ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (Bengaluru Kempegowda International Airport) ಸದಾ ಜನನಿಬಿಡ ಏರ್‌ಪೋರ್ಟ್‌ಗಳಲ್ಲಿ ಒಂದಾಗಿದೆ. ಹಲವಾರು ದಾಖಲೆಗಳನ್ನು ಬರೆದಿರುವ ಕೆಂಪೇಗೌಡ ವಿಮಾನ ನಿಲ್ದಾಣ (KIA) ಭಾರೀ ಮೆಚ್ಚುಗೆಯನ್ನು ಪಡೆದುಕೊಂಡಿದೆ. ಇದೀಗ ಮತ್ತೊಂದು ದಾಖಲೆ ಸೃಷ್ಟಿಸುವ ಮೂಲಕ ಬೆಂಗಳೂರು ಅಂತರಾಷ್ಟ್ರೀಯ ಕೆಂಪೇಗೌಡ ವಿಮಾನ ನಿಲ್ದಾಣ ಇತಿಹಾಸ ಬರೆದಿದೆ.

ಹೌದು, ಬೆಂಗಳೂರು ಕೆಂಪೇಗೌಡ ವಿಮಾನ ನಿಲ್ದಾಣ ಜನವರಿ 24, 2026 ರಲ್ಲಿ ತನ್ನ ಇತಿಹಾಸದಲ್ಲೇ ಅತ್ಯಧಿಕ ಪ್ರಯಾಣಿಕರ ಸಂಚಾರವನ್ನು ದಾಖಲಿಸಿಕೊಂಡಿದೆ.
ದಾಖಲೆಯತ್ತ ಬೆಂಗಳೂರು ಏರ್‌ಪೋರ್ಟ್!
ಅತೀ ಹೆಚ್ಚು ಪ್ರಯಾಣಿಕರ ಸಂಚಾರದ ಮೂಲಕ, ಜನವರಿ 24, 2026 ರಂದು ಒಂದೇ ದಿನ 1.4 ಲಕ್ಷ ಪ್ರಯಾಣಿಕರು ಆಗಮನ ಮತ್ತು ನಿರ್ಗಮಿಸಿದ ದಾಖಲೆ ವರದಿಯಾಗಿದೆ. ಇದು ಕೆಂಪೇಗೌಡ ವಿಮಾನ ನಿಲ್ದಾಣದ ಎಲ್ಲಾ ದಾಖಲೆಯನ್ನು ಮೀರಿ ಹೊಸ ದಾಖಲೆ ಬರೆದಿದೆ. ಇನ್ನು ಈ ಸಂಖ್ಯೆಯಲ್ಲಿ ದೇಶೀಯ ಮತ್ತು ಅಂತರಾಷ್ಟ್ರೀಯ ಪ್ರಯಾಣಿಕರು, ಬೆಂಗಳೂರು ನಗರಕ್ಕೆ ಆಗಮಿಸಿದವರು ಮತ್ತು ನಿರ್ಗಮಿಸಿದವರು, ಎಲ್ಲರೂ ಸೇರಿದ್ದಾರೆ.
ಸಾಮಾನ್ಯವಾಗಿ ಬೆಂಗಳೂರು ಏರ್‌ಪೋರ್ಟ್‌ನಲ್ಲಿ ದಿನಕ್ಕೆ ಸುಮಾರು 1 ಲಕ್ಷದಷ್ಟು ಪ್ರಯಾಣಿಕರು ಸಂಚಾರ ಮಾಡುತ್ತಾರೆ. ಆದರೆ ಈ ಮಟ್ಟದಲ್ಲಿ ದಾಖಲೆಯ ಸಂಚಾರ ಯಾವತ್ತೂ ಕಂಡು ಬಂದಿರಲಿಲ್ಲ. ಆದ್ರೆ ಇದೀಗ ಮೊದಲ ಬಾರಿ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಹೊಸ ದಾಖಲೆ ಸೃಷ್ಟಿಯಾಗಿದೆ.
ಜನವರಿ 24 ವೀಕೆಂಡ್ ಆಗಿದ್ದರಿಂದ, ಅಲ್ಲದೇ ಜನವರಿ 26 ರಂದು ಗಣರಾಜ್ಯೋತ್ಸವ ದಿನವಾದ್ದರಿಂದ ವಿಮಾನ ಪ್ರಯಾಣಕ್ಕೆ ಭಾರೀ ಬೇಡಿಕೆಯಿತ್ತು. ಅದೇ ಕಾರಣದಿಂದ ಈ ಹೆಚ್ಚಳ ಕಂಡುಬಂದಿದೆ ಎನ್ನಲಾಗಿದೆ.
