ಬೆಂಗಳೂರು ಮೆಟ್ರೋ ನಿಲ್ದಾಣಗಳಲ್ಲಿ ಭದ್ರತೆ ಹೆಚ್ಚಿಸಲು ಬಿಎಂಆರ್‍ಸಿಎಲ್ ಒಂದು ಮಹತ್ವದ ಹೆಜ್ಜೆ ಮುಂದಿಟ್ಟಿದೆ. ಅದೇನೆಂದರೆ ಬೆಂಗಳೂರಿನ ಪ್ರಮುಖ 6 ನಿಲ್ದಾಣಗಳಲ್ಲಿ AI ತಂತ್ರಜ್ಞಾನಾಧಾರಿತ ಸಿಸಿಟಿವಿಗಳ ವ್ಯವಸ್ಥೆಯನ್ನು ಅಧಿಕೃತವಾಗಿ ಪ್ರಾರಂಭಿಸಿದೆ. ಬೆಂಗಳೂರಿನಲ್ಲಿ ಅತಿವೇಗದ ಸಾರ್ವಜನಿಕ ಸೇವೆ ಒದಗಿಸುವ ನಮ್ಮ ಮೆಟ್ರೋದಲ್ಲಿ, ಭದ್ರತೆಯನ್ನು ಹೆಚ್ಚಿಸಲು ಈ ಕ್ರಮ ತೆಗೆದುಕೊಂಡಿದೆ.

ಇನ್ನು ಈ ವ್ಯವಸ್ಥೆಯು ಬಯಪ್ಪನಹಳ್ಳಿ ಮತ್ತು ಎಂಜಿ.ರೋಡ್ ನಡುವೆ ಬರುವ ಮೆಟ್ರೋ ನಿಲ್ದಾಣಗಳಲ್ಲಿ ಇದೆ. ತಂತ್ರಜ್ಞಾನದಲ್ಲಿ ಬಹಳ ಉನ್ನತಿ ಹೊಂದಿರುವ ಈ ವ್ಯವಸ್ಥೆಯು ಪರಿಧಿ, ಮೇಲ್ವಿಚಾರಣೆ, AI ಆಧಾರಿತ ಬೆದರಿಕೆಯನ್ನು ಪತ್ತೆ ಹಚ್ಚುವುದು ಮತ್ತು ನಂಬರ್ ಪ್ಲೇಟ್ ಗುರುತಿಸುವ ಒಂದು ತಂತ್ರಜ್ಞಾನವನ್ನು ಒಳಗೊಂಡಿದೆ. ಇದರಿಂದ ಕೇವಲ ನಿಲ್ದಾಣದ ಒಳಾಂಗಣವಷ್ಟೇ ಅಲ್ಲದೆ ನಿಲ್ದಾಣದ ಸುತ್ತಲೂ ಇರುವ ಪ್ರದೇಶಗಳ ಮೇಲ್ವಿಚಾರಣೆಯನ್ನೂ ಸುಧಾರಿಸಲಾಗುತ್ತದೆ.
ನಿಲ್ದಾಣಗಳ ಮುಂದೆ ವಾಹನದ ನಂಬರ್ ಪ್ಲೇಟ್‌ಗಳ ಗುರುತಿಸುವಿಕೆ:
ಈ ಸಿಸಿಟಿವಿ ಕಣ್ಗಾವಲು ವ್ಯವಸ್ಥೆಯಲ್ಲಿ ಇನ್ನೂ ಒಂದು ಪ್ರಮುಖ ವೈಶಿಷ್ಟ್ಯತೆ ಇದೆ. ಅದೇನೆಂದರೆ ಇಂದು ANPR..ಅಂದರೆ Automated Number Plate Recognition ತಂತ್ರಜ್ಞಾನದ ಬಳಕೆ ಹೊಂದಿದೆ. ಈ ವ್ಯವಸ್ಥೆಯಿಂದ ಮೆಟ್ರೋ ನಿಲ್ದಾಣಗಳ ಹೊರಗೆ ಹೋಗುವ ಮತ್ತು ಬರುವ ವಾಹನಗಳ ನಂಬರ್ ಪ್ಲೇಟುಗಳನ್ನು ಸ್ವಯಂಚಾಲಿತವಾಗಿ ಸೆರೆ ಹಿಡಿಯುತ್ತದೆ. ಹಾಗೂ ಇದು ಅವುಗಳ ಮಾಹಿತಿಯನ್ನು ವಿಶ್ಲೇಷಿಸುತ್ತದೆ. ಇದರಿಂದ ಅನುಮಾನಾಸ್ಪದ ಚಟುವಟಿಕೆಗಳನ್ನು ತಕ್ಷಣವೇ ಪತ್ತೆ ಹಚ್ಚಬಹುದಾಗಿದೆ.
