ಬೆಂಗಳೂರಿನಲ್ಲಿ ನಮ್ಮ ಮೆಟ್ರೋ ವಿಸ್ತರಣೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. ಬೆಂಗಳೂರಿಗೆ ಬರುವ ವಲಸಿಗರಿಂದ ರಸ್ತೆ ತುಂಬಿ ತುಳುಕುತ್ತಿದೆ.ಸಿಲಿಕಾನ್ ಸಿಟಿ ಬೆಂಗಳೂರು ಟ್ರಾಫಿಕ್ ಸಿಟಿಯಾಗಿದೆ. ಜನದಟ್ಟಣೆ ಒತ್ತಡ ಕಡಿಮೆ ಮಾಡಲು, ಟ್ರಾಫಿಕ್ ಬಿಸಿ ಕಡಿಮೆ ಮಾಡಲು, ಬೆಂಗಳೂರಿಗೆ ಸುಗಮ ಸಂಚಾರ ಬೇಕೇ ಬೇಕು. ಹೀಗಾಗಿ ಬೆಂಗಳೂರಿನಲ್ಲಿ ಸದ್ಯ ಹಳದಿ, ಹಸಿರು, ನೇರಳೆ ಮಾರ್ಗದ ಮೆಟ್ರೋ ಸಂಚಾರದಲ್ಲಿದೆ. ಈದರ ನಡುವೆ ಸಿಕ್ಕಿರುವ ದೊಡ್ಡ ಗುಡ್‌ನ್ಯೂಸ್ ಏನೆಂದರೆ, ಈಗ ಬೆಂಗಳೂರು ಮೆಟ್ರೋ ಮೂರನೇ ಹಂತದ ಯೋಜನೆಗೆ ಕೊನೆಗೂ ವೇಗ ಸಿಕ್ಕಿದೆ. ಜೆ.ಪಿ. ನಗರ 4ನೇ ಹಂತದಿಂದ ಹೆಬ್ಬಾಳದ ಕೆಂಪಾಪುರವರೆಗಿನ 28.4 ಕಿ.ಮೀ ಮೆಟ್ರೋ ಮಾರ್ಗ ನಿರ್ಮಾಣಕ್ಕೆ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (ಬಿಎಂಆರ್‌ಸಿಎಲ್) ಟೆಂಡರ್ ಕರೆಯಲು ಸಿದ್ಧವಾಗಿದೆ. ಈ ತಿಂಗಳಾಂತ್ಯದೊಳಗೆ ಟೆಂಡರ್ ಪ್ರಕ್ರಿಯೆ ಪ್ರಾರಂಭವಾಗಲಿದೆ.

ಕೇಂದ್ರ ಸರ್ಕಾರ ಈ ಯೋಜನೆಗೆ ಒಂದು ವರ್ಷದ ಹಿಂದೆಯೇ ಅನುಮೋದನೆ ನೀಡಿತ್ತು. ಆದರೆ ಕಾಮಗಾರಿಗೆ ಟೆಂಡರ್ ಆಹ್ವಾನಿಸಲಾಗದ ಕಾರಣ ಸಾರ್ವಜನಿಕರಲ್ಲಿ ಅಸಮಾಧಾನ ವ್ಯಕ್ತವಾಗಿತ್ತು. ಬಿಎಂಆರ್‌ಸಿಎಲ್ ತಿಳಿಸಿದಂತೆ, ಮಾರ್ಗದಲ್ಲಿ ಡಬಲ್ ಡೆಕ್ಕರ್ ಮೆಟ್ರೋ ನಿರ್ಮಾಣ ಯೋಜನೆ ರೂಪಿಸಿರುವುದರಿಂದ ಟೆಂಡರ್ ಕರೆಯಲು ತಡವಾಗಿದೆ.
ಈ ಯೋಜನೆಗೆ ವಯಾಡಕ್ಟ್, ನಿಲ್ದಾಣ ಮತ್ತು ಡಿಪೋ ನಿರ್ಮಾಣ ಕಾರ್ಯವನ್ನು ಒಟ್ಟು ಹತ್ತು ಪ್ಯಾಕೇಜ್‌ಗಳಲ್ಲಿ ವಿಭಜಿಸಲಾಗಿದೆ. ಮೆಟ್ರೋ ಮಾರ್ಗದ ಜೊತೆಗೆ ಮೇಲ್ಸೇತುವೆ ನಿರ್ಮಾಣವೂ ನಡೆಯಲಿದೆ. ಇದರಿಂದ ಕಾಮಗಾರಿಗಳನ್ನು ವಿವಿಧ ಭಾಗಗಳಾಗಿ ವಿಂಗಡಿಸಲಾಗಿದೆ ಮತ್ತು ವಿವಿಧ ಗುತ್ತಿಗೆದಾರರಿಗೆ ಜವಾಬ್ದಾರಿ ನೀಡಲಾಗಲಿದೆ.