ಟರ್ಮಿನಲ್ ವಾರು ಪ್ರಯಾಣದ ವಿವರ:
- ಟರ್ಮಿನಲ್ 1: ಸುಮಾರು 83,494 ಪ್ರಯಾಣಿಕರು ಸಂಚರಿಸಿದ್ದರು
- ಟರ್ಮಿನಲ್ 2: ಸುಮಾರು 55,593 ಪ್ರಯಾಣಿಕರು ಸಂಚರಿಸಿದ್ದರು.
- ಒಟ್ಟು: ಸುಮಾರು 1.4 ಲಕ್ಷ ಪ್ರಯಾಣಿಕರು ಸಂಚಾರ ಮಾಡಿದ್ದಾರೆ ಎಂದು ವರದಿಯಾಗಿದೆ.
ಅನುಕೂಲಕ್ಕೆ ತಕ್ಕಂತೆ ಬೆಂಗಳೂರು ಏರ್‌ಪೋರ್ಟ್!
ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಯಾಣಿಕರ ಅನುಭವ, ಸೇವಾ ಗುಣಮಟ್ಟ, ಉತ್ತಮ ಸೇವೆ, ಆಧುನಿಕತೆಯಿಂದಾಗಿ ವಿಶ್ವದೆಲ್ಲೆಡೆ ಜನಪ್ರಿಯತೆ ಪಡೆದಿದೆ. ತನ್ನ ಉತ್ತಮ ಸೇವೆಯಿಂದಾಗಿ ಹಲವಾರು ಪ್ರಶಸ್ತಿಗಳನ್ನು ಸಹ ಗಿಟ್ಟಿಸಿಕೊಂಡಿದೆ. ಇತ್ತೀಚೆಗಷ್ಟೇ ವಿಂಗ್ಸ್ ಇಂಡಿಯಾ 2026 ರಲ್ಲಿ 25 ಮಿಲಿಯನ್‌ಗಿಂತಲೂ ಅಧಿಕ ಪ್ರಯಾಣಿಕರ ವರ್ಗದಲ್ಲಿ ಭಾರತದ ಅತ್ಯುತ್ತಮ ವಿಮಾನ ನಿಲ್ದಾಣ ಎಂದು ಬೆಂಗಳೂರು ಏರ್‌ಪೋರ್ಟ್ ಗುರುತಿಸಿಕೊಂಡಿದೆ.
ಬೆಂಗಳೂರಿನಲ್ಲಿ ಎರಡನೇ ಏರ್‌ಪೋರ್ಟ್!
ಇದೀಗ ಬೆಂಗಳೂರಿನಲ್ಲಿ ದಿನೇ ದಿನೇ ಪ್ರಯಾಣಿಕರ ಸಂಖ್ಯೆ ಹೆಚ್ಚಾಗುತ್ತಿದ್ದು, ಏರ್‌ಪೋರ್ಟ್ ರೋಡ್‌ನಲ್ಲೂ ಪ್ರತೀ ದಿನ ಕೇಳುವ ಸಮಸ್ಯೆಯೆಂದರೆ ಸಂಚಾರ ದಟ್ಟಣೆ. ಅಧಿಕಾರಿಗಳು ಸಹ ಈ ಸಮಸ್ಯೆಗೆ ಸಾಕಷ್ಟು ಪರಿಹಾರ ಕಂಡುಕೊಂಡರೂ, ಬಗೆಹರಿಯುವುದಂತೂ ಕಾಣುತ್ತಿಲ್ಲ. ಈ ಮಧ್ಯೆ ಸರ್ಕಾರ ಎರಡನೇ ಏರ್‌ಪೋರ್ಟ್ ನಿರ್ಮಾಣಕ್ಕೆ ಅಣಿ ಹಾಕಿದೆ. ಆದ್ರೆ ಕೆಲವು ಅಡ್ಡಿಗಳು ಎದುರಾಗುತ್ತಿದ್ದು, ಈಗಾಗಲೇ ನಿರ್ಮಾಣದ ಜಾಗದ ಹುಡುಕಾಟದಲ್ಲಿದ್ದಾರೆ. ಕೆಲವು ಸ್ಥಳಗಳನ್ನು ಫೈನಲ್ ಮಾಡಲಾಗಿದ್ದು, ನಿರ್ಮಾಣಕ್ಕೆ ಕೆಲವು ನಿಯಮಗಳಿವೆ. ಸದ್ಯ ಬೆಂಗಳೂರು ದಕ್ಷಿಣದಲ್ಲೇ ಮತ್ತೊಂದು ಏರ್‌ಪೋರ್ಟ್ ನಿರ್ಮಾಣವಾಗಲಿದೆ ಎಂದು ಹೇಳಲಾಗುತ್ತಿದೆ. ಆದ್ರೆ ಈ ಬಗ್ಗೆಯಾಗಲೀ, ನಿರ್ಮಾಣದ ಹಂತದ ಬಗ್ಗೆ ಯಾವುದೇ ಮಾಹಿತಿಗಳು ಬಹಿರಂಗವಾಗಿಲ್ಲ.


Click it and Unblock the Notifications