ಎಐ ಆಧಾರಿತ ವೀಡಿಯೊ ವಿಶ್ಲೇಷಣೆ:
ಈಗ ಅಳವಡಿಸಲಾದ ಎಐ-ಚಾಲಿತ ವೀಡಿಯೊ ವಿಶ್ಲೇಷಣಾ ತಂತ್ರಜ್ಞಾನವು ನೈಜ ಸಮಯದಲ್ಲಿ ಭದ್ರತಾ ತಂಡಗಳಿಗೆ ಅಲರ್ಟ್ ನೀಡಬಲ್ಲದು. ಬೆದರಿಕೆಗಳು, ಅನುಮಾನಾಸ್ಪದ ಚಲನೆಗಳು ಅಥವಾ ಭದ್ರತೆಗೆ ತೊಂದರೆಂಟಿಸಬಹುದಾದ ಪರಿನಾಮಗಳನ್ನು ಕ್ಷಣಾರ್ಧದಲ್ಲಿ ಗುರುತಿಸಿ ಅಧಿಕಾರಿಗಳಿಗೆ ಮಾಹಿತಿ ಒದಗಿಸುವ ಸಾಮರ್ಥ್ಯ ಈ ವ್ಯವಸ್ಥೆಯಲ್ಲಿದೆ.
ಬಿಎಂಆರ್‌ಸಿಎಲ್ MD ಹೇಳಿಕೆ:
ಈ ಕುರಿತು ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕರಾದ ಎಂ. ಮಹೇಶ್ವರ ರಾವ್ ಅವರು ಮಾತನಾಡುತ್ತಾ, "AI ಆಧಾರಿತ ಕಣ್ಗಾವಲು ವ್ಯವಸ್ಥೆಯ ಪರಿಚಯವು ನಮ್ಮ ಮೆಟ್ರೋ ನಿಲ್ದಾಣಗಳಲ್ಲಿ ಸುರಕ್ಷತೆಯನ್ನು ಪ್ರಬಲಗೊಳಿಸಲು ಮುಖ್ಯ ಪಾತ್ರ ವಹಿಸುತ್ತದೆ. ಇದು ನಾವು ಮುಂಚಿತವಾಗಿ ಸಂದರ್ಭಗಳನ್ನು ನಿಖರವಾಗಿ ವಿಶ್ಲೇಷಿಸಿ ಬೆದರಿಕೆಗಳನ್ನು ತಕ್ಷಣವೇ ನಿರ್ವಹಿಸಲು ಅನುಕೂಲ ಮಾಡಿಕೊಡುತ್ತದೆ. ನಮ್ಮ ಗುರಿಯೆಂದರೆ ನಗರಕ್ಕೆ ಹೆಚ್ಚು ಸುರಕ್ಷಿತ, ತಂತ್ರಜ್ಞಾನ ಆಧಾರಿತ ಮೆಟ್ರೋ ಜಾಲ ಒದಗಿಸುವುದು" ಎಂದು ಹೇಳಿದರು.
