ಹೊಸ ವರ್ಷ ಅಂದ್ರೆ ಬೆಂಗಳೂರಿಗೆ ಕಲರ್ ಫುಲ್ ದಿನ. ಎಲ್ಲಿ ನೋಡಿದ್ರೂ ಝಗಮಗಿಸುವ ಲೈಟಿಂಗ್ಸ್, ಕಣ್ಣು ಕಟ್ಟುವ ಡೆಕೋರೇಷನ್ಸ್, ಪಾರ್ಟಿಗಳಿಂದ ತುಂಬಿದ ಪಬ್‌ಗಳು, ಬಾರ್‌ಗಳು! ಹೀಗೆ ಬೆಂಗಳೂರು ಹಲವು ಕಾರಣಗಳಿಂದ ಕಂಗೊಳಿಸ್ತಿರುತ್ತೆ. ಅದ್ರಲ್ಲೂ ಡಿಸೆಂಬರ್ 31ರಂದು ಬೆಂಗಳೂರಲ್ಲಿ ಪಾರ್ಟಿ ಹವಾ ಜೋರಾಗಿರುತ್ತೆ. ಜನಸಂದಣಿ ಹೆಚ್ಚಾಗಿರುತ್ತೆ, ರಾತ್ರಿ ಸಮಯ ಓಡಾಡುವವರ ಸಂಖ್ಯೆಗೂ ಹೆಚ್ಚಾಗಿರುತ್ತದೆ. ಹೀಗಾಗಿ ಬೆಂಗಳೂರು ಮೆಟ್ರೋ ಒಂದು ಮಹತ್ವದ ನಿರ್ಧಾರ ತೆಗೆದುಕೊಂಡಿದೆ.

ಹೌದು, ಹೊಸ ವರ್ಷದ ಸಂಭ್ರಮಕ್ಕಾಗಿ ಡಿಸೆಂಬರ್ 31ರಂದು ರಾತ್ರಿ ಬೆಂಗಳೂರಿನ ಹಲವು ಪ್ರಮುಖ ಪ್ರದೇಶಗಳಲ್ಲಿ ಭಾರಿ ಜನಸಂದಣಿ ಕಾಣುವ ನಿರೀಕ್ಷೆಯಿದೆ. ವಿಶೇಷವಾಗಿ ಎಂಜಿ ರಸ್ತೆ, ಬ್ರಿಗೇಡ್ ರಸ್ತೆ ಮತ್ತು ಚರ್ಚ್ ಸ್ಟ್ರೀಟ್ ಭಾಗಗಳಲ್ಲಿ ಸಂಭ್ರಮಾಚರಣೆ ಜೋರಾಗಿರುವ ಹಿನ್ನೆಲೆಯಲ್ಲಿ, ಪ್ರಯಾಣಿಕರ ಸುರಕ್ಷತೆ ಮತ್ತು ಸುಗಮ ಸಂಚಾರಕ್ಕಾಗಿ ಬೆಂಗಳೂರು ಮೆಟ್ರೋ ವಿಶೇಷ ವ್ಯವಸ್ಥೆಗಳನ್ನು ಘೋಷಿಸಿದೆ.
ಈ ಹಿನ್ನೆಲೆಯಲ್ಲಿ ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್ (ಬಿಎಂಆರ್‌ಸಿಎಲ್) ಹೊಸ ವರ್ಷದ ಮುನ್ನಾದಿನದಂದು ತನ್ನ ಪರ್ಪಲ್, ಗ್ರೀನ್ ಮತ್ತು ಹಳದಿ ಮಾರ್ಗಗಳಲ್ಲಿ ವಿಸ್ತೃತ ಮೆಟ್ರೋ ಸೇವೆಗಳನ್ನು ನೀಡಲಿದೆ. ಹೆಚ್ಚಿನ ಪ್ರಯಾಣಿಕರು ಮೆಟ್ರೋ ಬಳಸುವ ಸಾಧ್ಯತೆ ಇರುವುದರಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ.
