ನಮ್ಮ ಮೆಟ್ರೋ (Namma Metro) ಸೇವೆ ಬಗ್ಗೆ ಹಲವರಿಗೆ ಉತ್ತಮ ಅಭಿಪ್ರಾಯವಿದೆ. ಟಿಕೆಟ್ ದರ ಹೊರತುಪಡಿಸಿ, ವೇಗ, ಸೆಕ್ಯುರಿಟಿ, ಉತ್ತಮ ಸೇವೆಯಿಂದಾಗಿ ನಮ್ಮ ಮೆಟ್ರೋ ಭಾರೀ ಜನಪ್ರಿಯತೆಯನ್ನು ಪಡೆದಿದೆ. ಅದೇ ಕಾರಣದಿಂದ ಬೆಂಗಳೂರು ಮೆಟ್ರೋದಲ್ಲಿ ಲಕ್ಷಾಂತರ ಜನರು ಪ್ರಯಾಣ ಮಾಡುತ್ತಾರೆ. ಟಿಕೆಟ್ ದರ ಹೆಚ್ಚಳವಾದರೂ, ಪ್ರಯಾಣಿಕರ ಸಂಖ್ಯೆ ಮಾತ್ರ ಇಳಿಕೆಯಾಗುತ್ತಲೇ ಇಲ್ಲ. ದಿನ ಹೋದಂತೆ ಹೆಚ್ಚಾಗುತ್ತಲೇ ಇದೆ. ಇದೀಗ ತನ್ನ ಪ್ರಯಾಣಿಕರಿಗಾಗಿ ನಮ್ಮ ಮೆಟ್ರೋ ಗುಡ್ ನ್ಯೂಸ್ ಕೊಟ್ಟಿದೆ.

ಹೌದು, ನಮ್ಮ ಮೆಟ್ರೋ ಪ್ರಯಾಣಿಕರಿಗೆ ಬಿಎಂಆರ್‌ಸಿಎಲ್ ಸಿಹಿಸುದ್ದಿಯೊಂದನ್ನು ನೀಡಿದೆ. ಹಾಗಿದ್ರೆ ಅದೇನೆಂದು ತಿಳಿಯುವ ಕುತೂಹಲ ನಿಮಗಿದ್ರೆ ಈ ಸುದ್ದಿ ಓದಿ.
ಭಾನುವಾರ 5 ಗಂಟೆಗೆ ಆರಂಭ!
ಸಾಮಾನ್ಯವಾಗಿ ನಮ್ಮ ಮೆಟ್ರೋ ವಾರದ ದಿನಗಳಲ್ಲಿ ಬೆಳಿಗ್ಗೆ 5 ಗಂಟೆಗೆ ಕಾರ್ಯಾಚರಣೆ ಆರಂಭ ಮಾಡುತ್ತದೆ. ಆದ್ರೆ ಭಾನುವಾರ ಮಾತ್ರ ಬೆಳಿಗ್ಗೆ 7 ಗಂಟೆಗೆ ಕಾರ್ಯಾಚರಣೆ ಆರಂಭಿಸುತ್ತದೆ. ಆದ್ರೆ ಇದೀಗ ಈ ಭಾನುವಾರ (ಮಾರ್ಚ್ 01,2026) ರಂದು ನಮ್ಮ ಮೆಟ್ರೋ ಸೇವೆ ಮುಂಜಾನೆ 5:00 ಗಂಟೆಯಿಂದಲೇ ಆರಂಭವಾಗಲಿದೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL) ಸೂಚನೆ ನೀಡಿದೆ.
ಸಾಮಾನ್ಯವಾಗಿ ಪ್ರತೀ ಭಾನುವಾರ ಮೆಟ್ರೋ ಸೇವೆ ಸ್ವಲ್ಪ ತಡವಾಗಿ ಅಂದರೆ ಬೆಳಿಗ್ಗೆ 7 ಗಂಟೆಯಿಂದ ಆರಂಭವಾಗುತ್ತದೆ. ಆದ್ರೆ ಈ ಭಾನುವಾರ (ಮಾರ್ಚ್ 1) ಮಾತ್ರ ವಿಶೇಷವಾಗಿ ಮುಂಜಾನೆ 5 ಗಂಟೆಯಿಂದ ಸಂಚಾರ ಆರಂಭವಾಗಲಿದೆ. ಈ ನಿರ್ಧಾರದಿಂದ ಭಾನುವಾರದ ದಿನ ಪ್ರಯಾಣಿಕರಿಗೂ ಅನುಕೂಲವಾಗಲಿದೆ.
