ಬೆಂಗಳೂರಿನಲ್ಲಿ ತ್ಯಾಜ್ಯ ಸಂಗ್ರಹಣ ವಿಚಾರ ಮತ್ತೆ ಬೆಳಕಿಗೆ ಬಂದಿದೆ. ಆದರೆ ಶುಲ್ಕದ ವಿಚಾರಕ್ಕಲ್ಲ. ವರ್ಷಕ್ಕೆ 550 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ಘನ ತ್ಯಾಜ್ಯ ಸಂಗ್ರಹಣೆ ಮತ್ತು ಸಾಗಣೆ ಒಪ್ಪಂದಗಳು ಈಗ ವಿವಾದಕ್ಕೆ ಕಾರಣವಾಗಿವೆ. ಈ ವಿಚಾರ ಬೆಂಗಳೂರು ನಗರದಲ್ಲಿ ಹೊಸ ಚರ್ಚೆ ಹುಟ್ಟುಹಾಕಿದೆ. ಹೌದು, ಹೊಸದಾಗಿ ಅಂತಿಮಗೊಂಡ ಟೆಂಡರ್‍ಗಳ ವಿರುದ್ಧ ಸಲ್ಲಿಸಲಾದ ಹಲವು ಮೇಲ್ಮನವಿಗಳ ಹಿನ್ನೆಲೆಯಲ್ಲಿ, ನಗರಾಭಿವೃದ್ಧಿ ಇಲಾಖೆ (ಯುಡಿಡಿ) ಬೆಂಗಳೂರು ಘನ ತ್ಯಾಜ್ಯ ನಿರ್ವಹಣಾ ಪ್ರಾಧಿಕಾರ (ಬಿಎಸ್ಡಬ್ಲ್ಯೂಎಂಎಲ್)ಕ್ಕೆ ಪ್ರತಿಯೊಂದು ಮೇಲ್ಮನವಿಗೂ ಅಫಿಡವಿಟ್ ಮೂಲಕ ಉತ್ತರ ನೀಡುವಂತೆ ಸೂಚನೆ ನೀಡಿದೆ.

ಇನ್ನು ಇತ್ತೀಚೆಗೆ ಹೊರಡಿಸಲಾದ ಇಲಾಖೆಯ ಆದೇಶದಲ್ಲಿ, ಟೆಂಡರ್ ಪ್ರಕ್ರಿಯೆ ವಿರುದ್ಧ ಸಲ್ಲಿಸಲಾದ ಎಲ್ಲಾ ಮೇಲ್ಮನವಿಗಳಿಗೆ ಪ್ರಮಾಣ ಪತ್ರದ ಆಧಾರದ ಮೇಲೆ ಸ್ಪಷ್ಟ ಉತ್ತರ ಕೊಡಬೇಕು ಎನ್ನಲಾಗಿದೆ. ಅಲ್ಲದೇ ಈ ಕ್ರಮದಿಂದ, ಟೆಂಡರ್ ಸಂಬಂಧಿತ ನಿರ್ಧಾರಗಳಿಗೆ ಸಂಬಂಧಿಸಿದ ಅಧಿಕಾರಿಗಳು ವೈಯಕ್ತಿಕವಾಗಿ ಜವಾಬ್ದಾರರಾಗುತ್ತಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕರ್ನಾಟಕ ಹೈಕೋರ್ಟ್ ನಿರ್ದೇಶನದಂತೆ ಜುಲೈ 2025ರಲ್ಲಿ ಜಾರಿಗೆ ಬಂದ ಈ ಒಪ್ಪಂದಗಳು, ಗ್ರೇಟರ್ ಬೆಂಗಳೂರಿನ ಐದು ವಲಯಗಳನ್ನು ಒಳಗೊಂಡಂತೆ 33 ಪ್ಯಾಕೇಜ್ಗಳಾಗಿ ವಿಭಜಿಸಲಾಗಿದೆ. ಈ ಒಪ್ಪಂದಗಳು ಏಳು ವರ್ಷಗಳ ಅವಧಿಗೆ ಇದ್ದು, ಒಟ್ಟು ಮೌಲ್ಯ ಸುಮಾರು 4,000 ಕೋಟಿ ರೂ.ಗಳಾಗಿದೆ.
ಬಿಎಸ್ಡಬ್ಲ್ಯೂಎಂಎಲ್ನ ತಾಂತ್ರಿಕ ಮೌಲ್ಯಮಾಪನ ಸಮಿತಿಯು ಯಶಸ್ವಿ ಬಿಡ್ಡರ್ಗಳನ್ನು ಘೋಷಿಸಿದ ನಂತರ, ಮೌಲ್ಯಮಾಪನ ಪ್ರಕ್ರಿಯೆಯಲ್ಲಿ ಅಕ್ರಮಗಳು ನಡೆದಿವೆ ಎಂದು ಆರೋಪಿಸಿ ಸುಮಾರು 63 ವಿಫಲ ಸಂಸ್ಥೆಗಳು ಯುಡಿಡಿಗೆ ಮೇಲ್ಮನವಿ ಸಲ್ಲಿಸಿವೆ. ಮಹದೇವಪುರ, ದಾಸರಹಳ್ಳಿ, ಕೆಆರ್ ಪುರಂ ಮತ್ತು ಯಶವಂತಪುರದಂತಹ ವೇಗವಾಗಿ ಅಭಿವೃದ್ಧಿಯಾಗುತ್ತಿರುವ ಪ್ರದೇಶಗಳ ಪ್ಯಾಕೇಜ್ಗಳು ಹೆಚ್ಚು ವಿವಾದಕ್ಕೆ ಒಳಗಾಗಿವೆ.