ರಾಜ್ಯ ಸರ್ಕಾರವು 2022ರಲ್ಲಿ ಈ ಯೋಜನೆಗೆ ಅನುಮೋದನೆ ನೀಡಿತ್ತು. ಎರಡು ವರ್ಷಗಳ ನಂತರ, ಕೇಂದ್ರ ಸರ್ಕಾರ ₹15,611 ಕೋಟಿ ವೆಚ್ಚದ ಯೋಜನೆಗೆ ಒಪ್ಪಿಗೆ ನೀಡಿದೆ. ಜಪಾನ್ ಅಂತಾರಾಷ್ಟ್ರೀಯ ಸಹಕಾರ ಸಂಸ್ಥೆ (ಜೆಐಸಿಎ) ₹7,577 ಕೋಟಿ ಸಾಲ ನೀಡುತ್ತಿದೆ. ಈ ಮೊತ್ತದಲ್ಲಿ ಮೆಟ್ರೋ ರೈಲುಗಳ ಖರೀದಿಗೂ ಹಣ ಬಳಸಲಾಗುತ್ತದೆ.
ಈ ಯೋಜನೆಯಡಿಯಲ್ಲಿ, ಜೆ.ಪಿ. ನಗರ 4ನೇ ಹಂತದಿಂದ ಕೆಂಪಾಪುರವರೆಗೆ 28.4 ಕಿ.ಮೀ ಹಾಗೂ ಮಾಗಡಿ ರಸ್ತೆಯ ಹೊಸಹಳ್ಳಿಯಿಂದ ಕಡಬಗೆರೆವರೆಗೆ 8.6 ಕಿ.ಮೀ ಸೇರಿ ಒಟ್ಟು 37.12 ಕಿ.ಮೀ ಮಾರ್ಗವನ್ನು ಡಬಲ್ ಡೆಕ್ಕರ್ ಮೆಟ್ರೋ ಮಾರ್ಗವಾಗಿ ನಿರ್ಮಿಸಲಾಗಲಿದೆ. ಇದರ ಅಂದಾಜಿತ ವೆಚ್ಚ ₹9,700 ಕೋಟಿ. ಯೋಜನೆಯ ಹಣಕಾಸು ಹಂಚಿಕೆಯಲ್ಲಿ ರಾಜ್ಯ ಸರ್ಕಾರ ಶೇ.50, ಜಿಬಿಎ ಶೇ.10 ಮತ್ತು ಉಳಿದ ಶೇ.40 ಸಾಲದ ರೂಪದಲ್ಲಿ ಹಂಚಲಾಗಿದೆ.
ಮೆಟ್ರೋ ಮೂರನೇ ಹಂತದಲ್ಲಿ ಒಟ್ಟು 30 ನಿಲ್ದಾಣಗಳು ನಿರ್ಮಾಣಗೊಳ್ಳಲಿವೆ. ಇದರಲ್ಲಿ ಏಳು ಇಂಟರ್‌ಚೇಂಜ್ ನಿಲ್ದಾಣಗಳು ಸೇರಿವೆ. ಮೊದಲ ಹಂತದ (42 ಕಿ.ಮೀ) ಮೆಟ್ರೋ ವೆಚ್ಚ ₹6,395 ಕೋಟಿಯಿಂದ ₹14,133 ಕೋಟಿಗೆ ಏರಿಕೆಯಾಗಿದೆ. ಎರಡನೇ ಹಂತದ (72 ಕಿ.ಮೀ) ವೆಚ್ಚ ₹26,405 ಕೋಟಿಯಿಂದ ₹40,614 ಕೋಟಿಗೆ ಏರಿಕೆಯಾಗಿದೆ. ಈ ಅನುಭವವನ್ನು ಗಮನಿಸಿದರೆ, ಮೂರನೇ ಹಂತದ ವೆಚ್ಚದಲ್ಲಿ ಶೇ.5ರಷ್ಟು ಹೆಚ್ಚಳ ಸಂಭವಿಸಬಹುದು.
ಆರಂಭದಲ್ಲಿ, 2029ರಿಂದ ವಾಣಿಜ್ಯ ಸೇವೆ ಆರಂಭಿಸುವ ಗುರಿ, ಕಾಮಗಾರಿ ಆರಂಭ ವಿಳಂಬದಿಂದ ಯೋಜನೆ 2031ರೊಳಗೆ ಪೂರ್ಣಗೊಳ್ಳುವ ನಿರೀಕ್ಷೆಯಾಗಿದೆ. ಈ ಮೆಟ್ರೋ ಹಂತದಿಂದ ನಗರದಲ್ಲಿ ಸಂಚಾರ ಸುಗಮವಾಗುವುದು, ರಸ್ತೆ ಜಾಮ್ ಕಡಿಮೆಯಾಗುವುದು ಮತ್ತು ಪ್ರಯಾಣಿಕರಿಗೆ ಹೆಚ್ಚು ಅನುಕೂಲವಾಗುವುದು ಎಂಬ ನಿರೀಕ್ಷೆಯಿದೆ.
ಬೆಂಗಳೂರಿನಲ್ಲಿ ಮೆಟ್ರೋ ನಿರ್ಮಾಣವು ನಗರ ಸಂಚಾರದ ದೊಡ್ಡ ಪರಿಹಾರವಾಗಲಿದೆ. ಜನರಿಗೆ ಸುಲಭ, ಸುರಕ್ಷಿತ ಮತ್ತು ವೇಗವಾದ ಸಾರಿಗೆ ವ್ಯವಸ್ಥೆಯನ್ನು ಒದಗಿಸುವ ಈ ಯೋಜನೆ, ನಗರಾಭಿವೃದ್ಧಿಯಲ್ಲಿ ಮಹತ್ವದ ಹಂತವಾಗಲಿದೆ.


Click it and Unblock the Notifications