ಕಾರಣವೇನು?
ಮೆಟ್ರೋ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿರುವಂತೆ, "ಬೆಂಗಳೂರು ನಗರದಲ್ಲಿ ಮಾರ್ಚ್ 1 ದಂದು (ಭಾನುವಾರ) ರಾಜ್ಯ ಮಟ್ಟದ ಪೊಲೀಸ್ ರನ್ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಸುಗಮವಾಗಿ ಭಾಗವಹಿಸಲು ಅನುಕೂಲವಾಗುವಂತೆ ಬಿಎಂಆರ್‌ಸಿಎಲ್, ನೇರಳೆ ಮಾರ್ಗದ ವೈಟ್‌ಫೀಳ್ಡ್ ಮತ್ತು ಚಲ್ಲಘಟ್ಟ, ಹಸಿರು ಮಾರ್ಗದ ಮಾದಾವರ ಮತ್ತು ರೇಷ್ಮೆ ಸಂಸ್ಥೆ ಹಾಗೂ ಹಳದಿ ಮಾರ್ಗ ಬೊಮ್ಮಸಂದ್ರ ಮತ್ತು ಆರ್.ವಿ ರಸ್ತೆ ಮಾರ್ಗಗಳಲ್ಲಿ ಮೆಟ್ರೋ ರೈಲು ಸೇವೆಗಳು ಎಲ್ಲಾ ಟರ್ಮಿನಲ್‌ಗಳಿಂದ ದಿನಾಂಕ 1.03.2026 ರಂದು ಬೆಳಿಗ್ಗೆ 7 ಗಂಟೆಗೆ ಬದಲಾಗಿ ಮುಂಜಾನೆ 5 ಗಂಟೆಗೆ ಪ್ರಾರಂಭವಾಗಲಿದೆ" ಎಂದು ಸಾರ್ವಜನಿಕರಿಗೆ ತಿಳಿಸಲಾಗಿದೆ.
ಯೆಲ್ಲೋ ಲೈನ್‌ಗೆ ಮತ್ತೊಂದು ಮೆಟ್ರೋ!
ಬೆಂಗಳೂರು ಮೆಟ್ರೋ ಲೈನ್‌ನಲ್ಲಿ ಈಗಾಗಲೇ 7 ರೈಲುಗಳು ಕಾರ್ಯಚರಿಸುತ್ತಿದೆ. 2025 ರ ಆಗಸ್ಟ್‌ನಲ್ಲಿ ಆರಂಭವಾದ ಈ ಸೇವೆ, ಪ್ರಯಾಣಿಕರ ಅನುಕೂಲದ ದೃಷ್ಟಿಯಿಂದ ಹಲವಾರು ಕ್ರಮಗಳನ್ನು ಕೈಗೊಂಡಿದೆ. ಇದೀಗ ಬೆಂಗಳೂರು ಯೆಲ್ಲೋ ಲೈನ್‌ಗೆ 8ನೇ ರೈಲಿನ ಆಗಮನವಾಗಿದ್ದು, ಇಂದಿನಿಂದ ಕಾರ್ಯಾಚರಣೆ ಆರಂಭಿಸಲಿದೆ ಎಂದು ಹೇಳಲಾಗಿದೆ. ಈ ಹಿನ್ನೆಲೆ ಇನ್ಮೇಲೆ ಯೆಲ್ಲೋ ಮಾರ್ಗದಲ್ಲಿ ಸೋಮವಾರದಿಂದ ಶನಿವಾರದವರೆಗೆ ಪೀಕ್ ಅವಧಿಯಲ್ಲಿ 9 ನಿಮಿಷಕ್ಕೆ ಮತ್ತು ನಾನ್ ಪೀಕ್ ಅವಧಿಗಳಲ್ಲಿ 14 ನಿಮಿಷಕ್ಕೆ ಸಂಚಾರ ಅವಧಿ ಇಳಿಕೆಯಾಗಲಿದೆ. ಆದ್ದರಿಂದ ಇನ್ಮೇಲೆ ಪ್ರಯಾಣಿಕರ ಕಾಯುವ ಅವಧಿಯೂ ಕಮ್ಮಿಯಾಗಲಿದ್ದು, ಮೆಟ್ರೋ ಮತ್ತಷ್ಟು ಹತ್ತಿರವಾಗಲಿದೆ.


Click it and Unblock the Notifications