ಮೇಲ್ಮನವಿದಾರರ ಪ್ರಕಾರ, ಕೆಲವು ಆಯ್ದ ಕಂಪನಿಗಳು ಅಗತ್ಯವಿರುವಷ್ಟು ವಾಹನಗಳಿಲ್ಲ, ದೊಡ್ಡ ಮಟ್ಟದ ಕಾರ್ಯಾಚರಣೆ ನಡೆಸಲು ಬೇಕಾದ ಆರ್ಥಿಕ ಸಾಮರ್ಥ್ಯವಿಲ್ಲ ಹಾಗೂ ಪಿಎಫ್, ಇಎಸ್ಐ ಮುಂತಾದ ಕಾನೂನುಬದ್ಧ ಪಾವತಿಗಳನ್ನು ಸರಿಯಾಗಿ ಪಾಲಿಸಿಲ್ಲ. ಅಲ್ಲದೆ, ಒಂದು ಸಂಸ್ಥೆ ಬೇರೆ ರಾಜ್ಯದಲ್ಲಿ ಕಪ್ಪುಪಟ್ಟಿಗೆ ಸೇರಿಸಲಾಗಿದೆ ಎಂಬ ಆರೋಪವೂ ಕೇಳಿಬಂದಿದೆ.
ಗಮನಾರ್ಹ ಸಂಗತಿಯೆಂದರೆ, ಐಎಎಸ್ ಅಧಿಕಾರಿ ನೇತೃತ್ವದ ತಾಂತ್ರಿಕ ಸಮಿತಿಯು ಬಿಡ್ಗಳನ್ನು ಅನುಮೋದಿಸಿದ್ದರೂ, ಅಫಿಡವಿಟ್ ಆಧಾರಿತ ಉತ್ತರ ಸಲ್ಲಿಸುವ ಹೊಣೆಗಾರಿಕೆಯನ್ನು ಬಿಎಸ್ಡಬ್ಲ್ಯೂಎಂಎಲ್ನ ಜನರಲ್ ಮ್ಯಾನೇಜರ್ (ತಾಂತ್ರಿಕ) ಮೇಲೆ ಯುಡಿಡಿ ಹಾಕಿದೆ.
ಬೆಂಗಳೂರು ನಗರದಲ್ಲಿ ಮನೆಮನೆಗಳಿಂದ ಸಂಗ್ರಹವಾಗುವ ಹಸಿ, ಒಣ ಹಾಗೂ ಸ್ಯಾನಿಟರಿ ಕಸದ ನಿರ್ವಹಣೆಯ ಒಪ್ಪಂದಗಳು ಬಹು ವರ್ಷಗಳಿಂದಲೂ ವಿವಾದದಲ್ಲೇ ಇವೆ. ಕಾರ್ಯಕ್ಷಮತೆಯ ಕೊರತೆ, ಪಾವತಿ ವಿಳಂಬ ಮತ್ತು ಪಕ್ಷಪಾತದ ಆರೋಪಗಳು ಆಗಾಗ್ಗೆ ಕೇಳಿಬರುತ್ತಿವೆ.
ಇತ್ತೀಚೆಗೆ ಆಹ್ವಾನಿಸಲಾದ ಹೊಸ ಟೆಂಡರ್ಗಳಲ್ಲಿ ಕಠಿಣ ದಂಡ ವಿಧಿಸುವ ಷರತ್ತುಗಳು, ಜಿಪಿಎಸ್ ಹೊಂದಿದ ವಾಹನಗಳ ಬಳಕೆ ಹಾಗೂ ವೇಗವಾಗಿ ಬೆಳೆಯುತ್ತಿರುವ ಹೊರವಲಯ ಪ್ರದೇಶಗಳಿಗೆ ಹೆಚ್ಚುವರಿ ವಾಹನ ವ್ಯವಸ್ಥೆ ಮಾಡುವಂತಹ ಸುಧಾರಣೆಗಳನ್ನು ಪರಿಚಯಿಸಲಾಗಿದೆ. ಆದರೂ, ಟೆಂಡರ್ ಪ್ರಕ್ರಿಯೆಯ ಪಾರದರ್ಶಕತೆ ಬಗ್ಗೆ ಪ್ರಶ್ನೆಗಳು ಮುಂದುವರಿದಿವೆ.


Click it and Unblock the Notifications