ಭಾರಿ ಜನದಟ್ಟಣೆಯನ್ನು ನಿಯಂತ್ರಿಸುವ ಉದ್ದೇಶದಿಂದ ಡಿಸೆಂಬರ್ 31ರಂದು ರಾತ್ರಿ 10 ಗಂಟೆಯಿಂದ ಎಂಜಿ ರಸ್ತೆ ಮೆಟ್ರೋ ನಿಲ್ದಾಣದ ಪ್ರವೇಶ ಮತ್ತು ನಿರ್ಗಮನವನ್ನು ಮುಚ್ಚಲಾಗುತ್ತದೆ. ಈ ಅವಧಿಯಲ್ಲಿ ಪ್ರಯಾಣಿಕರು ಟ್ರಿನಿಟಿ ಮತ್ತು ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣಗಳನ್ನು ಬಳಸಬೇಕೆಂದು ಬಿಎಂಆರ್‌ಸಿಎಲ್ ಸೂಚಿಸಿದೆ.
ಪರ್ಪಲ್ ಲೈನ್‌ನಲ್ಲಿ ವೈಟ್‌ಫೀಲ್ಡ್‌ನಿಂದ ಚಲ್ಲಘಟ್ಟಕ್ಕೆ ಹೋಗುವ ಕೊನೆಯ ರೈಲು ಜನವರಿ 1ರ ಬೆಳಗಿನ ಜಾವ 1.45ಕ್ಕೆ ಹೊರಡಲಿದೆ. ಚಲ್ಲಘಟ್ಟದಿಂದ ವೈಟ್‌ಫೀಲ್ಡ್ ಕಡೆಗೆ ಕೊನೆಯ ರೈಲು ಬೆಳಗಿನ ಜಾವ 2 ಗಂಟೆಗೆ ಸಂಚರಿಸುತ್ತದೆ. ಗ್ರೀನ್ ಲೈನ್‌ನಲ್ಲಿ ಮಾದವರ ಮತ್ತು ಸಿಲ್ಕ್ ಇನ್‌ಸ್ಟಿಟ್ಯೂಟ್ ನಿಲ್ದಾಣಗಳಿಂದ ಕೊನೆಯ ರೈಲುಗಳು ಬೆಳಗಿನ ಜಾವ 2 ಗಂಟೆಗೆ ಹೊರಡುವುವು. ಈ ಎರಡೂ ಮಾರ್ಗಗಳಲ್ಲಿ ರೈಲುಗಳು ಸುಮಾರು 8 ನಿಮಿಷಗಳ ಅಂತರದಲ್ಲಿ ಓಡಲಿವೆ.
ಹಳದಿ ಮಾರ್ಗದಲ್ಲಿ ಆರ್‌ವಿ ರಸ್ತೆಯಿಂದ ಬೊಮ್ಮಸಂದ್ರಕ್ಕೆ ಹೋಗುವ ಕೊನೆಯ ರೈಲು ಬೆಳಗಿನ ಜಾವ 3.10ಕ್ಕೆ ಹೊರಡಲಿದೆ. ಬೊಮ್ಮಸಂದ್ರದಿಂದ ಆರ್‌ವಿ ರಸ್ತೆ ಕಡೆಗೆ ಕೊನೆಯ ರೈಲು ಬೆಳಗಿನ ಜಾವ 1.10ಕ್ಕೆ ಸಂಚರಿಸುತ್ತದೆ. ಈ ಮಾರ್ಗದಲ್ಲಿ ರೈಲುಗಳು 15 ನಿಮಿಷಗಳ ಅಂತರದಲ್ಲಿ ಚಾಲನೆಯಲ್ಲಿರುತ್ತವೆ.
ಡಿಸೆಂಬರ್ 31ರ ರಾತ್ರಿ 11.30ರಿಂದ ವಿಸ್ತೃತ ಸೇವೆಗಳ ಅಂತ್ಯವರೆಗೆ ಈ ವ್ಯವಸ್ಥೆ ಮುಂದುವರಿಯಲಿದೆ ಎಂದು ಬಿಎಂಆರ್‌ಸಿಎಲ್ ತಿಳಿಸಿದೆ. ಹೊಸ ವರ್ಷವನ್ನು ಆಚರಿಸಲು ಹೊರಡುವ ಜನರು ಮೆಟ್ರೋ ಸೇವೆಯನ್ನು ಸರಿಯಾಗಿ ಬಳಸುವಂತೆ ಮತ್ತು ಸುರಕ್ಷತಾ ನಿಯಮಗಳನ್ನು ಪಾಲಿಸುವಂತೆ ಮನವಿ ಮಾಡಲಾಗಿದೆ.


Click it and Unblock the Notifications