ನಾಗರಿಕರ ಭದ್ರತೆಗೆ ತಂತ್ರಜ್ಞಾನ ನೆರವು:
ಬೆಂಗಳೂರಿನಂತೆ ಜನಸಂದಣಿಯು ಹೆಚ್ಚುತ್ತಿರುವ ನಗರದಲ್ಲಿ, ಈ ರೀತಿಯ ತಂತ್ರಜ್ಞಾನವನ್ನು ಅಳವಡಿಸುವುದು ಭದ್ರತೆಯ ದೃಷ್ಟಿಯಿಂದ ಬಹುಮುಖ್ಯವಾಗಿದೆ. ಈ ಸುಧಾರಿತ ವ್ಯವಸ್ಥೆ ಸಾರ್ವಜನಿಕರಿಗೆ ಭದ್ರತೆಯ ಭರವಸೆ ನೀಡುತ್ತಿದ್ದು, ಭವಿಷ್ಯದಲ್ಲಿ ಇನ್ನಷ್ಟು ನಿಲ್ದಾಣಗಳಿಗೆ ಈ ತಂತ್ರಜ್ಞಾನವನ್ನು ವಿಸ್ತರಿಸುವ ಯೋಜನೆ ಬಿಎಂಆರ್‌ಸಿಎಲ್ ಹೊಂದಿದೆ ಎನ್ನಲಾಗಿದೆ.
ಮೆಟ್ರೋ ನಿಲ್ದಾಣಗಳಲ್ಲಿ ಸುಧಾರಿತ ಸಿಸಿಟಿವಿ ಮತ್ತು AI ಆಧಾರಿತ ತಂತ್ರಜ್ಞಾನಗಳ ಅಳವಡಿಕೆಯಿಂದ, ಬೆಂಗಳೂರು ನಗರ ತನ್ನ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಮತ್ತಷ್ಟು ಭದ್ರತೆಯಿಂದ ಕೂಡಿದಂತೆ ಮಾಡುತ್ತಿದೆ. ಇದೊಂದು ತಾತ್ಕಾಲಿಕ ಉಪಾಯವಲ್ಲ; ಬದಲಿಗೆ, ಭವಿಷ್ಯದ ನಗರಾಭಿವೃದ್ಧಿಯತ್ತ ಸಾಗುತ್ತಿರುವ ಶಾಶ್ವತ ಹೆಜ್ಜೆ. ಅಪರಾಧ ತಡೆಗಟ್ಟುವಿಕೆಯು ಸಿಸಿಟಿವಿ ಮೂಲಕ ಮಾತ್ರ ಸಾಧ್ಯವಲ್ಲ, ಆದರೆ ಸಮಗ್ರ ಮೇಲ್ವಿಚಾರಣಾ ವ್ಯವಸ್ಥೆಗಳು, ಪ್ರಜ್ಞೆಯುಳ್ಳ ಅಧಿಕಾರಿಗಳು ಮತ್ತು ತಂತ್ರಜ್ಞಾನಗಳ ಒಗ್ಗೂಡಿಕೆಯಿಂದ ಸಾಧ್ಯವಿದೆ ಎಂಬುದಕ್ಕೆ ಈ ಉದಾಹರಣೆ ಚುಕ್ಕಾಣಿ ಹಿಡಿದಂತಿದೆ.
ಪ್ರತಿ ಪ್ರಯಾಣಿಕನು ಆತ್ಮವಿಶ್ವಾಸದಿಂದ ಮೆಟ್ರೋ ಪ್ರಯಾಣ ಮಾಡುವ ದಿನ ದೂರವಿಲ್ಲ. ಇಂತಹ ತಂತ್ರಜ್ಞಾನಿ ಕ್ರಮಗಳು ಕೇವಲ ಭದ್ರತೆಯ ಮಟ್ಟವನ್ನಷ್ಟೇ ಹೆಚ್ಚಿಸುವುದಿಲ್ಲ, ಬದಲಾಗಿ ಸಾರ್ವಜನಿಕರ ವಿಶ್ವಾಸವನ್ನೂ ಗಟ್ಟಿಗೊಳಿಸುತ್ತವೆ. ಪ್ರತಿ ನಿಲ್ದಾಣದಲ್ಲೂ ಇಂತಹ ವ್ಯವಸ್ಥೆಗಳ ಅನುಸ್ಥಾಪನೆಯಿಂದ, ನಗರವು ನಿಜವಾದ "ಸ್ಮಾರ್ಟ್ ಸಿಟಿ"ಯೆಂಬ ಪದಕ್ಕೆ ಭಾವಾರ್ಥ ನೀಡುತ್ತಿದೆ.


Click it and Unblock the Notifications