ಬೆಂಗಳೂರಿನ ನಮ್ಮ ಮೆಟ್ರೋದ ವ್ಯಾಪ್ತಿ ಹೆಚ್ಚುತ್ತಿದೆ. ಸದ್ಯ ಎರಡು ಮಾರ್ಗಗಳಲ್ಲಿ ಮಾರ್ಗಗಳಲ್ಲಿ ಮಾತ್ರ ಕಾರ್ಯ ನಿರ್ವಹಿಸುತ್ತಿರುವ ಮೆಟ್ರೋದ ಮುಂದುವರಿದ ಭಾಗಗಳ ಕೆಲಸ ನಡೆಯುತ್ತಿದೆ. ಇದರ ನಡುವೆ ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್ ಮತ್ತು ಖಾಸಗಿ ಕಂಪನಿ ಎಂಬಸಿ ಆಫೀಸ್ ಪಾರ್ಕ್ಸ್ REIT ಹೊಸ ಒಪ್ಪಂದಕ್ಕೆ ಸಹಿ ಮಾಡಿವೆ. ಅಂದರೆ ಕಾಡುಬೀಸನಹಳ್ಳಿ ಮೆಟ್ರೋ ನಿಲ್ದಾಣ ನಿರ್ಮಿಸಲು ಒಪ್ಪಂದ ಮಾಡಿಕೊಂಡಿವೆ.

ಇನ್ನು ಈ ಕಾಡುಬೀಸನಹಳ್ಳಿ ಮೆಟ್ರೋ ನಿಲ್ದಾಣ, ಬೆಂಗಳೂರು ಮೆಟ್ರೋ ಹಂತ 2Aಯ ನೀಲಿ ಮಾರ್ಗದಲ್ಲಿರುವ ಸಿಲ್ಕ್ ಬೋರ್ಡ್-ಕೆ.ಆರ್ ಪುರಂ ಮಾರ್ಗದಲ್ಲಿ ಬರುವ ನಿಲ್ದಾಣವಾಗಿದೆ. ಈ ಮಾರ್ಗವು ಒಟ್ಟು 17 ಕಿ.ಮೀ ಉದ್ದ ಇದ್ದು 16 ನಿಲ್ದಾಣಗಳ ಮೂಲಕ ಸಾಗುತ್ತದೆ. ಈ ಹೊಸ ಮೆಟ್ರೋ ನಿಲ್ದಾಣ ನಿರ್ಮಾಣಕ್ಕೆ ಎಂಬಸಿ REIT ಗೆ ಸೇರಿದ್ದ ವಿಕಾಸ್ ಟೆಲಿಕಾಂ ಪ್ರೈವೇಟ್ ಲಿಮಿಟೆಡ್ ಎಂಬ ಕಂಪನಿ ₹100 ಕೋಟಿ ರೂಪಾಯಿ ಹೂಡಿಕೆ ಮಾಡುತ್ತಿದೆ. ಇದು ಸಾರಿಗೆ ವ್ಯವಸ್ಥೆಯನ್ನು ಸುಧಾರಿಸಲು ಮತ್ತು ಉದ್ಯೋಗ, ವ್ಯಾಪಾರ ಪ್ರದೇಶಗಳಿಗೆ ಸುಲಭ ಪ್ರಯಾಣವನ್ನು ಒದಗಿಸಲು ಸಹಾಯ ಮಾಡಲಿದೆ.
ಅಂದಹಾಗೆ ಈ ಮೆಟ್ರೋ ನಿಲ್ದಾಣಕ್ಕೆ ಎಂಬೆಸಿ ಟೆಕ್ ವಿಲೇಜ್ ಕಾಡುಬೀಸನಹಳ್ಳಿ ಮೆಟ್ರೋ ನಿಲ್ದಾಣ ಎಂದು ನಾಮಕರಣ ಮಾಡಲಾಗುತ್ತದೆ. ಒಪ್ಪಂದದ ಪ್ರಕಾರ ಇದರ ಹಕ್ಕುಗಳು ಮತ್ತು ನಿಲ್ದಾಣದ ಜಾಹೀರಾತು, ವ್ಯಾಪಾರ ಸ್ಥಳಗಳ ಮೇಲೆ ಎಂಬಸಿ REITಗೆ , BMRCL 30 ವರ್ಷಗಳ ಕಾಲ ಅಧಿಕಾರ ನೀಡಲಿದೆ ಎಂಬ ಮಾಹಿತಿ ತಿಳಿದುಬಂದಿದೆ.
