ಬೆಂಗಳೂರಿನ ಟ್ರಾಫಿಕ್ ಸಮಸ್ಯೆಯನ್ನು ಕಡಿಮೆ ಮಾಡುವಲ್ಲಿ, ಪ್ರಯಾಣದ ಸಮಯವನ್ನು ಉಳಿತಾಯ ಮಾಡುವಲ್ಲಿ ನಮ್ಮ ಮೆಟ್ರೋ ಮಹತ್ವದ ಪಾತ್ರ ವಹಿಸುತ್ತಿದೆ. ಬೆಂಗಳೂರು ಮೆಟ್ರೋ 2ನೇ ಹಂತದ ಯೋಜನೆ ಬಗ್ಗೆ ಸಾಕಷ್ಟು ನಿರೀಕ್ಷೆ ಹೊಂದಲಾಗಿದೆ. 2014ರಲ್ಲೇ 72 ಕಿ.ಮೀ. ಯೋಜನೆಗೆ ಅನುಮೋದನೆ ಸಿಕ್ಕಿತ್ತು, 2019ರ ವೇಳೆಗೆ ಕಾಮಗಾರಿ ಮುಗಿಸಲು ಗಡುವು ನೀಡಲಾಗಿತ್ತು, ಆದರೆ ದಶಕ ಕಳೆದರೂ ಕಾಮಗಾರಿ ಮುಗಿದಿಲ್ಲ, ಇದು ಯೋಜನಾ ವೆಚ್ಚವನ್ನು 52% ಹೆಚ್ಚಿಸಿದೆ.
ನಮ್ಮ ಮೆಟ್ರೋ 2ನೇ ಹಂತದ ಯೋಜನೆಯು ₹26,405 ಕೋಟಿ ವೆಚ್ಚದಲ್ಲಿ ಆರಂಭಿಸಲಾಯಿತು. ಆದರೆ ಈಗ ಈ ಯೋಜನೆಯ ಬಜೆಟ್ ಸುಮಾರು 40,000 ಕೋಟಿ ರೂಪಾಯಿಗೆ ಏರಿಕೆಯಾಗಿದೆ. ಯೋಜನೆಯ ಆರಂಭದಲ್ಲಿ ನಿಗದಿ ಮಾಡಿದ್ದ ಬಜೆಟ್‌ಗಿಂತ ಶೇಕಡಾ 52 ರಷ್ಟು ಹೆಚ್ಚಳವಾಗಿದೆ.

ಬೆಂಗಳೂರು ಮೆಟ್ರೊ ರೈಲು ಕಾರ್ಪೊರೇಷನ್ ಲಿಮಿಟೆಡ್ (BMRCL), ರಾಜ್ಯ ಹಣಕಾಸು ಇಲಾಖೆಗೆ ನಗರಾಭಿವೃದ್ಧಿ ಇಲಾಖೆ (UDD) ಮೂಲಕ ಅನುಮೋದನೆಗಾಗಿ ಪರಿಷ್ಕೃತ ಪ್ರಸ್ತಾವನೆ ಸಲ್ಲಿಸಿದ್ದು 75.06 ಕಿಮೀ ವಿಸ್ತರಿಸಿರುವ ವಿಸ್ತೃತ ಮಾರ್ಗದ ಯೋಜನೆ ಪರಿಶೀಲನೆಯಲ್ಲಿದ್ದು, ವೆಚ್ಚ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಕೂಡ ಇದೆ.
2014ರಲ್ಲಿ 72 ಕಿ.ಮೀ. ಯೋಜನೆಗೆ ಅನುಮೋದನೆ ನೀಡಲಾಯಿತು. 2019ರ ವೇಳೆಗೆ ಕಾಮಗಾರಿಯನ್ನು ಮುಗಿಸುವ ಗುರಿಯನ್ನು ಇಟ್ಟುಕೊಂಡು ಕೆಲಸ ಆರಂಭಿಸಿದರೂ, ಹಲವು ಸಮಸ್ಯೆಗಳು ಎದುರಾಗಿದ್ದರಿಂದ ಕಾಮಗಾರಿ ವಿಳಂಭವಾಗುತ್ತಲೇ ಬಂದಿದೆ. ಮುಖ್ಯವಾಗಿ ಭೂಸ್ವಾಧೀನ ಸಮಸ್ಯೆ ಮತ್ತು ಕೋವಿಡ್-19 ಸಾಂಕ್ರಾಮಿಕ ಯೋಜನೆ ತಡವಾಗಲು ಕಾರಣವಾಗಿವೆ. 2021ರಲ್ಲಿ ಯೋಜನಾ ವೆಚ್ಚವನ್ನು ₹30,695 ಕೋಟಿಗೆ ಪರಿಷ್ಕರಣೆ ಮಾಡಲಾಯಿತು. ಇದರಲ್ಲಿ 2ಎ ಹಂತದ ಹೊರ ವರ್ತುಲ ರಸ್ತೆ ಮಾರ್ಗ ಮತ್ತು 2ಬಿ ಹಂತದ ಏರ್‌ಪೋರ್ಟ್ ಲೈನ್ ಯೋಜನಾ ವೆಚ್ಚವನ್ನು ಒಳಗೊಂಡಿಲ್ಲ.
