ನಮ್ಮ ಮೆಟ್ರೋದಲ್ಲಿ ನಿಯಮ ಉಲ್ಲಂಘನೆ: ಬೆಂಗಳೂರಿನ ನಮ್ಮ ಮೆಟ್ರೋ ನಿಯಮಬದ್ಧ ಪ್ರಯಾಣಕ್ಕೆ ಒತ್ತು ನೀಡುತ್ತದೆ. ಹಲವು ನಿಯಮಗಳ ಅನುಸಾರವೇ ಪ್ರಯಾಣಿಕರು ಮೆಟ್ರೋ ಬಳಸಿಕೊಳ್ಳಬೇಕಾಗುತ್ತದೆ. ಒಂದು ವೇಳೆ ನಿಯಮ ಉಲ್ಲಂಘನೆಯಾದರೆ ದಂಡಂ ದಶಗುಣಂ ಎನ್ನುವ ಮಂತ್ರ ತಪ್ಪಿದ್ದಲ್ಲ. ಈ ನಿಯಮ ಉಲ್ಲಂಘನೆಗೆ ಸಂಬಂಧಿಸಿದಂತೆ, ಕಳೆದ ಆರು ತಿಂಗಳ ಅವಧಿಯಲ್ಲಿ ಹಲವು ಪ್ರಕರಣಗಳು ವರದಿಯಾಗಿವೆ. ಅಂದತೆ 2024ರ ಸೆಪ್ಟೆಂಬರ್‍ನಿಂದ 2025ರ ಮಾರ್ಚ್ ವರೆಗೂ ವರದಿಯಾದ ಪ್ರಕರಣಗಳು ಇವಾಗಿವೆ.

ಹೌದು, ನಿಯಮ ಉಲ್ಲಂಘನೆ ಸಂಬಂಧ ವರದಿಯಾದ ಪ್ರಕರಣಗಳ ಸಂಖ್ಯೆ ಕೇಳಿದರೆ ತಲೆ ತಿರುಗುತ್ತದೆ. ಒಂದಲ್ಲ ಎರಡಲ್ಲ..ಬರೋಬ್ಬರಿ 27,000ಕ್ಕೂ ಹೆಚ್ಚು ನಿಯಮ ಉಲ್ಲಂಘನೆ ಪ್ರಕರಣಗಳು ದಾಖಲಾಗಿವೆ. CCTV ಕ್ಯಾಮೆರಾ ಮೇಲ್ವಿಚಾರಣೆ, ಸಹಪ್ರಯಾಣಿಕರ ದೂರಿನ ಪರಿಶೀಲನೆ, ಮತ್ತು ಭದ್ರತಾ ಸಿಬ್ಬಂದಿಯ ನಿಯಂತ್ರಣ ಕಾರ್ಯಾಚರಣೆಗಳ ಮೂಲಕ ನಿಯಮ ಉಲ್ಲಂಘನೆಗಳನ್ನು ದಾಖಲಿಸಿದೆ. ಪ್ರಯಾಣಿಕರಿಂದ ಶಿಷ್ಟಾಚಾರವನ್ನು ಕಾಯ್ದುಕೊಳ್ಳಲು ಕ್ರಮಗಳನ್ನು ಕೈಗೊಳ್ಳಲಾಗಿದೆ.