ಈ ಬಗ್ಗೆ ಬಿಎಂಆರ್‍ಸಿಎಲ್‌ನ ವ್ಯವಸ್ಥಾಪಕ ನಿರ್ದೇಶಕ ಎಂ.ಮಹೇಶ್ವರ್ ಅವರು ಮಾತನಾಡಿದ್ದಾರೆ. ಅವರು ಈ ಒಪ್ಪಂದವನ್ನು ಮೆಟ್ರೋ ಅಭಿವೃದ್ಧಿಗೆ ಒಂದು ಮಹತ್ವದ ಹೆಜ್ಜೆ ಎಂದು ಹೇಳಿದ್ದಾರೆ. ಔಟರ್ ರಿಂಗ್ ರೋಡ್ ಕಾರಿಡಾರ್ ಬೆಂಗಳೂರಿನಲ್ಲಿ ಅತಿಯಾದ ಸಂಚಾರ ದಟ್ಟಣೆಯಿಂದ ಪೀಡಿತ ಪ್ರದೇಶವಾಗಿದ್ದು, ಇದು ದೈನಂದಿನ ಪ್ರಯಾಣಿಕರಿಗೆ ಅನುಕೂಲಕರ ಮಾರ್ಗವಾಗಿ ಹೊರಹೊಮ್ಮಲಿದೆ ಎಂದಿದ್ದಾರೆ.
ಎಂಬಸಿ REITನ CEO ರಿತ್ವಿಕ್ ಭಟ್ಟಾಚಾರ್ಯ ಮಾತನಾಡಿ, ಬೆಂಗಳೂರು ನಗರ ಸಾರಿಗೆ ವ್ಯವಸ್ಥೆಯ ಸುಧಾರಣೆ ಮತ್ತು ಸಂಚಾರ ದಟ್ಟಣೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಇದು ಒಳ್ಳೆಯ ಯೋಜನೆಯಾಗಿದೆ ಎಂದು ಹೇಳಿದ್ದಾರೆ. ಅಲ್ಲದೇ ಮೆಟ್ರೋ ಅಭಿವೃದ್ಧಿ ಖಾಸಗಿ ಮತ್ತು ಸರ್ಕಾರಿ ಪಾಲುದಾರಿಕೆಯಿಂದ ವೇಗವಾಗಿ ಮುನ್ನಡೆಸಬಹುದಾಗಿದೆ ಮತ್ತು ಇದರಿಂದ ಸಾರ್ವಜನಿಕ ಸಾರಿಗೆ ಇನ್ನಷ್ಟು ಬಲಿಷ್ಠವಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
ಕಾಡುಬೀಸಗನಹಳ್ಳಿ ಮೆಟ್ರೋ ನಿಲ್ದಾಣ ಆರಂಭವಾದರೆ ಔಟರ್ ರಿಂಗ್ ರೋಡ್‌ನ ಪ್ರಮುಖ ವಾಣಿಜ್ಯ ಪ್ರದೇಶಗಳಿಗೆ ಸಂಪರ್ಕ ಒದಗಿಸುತ್ತದೆ. ಅಲ್ಲದೇ ಉದ್ಯೋಗಿಗಳಿಗೆ, ವ್ಯಾಪಾರಸ್ಥರಿಗೆ, ದೈನಂದಿನ ಪ್ರಯಾಣಿಕರಿಗೆ ತುಂಬಾ ಅನುಕೂಲಕರವಾಗಲಿದೆ. ಅಷ್ಟೇ ಅಲ್ಲ ಔಟರ್ ರಿಂಗ್ ರೋಡ್‌ನಲ್ಲಿ ಮೊದಲೇ ಸಂಚಾರ ದಟ್ಟಣೆ ಹೆಚ್ಚಾಗಿರುತ್ತದೆ. ಒಂದು ವೇಳೆ ಈ ಮೆಟ್ರೋ ರೈಲಿನ ಸಂಪರ್ಕ ಸಿಕ್ಕರೆ, ಬಹಳಷ್ಟು ಜನರು ತಮ್ಮ ಖಾಸಗಿ ವಾಹನಗಳ ಬಳಕೆಯನ್ನು ಕಡಿಮೆ ಮಾಡಿ ಮೆಟ್ರೋ ಮೂಲಕ ಪ್ರಯಾಣ ಮಾಡುವ ಸಾಧ್ಯತೆ ಇದೆ.