ಯೋಜನಾ ವೆಚ್ಚಳ ಹೆಚ್ಚಲು ಕಾರಣಗಳು
ಮೊದಲು ಯೋಜಿಸಿದ್ದಕ್ಕಿಂತ ಹೆಚ್ಚಿನ ಪ್ರಮಾಣದ ಭೂಮಿಯನ್ನು ಕಾಮಗಾರಿಗಾಗಿ ವಶಪಡಿಸಿಕೊಳ್ಳಬೇಕಾದ ಕಾರಣ, ಹೆಚ್ಚಿನ ಪರಿಹಾರವನ್ನು ನೀಡಬೇಕಾಯಿತು, ಇದು ಯೋಜನಾ ವೆಚ್ಚದಲ್ಲಿ ಹೆಚ್ಚಳವಾಗಲು ಪ್ರಮುಖ ಕಾರಣವಾಯಿತು.
ಹಣದುಬ್ಬರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಡಾಲರ್ ಬೆಲೆ ಹೆಚ್ಚಳ, ರೂಪಾಯಿ ಮೌಲ್ಯ ಕುಸಿತ ಸೇರಿದಂತೆ ಹಲವು ಆರ್ಥಿಕ ಅಂಶಗಳು ಕೂಡ ಯೋಜನಾ ವೆಚ್ಚ ಹೆಚ್ಚಳಕ್ಕೆ ಕಾರಣವಾಯಿತು.
ಮುಖ್ಯವಾಗಿ ಕೋವಿಡ್ 19 ಸಾಂಕ್ರಾಮಿಕದಿಂದ ಯೋಜನೆ ವಿಳಂಬವಾಯಿತು. ಲಾಕ್‌ಡೌನ್ ಪರಿಣಾಮವಾಗಿ ಹಲವು ತಿಂಗಳ ಕಾಲ ಕೆಲಸ ನಿಲ್ಲಿಸಲಾಗಿತ್ತು, ಸಾಂಕ್ರಾಮಿಕದ ನಂತರದ ದಿನಗಳಲ್ಲಿ ಕಾರ್ಮಿಕರ ಕೊರತೆ ಕಾಡಿದ್ದು ನಿರೀಕ್ಷಿತ ವೇಗದಲ್ಲಿ ಕೆಲಸ ಸಾಗಲಿಲ್ಲ. ಇದು ವೆಚ್ಚಗಳು ಮತ್ತಷ್ಟು ಹೆಚ್ಚಲು ಕಾರಣವಾಗಿದೆ.
ಯೋಜನೆಯಲ್ಲಿ ಮಾಡಿದ ಕೆಲವು ಬದಲಾವಣೆಗಳು ಕೂಡ ವೆಚ್ಚವನ್ನು ಹೆಚ್ಚಿಸಿದವು. ಮೊದಲನೆಯದಾಗಿ ಕೆಂಗೇರಿಯವರೆಗೆ ಇದ್ದ ರೀಚ್ 2 ಅನ್ನು ಚಲ್ಲಘಟ್ಟದವರೆಗೆ ವಿಸ್ತರಣೆ ಮಾಡಲಾಗಿದೆ. ಕಾಡುಕೋಡಿ (ವೈಟ್‌ಫೀಲ್ಡ್)ನಲ್ಲಿ ಹೆಚ್ಚುವರಿ ಡಿಪೋ ಸ್ಥಾಪನೆ ಮಾಡಲಾಗಿದೆ.
ಕಾಮಗಾರಿ ಆರಂಭದಲ್ಲಿ 84.33 ಹೆಕ್ಟೇರ್ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಯೋಜಿಸಲಾಗಿತ್ತು ನಂತರ ಇದು 128.36 ಹೆಕ್ಟೇರ್‌ಗಳಿಗೆ ಹೆಚ್ಚಾಗಿದ್ದರಿಂದ ಪರಿಹಾರದ ಹಣವೇ 6,300 ಕೋಟಿ ರೂಪಾಯಿಗಳಷ್ಟು ಹೆಚ್ಚಾಗಿದೆ.
ಬೈಯಪ್ಪನಹಳ್ಳಿಯಿಂದ ಕಾಡುಗೋಡಿ ಮತ್ತು ಯಲಚೇನಹಳ್ಳಿಯಿಂದ ಸಿಲ್ಕ್ ಇನ್‌ಸ್ಟಿಟ್ಯೂಟ್‌ವರೆಗಿನ ಮಾರ್ಗದಲ್ಲಿ ವಿವಿಧ ನಿಲ್ದಾಣಗಳ ಬಳಿ ಬಿಎಂಆರ್‌ಸಿಎಲ್ ರಸ್ತೆ ವಿಸ್ತರಿಸುವ ಯೋಜನೆಯನ್ನು ಕೂಡ ಕೈಗೆತ್ತಿಕೊಂಡಿದೆ, ಇದರಿಂದ ವೆಚ್ಚಗಳು ಹೆಚ್ಚಾಗಿವೆ.
2024ರಲ್ಲಿ 2ನೇ ಹಂತದ ಮಾರ್ಗದ ಕಾಮಗಾರಿ ಮುಗಿಸಲು ಗಡುವು ನೀಡಲಾಗಿತ್ತಾದರೂ, ಈಗ ಜೂನ್ 2026ರ ವೇಳೆಗೆ ಮುಗಿಯುವ ಸಾಧ್ಯತೆ ಇದೆ. ಎರಡನೇ ಹಂತದ ಕಾಮಗಾರಿ ಮುಕ್ತಾಯವಾದ ಬಳಿಕ ನಗರದ ಟ್ರಾಫಿಕ್ ಸಮಸ್ಯೆ ಕೂಡ ಒಂದಷ್ಟು ಪ್ರಮಾಣದಲ್ಲಿ ಕಡಿಮೆಯಾಗುವ ನಿರೀಕ್ಷೆ ಇದೆ.


Click it and Unblock the Notifications