ಪ್ರಮುಖ ನಿಯಮ ಉಲ್ಲಂಘನೆ ಪ್ರಕರಣಗಳು:
1. ನಮ್ಮ ಮೆಟ್ರೋದಲ್ಲಿ ಸಂಗೀತ ಕೇಳುವುದು:
ನಮ್ಮ ಮೆಟ್ರೋದಲ್ಲಿ ಅತಿಹೆಚ್ಚು ಶಬ್ದ ಮಾಡಬಾರದು ಎಂಬ ನಿಯಮವಿದೆ. ಹೀಗಾಗಿ ಜನರು ಮೊಬೈಲ್‌ನಲ್ಲಿ ತಮ್ಮ ಇಯರ್ ಫೋನ್ ಬಳಸದೇ ಸಂಗೀತ ಕೇಳಿದರೆ, ಜನರಿಗೆ ತೊಂದರೆ ಉಂಟಾಗುತ್ತದೆ. ಹೀಗೆ ಜನರಿಗೆ ಕಿರಿ ಕಿರಿ ಉಂಟುಮಾಡಿರುವ ಪ್ರಕರಣಗಳು ಹೆಚ್ಚಾಗಿವೆ. ಶಾಂತ ಹಾಗೂ ಸುಗಮ ಪ್ರಯಾಣವನ್ನು ಕಾಪಾಡಲು, BMRCL ಈ ನಡವಳಿಕೆಯನ್ನು ನಿರ್ಬಂಧಿಸಿದೆ. ಈ ಸಂಬಂಧ 11,922 ಪ್ರಕರಣಗಳು ದಾಖಲಾಗಿವೆ.
2. ಆದ್ಯತೆಯ ಆಸನಗಳನ್ನು ಪಾಲಿಸದಿರುವುದು:
ಹಿರಿಯ ನಾಗರಿಕರು, ಗರ್ಭಿಣಿಯರು ಹಾಗೂ ವಿಶೇಷಚೇತನರಿಗಾಗಿ ನಿಗದಿಪಡಿಸಿದ ಆಸನಗಳಿವೆ. ಈ ಮೀಸಲಿರುವ ಆಸನಗಳನ್ನು ಬಿಟ್ಟುಕೊಡದೇ, ನಿಯಮ ಉಲ್ಲಂಘಿಸಿರುವ 14,162 ಪ್ರಕರಣಗಳು ದಾಖಲಾಗಿವೆ. CCTV ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ, ಅನೇಕ ಪ್ರಯಾಣಿಕರು ಆದ್ಯತೆಯ ಆಸನಗಳನ್ನು ತಮ್ಮಗಾಗಿಯೇ ಕಾಯ್ದುಕೊಳ್ಳುತ್ತಿರುವುದು ಕಂಡುಬಂದಿದೆ.
3. ಮೆಟ್ರೋ ಒಳಗಡೆ ಆಹಾರ ಸೇವನೆ:
ಇನ್ನು ಮೆಟ್ರೋನಲ್ಲಿ ಆಹಾರ ಸೇವನೆ ಮಾಡಬಾರದು ಎಂಬ ನಿಯಮವೂ ಇದೆ. ಮೆಟ್ರೋವನ್ನು ಸ್ವಚ್ಛವಾಗಿ ಕಾಯ್ದುಕೊಳ್ಳಲು ಆಹಾರ ಸೇವನೆ ಸಂಪೂರ್ಣವಾಗಿ ನಿಷೇಧ ಮಾಡಲಾಗಿದೆ. ಆದರೆ ಆಹಾರ ಸೇವನೆ ನಡೆಸುವ ಪ್ರಯಾಣಿಕರಿಂದ ಅಶುಚಿ ಮತ್ತು ಅಪಾಯಕಾರಿ ಸ್ಥಿತಿಗಳ ಉಂಟಾಗುವ ಸಂಭವ ಹೆಚ್ಚಾಗುತ್ತಿದೆ. ಈ ಸಂಬಂಧ 554 ಪ್ರಕರಣಗಳು ದಾಖಲಾಗಿವೆ.