ಇನ್ನು ಈ ಮೆಟ್ರೋ ನಿಲ್ದಾಣ ನಿರ್ಮಾಣವಾದರೆ ಸಾಕಷ್ಟು ಪ್ರಯೋಜನಗಳಿವೆ. ಈ ಮೆಟ್ರೋ ನಿಲ್ದಾಣ ಉದ್ಯೋಗ ಕೇಂದ್ರಗಳಿಗೆ ಸುಲಭ ಸಂಪರ್ಕ ಒದಗಿಸುತ್ತದೆ. ಅಂದರೆ ಈ ಪ್ರದೇಶದಲ್ಲಿ ಐಟಿ ಕಂಪನಿಗಳು, ಬೃಹತ್ ಕಚೇರಿ ಸಂಕೀರ್ಣಗಳು ಮತ್ತು ವಾಣಿಜ್ಯ ವಲಯಗಳು ಹತ್ತಿರವಾಗಿದ್ದು, ನೌಕರರು ಸುಲಭವಾಗಿ ಕಾರ್ಯನಿರ್ವಹಿಸಲು ಇದು ಸಹಾಯ ಮಾಡುತ್ತದೆ. ಅಷ್ಟೇ ಅಲ್ಲ ಮೆಟ್ರೋ ನಿಲ್ದಾಣದ ನಿರ್ಮಾಣದಿಂದ ವ್ಯಾಪಾರಗಳು ವೃದ್ಧಿಯಾಗುತ್ತವೆ, ಸುತ್ತಮುತ್ತಲಿನ ಆಸ್ತಿ ಮೌಲ್ಯ ಹೆಚ್ಚಾಗುತ್ತದೆ ಮತ್ತು ಹೊಸ ಉದ್ಯೋಗ ಅವಕಾಶಗಳು ನಿರ್ಮಾಣವಾಗಬಹುದು. ಇದರ ಜೊತೆಗೆ ಹೆಚ್ಚು ಜನರು ಮೆಟ್ರೋ ಬಳಸಿದರೆ, ವಾಹನ ಸಂಚಾರ ಕಡಿಮೆಯಾಗುತ್ತದೆ. ಇದರೊಂದಿಗೆ ನಗರದಲ್ಲಿ ಹವಾಮಾನ ಬದಲಾವಣೆಗಳು ಸಹ ಕಡಿಮೆಯಾಗಬಹುದು.
ಒಟ್ಟಿನಲ್ಲಿ ಈ ಹೊಸ ಮೆಟ್ರೋ ನಿಲ್ದಾಣದಿಂದ ಬೆಂಗಳೂರಿನ ಸಾರಿಗೆ ವ್ಯವಸ್ಥೆ ಸುಧಾರಣೆ ಆಗಿ, ರಸ್ತೆಗಳ ಮೇಲೆ ವಾಹನಗಳ ಒತ್ತಡ ಕಡಿಮೆಯಾಗುವ ನಿರೀಕ್ಷೆ ಇದೆ. ಇಂಧನ ಉಳಿತಾಯ, ಸಂಚಾರ ನಿರ್ವಹಣೆ, ದೈನಂದಿನ ಪ್ರಯಾಣ ಸುಗಮಗೊಳಿಸುವಿಕೆ ಮತ್ತು ನಗರ ಸಾರಿಗೆ ಸುಧಾರಣೆ ಗೆ ಸಹಾಯ ಮಾಡಲಿದೆ. ಈ ನಿಲ್ದಾಣದ ಮೂಲಕ ಮೆಟ್ರೋ ಸಂಪರ್ಕ ಮತ್ತಷ್ಟು ವಿಸ್ತರಿಸುತ್ತದೆ. ಐಟಿ ಉದ್ಯೋಗಿಗಳು, ವಿದ್ಯಾರ್ಥಿಗಳು ಮತ್ತು ದಿನನಿತ್ಯ ಪ್ರಯಾಣಿಕರಿಗೆ ಹೆಚ್ಚು ಅನುಕೂಲವಾಗುತ್ತದೆ. ಆಧುನಿಕ ಸಾರಿಗೆ ವ್ಯವಸ್ಥೆಯೊಂದಿಗೆ, ನಗರ ಮತ್ತಷ್ಟು ವೇಗವಾಗಿ ಬೆಳೆಯಲಿದೆ. ಹೀಗಾಗಿ, ಈ ಮೆಟ್ರೋ ಯೋಜನೆ ನಗರ ವಾಸಿಗಳಿಗೆ ಮತ್ತು ಉದ್ಯೋಗಿಗಳಿಗೆ ತುಂಬಾ ಪ್ರಯೋಜನಕರವಾಗಿದೆ. ಈ ಮೆಟ್ರೋ ನಿಲ್ದಾಣವನ್ನು ಶೀಘ್ರವಾಗಿ ಮುಗಿಸಲು ಯೋಜನೆ ರೂಪಿಸಲಾಗಿದ್ದು, ಮುಂದಿನ ಕೆಲವು ವರ್ಷಗಳಲ್ಲಿ ಇದು ಸಾರ್ವಜನಿಕ ಬಳಕೆಗೆ ಲಭ್ಯವಾಗಲಿದೆ.


Click it and Unblock the Notifications