮಾಡಿ ಎಷ್ಟು ಹೆಚ್ಚುವರಿ ಪಾವತಿಸಲಾಗಿದೆ ಎಂಬುದನ್ನು ತಿಳಿಯಬಹುದು.
ಆಟೋ ಸೇವೆಗಳ ದರ ಹೆಚ್ಚುವರಿ ಸಮಸ್ಯೆ ಬೆಂಗಳೂರು ಮಾತ್ರವಲ್ಲದೆ ಅನೇಕ ನಗರಗಳಲ್ಲಿ ಕಂಡುಬರುತ್ತಿದೆ. ಸರ್ಜ್ ಪ್ರೈಸಿಂಗ್, ಗುಪ್ತ ಶುಲ್ಕಗಳು, ಟಿಪ್ ಸೇರಿ ಅಪ್ಲಿಕೇಶನ್‌ಗಳು ನಿಗದಿತ ದರವನ್ನು ಮೀರಿಸುತ್ತವೆ. ಕರ್ನಾಟಕ ಹೈಕೋರ್ಟ್‌ನ ಅಕ್ಟೋಬರ್ 2022ರ ಆದೇಶದ ಪ್ರಕಾರ, ಸರ್ಕಾರ ಸೂಚಿಸಿದ ದರಕ್ಕಿಂತ ಕೇವಲ 10% ಹೆಚ್ಚುವರಿ ಹಾಗೂ 5% ಜಿಎಸ್‌ಟಿ ಮಾತ್ರ ವಿಧಿಸಲು ಅನುಮತಿ ಇದ್ದರೂ, ನಿಯಮವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವುದು ಅಪರೂಪ.
'ಮೀಟರ್ ಹಾಕಿ' ಅಭಿಯಾನವನ್ನು ಬೆಂಬಲಿಸುವ ಆಟೋ ಚಾಲಕಿ ಶಾಂತಾ ಗೌಡ ಅವರ ಮಾತಿನಲ್ಲಿ, ಅಪ್ಲಿಕೇಶನ್ ಆಧಾರಿತ ಸೇವೆಗಳ ನಂತರ ಚಾಲಕರಲ್ಲಿ ಅಪ್ರಾಮಾಣಿಕತೆ ಹೆಚ್ಚಾಗಿದೆ. ಸಂಗ್ರಾಹಕರಿಗೆ ಚಾಲಕರು ಚಂದಾದಾರಿಕೆ ಶುಲ್ಕ ಪಾವತಿಸುತ್ತಾರೆ, ಆದರೆ ಪ್ಲಾಟ್‌ಫಾರ್ಮ್‌ಗಳು ಬೇಡಿಕೆ ಅಥವಾ ಅನುಕೂಲತೆ ಹೆಸರಿನಲ್ಲಿ ದರಗಳನ್ನು ಏರಿಸುತ್ತವೆ. ಈ ಅಭಿಯಾನದಿಂದ ಗ್ರಾಹಕರಿಗೆ ಹಕ್ಕು ತಿಳಿಸಲು ಮತ್ತು ಚಾಲಕರು ಮೀಟರ್ ಹಾಕಿ ಪ್ರಾಮಾಣಿಕವಾಗಿ ಕೆಲಸ ಮಾಡಲು ಪ್ರೇರೇಪಿಸುವ ಉದ್ದೇಶವಿದೆ.
ನಗರ ಸಂಚಾರ ತಜ್ಞರ ಪ್ರಕಾರ, ಸರ್ಕಾರ ಮತ್ತು ಅಧಿಕಾರಿಗಳ ನಿರ್ಲಕ್ಷ್ಯದಿಂದ ಸಮಸ್ಯೆ ಮುಂದುವರಿದಿದೆ. ಕಾನೂನಿನ ಪ್ರಕಾರ ಮೀಟರ್ ಕಡ್ಡಾಯವಾದರೂ, ಬಹುತೇಕ ಆಟೋಗಳಲ್ಲಿ ಅದು ಆನ್ ಮಾಡುವುದೇ ಇಲ್ಲ. ಅಗ್ರಿಗೇಟರ್‌ಗಳು ಮಾರುಕಟ್ಟೆಯಲ್ಲಿ ದರವನ್ನು ತಮ್ಮ ಅನುಕೂಲಕ್ಕೆ ನಿಯಂತ್ರಿಸುತ್ತಿದ್ದಾರೆ, ಇದು ಚಾಲಕರು ಮತ್ತು ಪ್ರಯಾಣಿಕರಿಗೆ ಸಮಾನವಾಗಿ ಅನ್ಯಾಯಕರವಾಗಿದೆ.


Click it and Unblock the Notifications