4. ಅನಧಿಕೃತ ಭಾರಿ ಗಾತ್ರದ ಲಗೇಜ್ ಸಾಗಣೆ:
ಇನ್ನು ಮೆಟ್ರೋ ರೈಲಿನಲ್ಲಿ ಪ್ರಯಾಣಿಸುವವರು ಅನಧಿಕೃತವಾಗಿ ದೊಡ್ಡ ಗಾತ್ರದ ಲಗೇಜ್ ಸಾಗಿಸುವಂತಿಲ್ಲ. ಹಾಗೆ ದೊಡ್ಡ ಗಾತ್ರದ ಲಗೇಜ್ ಸಾಗಿಸುವುದಾದರೂ, ಅದಕ್ಕೆ ಇಂತಿಷ್ಟು ಹಣ ಪಾವತಿಸಬೇಕು. ಆದರೆ ಕೆಲವು ಪ್ರಯಾಣಿಕರು ಅನುಮತಿಸಲಾದ ಗಾತ್ರವನ್ನು ಮೀರಿ ದೊಡ್ಡ ಲಗೇಜ್ ತರಬಹುದಾದ ತೊಂದರೆ ಉಂಟುಮಾಡುತ್ತಿದ್ದಾರೆ. ಹೀಗಾಗಿ ಈ ಸಂಬಂಧ ಆರು ತಿಂಗಳಿನಲ್ಲಿ 474 ಪ್ರಕರಣಗಳು ದಾಖಲಾಗಿವೆ.
ಪ್ರಯಾಣಿಕರ ಸುರಕ್ಷತೆ ಹಾಗೂ ಅನುಕೂಲತೆಗಳನ್ನು ಕಾಪಾಡಲು CCTV ಕ್ಯಾಮೆರಾಗಳ ನಿಗಾ ನಿರಂತರವಾಗಿ ನಡೆಯುತ್ತಿದೆ. ಇದಲ್ಲದೇ, ಮೆಟ್ರೋ ಭದ್ರತಾ ತಂಡವು ಪ್ರತಿದಿನವೂ ಪರಿಶೀಲನೆ ನಡೆಸಿ, ನಿಯಮ ಉಲ್ಲಂಘನೆಯ ಬಗ್ಗೆ ವರದಿ ಮಾಡುತ್ತಿದೆ. ಪ್ರಸ್ತುತ, ಈ ನಿಯಮ ಉಲ್ಲಂಘನೆಗೈದವರಿಗೆ ಕೇವಲ ಎಚ್ಚರಿಕೆ ನೀಡಲಾಗುತ್ತಿದೆ, ಆದರೆ ಮುಂದಿನ ಹಂತದಲ್ಲಿ ದಂಡ ವಿಧಿಸುವ ಸಾಧ್ಯತೆ ಇದೆ. ಈವರೆಗೆ BMRCL ಈ ನಿಯಮ ಉಲ್ಲಂಘನೆಗಳಿಗೆ ದಂಡ ವಿಧಿಸಿಲ್ಲ. ಆದರೆ, ನಿಯಮಗಳನ್ನು ಗಂಭೀರವಾಗಿ ಪಾಲಿಸದ ಪ್ರಯಾಣಿಕರಿಗೆ ಭವಿಷ್ಯದಲ್ಲಿ ಕಟ್ಟುನಿಟ್ಟಾದ ದಂಡ ವಿಧಿಸುವ ಬಗ್ಗೆ ಚರ್ಚೆ ನಡೆದಿದೆ. ಇದರಲ್ಲಿ ಪುನರಾವೃತ್ತಿಯಾದ ಪ್ರಕರಣಗಳಿಗೆ ಹೆಚ್ಚುವರಿ ದಂಡ ವಿಧಿಸುವ ಯೋಜನೆ ಕೂಡ ಇದೆ. ಮೆಟ್ರೋ ವ್ಯವಸ್ಥೆಯನ್ನು ಶಿಸ್ತುಬದ್ಧವಾಗಿ ಉಳಿಸುವುದು ಪ್ರತಿಯೊಬ್ಬ ಪ್ರಯಾಣಿಕನ ಜವಾಬ್ದಾರಿಯಾಗಿದೆ. ಹೀಗಾಗಿ ಎಲ್ಲರೂ ನಿಯಮಗಳನ್ನು ಪಾಲಿಸುವುದು ಕಡ್ಡಾಯವಾಗಿದೆ.


Click it and Unblock the Notifications